ಕಾಂಗ್ರೆಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಲಘುವಾಗಿ ಮಾತನಾಡಿದ್ದರ ಬಗ್ಗೆ ಕೆಪಿಸಿಸಿ ರಾಜ್ಯ ವಕ್ತಾರ ಲಕ್ಷ್ಮಣ್ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದರು. ಇದನ್ನೇ ಗುರಿಯಾಗಿಸಿ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಬ್ಲಾಕ್ ಅಧ್ಯಕ್ಷ ದಿನೇಶ್ ಗೌಡ, ಲಕ್ಷ್ಮಣ್ ಅವರನ್ನು ಹಂದಿಗೆ ಹೋಲಿಸಿದಲ್ಲದೆ, ಅವಹೇಳನಕಾರಿಯಾಗಿ ನಿಂದಿಸಿ, ಪ್ರಾಣ ಬೆದರಿಕೆಯೊಡ್ಡಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರಾಜೇಶ್ ನೇತೃತ್ವದಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಮೈಸೂರು ನಗರದ ದಿನೇಶ್ ಗೌಡ ಎಂಬ ವ್ಯಕ್ತಿ ತಾನು ಬಿಜೆಪಿ ಪಕ್ಷದ ಮುಖಂಡ ಎಂದು ಹೇಳಿಕೊಳ್ಳುತ್ತಾ, ಕಾಂಗ್ರೆಸ್ ಪಕ್ಷದ ವಕ್ತಾರರಾದ ಲಕ್ಷ್ಮಣ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ಮಾಧ್ಯಮಗಳಲ್ಲಿ ಅತ್ಯಂತ ಅವಹೇಳನಕಾರಿ, ಮಾನ ಹಾನಿಕರ ಮತ್ತು ಶಾಂತಿಗೆ ಭಂಗ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ.
ಹೇಳಿಕೆಯಲ್ಲಿ ಹಂದಿ ಎಂಬ ಅತ್ಯಂತ ಕೀಳು ಮಟ್ಟದ ಶಬ್ದ ಬಳಸಿ ನಿಂದಿಸಿದ್ದಾರೆ. ಇಂತಹ ಅವಮಾನಕಾರಿ ಹೇಳಿಕೆಗಳು ಲಕ್ಷ್ಮಣ್ ರವರ ವೈಯಕ್ತಿಕ ಗೌರವ ಮತ್ತು ಮಾನ ಮರ್ಯಾದೆಗೆ ತೀವ್ರ ಧಕ್ಕೆ ತಂದಿವೆ. ಈ ರೀತಿಯ ಕೃತ್ಯವು ವ್ಯಕ್ತಿಯ ಘನತೆಯ ಮೇಲೆ ದಾಳಿಯಾಗಿರುವುದಷ್ಟೇ ಅಲ್ಲ, ನಾಗರಿಕ ಸಮಾಜದ ತಲೆತಗ್ಗಿಸುವಂತಹದ್ದು. ಈ ಹೇಳಿಕೆಗಳಿಂದ ಸಮಾಜದಲ್ಲಿ ಭಾವನಾತ್ಮಕ ಆಘಾತ, ಗೊಂದಲ, ಅಸಹಿಷ್ಣುತೆ ಮತ್ತು ಶಾಂತಿ ಭಂಗವಾಗುವ ಆತಂಕವಿದೆ.
ಇದು ಸಮುದಾಯಗಳ ನಡುವೆ ದ್ವೇಷ, ವಿಭಾಗೀಯತೆ ಮತ್ತು ಒಡಕುಗಳನ್ನು ಉಂಟು ಮಾಡುವ ಸಾಧ್ಯತೆಯನ್ನು ಹೊಂದಿದೆ. ಇಂತಹ ಕೃತ್ಯಗಳು ಜನಾಂಗೀಯ ಸೌಹಾರ್ದತೆಯನ್ನು ಕದಡುವ ಜೊತೆಗೆ ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿವೆ. ಇಂತ ವ್ಯಕ್ತಿಗಳಿಂದ ಸಮಾಜದಲ್ಲಿ ಅದರಲ್ಲೂ, ರಾಜಕಾರಣದಲ್ಲಿರುವ ವ್ಯಕ್ತಿಗಳಿಗೆ ಸೂಕ್ತ ಭದ್ರತೆ ಇಲ್ಲಾದಂತಾಗಿದೆ. ಮುಂದಿನ ದಿನಗಳಲ್ಲಿ ಎಂ.ಲಕ್ಷಣ್ ರವರಿಗೆ ಜೀವಕ್ಕೆ ತೊಂದರೆ ಆದರೆ ದಿನೇಶ್ ಗೌಡ ಮತ್ತು ಪ್ರತಾಪ್ ಸಿಂಹ ರವರೆ ಕಾರಣರಾಗಿರುತ್ತಾರೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ರಾಜೇಶ್ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು ಕಾನೂನು ರೀತ್ಯಾ ದಿನೇಶ್ ಗೌಡ ವಿರುದ್ಧ ತಕ್ಷಣವೇ ದೂರು ದಾಖಲಿಸಿಕೊಂಡು, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು. ಆಯುಕ್ತರಾದ ಸೀಮಾ ಲಾಟ್ಕರ್ ಅವರ ಅನುಪಸ್ಥಿತಿಯಲ್ಲಿ ಡಿಸಿಪಿ ಮುತ್ತುರಾಜ್ ಅವರು ದೂರು ಪ್ರತಿ ಸ್ವೀಕರಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅಲಿಖಿತ ಸಂವಿಧಾನವಾದಿಗಳಿಂದ ಲಿಖಿತ ಸಂವಿಧಾನ ದುರ್ಬಲಗೊಳಿಸಲು ಹುನ್ನಾರ : ಸಚಿವ ಮಹದೇವಪ್ಪ
ಬಿ. ಜಿ. ಕೇಶವ,ಸುನಿಲ್ ಕುಮಾರ್, ಧನಪಾಲ್, ರಾಜಶೇಖರ್, ಜಯಲಕ್ಷ್ಮಿ, ಸಯ್ಯದ್ ಫಾರೂಕ್, ಶ್ರೀನಿವಾಸ್, ರವಿ ನಾಯಕ್, ಕುಮಾರ, ಸಿದ್ದರಾಜು ಸೇರಿದಂತೆ ಇನ್ನಿತರರು ದೂರು ನೀಡುವಾಗ ಇದ್ದರು.