ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ಪ್ರದೇಶದಲ್ಲಿ ಮಳೆಯಿಂದಾಗುವ ಹಾನಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪಾಲಿಕೆ ಆಯುಕ್ತರೊಂದಿಗೆ ಇಂದು ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಸಭೆಯಲ್ಲಿ ಮಾತನಾಡಿದರು.
“ಅಧಿಕಾರಿಗಳು ತಾಲೂಕು ಕೇಂದ್ರ ಸ್ಥಳಗಳಲ್ಲಿದ್ದು, ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು” ಎಂದು ಸೂಚನೆ ನೀಡಿದರು.

“ಮಂಗಳೂರು ನಗರದ ಮನೆಗಳಿಗೆ ನೀರು ನುಗ್ಗುವ ಸ್ಥಳಗಳಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಿ. ಭಾರೀ ಗಾಳಿಗೆ ಮರಗಳು ರಸ್ತೆ, ಮನೆಗಳ ಮೇಲೆ ಬಿದ್ದಾಗ ತಕ್ಷಣ ಸ್ಪಂದಿಸಿ ತೆರವು ಕಾರ್ಯಾಚಣೆ ಕೈಗೊಳ್ಳಬೇಕು” ಎಂದು ಸಚಿವರು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಚಿವರು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ನೀಡಿದ ನಿರ್ದೇಶನಗಳು ಈ ಕೆಳಕಂಡಂತಿದೆ
ವಾಸ್ತವ್ಯದ ಮನೆಯ ಸಮೀಪ ಹಲವು ಪ್ರದೇಶಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಈ ಕುರಿತು ಎಚ್ಚರ ವಹಿಸಬೇಕಾಗಿದೆ. ಇಂತಹ ಅಪಾಯದ ಪ್ರದೇಶದಲ್ಲಿರುವ ಮನೆಗಳಿಂದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಬೇಕು. ಸುರಕ್ಷಿತವಲ್ಲದ ಅಂಗನವಾಡಿ ಶಾಲಾ ಕಟ್ಟಡದ ಕುರಿತು ಎಚ್ಚರ ವಹಿಸಬೇಕು.
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳು ನಡೆಯುವ ಪ್ರದೇಶದಲ್ಲಿ ಮಳೆನೀರು ತಗ್ಗಿನಲ್ಲಿರುವ ವಸತಿ ಪ್ರದೇಶಕ್ಕೆ ಹರಿದು ಬರುತ್ತಿದ್ದು, ತಕ್ಷಣ ಇದನ್ನು ಸರಿಪಡಿಸಬೇಕು. ಪಂಪೈಲ್ ಜಂಕ್ಷನ್‌ನಂತಹ ಕೆಲವು ಕಡೆ ನೀರು ಸರಾಗವಾಗಿ ಹರಿಯದೆ ರಸ್ತೆಯಲ್ಲಿಯೇ ನಿಂತು ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ಇಂತಹ ತೊಂದರೆಗಳನ್ನು ತಕ್ಷಣ ಸರಿಪಡಿಸಬೇಕು.
ಗಾಳಿ ಮಳೆಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದ್ದು ಇಂತಹ ಸಂದರ್ಭದಲ್ಲಿ ತಂತಿಯಲ್ಲಿ ವಿದ್ಯುತ್ ಪ್ರವಹಿಸಿ ಅಪಾಯ ಉಂಟಾಗದಂತೆ ಎಚ್ಚರ ವಹಿಸಬೇಕು.
ಕೃತಕ ನೆರೆ ಭೀತಿ ಉಂಟಾಗುವ ಪ್ರದೇಶ ನದಿ ಪಾತ್ರದಲ್ಲಿರುವ ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಸಂದರ್ಭ ಎದುರಾಗಿದ್ದು, ಇಂತಹ ಅಪಾಯ ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವುದು ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು.
ಆವರಣವಿಲ್ಲದ ಕೆಂಪು ಕಲ್ಲಿನ ಕೋರೆ, ಕೆರೆಗಳು, ಹಾಗೂ ನದಿಯಲ್ಲಿ ಯಾರೂ ಕೂಡ ಈಜಲು ತೆರಳದಂತೆ ಎಚ್ಚರ ವಹಿಸಬೇಕು.
ಇದನ್ನೂ ಓದಿದ್ದೀರಾ? ದಕ್ಷಿಣ ಕನ್ನಡ | ಭಾರೀ ಮಳೆ; 2 ದಿನ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ
ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗೆ ಮರ ಬೀಳುವುದು ಆವರಣ ಗೋಡೆ ಕುಸಿಯುವುದು, ವಿದ್ಯುತ್ ಕಂಬಕ್ಕೆ ಹಾನಿ, ಅಂಗಡಿಗಳಿಗೆ ನೀರು ನುಗ್ಗುವುದು, ರಸ್ತೆಗೆ ಹಾನಿ ಸಂಭವಿಸಿರುವ ವರದಿಗಳಿದ್ದು, ತುರ್ತು ಕ್ರಮ ಕೈಗೊಳ್ಳಬೇಕು.
ಕಳೆದ ವರ್ಷ ಮಂಗಳೂರು ಹೊರ ವಲಯದ ವಾಮಂಜೂರು ಸಮೀಪ ಕೆತ್ತಿಕಲ್ಲಲ್ಲಿ ಗುಡ್ಡ ಕುಸಿತ ಉಂಟಾಗಿದ್ದರಿಂದ ಈ ಬಾರಿ ಹೆಚ್ಚಿನ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು.