ಕಲಬುರಗಿ ಜಿಲ್ಲಾಧಿಕಾರಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ ಅವರ ನೀಚತನವನ್ನು ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಉಪಾಧ್ಯಕ್ಷೆ ಕೆ. ನೀಲಾ ಮತ್ತು ಕಾರ್ಯದರ್ಶಿ ದೇವಿ ಆಗ್ರಹಿಸಿದ್ದಾರೆ.
ʼಮೇ 24ರಂದು ಕಲಬುರಗಿಯಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ರವಿಕುಮಾರ್ ಅವರು ತಮ್ಮ ನಾಲಿಗೆಯನ್ನು ಕೋಮುಪ್ರಚೋದನಾತ್ಮಕವಾಗಿ ಹರಿ ಬಿಟ್ಟಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿ ಕುರಿತು ಕೋಮುವಿಭಜಕ ಹೇಳಿಕೆ ನೀಡಿದ್ದಾರೆ. ತಕ್ಷಣವೇ ಡಿ.ಸಿ.ಫೌಜಿಯಾ ತರನ್ನುಮ್ ಅವರ ಕ್ಷಮೆ ಕೇಳಬೇಕು. ನಾಡಿನ ಮಹಿಳೆಯರನ್ನು ಗೌರವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕುʼ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ʼಡಿ.ಸಿ ಕಚೇರಿ ಕೂಡ ಸ್ವಾತಂತ್ರ್ಯ ಕಳೆದುಕೊಂಡಿದೆ. ಇಲ್ಲಿನ ಡಿ.ಸಿ ಮೇಡಂ ಪಾಕಿಸ್ತಾನದಿಂದ ಬಂದಂತೆ ತೋರುತ್ತದೆʼ ಎಂದು ಬೇಜವಾಬ್ದಾರಿ ಮಾತುಗಳನ್ನು ಆಡಿದ್ದಾರೆ. ಅಧಿಕಾರಿಗಳ ಜಾತಿ, ಧರ್ಮಗಳನ್ನು ಪರಿಗಣಿಸಿ ಹೀಗಳೆದು ಕೊಳಕು ಮಾತನಾಡುವ ಪ್ರವೃತ್ತಿಯು ಬಿಜೆಪಿಗೆ ರಕ್ತಗತವಾಗಿದೆ.ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದಿದ್ದಾರೆ.