- 2015ರಲ್ಲಿ ರಫೇಲ್ ಖರೀದಿಗೆ ಭಾರತ ಒಪ್ಪಂದ
- 2 ದಿನಗಳ ಫ್ರಾನ್ಸ್ ಭೇಟಿ ನೀಡಿರುವ ಪ್ರಧಾನಿ ಮೋದಿ
ಫ್ರಾನ್ಸ್ ದೇಶದಿಂದ ಭಾರತೀಯ ನೌಕಾಪಡೆಗೆ 3 ಸ್ಕಾರ್ಪಿಯನ್ ದರ್ಜೆ ಜಲಾಂತರ್ಗಾಮಿ ನೌಕೆಗಳು ಮತ್ತು 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಭಾರತದ ರಕ್ಷಣಾ ಸಚಿವಾಲಯ ಆರಂಭಿಕ ಅನುಮೋದನೆ ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ ಫ್ರಾನ್ಸ್ ಸರ್ಕಾರ ಭಾರತೀಯ ಪೈಲಟ್‌ಗಳ ತರಬೇತಿಗೆ ಎರಡರಿಂದ ನಾಲ್ಕು ತಮ್ಮ ದೇಶದ ರಫೇಲ್‌ಗಳನ್ನು ರವಾನಿಸಲು ಒಪ್ಪಿಗೆ ನೀಡಿದೆ ಎಂದು ಶುಕ್ರವಾರ (ಜುಲೈ 14) ವರದಿಯಾಗಿದೆ.
ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಅನುಮೋದನೆಯು ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಭೇಟಿ ಹಿನ್ನೆಲೆ ನಡೆದಿದೆ.
ಫ್ರೆಂಚ್ ರಾಷ್ಟ್ರೀಯ ದಿನ ಹಾಗೂ ಬಾಸ್ಟಿಲ್ ದಿನದ ಸೇನಾ ಪಥಸಂಚಲನದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಎರಡು ದಿನಗಳ ಮಟ್ಟಿಗೆ ಜುಲೈ 13 ಮತ್ತು 14 ಫ್ರಾನ್ಸ್‌ಗೆ ಭೇಟಿ ನೀಡಿದ್ದಾರೆ.
ಇಂಡೊ-ಪೆಸಿಫಿಕ್ ವಲಯದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶದಿಂದ ಪಾಶ್ಚಿಮಾತ್ಯ ರಾಷ್ಟ್ರಗಳ ಪೈಕಿ ಭಾರತದ ಅತ್ಯಂತ ಹಳೆಯ ರಾಜತಾಂತ್ರಿಕ ಪಾಲುದಾರ ದೇಶ ಫ್ರಾನ್ಸ್ ಜೊತೆ ಉನ್ನತ ರಕ್ಷಣಾ ಒಪ್ಪಂದದ ನಿರೀಕ್ಷೆ ಇದೆ ಎಂದು ವರದಿಯಾಗಿದೆ.
ನಾಲ್ಕು ತರಬೇತುದಾರರು ಸೇರಿದಂತೆ 26 ರಫೇಲ್ ಯುದ್ಧ ವಿಮಾನಗಳ ಖರೀದಿ ಮತ್ತು ಮಜಗಾನ್ ಡಾಕ್ ಶಿಪ್ಬಿಲ್ಡರ್ಸ್ ತಯಾರಿಸುವ ಮೂರು ಸ್ಕಾರ್ಪಿಯನ್ ದರ್ಜೆಯ ಜಲಾಂತರ್ಗಾಮಿ ನೌಕೆಗಳ ಖರೀದಿಗೆ ಫ್ರಾನ್ಸ್ ನೌಕಾಪಡೆಯೊಂದಿಗೆ ಒಪ್ಪಂದವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆಗಾಗಿ ಖರೀದಿಗೆ ಉದ್ದೇಶಿಸಲಾಗಿರುವ ರಫೇಲ್‌ನ ವಿಮಾನಗಳು ಕಳೆದ ವರ್ಷ ನಡೆದ ಪರೀಕ್ಷೆಗಳಲ್ಲಿ ಅಮೆರಿಕದ ಯುದ್ಧ ವಿಮಾನಗಳನ್ನು ಮೀರಿಸಿವೆ. ಒಪ್ಪಂದದ ಮೌಲ್ಯದ ವಿವರಗಳ ಬಗ್ಗೆ ಮಾಹಿತಿ ದೊರೆತಿಲ್ಲ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಚಂದ್ರಯಾನ 3 | ತಿರುಪತಿ ದೇವಸ್ಥಾನಕ್ಕೆ ಇಸ್ರೊ ವಿಜ್ಞಾನಿಗಳ ತಂಡ ಭೇಟಿ, ವಿಶೇಷ ಪೂಜೆ
ಭಾರತವು ನಾಲ್ಕು ದಶಕಗಳಿಂದ ಫ್ರೆಂಚ್ ಯುದ್ಧ ವಿಮಾನಗಳನ್ನು ಅವಲಂಬಿಸಿದೆ. 2015ರಲ್ಲಿ ರಫೇಲ್ ಖರೀದಿಗೂ ಮೊದಲು 1980ರ ದಶಕದಲ್ಲಿ ಮಿರಾಜ್ ಯುದ್ಧ ವಿಮಾನಗಳನ್ನು ಖರೀದಿಸಿತ್ತು. ವಾಯುಪಡೆಯಲ್ಲಿ ಈಗಲೂ ಇವುಗಳು ಬಳಕೆಯಲ್ಲಿವೆ.
2005ರಲ್ಲಿ ಭಾರತವು ಫ್ರಾನ್ಸ್‌ನಿಂದ ಆರು ಸ್ಕಾರ್ಪಿಯನ್ ದರ್ಜೆಯ ಡೀಸೆಲ್ ಜಲಾಂತರ್ಗಾಮಿ ನೌಕೆಗಳನ್ನು ₹718,800 ಕೋಟಿಗೆ (2.29 ಬಿಲಿಯನ್ ಅಮೆರಿಕ ಡಾಲರ್) ಖರೀದಿಸಿತ್ತು.