ದೇಶಾದ್ಯಂತ ವಕ್ಫ್ ತಿದ್ದುಪಡಿ ಕಾಯ್ದೆ – 2025 ಕುರಿತಂತೆ ಬಹಳಷ್ಟ ಚರ್ಚೆಗಳು, ಪ್ರತಿಭಟನಾ ಸಭೆಗಳು, ಸಮಾಲೋಚನಾ ಸಭೆಗಳು, ವಕ್ಫ್ ಗೆ ಸಂಭವಿಸಿದಂತೆ ಮಾಹಿತಿ ಕಾರ್ಯಾಗಾರಗಳು ಜೊತೆಯಲ್ಲಿ ಕಾನೂನು ಹೋರಾಟಗಳು ನಡೆಯುತ್ತಿದೆ. ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ (UWMEED) ಕಾಯ್ದೆ ಎಂದು ಹೆಸರಿಸಿ ವಕ್ಸ್ (ತಿದ್ದುಪಡಿ) ಕಾಯ್ದೆ – 2025 ಎಂಬ ಅಸಾಂವಿಧಾನಿಕ ಕಾನೂನನ್ನು ಭಾರತೀಯ ಪ್ರಜೆಗಳ ಮೇಲೆ ಹೇರಲು ಕೇಂದ್ರ ಸರ್ಕಾರ ಹೊರಟಿರುವುದು ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರವಲ್ಲ ಸಂವಿಧಾನದ ಮೂಲ ತತ್ವಕ್ಕೆ ವಿರುದ್ದವಾಗಿದೆ. ಈ ನೂತನ ಕಾಯ್ದೆ ಜನತೆಗೆ ಮಾಡಿರುವ ಮೋಸವಾಗಿದೆ. ಈ ಕಾಯ್ದೆಯು ಭಾರತದ ಮುಸ್ಲಿಮ್ ಸಮುದಾಯದ ಸಬಲೀಕರಣ ಅಥವಾ ಅಭಿವೃದ್ಧಿಯನ್ನು ಖಂಡಿತಾ ಮಾಡುವಂತಹದ್ದಲ್ಲ. ಬದಲಾಗಿ ಇದು ಧಾರ್ಮಿಕ ಕಲ್ಪನೆ ಮತ್ತು ಭಾರತೀಯ ಸಂವಿಧಾನದ ಅಡಿಯಲ್ಲಿ ರಕ್ಷಿಸಲ್ಪಟ್ಟ ಧಾರ್ಮಿಕ ದತ್ತಿ ವ್ಯವಸ್ಥೆಯಲ್ಲಿ ಅಭೂತಪೂರ್ವವಾದ ಶಾಸಕಾಂಗದ ಹಸ್ತಕ್ಷೇಪವಾಗಿದೆ. ಇದು ಒಂದು ನಿರ್ದಿಷ್ಟ ಸಮುದಾಯದ ಅಸ್ಮಿತೆ, ನಂಬಿಕೆ, ಆರಾಧನಾ ಕೇಂದ್ರಗಳು, ಸಾಮುದಾಯಿಕ ಸೊತ್ತುಗಳು ಉಳ್ಳವರ ಪಾಲಾಗಲು ರೂಪಿಸಲಾಗಿರುವ ಕಾನೂನಾಗಿರುತ್ತದೆ. ಅರ್ಥಪೂರ್ಣ ಚರ್ಚೆಯಿಲ್ಲದೆ ದೇಶದ ಬುದ್ದಿಜೀವಿಗಳ ಮತ್ತು 20 ಕೋಟಿಯಷ್ಟಿರುವ ಮುಸ್ಲಿಮ್ ಬಾಂಧವರ ವಿರೋಧವನ್ನು ನಿರ್ಲಕ್ಷಿಸಿ ಮಂಡನೆಯಾದ ಈ ಕಾನೂನು ಲೋಕಸಭೆಯ ಅನುಮೋದನೆ, ರಾಜ್ಯಸಭೆಯ ಅಂಗೀಕಾರ ಮತ್ತು ರಾಷ್ಟ್ರಪತಿಗಳ ಅಂಕಿತವನ್ನು ಪಡೆಯುವುದರ ಮೂಲಕ ತರಾತುರಿಯಲ್ಲಿ ಜಾರಿಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಈಗಾಗಲೇ ದೇಶಾದ್ಯಂತ ಪ್ರತಿಭಟನಾ ನಿರತ ಹೋರಾಟಗಾರರು ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಸಾಂವಿಧಾನಿಕ ಆಶಯಗಳ ಉಲ್ಲಂಘನೆಗಳೊಂದಿಗೆ ತರಾತುರಿಯಲ್ಲಿ ಹೇರಲ್ಪಟ್ಟ ಈ ಉಮೀದ್ ಕಾಯ್ದೆಯು ಭಾರತದ ಅತ್ಯಂತ ಹಳೆಯ ಮತ್ತು ಪವಿತ್ರ ಸಾಂವಿಧಾನಿಕ ವಕ್ಸ್ ಸಂಸ್ಥೆಗಳನ್ನು ನಾಶಪಡಿಸಲು ಕೇಂದ್ರ ಸರಕಾರವು ಮಾಡಿರುವ ಒಂದು ಸಂಘಟಿತ ಪ್ರಯತ್ನವಾಗಿದೆ. ಇದು ಸಾಂವಿಧಾನಿಕ ಆಶಯ ನಿಬಂಧನೆಗಳನ್ನು ಮಾತ್ರವಲ್ಲದೆ ಭಾರತೀಯ ಜಾತ್ಯತೀತತೆಯ ಸ್ಫೂರ್ತಿಯನ್ನೂ ಸಂಪೂರ್ಣವಾಗಿ ಕಡೆಗಣಿಸಿದೆ. ಹಾಗಾಗಿ ಈ ನಿರ್ಣಾಯಕ ಕಾಲಘಟ್ಟದಲ್ಲಿ ಸಂವಿಧಾನಪರ ಕಾಳಜಿಯುಳ್ಳ ಮತ್ತು ಈ ಸಂವಿಧಾನಬಾಹಿರ ಕಾಯ್ದೆಯನ್ನು ವಿರೋಧಿಸುವ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಎಚ್ಚೆತ್ತುಕೊಂಡು ಪ್ರತಿಭಟಿಸಬೇಕಾದ ಅಗತ್ಯವಿದೆ ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

ದೇಶದ್ಯಾಂತ ಹೋರಾಟಗಳು ನಡೆಯುತ್ತಿದ್ದು ಇದೀಗ ಉಡುಪಿಯಲ್ಲಿಯೂ ಈ ಅಸಾಂವಿಧಾನಿಕ ಕರಾಳ ಕಾನೂನಿನ ವಿರುದ್ಧ “ವಕ್ಸ್ ಉಳಿಸಿ ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿ ಉಡುಪಿ ಜಿಲ್ಲೆ, ಸಹಬಾಳ್ವೆ ಉಡುಪಿ ಮತ್ತು ಸಹಭಾಗಿ ಸಂಘಟನೆಗಳು ಒಗ್ಗೂಡಿ ಮೇ 30ರ ಶುಕ್ರವಾರದಂದು ಸಂಜೆ ಗಂಟೆ 4.00 ಕ್ಕೆ ಉಡುಪಿ ಮಿಷನ್ ಕಂಪೌಂಡ್‌ನಲ್ಲಿರುವ ಕ್ರಿಶ್ಚಿಯನ್ ಕಾಲೇಜು ಮೈದಾನದಲ್ಲಿ “ವಕ್ಸ್ ಉಳಿಸಿ ಸಂವಿಧಾನ ರಕ್ಷಿಸಿ” ಎಂಬ ಧೈಯವಾಕ್ಯದಡಿಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲು ಮುಂದಾಗಿದ್ದಾರೆ.
ಈ ಬಗ್ಗೆ ಈದಿನ.ಕಾಮ್ ಜೊತೆಗೆ ಮಾತನಾಡಿದ ಸಹಬಾಳ್ವೆ ಉಡುಪಿಯ ಹಾಗೂ ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ ಹೋರಾಟ ಸಮಿತಿಯ ಅಮೃತ್ ಶೆಣೈ, ನರೇಂದ್ರ ಮೋದಿ ಸರ್ಕಾರ ಮಾಡಲು ಹೊರಟಿರುವಂತಹ ಕರಾಳ ಕಾಯ್ದೆ ವಕ್ಫ್ ತಿದ್ದುಪಡಿ ಕಾಯ್ದೆ – 2025, ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಬಹಳಷ್ಟು ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳುತ್ತಿದ್ದಾರೆ ಆದರೆ ಸರ್ಕಾರದ ಹತ್ತಿರ ಸಮರ್ಪಕವಾದ, ಸುಪ್ರೀಂ ಕೋರ್ಟ್ ಅನ್ನು ತೃಪ್ತಿಪಡಿಸುವಂತಹ ಉತ್ತರಗಳಿಲ್ಲ. ಹಾಗಾಗಿ ನಾವು ಮೈ ಮರೆಯುವ ಹಾಗಿಲ್ಲ, ಇಂದು ಮುಸ್ಲಿಮರದ್ದು ನಾಳೆ ಇನ್ನೊಂದು ಜಾತಿಯದ್ದು ನಾಡಿದ್ದು ಇನ್ನೊಂದು ಜಾತಿಯದ್ದು ಎಂದು ಇಡೀ ಭಾರತವನ್ನೇ ಒಳಗೆ ಹಾಕುವಂತಹ ಹುನ್ನಾರ ಈ ಕಾಯ್ದೆಯ ಅನುಷ್ಠಾನದ ಹಿಂದೆ ಅಡಗಿದೆ. ಅದ್ದರಿಂದ ಸಮಾನ ಮನಸ್ಕರರು ಸೇರಿ ಇದರ ವಿರುದ್ಧ ದೊಡ್ಡ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಈ ನಿಟ್ಟಿನಲ್ಲಿ ಉಡುಪಿಯಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಿದ್ದೇವೆ ಎಂದು ಹೇಳಿದರು.
ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ ಹೋರಾಟ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕರಾದ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಮಾತನಾಡಿ, ಕೇಂದ್ರ ಸರ್ಕಾರವು ಈಗ ನೂತನವಾಗಿ ಹೊರ ತಂದಂತಹ ಕಾನೂನು ಕರಾಳ ಕಾಯ್ದೆಯಾಗಿದೆ. ಮುಸ್ಲಿಮರನ್ನು ಬೀದಿಗೆ ತರಲು ಪ್ರಥಮವಾಗಿ ಎನ್ ಆರ್ ಸಿ ತಂದರು, ತ್ರಿಪಲ್ ತಲಾಖ್ ತಂದರು ಇನ್ನಿತರ ಹಲವು ಕಾನೂನನ್ನು ತಂದರು, ಇದೀಗ ವಕ್ಫ್ ಮುಸ್ಲಿಮರ ಆಸ್ತಿಯಾಗಿರುವ ಅಲ್ಲಾಹನ ದೀನಿಗಾಗಿ, ಅಲ್ಲಾಹನ ಪವಿತ್ರ ಇಸ್ಲಾಮೀಗಾಗಿ, ನಮ್ಮ ಮುಸ್ಲಿಮ್ ಸಮುದಾಯ ನಾಯಕರಾದ ನಮ್ಮ ಹಿರಿಯರು ನಮಗೆ ಈ ದಾನವಾಗಿ ನೀಡಿರುವಂತಹ ಸೊತ್ತನ್ನು ಕಬಳಿಸುವುದಕ್ಕಾಗಿ ಅವರು ಹೊರ ತಂದಂತ ಷಡ್ಯಂತ್ರವಾಗಿದೆ ಈ ಕಾಯ್ಡೆ ಇದನ್ನು ನಾವು ವಿರೋಧಿಸಲೇ ಬೇಕಾಗಿದೆ ಮುಸ್ಲಿಮರ ಆಸ್ತಿಯನ್ನು ಕಬಳಿಸುವಂತಹ ಈ ಹುನ್ನಾರವನ್ಬು ತೀವ್ರವಾಗಿ ಖಂಡಿಸಲೇ ಬೇಕಾಗಿದೆ ಇದಕ್ಕೆ ನಾವು ಪ್ರತಿಭಟನೆ ಮಾಡಬೇಕಾಗಿದೆ ಎಂದು ಹೇಳಿದರು.
ಈ ದಿನ.ಕಾಮ್ ಜೊತೆ ಮಾತನಾಡಿದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರು ಹಾಗೂ ವಕ್ಫ್ ಉಳಿಸಿ ಸಂವಿಧಾನ ರಕ್ಷಿಸಿ ಹೋರಾಟ ಸಮಿತಿ ಸಂಚಾಲಕರಾದ ಮಹಮ್ಮದ್ ಮೌಲಾ, ಕೇಂದ್ರ ಸರಕಾರವು ಸಂವಿಧಾನಕ್ಕೆ ವಿರೋಧವಾಗಿರುವ ಹಲವು ಕರಾಳ ಕಾಯ್ದೆ-ಕಾನೂನುಗಳನ್ನು ನಿರಂತರವಾಗಿ ತರುತ್ತಿದೆ. ವಕ್ಸ್ ಕಾಯ್ದೆ-2025 ಅವುಗಳಲ್ಲೊಂದು. ಲೋಕಸಭೆ ಮತ್ತು ರಾಜ್ಯಸಭೆಯಗಳ ಭಿನ್ನಮತವನ್ನು ಲೆಕ್ಕಿಸದೆ ಈ ಮಸೂದೆಯನ್ನು ಕಾಯ್ದೆಯನ್ನಾಗಿ ಮಾಡಲಾಗಿದೆ. ಇದು ಮುಸ್ಲಿಂ ಸಮುದಾಯದ ಸಂಪತ್ತನ್ನು ಕಬಳಿಸುವ ಮತ್ತು ಮುಸ್ಲಿಮರ ಐಡೆಂಟಿಟಿಯನ್ನೇ ಮುಗಿಸುವ ಸಂವಿಧಾನ ವಿರೋಧಿ ಕಾಯ್ದೆಯಾಗಿದೆ. ಇದರ ವಿರುದ್ಧ ವಿವಿಧ ಹೋರಾಟಗಳು ದೇಶಾದ್ಯಂತ ನಡೆಯುತ್ತಿದೆ. ಇದಕ್ಕೆ ಜನಾಂದೋಲನ, ನಾಗರಿಕರ ಹೋರಾಟ ಮತ್ತು ಪ್ರತಿಭಟನೆ ಮಾತ್ರ ಪರಿಹಾರವಾಗಿದೆ. ಈ ಹೋರಾಟದ ಅಂಗವಾಗಿ “ವಕ್ಸ್ ಉಳಿಸಿ ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನಾ ಸಭೆಯನ್ನು ಆಯೋಜಿಸಿದ್ದೇವೆ ಈ ಪ್ರತಿಭಟನೆಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಮುಂಚೂಣಿ ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ವಕ್ಫ್ ತಿದ್ದುಪಡಿ ಮಸೂದೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಹಲವಾರು ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ ಸುಪ್ರೀಂಕೋರ್ಟ್ ವಿಚಾರಣೆಯನ್ನು ಈಗಾಗಲೇ ಕಾಯ್ದಿರಿಸಿದೆ.
ವಕ್ಸ್ ಮಂಡಳಿಗೆ ನೀಡಲಾದ ದಾನ ಧರ್ಮದ ಆಧರಿತವೋ ಅಥವಾ ಜನಾಂಗದ ಅಭಿವೃದ್ಧಿಗೋ ಎಂಬ ಜಿಜ್ಞಾಸೆ ಕುರಿತು ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ ಪೀಠ ವಿಚಾರಣೆಯನ್ನು ಮುಗಿಸಿದೆ. ತೀರ್ಪು ಕಾಯ್ದಿರಿಸಿದ್ದರೂ ದಿನಾಂಕ ಪ್ರಕಟಿಸಿಲ್ಲ. ವಕ್ಫ್ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮ್ ಸಮುದಾಯದ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗಿದೆ. ವಕ್ಸ್ ಎಂಬುದು ಇಸ್ಲಾಮಿಕ್ ಆಧರಿತ ಕಲ್ಪನೆಯ ಸಂಘಟನೆಯಾಗಿದೆ. ಇದನ್ನು ಧಾರ್ಮಿಕ ಕೇಂದ್ರವಾಗಿ ಸೀಮಿತಗೊಳಿಸಬಾರದು ಎಂದು ಅರ್ಜಿದಾರರು ವಾದ ಮಂಡಿಸಿದ್ದರು.
ಚಾರಿಟಿ ಎಂಬುದು ಸಮಾಜ ಸೇವೆಗಾಗಿ ರಚಿಸಲಾಗುತ್ತದೆ. ಇದರಲ್ಲಿ ಯಾವುದೇ ಧರ್ಮ ಅಥವಾ ಜನಾಂಗ ಎಂಬುದು ಇರುವುದಿಲ್ಲ. ಎಲ್ಲರೂ ಸ್ವರ್ಗಕ್ಕೆ ಹೋಗುವ ಉದ್ದೇಶವನ್ನೇ ಹೊಂದಿರುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ವಿಚಾರಣೆ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಸಹ ಗಮನಿಸಬಹುದು.
ಒಟ್ಟಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಜಾತ್ಯತೀತ ಮೌಲ್ಯಗಳು ಹಾಗೂ ಸಂವಿಧಾನದ ಆಶಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಹೋರಾಟಗಳು ಅನಿವಾರ್ಯವಾಗಿದೆ ಈ ಜನಪರ ಹೊರಾಟಗಳಿಂದಾದರೂ ಕೇಂದ್ರ ಸರ್ಕಾರ ಅಸಂವಿಧಾನಿಕ ಕಾಯ್ದೆ ಕಾನೂನುಗಳು ವಾಪಸ್ಸು ಪಡೆಯಬಹುದೇ ಎಂದು ಕಾದುನೋಡಬೇಕಾಗಿದೆ.
