ಚಿಟಗುಪ್ಪ ತಾಲ್ಲೂಕಿನ ಗ್ರೇಡ್–2 ತಹಶೀಲ್ದಾರ್ ಜಯಶ್ರೀ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ವೀರಶೈವ ಲಿಂಗಾಯತ ಸಮಾಜದಿಂದ ಚಿಟಗುಪ್ಪ ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಗಣೇಶ್ ಮಂದಿರದಿಂದ ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ನೇರವಾಗಿ ತಹಶೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಜರುಗಿತು.
ಈ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಮಂಜುನಾಥ್ ಪಂಚಾಳ್ ಅವರಿಗೆ ಸಲ್ಲಿಸಿದರು.
ಸಮಾಜದ ಮುಖಂಡ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ʼಶಿರಸ್ತೇದಾರ್ ಸುಭಾಷ್ ಚಂದ್ರ ಅವರು ತಮ್ಮ ಕರ್ತವ್ಯ ಮುಗಿಸಿಕೊಂಡು ಚಿಟಗುಪ್ಪದಿಂದ ಸ್ವಗ್ರಾಮ ಚಿಂಚೋಳಿ ತಾಲ್ಲೂಕಿನ ಸುಲೆಪೇಟ್ ಗ್ರಾಮಕ್ಕೆ ಬಸ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಗ್ರೇಡ್–2 ತಹಶೀಲ್ದಾರ್ ಪತಿ ಹಾಗೂ ಇತರ ಮೂವರು ಬಸ್ಸಿಗೆ ಕಾರು ಅಡ್ಡಗಟ್ಟಿ ಸುಭಾಷ್ ಚಂದ್ರ ಅವರನ್ನು ಇಳಿಸಿಕೊಂಡು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನಾರ್ಹʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಘಟನೆಗೆ ಪ್ರಚೋದನೆ ನೀಡಿದ ಚಿಟಗುಪ್ಪ ತಾಲ್ಲೂಕಿನ ಗ್ರೇಡ್–2 ತಹಶೀಲ್ದಾರ್ ಜಯಶ್ರೀ ಅವರನ್ನು ತಕ್ಷಣ ಸೇವೆಯಿಂದ ಅಮಾನತು ಮಾಡಬೇಕುʼ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ಇದ್ದರೆ ಇರಬೇಕು ಇಂಥ ಸರ್ಕಾರಿ ಶಾಲೆ : ಹಳ್ಳಿ ಶಾಲೆಗೆ ಬಣ್ಣದ ಚಿತ್ತಾರ!
ಸಮಾಜದ ಪ್ರಮುಖರಾದ ರವಿ ಶಿವುಪೂಜಿ, ವೀರೇಶ್ ತುಂಗಾವ, ವಿಜಯಕುಮಾರ್, ರಾಜಶೇಖರ ಕೋರವಾರ್, ಸಿದ್ರಾಮ್ ಗೌಳಿ, ಮುಜಾಫರ್ ಪಟೇಲ್, ಬಾಬಾ ಆರ್.ಸಿ.ಸಿ., ಸುಭಾಷ್ ಕುಂಬಾರ, ಅಮಿತ್ ಹೊಸದೋಡ್ಡಿ, ಉದಯ್ ಬಬಡಿ, ನಿಲೇಶ್ ಮಳ್ಳಿ, ಶರಣಪ್ಪ, ಪರಮೇಶ್ವರ , ಅಣೇಪ್ಪ ಇಟಗಾ, ಕಾಂತಯ್ಯ ಸ್ವಾಮಿ, ಪ್ರವೀಣ್ ರಾಜಪೂರ್, ರವಿ ಸ್ವಾಮಿ, ರಶೀದ್ ಅಲಿ ಪಟೇಲ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.