- ಆರೋಪಿಗಳ ವಿರುದ್ಧ ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
- ಕಾರ್ ಮುಂದೆ ಬೈಕ್ ಅಡ್ಡಗಟ್ಟಿ ಕಾರಿನ ಕಿಟಿಕಿ ಒಡೆದು ಹಾಕಿದ ಕಿಡಿಗೇಡಿಗಳು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಕೊಲೆ, ಹಲ್ಲೆ ಸೇರಿದಂತೆ ಇನ್ನಿತರ ಘಟನೆಗಳು ವರದಿಯಾಗುತ್ತಿವೆ. ರಸ್ತೆಗಳಲ್ಲಿ ವ್ಹೀಲಿಂಗ್ ಹುಚ್ಚಾಟದಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದವರ ಜತೆಗೆ ಇದೀಗ ರಸ್ತೆಯಲ್ಲಿ ಕಾರು ಚಾಲಕ ಹಾರ್ನ್ ಮಾಡಿ ದಾರಿ ಕೇಳಿದ್ದಕ್ಕೆ ಕಾರು ಅಡ್ಡಗಟ್ಟಿ ಗಾಜು ಒಡೆದು ಹಾಕಿರುವ ಘಟನೆ ನಡೆದಿದೆ.
ಜುಲೈ 14ರಂದು ವರ್ತೂರು ಬಳಿ ಈ ಘಟನೆ ನಡೆದಿದೆ. ಮೂರರಿಂದ ನಾಲ್ಕು ಜನ ಬೈಕ್ ಸವಾರರು ಕಾರಿನ ಮುಂದೆ ಸಂಚಾರ ಮಾಡುವಾಗ ಕಾರು ಚಾಲಕ ದಾರಿ ಕೇಳಿದ್ದಾನೆ. ಇದಕ್ಕೆ ಕೋಪಗೊಂಡ ನಾಲ್ವರು ಬೈಕ್ ಸವಾರರು ಕಾರು ಚಲಿಸುವ ವೇಳೆ ಅಡ್ಡಾದಿಡ್ಡಿ ಬೈಕ್ ಚಲಾವಣೆ ಮಾಡಿದ್ದಾರೆ.
ಇದೇ ಸಮಯದಲ್ಲಿ ಕಾರಿನ ಗಾಜು ಒಡೆದು ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಅಲ್ಲದೇ ಕಾರಿಗೆ ಬೈಕ್‌ನಿಂದ ಡಿಕ್ಕಿ ಹೊಡೆದಿದ್ದಾರೆ. ಮುಂದುವರೆದು ಕಾರ್ ಫಾಲೋ ಮಾಡಿಕೊಂಡು ಹೋದ ಬೈಕ್ ಸವಾರರು ಗುಂಜೂರು ಗೇಟ್‌ನ ಅಪಾರ್ಟ್‌ಮೆಂಟ್ ಬಳಿ ಕಾರು ಚಾಲಕನೊಂದಿಗೆ ಗಲಾಟೆ ಮಾಡಿದ್ದಾರೆ. ಕಾರ್ ಮುಂದೆ ಬೈಕ್ ಅಡ್ಡಗಟ್ಟಿ ಕಾರಿನ ಕಿಟಿಕಿ ಒಡೆದು ಹಾಕಿದ್ದಾರೆ.
ಈ ಸುದ್ದಿ ಓದಿದ್ದೀರಾ? ₹82,999 ಮೊತ್ತದ ಆಪಲ್ ವಾಚ್ ಅಲ್ಟ್ರಾ ಕದ್ದ ಬೆಂಗಳೂರು ಮೂಲದ ಸ್ವಿಗ್ಗಿ ಜೀನಿ ಡೆಲಿವೆರಿ ಎಕ್ಸಿಕ್ಯೂಟಿವ್
ಈ ಸಂಪೂರ್ಣ ಘಟನೆ ಕಾರಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂತ್ರಸ್ತರು ಈ ಬಗ್ಗೆ ಟ್ವೀಟ್ ಮೂಲಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ವೈಟ್‌ಫೀಲ್ಡ್ ಡಿಸಿಪಿ ಎಸ್ ಗಿರೀಶ್ ಈ ಬಗ್ಗೆ ಟ್ವೀಟ್ ಮಾಡಿದ್ದು, “ದೂರುದಾರರನ್ನು ಸಂಪರ್ಕಿಸಿದ್ದೇವೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಿ ಶೀಘ್ರ ಬಂಧಿಸಲಾಗುವುದು” ಎಂದು ಭರವಸೆ ನೀಡಿದ್ದರು.
“ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ನಮ್ಮ ಕಣ್ಗಾವಲಿನಲ್ಲಿ ಇಂತಹ ಅಶಿಸ್ತಿನ ನಡವಳಿಕೆ ಅಥವಾ ಗೂಂಡಾಗಿರಿಗೆ ಅವಕಾಶವಿರುವುದಿಲ್ಲ ಮತ್ತು ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಗುರುವಾರ ರಾತ್ರಿ ಆರೋಪಿಗಳನ್ನು ಬಂಧಿಸಲಾಗಿದೆ. ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದೆ” ಎಂದು ಬೆಂಗಳೂರು ನಗರ ಪೊಲೀಸ್ ಟ್ವೀಟ್ ಮಾಡಿದೆ.