ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ಎರಡು ಸಾವಿರ ಅಶ್ಲೀಲ ಚಿತ್ರಗಳು ಮತ್ತು 40ಕ್ಕೂ ಅಧಿಕ ವಿಡಿಯೋಗಳಿತ್ತು ಎಂದು ಈ ಹಿಂದೆ ಪ್ರಜ್ವಲ್ ಕಾರು ಚಾಲಕನಾಗಿದ್ದ ಕಾರ್ತಿಕ್ ಸಾಕ್ಷಿ ನುಡಿದಿದ್ದಾರೆ.
ಪ್ರಜ್ವಲ್ ಅನ್ನು ಕಳೆದ ವರ್ಷ ಮೇ 31ರಂದು ಬಂಧಿಸಲಾಗಿದ್ದು ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಮೇ 26ರಂದು ನಡೆದ ವಿಚಾರಣೆ ವೇಳೆ ಪ್ರಜ್ವಲ್ ಕಾರು ಚಾಲಕನಾಗಿದ್ದ ಕಾರ್ತಿಕ್ ಸಾಕ್ಷಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಪ್ರಜ್ವಲ್ ಪ್ರಕರಣ | ಅತ್ಯಾಚಾರದ ದೂರು ಕೊಟ್ಟರೂ ಆರೋಪಿಗಳ ರಕ್ಷಣೆಗೆ ಹಾಸನ ಪೊಲೀಸರ ಯತ್ನ ಆರೋಪ: ಡಿಜಿಪಿಗೆ ದೂರು
2018ರಿಂದ ಕಾರ್ತಿಕ್ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು ಕಾರಿನಲ್ಲಿ ಪ್ರಜ್ವಲ್ ಮೊಬೈಲ್ ಬಿಟ್ಟು ಹೋಗಿದ್ದಾಗ ಅದನ್ನು ಪರಿಶೀಲಿಸಿರುವುದಾಗಿ ಕಾರ್ತಿಕ್ ತಿಳಿಸಿದ್ದಾರೆ. ಕಾರಿನಲ್ಲಿ ತನಗೆ ತಿಳಿಯದಂತೆ ಪ್ರಜ್ವಲ್ ಅಶ್ಲೀಲ ದೃಶ್ಯಗಳನ್ನು ನೋಡುತ್ತಿದ್ದರು. ಜಯನಗರದ ಗೆಳತಿ ಮನೆಗೆ ಹೋದಾಗ ಮೊಬೈಲ್ ಕಾರಿನಲ್ಲಿ ಬಿಟ್ಟು ಹೋಗಿದ್ದರು. ಈ ವೇಳೆ ಮೊಬೈಲ್‌ನಲ್ಲಿದ್ದ ಅಶ್ಲೀಲ ಚಿತ್ರ, ವಿಡಿಯೋಗಳನ್ನು ನೋಡಿ ತನ್ನ ಮೊಬೈಲ್‌ಗೆ ವರ್ಗಾಯಿಸಿದ್ದೆ. ಬಳಿಕ ಮಗನಿಗೆ ಬುದ್ಧಿ ಹೇಳಲಿ ಎಂಬ ಉದ್ದೇಶದಿಂದ ಪ್ರಜ್ವಲ್ ತಾಯಿ ಭವಾನಿಗೆ ಈ ಚಿತ್ರ, ವಿಡಿಯೋಗಳನ್ನು ತೋರಿಸಿದ್ದೆ ಎಂದು ಕಾರ್ತಿಕ್ ತಿಳಿಸಿದ್ದಾರೆ ಎನ್ನಲಾಗಿದೆ.
“ಈ ಬಗ್ಗೆ ಭವಾನಿ ಅವರು ಮಗನ ಜೊತೆ ಮಾತನಾಡಿದಾಗ ವಿಡಿಯೋ ಬಗ್ಗೆ ತಿಳಿಸಿದ್ದು ನಾನು ಎಂದು ಹೇಳಿದ್ದರು. ಹಾಗಾಗಿ ಪ್ರಜ್ವಲ್ ನನಗೆ ಫೋನ್ ಮಾಡಿ ಬೈದಿದ್ದರು. ಅಂದಿನಿಂದ ನಾನು ಕೆಲಸ ಬಿಟ್ಟೆ. ಬಳಿಕ ಪ್ರಜ್ವಲ್ ಕುಟುಂಬ ವಿಡಿಯೋ ಬಹಿರಂಗವಾಗದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದರು” ಎಂದು ಕಾರ್ತಿಕ್ ಸಾಕ್ಷಿ ಹೇಳಿದ್ದಾರೆ.
ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಪ್ರಜ್ವಲ್ ರೇವಣ್ಣ ಮೇಲಿದೆ. ಈ ವಿಡಿಯೋಗಳು ವೈರಲ್ ಆದಾಗ ಕರ್ನಾಟಕ ಮಾತ್ರವಲ್ಲ ದೇಶದಲ್ಲೇ ಭಾರೀ ಸಂಚಲನ ಉಂಟಾಗಿತ್ತು.
