ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹಾಗೂ ದಲಿತ ಸಮುದಾಯಕ್ಕೆ ಅಪಮಾನ ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಎನ್ ರವಿಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ. ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರವಿಕುಮಾರ್, ತಮ್ಮ ಹೇಳಿಕೆಗೆ ವಿಷಾಧ ವ್ಯಕ್ತಪಡಿಸುತ್ತೇನೆ. ಹೇಳಿಕೆ ಹಿಂಪಡೆಯುತ್ತೇನೆ ಎಂದಿದ್ದಾರೆ.
“ನನ್ನ ಅಜಾಗರೂಕ ಹೇಳಿಕೆಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಜಿಲ್ಲಾಧಿಕಾರಿ ಅತ್ಯಂತ ಗೌರವಪಾತ್ರರು. ಆ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ಹೇಳಿಲ್ಲ. ಬಾಯಿ ತಪ್ಪಿನಿಂದ ಬಂದ ಹೇಳಿಕೆಯಷ್ಟೇ. ನನ್ನ ಹೇಳಿಕೆಯನ್ನು ಕೂಡಲೇ ಹಿಂಪಡೆಯುತ್ತಿದ್ದೇನೆ” ಎಂದಿದ್ದಾರೆ.
ಇತ್ತೀಚೆಗೆ ಕಲಬುರಗಿಯಲ್ಲಿ ಬಿಜೆಪಿ ಪ್ರತಿಭಟನೆ ಆಯೋಜಿಸಿತ್ತು. ಆ ಪ್ರತಿಭಟನೆಯಲ್ಲಿ ವಿಧಾನ ಪರಿಷತ್‌ನ ವಿರೋಧ ಪಕ್ಷದ (ಬಿಜೆಪಿ) ಮುಖ್ಯ ಸಚೇತಕರಾಗಿರುವ ಎನ್ ರವಿಕುಮಾರ್ ಭಾವಹಿಸಿ ಮಾತನಾಡಿದ್ದರು. ತಮ್ಮ ಭಾಷಣದಲ್ಲಿ, “”ಕಲಬುರಗಿ ಕರ್ನಾಟಕದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಪಾಕಿಸ್ತಾನದವರೋ ಅಥವಾ ಭಾರತದವರೋ ಖಚಿತವಾಗಿ ಗೊತ್ತಿಲ್ಲ” ಎಂದಿದ್ದರು.
ಅಲ್ಲದೆ, “ಶಹಾಬಾದ್ ಡಿವೈಎಸ್ ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ ಮತ್ತು ನಟರಾಜ ಲಾಡೆ ತಮ್ಮ ಕರ್ತವ್ಯ ನಿರ್ವಹಣೆಲ್ಲಿ ಅಸಮರ್ಥರಾಗಿದ್ದಾರೆ. ಅವರು ಸರ್ಕಾರದ ಗುಲಾಮರಾಗಿದ್ದಾರೆ” ಎಂದು ಆರೋಪಿಸಿದ್ದರು. ಮಾತ್ರವಲ್ಲ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಜಾತಿ ನಿಂದನೆ ಮಾಡಿದ್ದರು.
ಈ ಲೇಖನ ಓದಿದ್ದೀರಾ?: ಅರಣ್ಯಗಳು ಅಕ್ಷಯ ಪಾತ್ರೆಗಳಲ್ಲ: ಎಲ್ಲರೂ ಅರಿಯಬೇಕಾದ ಸತ್ಯ
ಅವರ ಭಾಷಣ ವರದಿಯಾದ ಬಳಿಕ, ಕಾಂಗ್ರೆಸ್ ಕಾರ್ಯಕರ್ತ ದತ್ತಾತ್ರೇಯ ಇಕ್ಕಳಕಿ ಅವರು ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. “ರವಿಕುಮಾರ್ ಅವರು ಮುಸ್ಲಿಮರ ವಿರುದ್ಧ ಕೋಮುದ್ವೇಷ ಪ್ರಚೋದನೆ ಮಾಡಿದ್ದಾರೆ. ಪೊಲೀಸರು ಮತ್ತು ಅಧಿಕಾರಿಗಳನ್ನು ಗುಲಾಮರೆಂದು ಅವಮಾನಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜಾತಿ ನಿಂದನೆ ಮಾಡಿದ್ದಾರೆ. ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದರು.
ಖರ್ಗೆ ಮತ್ತು ದಲಿತ ಸಮುದಾಯಕ್ಕೆ ಜಾತಿ ನಿಂದನೆ ಹಾಗೂ ಜಿಲ್ಲಾಧಿಕಾರಿ ವಿರುದ್ಧ ಕೋಮುದ್ವೇಷದ ಹೇಳಿಕೆ ನೀಡಿದ ಆರೋಪದ ಮೇಲೆ ರವಿಕುಮಾರ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ