ಪ್ರತಿ ಮಳೆಗಾಲ ಬರುವಾಗ ಕೊರೋನಾ ಪ್ರಕರಣಗಳು ಪತ್ತೆಯಾಗುವುದು ಸಹಜ. ಕೆಲ ಮಾಧ್ಯಮಗಳು “ಮತ್ತೆ ವಕ್ಕರಿಸಿದ ಮಹಾಮಾರಿ” ಎಂದು ಉತ್ಪ್ರೇಕ್ಷಿತ ಸುದ್ದಿ ಬಿತ್ತರಿಸಿ ಜನ ಭಯಪಡುವಂತೆ ಮಾಡುತ್ತಿವೆ. ಯಾವುದೇ ವೈರಸ್ ರೂಪಾಂತಗೊಂಡಷ್ಟು ವೀಕ್ ಆಗುತ್ತದೆ ಎಂದು ವೈದ್ಯರೇ ಹೇಳುತ್ತಾರೆ. ಹೃದ್ರೋಗ, ಕಿಡ್ನಿ ಸಮಸ್ಯೆ, ಅಸ್ತಮಾ, ಕ್ಯಾನ್ಸರ್ ರೋಗಿಗಳು ಮತ್ತು ಅಂಗಾಂಗ ಕಸಿ ಮಾಡಿಸಿಕೊಂಡವರು ಮಾತ್ರ ಹೆಚ್ಚು ಮುನ್ನೆಚ್ಚರಿಕೆ ವಹಿಸಬೇಕು
2019ರಲ್ಲಿ ಚೀನಾದಲ್ಲಿ ಮೊದಲು ಕಾಣಿಸಿಕೊಂಡು ಕೋವಿಡ್ 19 ವೈರಸ್ ನಂತರ ಇಡೀ ವಿಶ್ವವನ್ನು ವ್ಯಾಪಿಸಿ ಎರಡು ವರ್ಷಗಳ ಕಾಲ ಮನುಕುಲವನ್ನು ಕಾಡಿತ್ತು. ವಿಶ್ವವನ್ನೇ ಬಾಧಿಸಿದ್ದ ಕೋವಿಡ್ ಭಾರತದಲ್ಲೂ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿತ್ತು. ಕೇರಳದಲ್ಲಿ ಕೊರೋನಾದಿಂದ ದೇಶದ ಮೊದಲ ಸಾವು ಸಂಭವಿಸಿತ್ತು. 2020ರ ಮಾರ್ಚ್‌ನಲ್ಲಿ ಇಡೀ ದೇಶದಲ್ಲಿ ಎರಡು ವಾರಗಳ ಲಾಕ್‌ಡೌನ್ (Lock Down) ಘೋಷಣೆಯಾಗಿತ್ತು. ಉದ್ಯಮ, ವ್ಯಾಪಾರ, ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಸಾರಿಗೆ ಹೀಗೆ ಆಸ್ಪತ್ರೆ ಒಂದನ್ನು ಬಿಟ್ಟು ಎಲ್ಲವೂ ಬಂದ್ ಆಗಿ ಜನರೆಲ್ಲ ಮನೆಯೊಳಗೆ ದಿನ ಕಳೆಯುವಂತೆ ಮಾಡಿತ್ತು. ಕೊರೋನಾ ಸೋಂಕಿತರನ್ನು ಆಸ್ಪತ್ರೆಗಳಿಗೆ ಸೇರಿಸಿದರೂ ಮನೆಯವರು ಆರೈಕೆ ಮಾಡುವಂತಿರಲಿಲ್ಲ. ಸೋಂಕಿತರನ್ನು ಮನೆಯಾಚೆ ಸರ್ಕಾರವೇ ಕ್ವಾರಂಟೈನ್ ಮಾಡುವ ಹೊಸ ಬಗೆಯ ಬೆಳವಣಿಗೆಗೆ ನಾವೆಲ್ಲ ಸಾಕ್ಷಿಯಾಗಿದ್ದೆವು. ಗಂಟಲಿನ ಸ್ವಾಬ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರೆಲ್ಲ ಆತಂಕದಿಂದ ದಿನ ಕಳೆಯುವಂತೆ ಮಾಡಿತ್ತು. ಐಟಿ ಕಂಪನಿಗಳು ಸುಲಭವಾಗಿ ವರ್ಕ್ ಫ್ರಂ ಹೋಮ್ ಕಲ್ಚರಿಗೆ ಒಗ್ಗಿಕೊಂಡವು. ಮಾಧ್ಯಮ ಸಂಸ್ಥೆಗಳ ಸಿಬ್ಬಂದಿಯೂ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. 2020ರಲ್ಲಿ ಮತ್ತೆ ಕೊರೋನಾ ಎರಡನೇ ಅಲೆ ಅಪ್ಪಳಿಸಿತ್ತು. ಆಗ ಪೂರ್ತಿ ಒಂದು ತಿಂಗಳು ಲಾಕ್‌ಡೌನ್ ಘೋಷಣೆಯಾಗಿತ್ತು. ಹೀಗೆ ಎರಡು ವರ್ಷ ಇಡೀ ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ವ್ಯವಸ್ಥೆಯೇ ಅಲುಗಾಡಿತ್ತು. ಆಗ ಬಾಗಿಲು ಹಾಕಿದ್ದು ಲಕ್ಷಾಂತರ ಸಣ್ಣ ಉದ್ಯಮಗಳು. ದೇಶದಲ್ಲಿಯೇ ಕೊರೋನಾ ಲಸಿಕೆ ತಯಾರಿಸಿ ಎಲ್ಲ ದೇಶವಾಸಿಗಳಿಗೂ ಕೊಟ್ಟಿದ್ದೂ ಆಯ್ತು. ನಂತರ ಮೂರು ಮತ್ತು ನಾಲ್ಕನೇ ಅಲೆ ಸದ್ದಿಲ್ಲದೇ ಬಂದು ಹೋಯ್ತು. ಅಷ್ಟೊಂದು ಜೀವ ಹಾನಿ ಆಗಲಿಲ್ಲ. ಇದಕ್ಕೆ ಲಸಿಕೆ ಪಡೆದಿರುವುದು ಕಾರಣ ಎಂದು ಹೇಳಿಕೊಂಡರೂ ವಾಸ್ತವದಲ್ಲಿ ವೈರಸ್ ರೂಪಾಂತರಗೊಂಡಷ್ಟು ವೀಕ್ ಆಗುತ್ತವೆ ಎಂದು ವಿಜ್ಞಾನ ಹೇಳುತ್ತದೆ.

ಪ್ರತಿ ಮಳೆಗಾಲ ಬರುವಾಗ ಕೊರೋನಾ ಪ್ರಕರಣಗಳು ಪತ್ತೆಯಾಗುವುದು, ಮಾಧ್ಯಮಗಳು “ಮತ್ತೆ ವಕ್ಕರಿಸಿದ ಮಹಾಮಾರಿ” ಎಂದು ಉತ್ಪ್ರೇಕ್ಷಿತ ಸುದ್ದಿ ಬಿತ್ತರಿಸಿ ಜನ ಭಯಪಡುವಂತೆ ಮಾಡುವುದು ನಡೆಯುತ್ತಲೇ ಇದೆ. ಬೆಂಗಳೂರು ನಗರದಲ್ಲಿ ನಿನ್ನೆಯಷ್ಟೇ 71 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದ್ದರು. ಸೋಂಕು ಪತ್ತೆ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಜನರಲ್ಲಿ ಕೊರೋನಾ ಎಂದ ತಕ್ಷಣ ಒಂದು ಬಗೆಯ ಆತಂಕ ಮೂಡುವುದಂತು ನಿಜ. 2019-21ರವರೆಗೆ ದೇಶದಲ್ಲಿ ಲಕ್ಷಾಂತರ ಜನರು ಬಲಿಯಾಗಿದ್ದಾರೆ. ತಮ್ಮ ಸ್ವಂತದವರನ್ನು ಕಳೆದುಕೊಂಡ ಕುಟುಂಬಗಳು ಆತಂಕಪಡುವುದು ಸಹಜ. ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಸರತಿ ಸಾಲಿನಲ್ಲಿ ಕಾದು ಕುಳಿತ ದೃಶ್ಯಗಳು, ನಗರದ ಹೊರ ವಲಯದಲ್ಲಿ ತಾತ್ಕಾಲಿಕ ಸ್ಮಶಾನಗಳನ್ನು ತೆರೆಯಬೇಕಾಗಿ ಬಂದದ್ದು, ವಿದ್ಯುತ್ ಚಿತಾಗಾರಗಳು ಶವ ಸುಟ್ಟೂ ಸುಟ್ಟೂ ಕೆಟ್ಟು ನಿಂತದ್ದು, ಇವೆಲ್ಲ ಕಂಡುಂಡ ಸತ್ಯಗಳು. ಆದರೆ, ಆ ಗಂಡಾಂತರದಿಂದ ಪಾರಾಗಿದ್ದೇವೆ. ಈಗ ಬರುತ್ತಿರುವ ರೂಪಾಂತರಿ ವೈರಸ್‌ಗಳು. ಅವು ಮೊದಲಿನಷ್ಟು ಅಪಾಯಕಾರಿ ಅಲ್ಲ.
ವಾಡಿಕೆಗಿಂತ ಮುಂಚೆ ಮುಂಗಾರು ಶುರುವಾಗುತ್ತಿದ್ದಂತೆ ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕು ಸದ್ದು ಮಾಡಿದೆ. ಮೇ 26ರಂದು 71 ಸಕ್ರಿಯ ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯೊಳಗೆ ಇರುವುದು ವರದಿಯಾಗಿದೆ. ಕೆಲವು ಸುದ್ದಿ ಮಾಧ್ಯಮಗಳು ಮಹಾಮಾರಿ ಎಂಬಂತೆ ವರದಿ ಮಾಡುತ್ತಿವೆ. ಆದರೆ, ವೈದ್ಯರ ಪ್ರಕಾರ ವೈರಾಣುಗಳು ರೂಪಾಂತರಗೊಂಡಷ್ಟು ಅವು ವೀಕ್ ಆಗುತ್ತವೆ. ಮಾಧ್ಯಮಗಳು ಜನರನ್ನು ಭಯಪಡಿಸುವ ಬದಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುವುದು ಉತ್ತಮ ಎನ್ನುತ್ತಾರೆ ವೈದ್ಯರು.
ಈ ಬಗ್ಗೆ ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಯ ಶ್ವಾಸಕೋಶ ತಜ್ಞ (Pulmonology) ಡಾ. ಪ್ರಸನ್ನ ಅವರು ಈ ದಿನ.ಕಾಮ್‌ಗೆ ವಿವರವಾದ ಮಾಹಿತಿ ನೀಡಿದ್ದಾರೆ.
ರೂಪಾಂತರಿ ವೈರಸ್‌ಗೆ ಭಯಪಡುವ ಅಗತ್ಯವಿಲ್ಲ
“ಸಾಮಾನ್ಯವಾಗಿ ಹವಾಮಾನ ಬದಲಾವಣೆ ಆದಾಗ ಯಾರಿಗೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳಾದ ಆಸ್ತಮ, ಸೈನಸ್, ಅಲರ್ಜಿ ಯಾರಿಗೆ ಇದೆಯೋ ಅವರಿಗೆ ಬೇಗನೆ ವೈರಸ್ ಸೋಂಕು ಆಗುತ್ತದೆ. ಶ್ವಾಸಕೋಶ ಸಮಸ್ಯೆ ಇರೋರಿಗೆ ವೈರಾಣು ಇನ್‌ಫೆಕ್ಷನ್ ಟ್ರಿಗರ್ ಇದ್ದಂತೆ. ಅವರಿಗೆ ಹವಾಮಾನ ಬದಲಾವಣೆಯಿಂದ ಹೆಚ್ಚು ಸಮಸ್ಯೆ ಆಗುತ್ತದೆ. ಫ್ಲೂ ಇನ್‌ಫ್ಲೂಯೆನ್ಸಾ, ಕಾಮನ್ ಫ್ಲೂ ಎ ಬಿ, ಮಕ್ಕಳಿಗೆ ಆರ್‌ಎಸ್‌ವಿ (Respiratory syncytial virus) ನಿಂದ ಹೆಚ್ಚಿನ ಪ್ರಮಾಣದಲ್ಲಿ ನ್ಯೂಮೋನಿಯಾ ಜ್ವರ ಬರಬಹುದು. ಈ ಎಲ್ಲದಕ್ಕೂ ಲಕ್ಷಣ ಒಂದೇ ಆಗಿರುತ್ತದೆ. ನೆಗಡಿ, ಶೀತ, ಮೂಗು ಕಟ್ಟುವುದು, ಧ್ವನಿ ಬದಲಾಗುವುದು, ಗಂಟಲು ನೋವು, ಹೈಗ್ರೇಡ್ ಫೀವರ್, ಚಳಿಜ್ವರ, ಮೈಕೈ ನೋವು, ಸುಸ್ತು, ತಲೆನೋವು. ಇದು ಮೇಲಿನ ಶ್ವಾಸಕೋಶದ (Upper lung) ಸಮಸ್ಯೆ.

ಕೆಳಗಿನ ಶ್ವಾಸಕೋಶ (Lower lung)ದ ಸಮಸ್ಯೆ ಅಂದ್ರೆ ಗಂಟಲಿನ ಕೆಳಭಾಗದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ಉಸಿರಾಟಕ್ಕೆ ಆಮ್ಲಜನಕ ಮತ್ತು ಕಾರ್ಬನ್ ಡೈಆಕ್ಸೈಡ್ ವೆಂಟಿಲೇಷನ್ ಆಗುವ ಜಾಗಕ್ಕೆ ನ್ಯೂಮೋನಿಯಾ ಆಗುತ್ತದೆ. ಸೋಂಕಿನಿಂದ ಉಂಟಾಗುವ ಉತ್ಪನ್ನಗಳು ಅಲ್ಲಿ ತುಂಬಿಕೊಂಡು ಆಮ್ಲಜನಕದ ಸಮಸ್ಯೆ ಆಗುತ್ತದೆ. ಆಮ್ಲಜನಕದ ಸ್ಯಾಚುರೇಷನ್ ಕಡಿಮೆ ಆಗುತ್ತದೆ. ಸ್ಯಾಚುರೇಷನ್ 95ರ ಮೇಲೆ ಇರಬೇಕು. ನ್ಯೂಮೋನಿಯಾ ಆಗಿ ಲಂಗ್ಸ್ ಸೋಂಕು ಆದಾಗ ಆಕ್ಸಿಜನ್ ಕಡಿಮೆ ಆಗುತ್ತದೆ. ಇದು ಗಂಭೀರ ಸಮಸ್ಯೆಯ ಲಕ್ಷಣ.
ನಾವು ಇದನ್ನು ಅಪ್ಪರ್ ರೆಸ್ಪರೇಟರಿ ಟ್ರ್ಯಾಕ್ Upper respiratory tract (ಮೂಗು ಗಂಟಲಿಗೆ ಸೀಮಿತ) ಮತ್ತು ಗಂಟಲಿಗಿಂತ ಕೆಳಗೆ ಎದೆ ಬಿಗಿತ, ಆಸ್ತಮ ಸಮಸ್ಯೆ ಜಾಸ್ತಿಯಾಗುವುದು, ಸಿಒಪಿಡಿ, ಉಸಿರಾಟದ ನಾಳಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು Airway Disease ಎನ್ನುತ್ತೇವೆ. ಆಸ್ತಮ, ಬ್ರಾಂಕೈಟಿಸ್, ಬ್ರಾಂಕ್ಯೋಲೈಟಿಸ್, ಬ್ರಾಂಕಿಎಕ್ಟೇಸಿಸ್(Bronchitis, bronchiolitis, bronchiectasis)ಎಂದು ಕರೆಯುತ್ತೇವೆ. ಹೀಗೆ ವಿಭಾಗಿಸಿ ಚಿಕಿತ್ಸೆ ನೀಡುತ್ತೇವೆ. ಹವಾಮಾನ ಬದಲಾವಣೆಯಾದಾಗ ಉಂಟಾಗುವ ಸಮಸ್ಯೆ ಮತ್ತು ವರ್ಷವಿಡೀ ಇರುವ ಸಮಸ್ಯೆ (ಪೆರಿನಿಯಲ್ Perineal) ಪ್ರತ್ಯೇಕವಾಗಿ ನೋಡುತ್ತೇವೆ.
ಸಾರ್ಸ್ ಕೊರೋನಾ ವೈರಸ್-SARS coronavirus ಈಗ (2020 ಆದ ಮೇಲೆ) ಸಾರ್ಸ್ ಕೊರೋನಾ ವೈರಸ್- 2 ಎನ್ನುತ್ತೇವೆ. ಮೊದಲು 2003ರಲ್ಲಿ ಸಾರ್ಸ್ ಕೊರೋನಾ ವೈರಸ್ 1 ಬಂದಿತ್ತು. ಇದು ಪ್ರತಿವರ್ಷ ರೂಪಾಂತರಗೊಳ್ಳುತ್ತದೆ. ಎಷ್ಟು ರೂಪಾಂತರವಾಗಿ ಬರುತ್ತದೋ ಅಷ್ಟು ವೀಕ್ ಆಗುತ್ತಲೇ ಹೋಗುತ್ತದೆ. ಕೊರೋನಾ ಮೂರನೇ ಅಲೆ ಒಮಿಕ್ರಾನ್ ಬಂದಾಗ ನ್ಯೂಮೋನಿಯಾದಲ್ಲಿ ತೀವ್ರತೆ ಇರಲಿಲ್ಲ. ಆಗ ವ್ಯಾಕ್ಸಿನೇಷನ್‌ನಿಂದ ತೀವ್ರತೆ ಕಮ್ಮಿ ಅಂತ ಹೇಳಿದ್ದೆವು. ಆದರೆ, ವೈರಸ್ ರೂಪಾಂತವಾದಷ್ಟು ಬದಲಾವಣೆ ಆಗುತ್ತದೆ, ತೀವ್ರತೆ ಕಡಿಮೆಯಾಗುತ್ತದೆ. ಇತ್ತೀಚೆಗೆ ಎರಡು ವರ್ಷಗಳಿಂದ ಕೊರೋನಾದಿಂದ ಸತ್ತವರಲ್ಲಿ ಕಿಡ್ನಿ, ಹೃದಯ ರೋಗಿಗಳು, ಕ್ಯಾನ್ಸರ್ ರೋಗಿಗಳೇ ಹೆಚ್ಚು. ಅವರಲ್ಲಿ ಮೊದಲೇ ಇಮ್ಯುನಿಟಿ ಕಡಿಮೆ ಇರುತ್ತದೆ. ಇಮ್ಯುನೋಸಪ್ರೆಷನ್-Immunosuppression ಔಷಧಿ ತೆಗೆದುಕೊಳ್ಳುತ್ತಿರುತ್ತಾರೆ. ಡಯಾಬಿಟಿಕ್, ಹೈಪರ್ ಟೆನ್ಶನ್, ಹೃದ್ರೋಗ, ಕಿಡ್ನಿ ಕಸಿ, ಹೃದಯ ಕಸಿ, ಲಿವರ್ ಕಸಿ ಆದವರಿಗೆ ಬೇಗನೇ ಸೋಂಕು ಆಗುತ್ತದೆ. ಸಾಮಾನ್ಯ ವ್ಯಕ್ತಿಗಳೂ ಫ್ಲೂ ವ್ಯಾಕ್ಸಿನ್ ಪ್ರತಿವರ್ಷ ಒಂದು ಡೋಸ್ ತೆಗೆದುಕೊಳ್ಳುವುದು ಉತ್ತಮ. ಹೆಚ್ಚು ಸಮಸ್ಯೆ ಇರುವವರಿಗೆ ಎರಡು ಡೋಸ್ ನ್ಯೂಮೋನಿಯಾ ವ್ಯಾಕ್ಸಿನ್ ತೆಗೆದುಕೊಳ್ಳುವುದು ಕಡ್ಡಾಯ”. ಇದು ಡಾ ಪ್ರಸನ್ನ ಅವರ ಸಲಹೆ.
ಸೋಂಕು ಹರಡದಂತೆ ಮುಂಜಾಗೃತೆ ಅಗತ್ಯ
ಕೊರೋನಾ ಸೋಂಕು ಸಾಂಕ್ರಾಮಿಕ ಎಂಬುದು ಗೊತ್ತೇ ಇದೆ. ರೋಗಿಯ ನೆಗಡಿ, ಕೆಮ್ಮು, ಸೀನಿನ ಮೂಲಕ ಮತ್ತೊಬ್ಬರಿಗೆ ಹರಡುತ್ತದೆ. ಹಾಗಾಗಿ ಇಂತಹ ಸಮಸ್ಯೆ ಇರುವವರು ಬೇರೆಯವರ ಸಂಪರ್ಕಕ್ಕೆ ಬರದೇ ಇರುವುದು, ಮನೆಗಳಲ್ಲಿ ಪ್ರತ್ಯೇಕವಾಗಿರುವುದು, ತಮ್ಮ ಉಡುಗೆ, ಟವಲ್, ರಗ್ಗು ಪ್ರತ್ಯೇಕವಾಗಿರಿಸಿಕೊಳ್ಳುವುದು ಹಾಗೂ ಅವುಗಳನ್ನು ಬಿಸಿ ನೀರಿನಿಂದ ಒಗೆಯುವುದು, ಕಚೇರಿ- ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮುಂತಾದ ಸ್ವಯಂ ಜಾಗೃತೆ ವಹಿಸುವುದರಿಂದ ಸೋಂಕು ಹರಡದಂತೆ ತಡೆಯಬಹುದು.
ಇದನ್ನೂ ಓದಿ ರಾಯಭಾರ | ದಿಟ್ಟಿಸುತ್ತಿದೆ ಮುಂಗಾರು- ಕೊಚ್ಚಿ ಹೋಗದಿರಲಿ ಬಣ್ಣಬಣ್ಣದ ಸಾಧನೆಗಳ ತೇರು!
ಇನ್ನು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯ ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸಲಹೆ, ಔಷಧಿಯ ಜೊತೆಗೆ ಕೆಲವು ನಿಯಮಗಳನ್ನು ಪಾಲಿಸುವುದು ಅಷ್ಟೇ ಮುಖ್ಯ. ಬಿಸಿಯಾದ ಮತ್ತು ಪೌಷ್ಟಿಕ ಆಹಾರ ಸೇವನೆ, ಬಿಸಿ ನೀರು ಕುಡಿಯುವುದು, ಬೆಚ್ಚಗಿನ ಬಟ್ಟೆ ಧರಿಸುವುದು, ಗಾಳಿಗೆ ಮೈ ಸೋಂಕದಂತೆ ಎಚ್ಚರವಹಿಸುವುದು, ಕಿವಿಗೆ ಗಾಳಿ ನುಗ್ಗದಂತೆ ಕವರ್ ಮಾಡಿಕೊಳ್ಳುವುದು, ಮನೆಯಲ್ಲಿ ನೆಲದ ಮೇಲೆ ಬರಿಗಾಲಿನಿಂದ ನಡೆಯದೇ ಸಾಕ್ಸ್ ಧರಿಸುವುದು ಮುಂತಾದ ಸ್ವಯಂ ಆರೈಕೆ ಮುಖ್ಯ. ಹೊರಗಿನ ಆಹಾರ, ತಂಪು ಪಾನೀಯ ತ್ಯಜಿಸುವುದು ಆರೋಗ್ಯದ ಸುಧಾರಣೆಯ ದೃಷ್ಟಿಯಿಂದ ಯಾವತ್ತೂ ಉತ್ತಮ. ರೋಗ ಗುಣಪಡಿಸಲು ಔಷಧಿಯ ಜೊತೆಗೆ ಇಮ್ಯುನಿಟಿ ಹೆಚ್ಚಿಸುವ ಆಹಾರ ಸೇವನೆ ಬಹಳ ಮುಖ್ಯ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಮೋದಿ ಆಡಳಿತಕ್ಕೆ 11 ವರ್ಷ; ದೇಶ ಉದ್ಧಾರವಾಯಿತೇ?

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.