ಬೀದರ್ | ಅಲೆಮಾರಿಗಳಿಗೆ ಸಿಗದ ಸೂರು; ಅತಂತ್ರ ಸ್ಥಿತಿಯಲ್ಲಿ ವಸತಿ ವಂಚಿತರು

Date:

Advertisements

‘ನಾವು ಕಳೆದ ಮೂವತ್ತು ವರ್ಷಗಳಿಂದ ಇದೇ ಕಗ್ಗತ್ತಲ ಜೋಪಡಿಗಳಲ್ಲಿ ವಾಸವಿದ್ದೇವೆ. ಇದು ಖಾಸಗಿಯವರ ಜಮೀನು, ಸುಮಾರು 100 ಕ್ಕಿಂತ ಹೆಚ್ಚಿನ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಕುಟುಂಬಗಳಿವೆ. ಇಲ್ಲಿ ಕುಡಿಯುವ ನೀರು ಬಿಟ್ಟರೆ ಬೇರೆ ಯಾವುದೇ ಮೂಲಭೂತ ಸೌಕರ್ಯ ನಮಗಿಲ್ಲ. ಸ್ವಲ್ಪ ಮಳೆ ಬಂದ್ರೆ ಸಾಕು, ಇಡೀ ಗುಡಿಸಿಲಿನಲ್ಲಿ ನೀರು ತುಂಬುತ್ತೆ, ಪುಟ್ಟ ಮಕ್ಕಳು, ವೃದ್ಧರು ಹೇಗೆ ಮಲಗಬೇಕು. ನಾವು ಮನುಷ್ಯರು ಅಲ್ಲವೇ, ನಮಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ನೀಡಬಾರದೇ, ಇಡೀ ಬದುಕೇ ಬೀದಿಯ ಜೋಪಡಿಯಲ್ಲಿ ನೂಕಬೇಕಾದ ದಾರುಣ ಸ್ಥಿತಿ ನಮ್ಮದಾಗಿದೆ, ನಮ್ಮ ಸಂಕಷ್ಟ ಯಾರಿಗೆ ಹೇಳಿದ್ರೂ ಪ್ರಯೋಜನವಿಲ್ಲ,’ – ಇದು ಬೀದರ್ ನಗರದ ನೌಬಾದ್ ಹತ್ತಿರದ ಆಟೋ ನಗರದ ಬಳಿ ವಾಸಿಸುವ ಅಲೆಮಾರಿ ಜನಾಂಗದ ಮಹಿಳೆ ಸಾವಿತ್ರಿಬಾಯಿ ಅವರ ಒಡಲ ಸಂಕಟದ ಕಥೆ.

ಆಟೋ ನಗರದ ಬಳಿ ವಾಸಿಸುತ್ತಿರುವವರಲ್ಲಿ ಹಲವರು ಕರ್ನಾಟಕದ ಬೇರೆ ಬೇರೆ ಪ್ರದೇಶದಿಂದ, ಇನ್ನೂ ಕೆಲವರು ಬೇರೆ ರಾಜ್ಯಗಳಿಂದ ವಲಸೆ ಬಂದವರು. ಇವೆರೆಲ್ಲರೂ ಕಳೆದ 30 ವರ್ಷಗಳಿಂದ ಇಲ್ಲೇ ನೆಲೆಯೂರಿದ್ದಾರೆ. ಆದರೆ, ಅವರ ಗೋಳು ಕೇಳುವವರಿಲ್ಲದೆ, ಜೋಪಡಿ ಕಟ್ಟಿಕೊಂಡು ಮಳೆ-ಗಾಳಿ-ಬಿಸಿಲು-ಚಳಿಯಲ್ಲಿಯೇ ಜೀವನ ದೂಡುತ್ತಿದ್ದಾರೆ.

150 ಕುಟುಂಬಗಳಿಲ್ಲ ಮೂಲಭೂತ ಸೌಕರ್ಯ:

Advertisements

ಅಲೆಮಾರಿ ಜನಾಂಗದ ಘಿಸಾಡಿ, ಜೋಷಿ ಗೋಂಧಳಿ ಮಂಗರವಾಡಿ, ಬುಡ್ ಬುಡ್ಕೆ ಸೇರಿದಂತೆ ಇತರೆ ಸಮುದಾಯಕ್ಕೆ ಸೇರಿದ ಸುಮಾರು 150 ಕುಟುಂಬಗಳು ಇಲ್ಲಿ ವಾಸಿಸುತ್ತವೆ. ಕೆಲವರು ಸೂರಿಲ್ಲದ ಕಾರಣ ಮತ್ತೆ ಬೇರೆಡೆ ವಲಸೆ ಹೋಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಖಾಸಗಿಯವರ ಜಮೀನಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ.‌ ಬೀದಿಯಲ್ಲಿ ಚಿಂದಿ ಆಯುವುದು, ಆಟಿಕೆ ಸಾಮಾನು‌ ಮಾರಾಟ ಸೇರಿದಂತೆ ಇತರೆ ಕೂಲಿ ಕೆಲಸದಿಂದ ಜೀವನ ಸಾಗಿಸುತ್ತಿದ್ದಾರೆ. ಯಾವುದೇ ದಾಖಲೆಗಳೂ ಇರದೇ ಮಕ್ಕಳನ್ನು ಅನಕ್ಷರಸ್ಥರಾಗಿ ಮಾಡುವ ಇವರಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರ ಸಹಕಾರದಿಂದ ಎಲ್ಲಾ ದಾಖಲೆಗಳೂ ದಕ್ಕಿವೆ. ವಿದ್ಯುತ್, ರಸ್ತೆ, ಚರಂಡಿ ಸೇರಿದಂತೆ ಯಾವುದೇ ಸೌಕರ್ಯಗಳು ಇಲ್ಲದೆ ಬದುಕುವ ಈ ಜನಾಂಗಕ್ಕೆ ಜಿಲ್ಲಾಡಳಿತ ಇಲ್ಲಿಯವರೆಗೆ ಕನಿಷ್ಠ ಸೂರು ಒದಗಿಸುವ ಕಾರ್ಯ ಮಾಡದೇ ಇರುವುದು ದುರಂತವೇ ಸರಿ.

ಯಾವುದೇ ನಿರ್ದಿಷ್ಟ ನೆಲೆ ಇಲ್ಲದೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುವ ಕಾರಣ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಸತಿ ರಹಿತರಿಗೆ ಅತಿ ಅಗತ್ಯ ಮೂಲಭೂತ ಸೌಕರ್ಯವಾದ ವಸತಿ ಸೌಲಭ್ಯವನ್ನು ಒದಗಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಇಂಥ ನಿರ್ಗತಿಕ ಕುಟುಂಬಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿ, ಒಂದು ಸ್ಥಳದಲ್ಲಿ ನೆಲೆ ನಿಲ್ಲಲು ಅವಕಾಶವನ್ನು ನೀಡುವುದು ಸರ್ಕಾರದ ಘನವಾದ ಉದ್ದೇಶವಿದ್ದರೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಅಲೆಮಾರಿಗಳ ಸೂರಿನ ಕನಸು ಭಗ್ನವಾದಂತಾಗಿದೆ.

ಅಲೆಮಾರಿ2

ಅಲೆಮಾರಿಯ ಸುಮಾರು 50 ಕ್ಕೂ ಹೆಚ್ಚು ಮಕ್ಕಳು ಸ್ಥಳೀಯ ಸರ್ಕಾರಿ ಶಾಲೆಗೆ ಹೋಗುತ್ತಿದ್ದಾರೆ. ಕೆಲವರು ಲಾಕ್ ಡೌನ್ ನಂತರ ಶಾಲೆ ಬಿಟ್ಟು ಚಿಂದಿ ಆಯುವ ಕೆಲಸಕ್ಕೆ ಸೇರಿದ್ದಾರೆ. ಇನ್ನೂ ಕೆಲವರು ಶಾಲೆಗೆ ದಾಖಲಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಳೆ, ಬೇಸಿಗೆ ಚಳಿಗಾಲದಲ್ಲಿ ಪುಟ್ಟ ಕಂದಮ್ಮಗಳ ಜೊತೆಗೆ ಹೀನಾಯ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದೇವೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕನಸಿದ್ದರೂ ಯಾವುದೇ ವಸತಿ ಸೌಲಭ್ಯ ಇಲ್ಲ. ಜಿಲ್ಲಾಡಳಿತ ನಮಗೆ ಜಾಗ ಕೊಡ್ತೀವಿ ಅಂತ ಹಲವು ವರ್ಷಗಳಿಂದ ಹೇಳ್ತಾನೇ ಇದೆ. ಆದರೆ ಇಲ್ಲಿಯವರೆಗೆ ಜಾಗವೂ ಇಲ್ಲ, ಮನೆಯೂ ಕೊಟ್ಟಿಲ್ಲ ಎಂದು ಸಮುದಾಯದ ಲಕ್ಷ್ಮಣ ಬೇಸರ ವ್ಯಕ್ತಪಡಿಸಿದ್ದಾರೆ.

ಠರಾವು ಪಾಸಾದರೂ ಸೂರು ದಕ್ಕಲಿಲ್ಲ

ಬೀದರ ಪಟ್ಟಣದ ನೌಬಾದ್‌ ಹತ್ತಿರ ಚೌಳಿ ಕಮಾನ್‌ ಬಲಿ ವಾಸಿಸುವ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ವಸತಿ ರಹಿತ ಕುಟುಂಬಗಳ ಗೊರನಳ್ಳಿಯ ಸರ್ವೆ 27 ಹಾಗೂ 28 ರಲ್ಲಿ 2 ಎಕರೆ ಜಮೀನನ್ನು 150ಮನೆಗಳನ್ನು ನಿರ್ಮಿಸಲು ನಗರಸಭೆಯ ಸಾಮಾನ್ಯ ನಡವಳಿಯಲ್ಲಿ ನಿವೇಶನ ಮಂಜೂರು ಮಾಡಲು ಸರ್ವಾನುಮತದಿಂದ ಠರಾವು ಪಾಸು ಮಾಡಿ ಆದೇಶಿಸಿದರು.

ಬೀದರ್ ಜಿಲ್ಲಾಧಿಕಾರಿ ಹಾಗೂ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ವಸತಿ ಸೌಲಭ್ಯ ಆಯ್ಕೆ ಸಮಿತಿಯ ನಡವಳಿಯಲ್ಲಿ 65 ಜನ ಫಲಾನುಭವಿಗಳಿಗೆ ಆಯ್ಕೆ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರಿಗೆ ವಸತಿ ಸೌಲಭ್ಯ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಸದರಿ ಜಮೀನನ್ನು ಮಂಜೂರಾತಿ ಆದೇಶ , ಚೆಕ ಬಂದಿ, ಖಾತಾ ಬದಲಾವಣೆ ಸೇರಿದಂತೆ ಸಂಬಂಧಪಟ್ಟ ವಿವರಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ನೀಡುವಂತೆ ಕೋರಿದರೂ ನಗರಸಭೆ ಯಾವುದೇ ಮಾಹಿತಿ ನೀಡಲಿಲ್ಲ. ಆದರೆ ಅಲೆಮಾರಿ ಜನಾಂಗದ ವಸತಿ ರಹಿತರಿಗೆ ನೀಡಲು ಯೋಜಿತವಾದ ಜಮೀನು ಸದರಿ ಜಮೀನು ಬೇರೆ ಯೋಜನೆಗೆ ನೀಡಲಾಗಿದೆ ಎಂದು ನಗರಸಭೆಯಿಂದ ಗೊತ್ತಾಗುತ್ತದೆ.

2022 ಸೆಪ್ಟೆಂಬರ್ 29 ರಂದು ನಡೆದ ಸಭೆಯಲ್ಲಿ ಚರ್ಚಿಸಿ ನೌಬಾದ್ ಬಳಿ ವಾಸವಿರುವ ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯ ಒದಗಿಸಲು 65 ಮನೆಗಳನ್ನು ನಿರ್ಮಿಸಿ ಕೊಡಬೇಕೆಂಬ ಜಿಲ್ಲಾಧಿಕಾರಿಗಳ ಸಲಹೆಯಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೀದರ್ ವತಿಯಿಂದ 65 ಅರ್ಹ ಫಲಾನುಭವಿಗಳನ್ನು ಆಯ್ಕೆ ಪಟ್ಟಿ ನಗರಸಭೆಗೆ ಸಲ್ಲಿಸಲಾಗಿತ್ತು. ಆದರೆ ಇಲ್ಲಿಯವರೆಗೂ ವಸತಿ ವಂಚಿತ ಅಲೆಮಾರಿಗಳಿಗೆ ನಿವೇಶನದ ಬಗ್ಗೆ ಯಾವ ಮಾಹಿತಿಯೂ ಇಲ್ಲ. ‘ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎಂಬಂತೆ ಅಲೆಮಾರಿಗಳ ಸೂರಿನ ಕನಸು ಈಡೇರದೆ ಹಾಗೇ ಖಾಸಗಿ ಜಾಗದಲ್ಲಿ ನೆಲೆಸಿದ್ದಾರೆ.

ಅಲೆಮಾರಿ1

ಅತಂತ್ರ ಸ್ಥಿತಿಯಲ್ಲಿ ಅಲೆಮಾರಿ ಜನಾಂಗ

“ನಮ್ಮ ಬಳಿ ಆದಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಗುರುತಿನ ಚೀಟಿ ಸೇರಿದಂತೆ ಎಲ್ಲ ದಾಖಲೆಗಳು ನಮ್ಮಲಿವೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಗುಡಿಸಲಿಗೆ ಬಂದು ಮತ ಕೇಳಿ ಹಾಕಿಸಿಕೊಳ್ಳುತ್ತಾರೆ. ನಂತರ ಗುಡಿಸಿಲುನತ್ತ ತಿರುಗಿಯೂ ನೋಡುವುದಿಲ್ಲ. ಸಣ್ಣ ಪುಟ್ಟ ಮಕ್ಕಳು, ವೃದ್ಧರು , ಗರ್ಭಣೀಯರು ಇದೇ ಜೋಪಡಿಗಳಲ್ಲಿ ವಾಸಿಸುತ್ತೇವೆ. ಜೀವನೋಪಾಯಕ್ಕೆ ಬೀದಿಯಲ್ಲಿ ಚಿಂದಿ ಆಯುವುದು ಸೇರಿದಂತೆ ಇತರೆ ಕೂಲಿ, ನಾಲಿ ಕೈಕೆಲಸ ಮಾಡಿಕೊಂಡು ಬದುಕುವ ನಮಗೆ ಸ್ವಂತ ನೆಲೆ ಅಂತ ಯಾವುದೂ ಇಲ್ಲ. ಹಿಂದಿನ ಜಿಲ್ಲಾಧಿಕಾರಿ,‌ ನಗರ ಸಭೆ ಅಧಿಕಾರಿಗಳಿಗೆ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿತ್ತು. ಆದರೆ ಇಲ್ಲಿಯವರೆಗೆ ಜಿಲ್ಲಾಡಳಿತ ಮಾತ್ರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಸೂರು ಒದಗಿಸಲು ಮುಂದಾಗಲಿಲ್ಲ. ಕನಿಷ್ಠ ಮಾನವೀಯತೆ ದೃಷ್ಟಿಯಿಂದಲಾದರೂ ನಮಗೆ ಜಾಗ ಕೊಟ್ಟರೆ ನಾವು ಅಲ್ಲೇ ಹೋಗಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತೇವೆ. ಸುಮಾರು ವರ್ಷಗಳಿಂದ ಜಾಗ ಕೊಟ್ಟ ಖಾಸಗಿ ಜಾಗದ ಮಾಲೀಕರು ಇಲ್ಲಿಂದ ಹೋಗಲು ಹೇಳುತ್ತಿದ್ದಾರೆ. ಎತ್ತಂಗಡಿ ಮಾಡಿದರೆ ಮುಂದೆ ನಾವು ಎಲ್ಲಿ ಹೋಗಬೇಕು? ಎಂದು ಈದಿನ.ಕಾಮ್ ಜೊತೆ ಮಾತನಾಡಿ ನೋವು ತೋಡಿಕೊಂಡಿದ್ದಾರೆ ಅಲೆಮಾರಿ ಸಮುದಾಯದ ಸೂರಜ್.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸದಾಶಿವ ಬಡಗೇರ್ ಈದಿನ.ಕಾಮ್ ಜೊತೆ ಮಾತನಾಡಿ, ಈ ಬಗ್ಗೆ ನಗರಸಭೆ ಗಮನಕ್ಕೆ ತರಲಾಗಿದೆ. ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯಕ್ಕಾಗಿ ನೀಡಿದ ಜಮೀನು ನಮ್ಮ ಇಲಾಖೆಗೆ ಹಸ್ತಾಂತರಿಸಲು ಕೋರಲಾಗಿದೆ. ಆದರೆ ಇಲ್ಲಿಯವರೆಗೆ ನಗರ ಸಭೆ ಯಾವುದೇ ಮಾಹಿತಿ ನೀಡಲಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಅರವಿಂದ್ ಕುಮಾರ್ ಅರಳಿ ಈದಿನ.ಕಾಮ್‌ನೊಂದಿಗೆ ಮಾತನಾಡಿ, ಅಲೆಮಾರಿ ಜನಾಂಗದವರಿಗೆ ವಸತಿ ಸೌಲಭ್ಯ ಒದಗಿಸುವ ಬಗ್ಗೆ ನಾನು ಸತತ ಪ್ರಯತ್ನ ಮಾಡುತ್ತಿದ್ದೇನೆ. ಇನ್ನೊಮ್ಮೆ ಈ ಬಗ್ಗೆ ಅಧಿಕಾರಿಗಳೊಂದಿಗೆ ಮುಂದಿನ ಕೆಡಿಪಿ ಸಭೆಯಲ್ಲಿ ಚರ್ಚಿಸಿ ಅಲೆಮಾರಿ ಸಮುದಾಯಕ್ಕೆ ನಿವೇಶನ ಮಂಜೂರಾತಿಗೆ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಈ ಬಗ್ಗೆ ಬೀದರ್ ನಗರಸಭೆ ಆಯುಕ್ತರಿಗೆ ಈದಿನ.ಕಾಮ್ ಸಂಪರ್ಕಿಸಿತು. ಆದರೆ, ಅವರು ಪ್ರತಿಕ್ರಿಯಿಸಿಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

1 COMMENT

  1. ಬಡಜನರು ವರ್ಷಗಟ್ಟಲೆ ಪರದಾಡಿ ಹೋರಾಡಿ, ಯಾರೋ ಸ್ವಲ್ಪ ಸಹೃದಯಿ ಅಧಿಕಾರಿ ಇದ್ದಾಗ ಜಾಗ ಗುರುತು ಮಾಡಿದರೂ ಅದರ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳಿಸದೇ ವರ್ಷಗಟ್ಟಲೇ ಕಾಲ ತಳ್ಳುವುದು, ನಂತರ ಅದನ್ನು ಪ್ರಭಾವಿಗಳ ಒತ್ತಡಕ್ಕೆ ಮಣಿದು ಇನ್ಯಾವುದಕ್ಕೋ ಮಂಜೂರು ಮಾಡುವುದು ಎಲ್ಲಾ ಕಡೆಯೂ ನಡೆಯುತ್ತಿರುವ ಅಧಿಕಾರಶಾಹಿಗಳ ದರಿದ್ರ ಬುದ್ಧಿಯೇ ಆಗಿದೆ.

    ಆಳುವ ಜನಪ್ರತಿನಿಧಿಗಳು ಮತ್ತು ಅಧಿಕಾರಶಾಹಿಗಳಿಗೆ ಮನುಷ್ಯತ್ವ ಕಲಿಸಲು ಜನ ತಯಾರಾಗದೆ ಪರಿಹಾರ ಇಲ್ಲವೆನ್ನಿಸುತ್ತದೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X