ಸರ್ಕಾರಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಫಲಿತಾಂಶ ಕುಂಠಿತ ಹಾಗೂ ಖಾಸಗಿ ಶಾಲೆಯಲ್ಲಿ ಸರ್ಕಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ದುಬಾರಿ ಶುಲ್ಕ ವಸೂಲಾತಿ ಮಾಡಲಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಚಿತ್ರದುರ್ಗದ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಉಪ ನಿರ್ದೇಶಕರ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡ ಈಚಘಟ್ಟದ ಸಿದ್ಧವೀರಪ್ಪ “ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರದ ಕಾನೂನಿನ ಅಡಿಯಲ್ಲಿ ಶುಲ್ಕವನ್ನು ಪಡೆದು ವಿದ್ಯಾದಾನ ಮಾಡಬೇಕೆಂದು ರೈತ ಸಂಘದಿಂದ ಒತ್ತಾಯಿಸಿದ್ದೇವೆ. ಆದರೂ ಇದನ್ನು ನಿರ್ಲಕ್ಷಿಸಿ ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಪೋಷಕರನ್ನು ಆರ್ಥಿಕವಾಗಿ ಶೋಷಣೆ ಮಾಡುತ್ತಿದ್ದಾರೆ. ಅಂತಹ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇವೆ. ಕೆಲವು ಬೇಡಿಕೆಗಳನ್ನು ಈಡೇರಿಸುವಂತೆಯೂ ಮಂಡಿಸುತ್ತಿದ್ದೇವೆ” ಎಂದು ತಿಳಿಸಿದರು.
“ಜಿಲ್ಲೆಯಲ್ಲಿ ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕ ವಿಧಿಸುತ್ತಿವೆ. ಹದ್ದು ಮೀರಿ ನಡೆಯುತ್ತಿವೆ, ಮಕ್ಕಳ ಪೋಷಕರನ್ನು ಶೋಷಿಸಲಾಗುತ್ತಿದೆ. ಇದು ಎಲ್ಲರಿಗೂ ತಿಳಿಯುತ್ತಿದ್ದು, ಅಧಿಕಾರಿಗಳಾದ ನೀವು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ” ಎಂದು ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನು ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ಇತರ ಮುಖಂಡರು “ಪೂರ್ವ ಪ್ರಾಥಮಿಕ ಶಿಕ್ಷಣ ಮೊದಲ್ಗೊಂಡು ಎಲ್ಲಾ ಸರಕಾರಿ ಶಾಲಾ ಕಾಲೇಜುಗಳನ್ನು ಖಾಸಗಿಯವರಂತೆ ಉನ್ನತೀಕರಿಸಬೇಕು. ಮಕ್ಕಳ ಸಂಖ್ಯೆ ದ್ವಿಗುಣಗೊಳ್ಳಲು ಕ್ರಮವಹಿಸಬೇಕು. ಶಿಕ್ಷಣ ಬಡವರ ಮಕ್ಕಳಿಗೆ ಕೈಗೆಟಕುವಂತಿರಬೇಕು. ಸರಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ತಂದಿರುವ ಖಾಸಗಿ ಶಾಲೆಗಳ ವಾಹನಗಳನ್ನು ಹಳ್ಳಿಗಳಿಗೆ ಬರುವುದನ್ನು ಪ್ರತಿಬಂಧಿಸಬೇಕು. 2024-25ರ ಸಾಲಿನ 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶ ಕುಸಿತವಾಗಿರುವ ಶಾಲಾ ಕಾಲೇಜುಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಸ್ಕಾರ ಮತ್ತು ನೈತಿಕತೆಯನ್ನು ಬಲಗೊಳಿಸುವ ನೀತಿಪಾಠ ಬೋಧನೆ ಪ್ರಾರಂಭ, ‘ಶಿಕ್ಷಣ ವ್ಯಾಪಾರವಲ್ಲ ಅದೊಂದು ಪ್ರಬುದ್ಧ ರಾಷ್ಟ್ರ ಕಟ್ಟುವ ಕಾಯಕ’ ಎಂಬ ಧ್ಯೇಯದೂಂದಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ನಿಯಮದ ಪ್ರಕಾರ ಶಾಲೆಯ ಮುಂದೆ ಶುಲ್ಕ ಪ್ರದರ್ಶಿಸಬೇಕು. ಶಾಲಾ ಶುಲ್ಕವನ್ನು ನಾಲ್ಕು ಸಮಕಂತುಗಳಲ್ಲಿ ಪಡೆಯುವ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಅವ್ಯವಹಾರ, ತನಿಖೆಗೆ ಸಂಘದ ನಿರ್ದೇಶಕರ ಆಗ್ರಹ.
“ಖಾಸಗಿ ಶಾಲೆಗಳು ಯೂನಿಫಾರಂ, ಶೂ, ಟೈ, ಪುಸ್ತಕ, ವಾಹನ ಸೌಲಭ್ಯವನ್ನು ದುರ್ಲಾಭದ ಬೆಲೆಯಲ್ಲಿ ಪೂರೈಸಿ ಪೋಷಕರ ಆರ್ಥಿಕ ಶೋಷಣೆ ಮಾಡುವ ಶಾಲೆಗಳ ಪರವಾನಿಗೆಯನ್ನು ರದ್ದು, ದುಬಾರಿ ಶುಲ್ಕ ಪಡೆದಿರುವ ಶಾಲೆಗಳು ಗೌರವಯುತವಾಗಿ ಪೋಷಕರನ್ನು ಕ್ಷಮೆ ಕೇಳಿ ಅನಧಿಕೃತ ಶುಲ್ಕವನ್ನು ಹಿಂಪಾವತಿಸಬೇಕು, ಪಾಠಪ್ರವಚನಗಳ ಪಠ್ಯ ಯೋಜನೆ ಪ್ರಕಾರ ಪೂರ್ವ ಸಿದ್ಧತೆ ಇಲ್ಲದೆ ಶಾಲೆಗೆ ಬರುವ ಶಿಕ್ಷಕರ ಅಮಾನತು, ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಶುಲ್ಕ ನಿಯಂತ್ರಣ ಕ್ರಮಗಳನ್ನು ಶಿಕ್ಷಣ ಇಲಾಖೆ, ಸಚಿವರು ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ, ಕೆ ಟಿ ತಿಪ್ಪೇಸ್ವಾಮಿ, ಮಹೇಶ್ವರಪ್ಪ, ಸತೀಶ್, ರಂಗಸ್ವಾಮಿ, ಡಿಎಸ್ ಮಲ್ಲಿಕಾರ್ಜುನ, ರವಿಕುಮಾರ್, ಮಹಾಂತೇಶ್, ಲಕ್ಷ್ಮಿಕಾಂತ್, ಶಿವಕುಮಾರ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.