- ಭಾರೀ ಮಳೆ ಹಿನ್ನೆಲೆ ದೆಹಲಿ ಶಾಲಾ ಕಾಲೇಜುಗಳಿಗೆ ಜುಲೈ 16ರವರೆಗೆ ರಜೆ
- ಹಥಿನಿಕುಂಡ್ ಬ್ಯಾರೇಜ್‌ನಲ್ಲಿ ನೀರಿನ ಹರಿವಿನ ಪ್ರಮಾಣ 80 ಸಾವಿರ ಕ್ಯೂಸೆಕ್‌ಗೆ ಇಳಿಕೆ
ದೆಹಲಿಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಪರಿಣಾಮ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು ಪ್ರವಾಹ ಉಂಟಾಗಿ ನೀರು ಸುಪ್ರೀಂ ಕೋರ್ಟ್ ಸನಿಹ ತಲುಪಿದೆ ಎಂದು ಸ್ಥಳೀಯ ಮಾಧ್ಯಮಗಳು ಶುಕ್ರವಾರ (ಜುಲೈ 14) ವರದಿ ಮಾಡಿವೆ.
ಯಮುನಾ ನದಿಯ ನೀರಿನ ಮಟ್ಟ ದಾಟಿದೆ. ಇದರಿಂದ ದೆಹಲಿಯ ಬಹುತೇಕ ಸ್ಥಳಗಳು ಜಲಾವೃತಗೊಂಡಿವೆ. ನಗರದ ಪ್ರಮುಖ ಸ್ಥಳಗಳಲ್ಲಿ ಪ್ರವಾಹದ ನೀರು ಲಗ್ಗೆ ಇಟ್ಟಿದೆ. ಕೆಂಪುಕೋಟೆಯಲ್ಲೂ ನೀರು ಹರಿದು ಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭಾರೀ ಮಳೆ ಪರಿಣಾಮ ನಗರದಲ್ಲಿ ನೀರಾವರಿ ಇಲಾಖೆಯ ಸಂಸ್ಕರಣಾ ಘಟಕಗಳು ಕೆಟ್ಟು ನಿಂತಿವೆ. ಕುಡಿಯುವ ನೀರಿಗೆ ಕೊರತೆ ಉಂಟಾಗಿದೆ. ಶೇ 25 ರಷ್ಟು ನೀರಿನ ಸರಬರಾಜು ಕಡಿಮೆಯಾಗಲಿದೆ.
ಹರಿಯಾಣದ ಹಥಿನಿಕುಂಡ್ ಬ್ಯಾರೇಜ್‌ನಲ್ಲಿ ನೀರಿನ ಹರಿವಿನ ಪ್ರಮಾಣ 80,000 ಕ್ಯೂಸೆಕ್‌ಗೆ ಇಳಿದಿದೆ. ಸದ್ಯ ನೀರಿನ ಮಟ್ಟ ಸ್ಥಿರವಾಗಿದೆ ಎಂದು ಕೇಂದ್ರ ನೀರಾವರಿ ಸಮಿತಿಯ ನಿರ್ದೇಶಕ ಶರದ್ ಚಂದ್ರ ಪಿಟಿಐಗೆ ತಿಳಿಸಿದ್ದಾರೆ.
ಭಾರೀ ಮಳೆ ಹಿನ್ನೆಲೆ ಭಾನುವಾರದವರೆಗೆ (ಜುಲೈ 16) ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಅಗತ್ಯ ಸೇವೆಗಳನ್ನು ಒದಗಿಸುವುದನ್ನು ಹೊರತುಪಡಿಸಿ ಭಾರೀ ವಾಹನಗಳಿಗೆ ನಗರಕ್ಕೆ ಪ್ರವೇಶಿಸಲು ನಿಷೇಧ ಹೇರಲಾಗಿದೆ.
ರಾಜ್‌ಘಾಟ್, ಸುಪ್ರೀಂ ಕೋರ್ಟ್‌ವರೆಗೂ ನೀರು
ಯಮುನಾ ನದಿಯ ನೀರು ಶುಕ್ರವಾರ ರಾಜ್‌ಘಾಟ್, ಸುಪ್ರೀಂ ಕೋರ್ಟ್‌ವರೆಗೂ ತಲುಪಿದೆ. ಸುಪ್ರೀಂ ಕೋರ್ಟ್ ಬಳಿಯ ಮಥುರಾ ರಸ್ತೆ ಮತ್ತು ಭಗವಾನ್ ದಾಸ್ ರಸ್ತೆಯ ಕೆಲವು ಭಾಗಗಳು ಜಲಾವೃತಗೊಂಡಿವೆ. ರಸ್ತೆಗಳಲ್ಲಿನ ನೀರು ತೆರವು ಕಾರ್ಯ ಕೈಗೊಳ್ಳಲಾಗಿದೆ.
ಮೆಟ್ರೊ ಸಂಚಾರಕ್ಕೂ ಮುನ್ನೆಚ್ಚರಿಕೆ
ಭಾರೀ ಮಳೆಯಿಂದ ಯಮುನಾ ನದಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಾಲ್ಕು ಯಮುನಾ ಸೇತುವೆಗಳ ಮೇಲೆ ಹಾದು ಹೋಗುವ ಮೆಟ್ರೊ ರೈಲುಗಳ ವೇಗವನ್ನು 30 ಕಿ.ಮೀಗೆ ನಿರ್ಬಂಧಿಸಲಾಗಿದೆ ಎಂದು ದೆಹಲಿ ಮೆಟ್ರೊ ನಿಗಮ ತಿಳಿಸಿದೆ.
ಬೆಳಿಗ್ಗೆ ಯಮುನಾ ನದಿಯ ನೀರಿನ ಮಟ್ಟ 208.46 ಮೀಟರ್‌ಗೆ ತಲುಪಿತ್ತು. ಇದು ಗುರುವಾರ ರಾತ್ರಿ 208.66 ಮೀಟರ್ ಆಗಿತ್ತು.
ಈ ಸುದ್ದಿ ಓದಿದ್ದೀರಾ? ಗ್ರೇಟರ್ ನೋಯ್ಡಾ | ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಬೆಂಕಿ ; ಮೂರನೇ ಮಹಡಿಯಿಂದ ಹಾರಿದ ಜನ
ಭಾರೀ ಮಳೆ ಪರಿಣಾಮ ಇಂದ್ರಪ್ರಸ್ಥ ಬಳಿ ಇರುವ ದೆಹಲಿ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯ ನಿಯಂತ್ರಕ ಹಾನಿಗೊಂಡಿದೆ.
ಪ್ರವಾಹ ಸಮಸ್ಯೆಗೆ ಸರ್ಕಾರ ತುರ್ತು ಕ್ರಮ ಕೈಗೊಂಡಿದೆ, ದೆಹಲಿ ಸಂಪುಟ ಸಚಿವ ಸೌರಭ್ ಭಾರದ್ವಾಜ್, ಆದ್ಯತೆ ಮೇರೆಗೆ ಸಮಸ್ಯೆ ಬಗೆಹರಿಸಲು ಹಾಗೂ ತ್ವರಿತ ಪರಿಹಾರ ಕಂಡುಕೊಳ್ಳಲು ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದ್ದಾರೆ. ದೆಹಲಿಯ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.