ದೇಶದ ಮುಸ್ಲಿಂ ಸಮುದಾಯವನ್ನು ಹಿಂಸೆ, ಅಪಮಾನ, ರಾಜಕೀಯವಾಗಿ ದೂರವಿಡುವ ಹಲವು ಪ್ರಕ್ರಿಯೆಗಳು ನಡೆಯುತ್ತಿವೆ. ಯಾವುದೇ ಸಂಘರ್ಷದ ಸಂದರ್ಭದಲ್ಲಿಯೂ ಮುಸ್ಲಿಂ ಸಮುದಾಯವನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಹಿಜಾಬ್ ನಿಷೇಧ, ಬುಲ್ಡೋಜರ್ ನೀತಿಯಂತಹ ಕ್ರಮಗಳು ಮುಸ್ಲಿಮರ ವಿರುದ್ಧ ರಾಜಕೀಯ ತಿರಸ್ಕಾರಗಳಾಗಿವೆ. ಇದರಿಂದಾಗಿ ಭಾರತದಲ್ಲಿ ಧರ್ಮಾಧಾರಿತ ಧ್ರುವೀಕರಣ ಹೆಚ್ಚಾಗಿ, ಸಮಾಜದಲ್ಲಿ ಭಿನ್ನತೆ ಹಾಗೂ ಅಸ್ಥಿರತೆ ಮೂಡಿದೆ...
‘ಎಲ್ಲರೊಂದಿಗೆ, ಎಲ್ಲರಿಗೂ ಅಭಿವೃದ್ಧಿ’ ಎಂಬ ಘೋಷ ವಾಕ್ಯದಡಿ 2014ರ ಮೇ 26ರಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರ 11 ವರ್ಷಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ದೇಶಾದ್ಯಂತ ಆರ್ಥಿಕ, ಸಾಮಾಜಿಕ, ರಾಜಕೀಯ, ಮೂಲಸೌಕರ್ಯ ಮುಂತಾದ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಪ್ರತಿ ಚುನಾವಣೆಗಳಲ್ಲಿ ಪೊಳ್ಳು ಪ್ರಚಾರಗಳನ್ನು ಮಾಡುತ್ತಲೇ ಇದೆ. ಆದರೆ ಇವೆಲ್ಲವೂ ಮಾಧ್ಯಮ, ಸಾಮಾಜಿಕ ಮಾಧ್ಯಮ ಹಾಗೂ ಭಾಷಣಗಳಿಗೆ ಮಾತ್ರ ಸೀಮಿತವಾಗಿದೆ. ಅಭಿವೃದ್ಧಿ ಮಾತ್ರ ಎಲ್ಲೂ ನೋಡಲು ಕಾಣುತ್ತಿಲ್ಲ. ಬಡವರು ಮತ್ತಷ್ಟು ಬಡತನ ರೇಖೆಗಿಂತ ಕೆಳಗಿಳಿಯುತ್ತಲೇ ಇದ್ದಾರೆ. ದೇಶದ ಆರ್ಥಿಕ ಮಟ್ಟ ಕುಸಿಯುತ್ತಲೇ ಇದೆ. ನಿರುದ್ಯೋಗಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಬಿಜೆಪಿ ಸರ್ಕಾರದಲ್ಲಿ ಎದ್ದು ಕಾಣುತ್ತಿರುವುದೇನಂದರೆ ಕೋಮುವಾದ, ಒಡೆದು ಆಳುವ ನೀತಿ, ರಾಜಕೀಯ ಅಧಃಪತನದಂಥ ಸಾಮಾಜಿಕ ಅನ್ಯಾಯಗಳು. ಇವುಗಳ ಜೊತೆಗೆ ಸಾಮಾಜಿಕ ಅಸಮಾನತೆಗಳು, ವಿವಾದಾತ್ಮಕ ನೀತಿಗಳು ಆಡಳಿತದ ದೋಷಗಳನ್ನು ಎತ್ತಿ ತೋರಿಸುತ್ತಿವೆ. ಹಲವು ವಿವಾದಾತ್ಮಕ ನಿರ್ಧಾರಗಳು ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಗಳಿಸುವಂತೆ ಮಾಡಿದೆ.
2016ರಲ್ಲಿ ಜಾರಿಗೆ ತಂದ ನೋಟು ನಿಷೇಧ ಕ್ರಮವು ಭಾರತೀಯ ಆರ್ಥಿಕತೆಗೆ ದೊಡ್ಡ ಆಘಾತವನ್ನುಂಟು ಮಾಡಿತು. ಕಪ್ಪು ಹಣವನ್ನು ತಡೆಗಟ್ಟುವುದಾಗಿ ಹೇಳಿ ರಾತ್ರೋರಾತ್ರಿ ಯಾವುದೇ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳದೆ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಅಮಾನ್ಯ ಮಾಡಲಾಯಿತು. ಈ ಒಂದು ಕೆಟ್ಟ ನಿರ್ಧಾರದಿಂದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ತೀವ್ರ ಹಿನ್ನಡೆಯನ್ನು ಉಂಟುಮಾಡಿತು. ಬಡವರು, ಮಧ್ಯಮ ವರ್ಗದವರು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರು ತಮ್ಮ ಜೀವನಾಧಾರವನ್ನು ಕಳೆದುಕೊಂಡರು. ಗ್ರಾಮೀಣ ಆರ್ಥಿಕತೆಯ ಮೇಲೆ ಇದರ ಪರಿಣಾಮವು ದೀರ್ಘಕಾಲೀನವಾಗಿತ್ತು. ಈ ವಿವಾದಾತ್ಮಕ ನಿರ್ಧಾರದಿಂದ ಕಪ್ಪು ಹಣವನ್ನು ತಡೆಗಟ್ಟಲಾಗಲಿಲ್ಲ ಆದರೆ ದೇಶದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯಿತು.
ಮೋದಿ ಸರ್ಕಾರ ಜಾರಿಗೊಳಿಸಿದ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಯು ಮತ್ತೊಂದು ವಿವಾದಾತ್ಮಕ ಕ್ರಮವಾಗಿತ್ತು. ಒಂದು ದೇಶ, ಒಂದು ತೆರಿಗೆ ಎಂಬ ಘೋಷಣೆಯೊಂದಿಗೆ 2017ರಲ್ಲಿ ಜಾರಿಗೆ ತಂದ ಈ ತೆರಿಗೆ ವ್ಯವಸ್ಥೆಯಿಂದಾಗಿ ವ್ಯಾಪಾರಿಗಳು, ವಿಶೇಷವಾಗಿ ಸಣ್ಣ ವ್ಯಾಪಾರಿಗಳಿಗೆ ತೊಂದರೆಯಾಯಿತು. ಜಿಎಸ್‌ಟಿಯ ದರಗಳು ಮತ್ತು ನಿಯಮಾವಳಿಗಳು ಆಗಾಗ್ಗೆ ಬದಲಾವಣೆಗೊಂಡಿದ್ದರಿಂದ, ವ್ಯಾಪಾರಿಗಳು ಪಡಬಾರದ ಪಾಡುಪಟ್ಟರು. ಸಣ್ಣ ಉದ್ಯೋಗಗಳು ಮುಚ್ಚುವ ಸ್ಥಿತಿಗೆ ಬಂದವು. ಈ ಕ್ರಮವು ಆರ್ಥಿಕತೆಯನ್ನು ಸರಳಗೊಳಿಸುವ ಬದಲು ದೇಶದ ಅಭಿವೃದ್ಧಿಗೆ ದೊಡ್ಡ ಮಟ್ಟದಲ್ಲಿ ಪೆಟ್ಟು ನೀಡಿತು.

ಅಲ್ಪಸಂಖ್ಯಾತರಿಗೆ ಕಂಟಕವಾಗುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಹಾಗೂ ವಕ್ಫ್ ತಿದ್ದಿಪಡಿ ಕಾಯ್ದೆಯಂತಹ ಕಾನೂನುಗಳು ದೇಶದಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಯಿತು. ಈ ಕಾಯ್ದೆಗಳು ಅಲ್ಪಸಂಖ್ಯಾತರಲ್ಲಿ, ಅದರಲ್ಲೂ ಮುಸ್ಲಿಂ ಸಮುದಾಯವರ ಮೇಲೆ ಮತ್ತಷ್ಟು ಭೀತಿಯುಂಟು ಮಾಡಿತು. ಈ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಅಲ್ಲದೆ ಭಾರತದ ಜಾತ್ಯತೀತ ತತ್ವಗಳ ಮೇಲೆ ಪ್ರಶ್ನೆಗಳನ್ನು ಸಹ ಹುಟ್ಟುಹಾಕಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಆಡಳಿತಕ್ಕೆ 11 ವರ್ಷ; ದೇಶ ಉದ್ಧಾರವಾಯಿತೇ?
ಕೇಂದ್ರ ಸರ್ಕಾರ 2020ರಲ್ಲಿ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕೂಡ ಮತ್ತೊಂದು ವಿವಾದಾತ್ಮಕ ಕಾಯ್ದೆಯಾಗಿದೆ. ಎನ್‌ಇಪಿಯಲ್ಲಿ ಮೂರು ಭಾಷಾ ಸೂತ್ರದ ಮೂಲಕ ಹಿಂದಿ ಹೇರಿಕೆಗೆ ಒತ್ತು ನೀಡಲಾಯಿತು. ಎನ್‌ಇಪಿಯು ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಡಿಜಿಟಲ್ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಮಾನ ಶಿಕ್ಷಣಕ್ಕೂ ಅಡೆತಡೆಯಾಯಿತು. ಖಾಸಗಿ ವಲಯದ ಉತ್ತೇಜನದಿಂದ ಶಿಕ್ಷಣ ವ್ಯಾಪಾರೀಕರಣಕ್ಕೆ ಮತ್ತಷ್ಟು ಆಸ್ಪದ ನೀಡುವಂತಹ ಹಲವು ಅಂಶಗಳು ಈ ಕಾಯ್ದೆಯಲ್ಲಿ ಅಳವಡಿಸಲಾಯಿತು. ಹಿಂದಿ, ಸಂಸ್ಕೃತಕ್ಕೆ ಆದ್ಯತೆ ನೀಡಿ ಉಳಿದ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಲಾಗಿತ್ತು. ಸ್ಪಷ್ಟ ಮಾರ್ಗಸೂಚಿಗಳಿಲ್ಲದ ಕಾರಣದಿಂದ ಎನ್‌ಇಪಿ ಅನುಷ್ಠಾನದಲ್ಲಿ ಸಮಾನತೆ, ಬಹುಭಾಷಾ ಗೌರವಕ್ಕೆ ಧಕ್ಕೆಯಾಗಿ ಪರಿಣಮಿಸಿದೆ.
ಎನ್‌ಡಿಎ ಸರ್ಕಾರದ ‘ಅಗ್ನಿಪಥ’ ಯೋಜನೆ ಕೂಡ ಅತ್ಯಂತ ವಿವಾದಾತ್ಮಕ ನಿರ್ಧಾರಗಳಲ್ಲಿ ಒಂದಾಗಿದೆ. ಕಿರು ಅವಧಿಗೆ ಯೋಧರನ್ನು ನೇಮಕ ಮಾಡಿಕೊಳ್ಳುವ ಈ ಯೋಜನೆ, ಯುವಕರ ಮುಂದಿನ ಭವಿಷ್ಯ ಮತ್ತು ಸೇನೆಯ ಆಡಳಿತದ ಮೇಲೆ ಗಂಭೀರ ಪರಿಣಾಮವನ್ನು ಉಂಟುಮಾಡಿತು. ಇದಲ್ಲದೆ ಗಡಿಭಾಗದಲ್ಲಿ ಅತಿಕ್ರಮಿಸುತ್ತಿರುವ ಚೀನಾ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಯಾವುದೇ ಒತ್ತಡವನ್ನು ತರಲು ಸಾಧ್ಯವಾಗಲಿಲ್ಲ. 2020ರ ಗಲ್ವಾನ್ ಕಣಿವೆಯ ಸಂಘರ್ಷವು ಭಾರತ-ಚೀನಾ ಸಂಬಂಧಗಳ ಮೇಲೆ ದೀರ್ಘಕಾಲೀನ ಪರಿಣಾಮ ಬೀರಿತು. ಸರ್ಕಾರದ ರಾಜತಾಂತ್ರಿಕ ಕ್ರಮಗಳು ಈ ಸವಾಲುಗಳನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗಿಲ್ಲ. ಸೇನೆ ಕುರಿತು ಆಂತರಿಕ ವಿಷಯಗಳನ್ನು ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಇದು ಸೇನೆಯ ಗೌಪ್ಯ ನೀತಿ ಹಾಗೂ ದೇಶದ ಭದ್ರತೆಗೆ ಧಕ್ಕೆಯುಂಟು ಮಾಡಿದೆ. ಭಾರತದ ವಿದೇಶಾಂಗ ನೀತಿಯಲ್ಲಿ ಅಮೆರಿಕ ಮೂಗು ತೂರಿಸುತ್ತಿರುವುದು ಕೂಡ ದೌರ್ಬಲ್ಯವನ್ನು ತೋರಿಸುತ್ತಿದೆ.

2020ರಲ್ಲಿ ಮೋದಿ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದು ಭಾರಿ ವಿವಾದಕ್ಕೆ ಕಾರಣವಾಯಿತು. ಈ ಕಾಯ್ದೆಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ದುರ್ಬಲಗೊಳಿಸಿ, ಕಾರ್ಪೊರೇಟ್ ಸಂಸ್ಥೆಗಳಿಗೆ ಹೆಚ್ಚು ಅವಕಾಶ ನೀಡುವುದರಿಂದ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸಿದರು. ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ ಅನ್ನದಾತರ ಆಕ್ರೋಶ ತೀವ್ರಗೊಂಡವು. ರೈತ ಸಂಘಟನೆಗಳು ಕಾಯ್ದೆ ರದ್ದತಿಗೆ ಒತ್ತಾಯಿಸಿದ ಪರಿಣಾಮ 2021ರಲ್ಲಿ ಸರ್ಕಾರ ಕಾಯ್ದೆಗಳನ್ನು ಹಿಂತೆಗೆದುಕೊಂಡಿತು. ಆದರೆ ಈ ಕಾಯ್ದೆಯಲ್ಲಿ ಎಂಎಸ್‌ಪಿ ಖಾತರಿಗೆ ಸಂಬಂಧಿಸಿದ ವಿವಾದಾತ್ಮಕ ಅಂಶಗಳನ್ನು ಇನ್ನೂ ಬಗೆಹರಿಸಲಾಗಿಲ್ಲ.
ಮೋದಿ ಸರ್ಕಾರದಲ್ಲಿ ನಿರುದ್ಯೋಗ ಸಮಸ್ಯೆ ಮಹತ್ವದ ವಿಚಾರವಾಗಿ ಹೊರಹೊಮ್ಮಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ “ಅಚ್ಛೇ ದಿನ್” ಹಾಗೂ “ಮೇಕ್ ಇನ್ ಇಂಡಿಯಾ” ಸೇರಿದಂತೆ ಅನೇಕ ಯೋಜನೆಗಳ ಮೂಲಕ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ ಇದರಲ್ಲಿ ಕನಿಷ್ಠ ಶೇ. 5ರಷ್ಟನ್ನು ತುಂಬಲು ಸಾಧ್ಯವಾಗಿಲ್ಲ. ಹಲವಾರು ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಪ್ರತಿ ವರ್ಷ ಪದವಿ ಪಡೆಯುತ್ತಿರುವ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಒಂದೆಡೆ ಸರ್ಕಾರಿ ಉದ್ಯೋಗಗಳ ಸಂಖ್ಯೆ ಕಡಿಮೆಯಾದರೆ, ಖಾಸಗಿ ಕ್ಷೇತ್ರದಲ್ಲಿ ಅಭದ್ರತೆ ಹೆಚ್ಚಾಗುತ್ತಿದೆ. ಉದ್ಯೋಗ ಕಸಿದುಕೊಳ್ಳುವ ಎಐ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಉದ್ಯೋಗ ಭದ್ರತೆಗೆ ಯಾವುದೇ ಪರಿಣಾಮಕಾರಿ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗುತ್ತಿಲ್ಲ.
ಬೆಲೆ ಏರಿಕೆ ಮತ್ತು ಆರ್ಥಿಕ ಅಸಮಾನತೆಯು ದೇಶದ ಸಾಮಾನ್ಯ ಜನರಿಗೆ ದೊಡ್ಡ ಸವಾಲಾಗಿದೆ. ಇಂಧನ, ಆಹಾರ, ಮತ್ತು ದೈನಂದಿನ ಜೀವನದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮಧ್ಯಮ ಮತ್ತು ಕೆಳವರ್ಗದ ಜನರ ಜೀವನ ಕಷ್ಟಕರವಾಗಿದೆ. ಆರ್ಥಿಕ ಸುಧಾರಣೆಗಳು ಶ್ರೀಮಂತ ವರ್ಗಕ್ಕೆ ಹೆಚ್ಚಿನ ಲಾಭವನ್ನು ತಂದಿದೆಯಾದರೂ ಬಡವರಿಗೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಸಾಮಾಜಿಕ ಕಲ್ಯಾಣ ಯೋಜನೆಗಳಾದ ಜನ್ ಧನ್ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ, ಉಜ್ವಲಾ ಯೋಜನೆ ಸೇರಿದಂತೆ ಹಲವು ಯೋಜನೆಗಳು ಸಮಪರ್ಕವಾಗಿ ಜಾರಿಗೊಳಿಸದ ಕಾರಣ ಸೂಕ್ತ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಗ್ರಾಮೀಣ ವಿದ್ಯುದೀಕರಣದ ಕಾರ್ಯಕ್ರಮ ಕೂಡ ಬಹುತೇಕ ಹಳ್ಳಿಗಳಿಗೆ ವಿದ್ಯುತ್ ಒದಗಿಸಿಲ್ಲ. ನೀಡಲಾಗಿರುವ ಒಂಚೂರು ಸೌಕರ್ಯದಲ್ಲೂ ಕಳಪೆ ಗುಣಮಟ್ಟವೆ ಹೆಚ್ಚಾಗಿದೆ.

ಮುಸ್ಲಿಂ ದ್ವೇಷ ಹಾಗೂ ಉಗ್ರ ಹಿಂದುತ್ವವಾದ
ದೇಶದ ಆರ್ಥಿಕತೆಗೆ ಹೊಡೆತ ಬೀಳಲು ಹಲವು ವಿವಾದಾತ್ಮಕ ನಿರ್ಧಾರಗಳು ಒಂದು ಕಡೆಯಾದರೆ, ಮೋದಿ ಸರ್ಕಾರ ಕಳೆದ 11 ವರ್ಷಗಳಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮುಸ್ಲಿಂ ದ್ವೇಷ ಹಾಗೂ ಉಗ್ರ ಹಿಂದುತ್ವವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂಘ ಪರಿವಾರದ ಹಿನ್ನೆಲೆ ಹೊಂದಿರುವ ಬಿಜೆಪಿ ಸರ್ಕಾರದ ಪ್ರಮುಖ ಅಜೆಂಡ ಕೂಡ ಧಾರ್ಮಿಕವಾದವಾಗಿದೆ. ಕೇಸರಿ ಪಕ್ಷದ ನಾಯಕರು ಚುನಾವಣೆಗಳಲ್ಲಿ ಕೋಮುವಾದವನ್ನು ನೇರವಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಒಳಗೊಂಡ ಬಿಜೆಪಿ ನಾಯಕರು ಉಗ್ರ ಹಿಂದುತ್ವವಾದವನ್ನು ತಮ್ಮ ಭಾಷಣಗಳ ಮೂಲಕ ಉಗುಳುತ್ತಿದ್ದಾರೆ. ರಾಮಮಂದಿರ ನಿರ್ಮಾಣ, ಗೋಹತ್ಯೆ ವಿರೋಧಿ ಕಾನೂನುಗಳು, ಸಿಎಎ, ವಕ್ಫ್ ತಿದ್ದುಪಡಿ ಕಾಯ್ದೆ ಮುಂತಾದವುಗಳು ಒಂದು ವರ್ಗದ ಮತದಾರರನ್ನು ಗಟ್ಟಿಗೊಳಿಸುವ ಹಾಗೂ ಅಲ್ಪಸಂಖ್ಯಾತರನ್ನು ದೂರವಿಡುವ ಯೋಜನೆಗಳಾಗಿವೆ.
ದೇಶದ ಮುಸ್ಲಿಂ ಸಮುದಾಯವನ್ನು ಹಿಂಸೆ, ಅಪಮಾನ, ರಾಜಕೀಯವಾಗಿ ದೂರವಿಡುವ ಹಲವು ಪ್ರಕ್ರಿಯೆಗಳು ನಡೆಯುತ್ತಿವೆ. ಯಾವುದೇ ಸಂಘರ್ಷದ ಸಂದರ್ಭದಲ್ಲಿಯೂ ಮುಸ್ಲಿಂ ಸಮುದಾಯವನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ಹಿಜಾಬ್ ನಿಷೇಧ, ಬುಲ್ಡೋಜರ್ ನೀತಿಯಂತಹ ಕ್ರಮಗಳು ಮುಸ್ಲಿಮರ ವಿರುದ್ಧ ರಾಜಕೀಯ ತಿರಸ್ಕಾರಗಳಾಗಿವೆ. ಇದರಿಂದಾಗಿ ಭಾರತದಲ್ಲಿ ಧರ್ಮಾಧಾರಿತ ಧ್ರುವೀಕರಣ ಹೆಚ್ಚಾಗಿ, ಸಮಾಜದಲ್ಲಿ ಭಿನ್ನತೆ ಹಾಗೂ ಅಸ್ಥಿರತೆ ಮೂಡಿದೆ. ಕೋಮು ರಾಜಕಾರಣ ದೇಶದಲ್ಲಿ ಜಾತಿಜಾತಿಗಳ ನಡುವೆ ಸಮರ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಭೀತಿಯನ್ನು ಉಂಟುಮಾಡಿದೆ. ಒಟ್ಟಾರೆಯಾಗಿ ಗಮನಿಸಿದರೆ ಮೋದಿ ಸರ್ಕಾರ 11 ವರ್ಷಗಳಲ್ಲಿ ಧರ್ಮ ರಾಜಕಾರಣ ಮಾಡಿಕೊಂಡು ಬಾಯಿ ಮಾತಿನಲ್ಲಿ ಕಾಲ ಕಳೆದಿದೆ ಎಂದು ಹೇಳಬಹುದು.