ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹಾತ್ವಾಕಾಂಕ್ಷೆಯ ಚಂದ್ರಯಾನ-3 ಉಡ್ಡಯನ ಯಶಸ್ವಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದಾರಾಮಯ್ಯ ಹಾಗೂ ರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ‘ವಿಕ್ರಮ್’ ಲ್ಯಾಂಡರ್ ಹಾಗೂ ‘ಪ್ರಜ್ಞಾನ್’ ರೋವರ್ ಹೊತ್ತ ದೇಶದ ಐತಿಹಾಸಿಕ ‘ಚಂದ್ರಯಾನ 3’ ಉಡಾವಣಾ ವಾಹಕ ಎಲ್ವಿಎಂ-3 ಎಂ4 ಇಂದು (ಜುಲೈ 14) ಮಧ್ಯಾಹ್ನ 2.35 ಗಂಟೆಗೆ ನಭಕ್ಕೆ ಚಿಮ್ಮಿತು. ರಾಕೆಟ್ ನಭಕ್ಕೆ ಚಿಮ್ಮುತ್ತಿದ್ದಂತೆ ವಿಜ್ಞಾನಿಗಳು ಮತ್ತು ತಂತ್ರಜ್ಞರ ಮುಖದಲ್ಲಿ ಸಂತಸ ಮೂಡಿತು.
ಚಂದ್ರಯಾನ-3 ಉಡ್ಡಯನ ಯಶಸ್ವಿ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಚಂದ್ರಯಾನ-3 ಯೋಜನೆಯನ್ನು ಯಶಸ್ವಿಯಾಗಿ ಉಡ್ಡಯನ ಮಾಡಿದ ಇಸ್ರೋಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ದೇಶಕ್ಕೆ ಇದು ಹೆಮ್ಮೆಯ ಕ್ಷಣ. ಭಾರತದ ಬಾಹ್ಯಾಕಾಶ ಸಂಶೋಧನೆ ಹಾಗೂ ನಾವೀನ್ಯತೆಯಲ್ಲಿ ಹೊಸ ಮೈಲಿಗಲ್ಲು” ಎಂದು ಬಣ್ಣಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮಾಡಿದ್ದು, “ಭಾರತದ ಬಾಹ್ಯಾಕಾಶ ಸಾಹಸದಲ್ಲಿ ಚಂದ್ರಯಾನ-3 ಹೊಸ ಅಧ್ಯಾಯ ಬರೆದಿದೆ. ಇದು ಪ್ರತಿಯೊಬ್ಬ ಭಾರತೀಯನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದೆ. ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ನಾನು ಅವರ ಚೈತನ್ಯ ಮತ್ತು ಜಾಣ್ಮೆಯನ್ನು ಅಭಿನಂದಿಸುತ್ತೇನೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.