ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ತೋಟಗಾರಿಕೆ ಬೆಳೆ ವಿಸ್ತರಣೆ, ಕೃಷಿ ಪರಿಕರ, ಕೃಷಿ ಘಟಕಗಳಿಗೆ ಸಹಾಯಧನ ಪಡೆಯಲು ಆಸಕ್ತ ರೈತ ಫಲಾನುಭವಿಗಳಿಂದ 2025-26ನೇ ಸಾಲಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ರೈತರು 2025 ಜೂನ್ 20ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿಯಲ್ಲಿ ದಾಳಿಂಬೆ, ಕಂದು ಬಾಳೆ/ಅಂಗಾಂಶ ಬಾಳೆ, ಪಪ್ಪಾಯ, ಡ್ರಾಗನ್ ಪ್ರೂಟ್ ಹಣ್ಣಿನ ಬೆಳೆಗಳು, ಹೈಬ್ರೆಡ್ ತರಕಾರಿ, ಕಟ್ ಪ್ಲವರ್ಸ್ (ಗುಲಾಬಿ, ಜೆರ್ಬೆರಾ, ಕಾರ್ನೇಷನ್) ಸುಗಂಧರಾಜ, ಇತರೆ ಹೂವುಗಳು ಮತ್ತು ಕರಿಮೆಣಸು ಸೇರಿದಂತೆ ಹಲವು ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಅಣಬೆ ಉತ್ಪಾದನಾ ಘಟಕ, ಬಹುವಾರ್ಷಿಕ ಸಾಂಬಾರು ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಮತ್ತು ಪುನಶ್ಚೇತನ ಕಾರ್ಯಕ್ರಮ, ಪಾಲಿಥೀನ್ ನರ್ಸರಿ ಘಟಕ, ಪಕ್ಷಿ ನಿರೋದಕ ಬಲೆ, ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಪಾಲಿಹೌಸ್, ಪ್ಲಾಸ್ಟಿಕ್ ಮಲ್ಚಿಂಗ್, ಕಳೆ ನಿಯಂತ್ರಕ ಮ್ಯಾಟ್ (ವೀಡ್ ಮ್ಯಾಟ್), ತರಕಾರಿ ಬೆಳೆಗಳಿಗೆ ಆಧಾರ ನೀಡುವ ವ್ಯವಸ್ಥೆ, ಎರೆಹುಳು ಗೊಬ್ಬರ ಘಟಕ, ಜೇನು ಪೆಟ್ಟಿಗೆಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಲ್ಲದೇ ಕೃಷಿ ಉಪಕರಣಗಳಾದ 20 ಹೆಚ್.ಪಿ ವರೆಗಿನ ಟ್ರ್ಯಾಕ್ಟರ್, ಪವರ್ ಟ್ರಿಲ್ಲರ್, ಭೂಮರ್ ಸ್ಪ್ರೆಯರ್, ಶೀಥಲಗೃಹ ಘಟಕ, ಪ್ರಾಥಮಿಕ ಸಂಸ್ಕರಣಾ ಘಟಕ, ಸೋಲಾರ್ ಕ್ರಾಪ್ ಡ್ರೈಯರ್, ಪ್ಯಾಕ್‍ಹೌಸ್ ಹಾಗೂ ಈರುಳ್ಳಿ ಶೇಖರಣ ಘಟಕಗಳಿಗೆ ಸಹಾಯಧನ ಪಡೆಯಲು ಆಸಕ್ತ ರೈತ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿರುತ್ತದೆ.
ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ 2025ರ ಜೂನ್ 20 ರೊಳಗೆ ನಿಯಮಾನುಸಾರ ಸಲ್ಲಿಸಲು ಕೋರಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಫಲಿತಾಂಶ ಕುಂಠಿತ ಸರ್ಕಾರಿ ಶಾಲೆ, ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕದ ಮೇಲೆ ಕ್ರಮಕ್ಕೆ ರೈತ ಸಂಘ ಆಗ್ರಹ.
ಹೆಚ್ಚಿನ ಮಾಹಿತಿಗಾಗಿ ರೈತರು ಆಯಾ ತಾಲ್ಲೂಕಿನ ಸಂಬಂಧಪಟ್ಟ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಜಂಟಿನಿರ್ದೇಶಕರು ತಿಳಿಸಿದ್ದಾರೆ.