‘ಆಪರೇ‍ಷನ್ ಸಿಂಧೂರ’ದಲ್ಲಿವೆ ಹಲವು ವೈಫಲ್ಯಗಳು: ಇಲ್ಲಿದೆ ಪೂರ್ಣ ಮಾಹಿತಿ

Date:

Advertisements
ಪಹಲ್ಗಾಮ್‌ ದಾಳಿ, ಹತ್ಯೆ, ಭಾರತದ ಪ್ರತಿದಾಳಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳು ಹೊರಬರಲು ವರ್ಷಗಳೇ ಬೇಕಾಗಬಹುದು. ಆದರೆ, 'ಆಪರೇಷನ್ ಸಿಂಧೂರ' ಕಾರ್ಯಾಚರಣೆಗೆ ಬಗ್ಗೆ ತರ್ಕಿಸಿ, ನಿರ್ಧರಿಸಲು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದತ್ತಾಂಶಗಳಿವೆ. 

ಎರಡು ರಾಷ್ಟ್ರಗಳ ನಡುವಿನ ಮಿಲಿಟರಿ ಸಂಘರ್ಷದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಅದರಲ್ಲೂ ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದ ಸಮಯದಲ್ಲಿ ತಪ್ಪು ಮಾಹಿತಿಗಳು, ವದಂತಿಗಳು, ಸುಳ್ಳು ಸುದ್ದಿಗಳು ಹೇರಳವಾಗಿ ಹರಿದಾಡಿವೆ. ಹಲವು ಸುದ್ದಿ ಮಾಧ್ಯಮಗಳು ಪರಿಶೀಲಿಸಬಹುದಾದ ಮಾಹಿತಿಗಳನ್ನೂ ಪರಿಶೀಲಿಸದೆ, ಪ್ರಸಾರ ಮಾಡುತ್ತಿವೆ. ಪ್ರತಿ ಪಕ್ಷಗಳು ಪ್ರಶ್ನೆಗಳನ್ನು ಕೇಳವು ಧೈರ್ಯವಿದ್ದರೂ ಸಹ ಮೌನವಾಗುತ್ತಿವೆ. ಅಗತ್ಯದ ಸಮಯದಲ್ಲಿಯೂ ಸಂಸತ್ತಿನ ಬಾಗಿಲನ್ನು ತೆರೆಯದೆ, ಚರ್ಚಿಸದೆ, ಸಂವಾದವನ್ನು ಸೈಡಿಗೆ ಸರಿಸಲಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಭಾರತೀಯ ನಾಗರಿಕರು ದೇಶದಲ್ಲಿ ಏನು ನಡೆಯುತ್ತಿದೆ, ನಾವು ನಮ್ಮ ಉದ್ದೇಶಗಳನ್ನು ಸಾಧಿಸಿದ್ದೇವೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು? ಯಾವ ರೀತಿ ನಿರ್ಧರಿಸಬಹುದು? ನಮಗೆ ನಂಬಿಕಾರ್ಹ, ನಂಬಬಹುದಾದ ಪುರಾವೆಗಳಿಲ್ಲದೆಯೂ ಕೆಲವು ‘ಹೆಸರಿಸಲಾಗದ’ ಮೂಲಗಳನ್ನು ಉಲ್ಲೇಖಿಸಿ ಬರುವ ವರದಿಗಳನ್ನೇ ಜನಸಾಮಾನ್ಯರು ನಂಬುವಂತಾಗಿದೆ.

ಇದೆಲ್ಲದರ ಹೊರತಾಗಿಯೂ, ಸಾರ್ವಜನಿಕ ವಲಯದಲ್ಲಿ ಹೆಚ್ಚಿನವರು ಒಪ್ಪಿಕೊಂಡಿರುವ ಕೆಲವು ಅಂಕಿಅಂಶ, ಮಾಹಿತಿಗಳು ಹರಡುತ್ತಿವೆ. ಇವು ಪಿತೂರಿ ಸಿದ್ಧಾಂತಗಳಿಂದ ತೋಡಿದ ಪ್ರಪಾತಕ್ಕೆ ನಾವು ಬೀಳದೆ, ಗಮನಿಸಬಹುದಾದ ಸಂಗತಿಗಳನ್ನು ಒದಗಿಸುತ್ತವೆ.

Advertisements

ನಾಲ್ಕು ಸ್ಪಷ್ಟ ಸಂಗತಿಗಳಿವು

ಮೊದಲನೆಯದು, 2025ರ ಮೇ 7ರಂದು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಆರಂಭಿಸಲಾಯಿತು. ಇದರಲ್ಲಿ ಪಾಕಿಸ್ತಾನದ ನಿಯಂತ್ರಣದಲ್ಲಿರುವ ಕಾಶ್ಮೀರ (ಪಿಒಕೆ) ಭಾಗ ಮತ್ತು ಪಾಕಿಸ್ತಾನದ ಇತರ ಭಾಗಗಳ ಮೇಲೆ ಭಾರತದಿಂದ ಕ್ಷಿಪಣಿ ದಾಳಿಗಳು ನಡೆದಿವೆ. ಪಾಕಿಸ್ತಾನದ 9 ಸ್ಥಳಗಳ ಮೇಲೆ ದಾಳಿ ನಡೆದಿದೆ ಎಂದು ಭಾರತ ಸರ್ಕಾರ ಹೇಳಿಕೊಂಡಿದೆ. ಆದರೆ, ಯಾರೂ ಇದನ್ನು ಅನುಮಾನಿಸುವುದಿಲ್ಲ, ಪ್ರಶ್ನೆ ಕೇಳುವುದಿಲ್ಲ.

ಎರಡನೆಯದು, ಪಾಕಿಸ್ತಾನವು ತನ್ನ ವಾಯುಪ್ರದೇಶದಿಂದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಬಳಸಿಕೊಂಡು ಮರು ದಾಳಿ ಮಾಡುವ ಮೂಲಕ ಪ್ರತಿಕ್ರಿಯಿಸಿತು. ಪಾಕ್ ದಾಳಿಯಿಂದ ಭಾರತದಲ್ಲಿ ಸಾವುಗಳು ಮತ್ತು ಮನೆ, ಆಸ್ತಿಗೆ ಹಾನಿಯಾಗಿದೆ ಎಂಬುದನ್ನು ಪುರಾವೆಗಳಿವೆ. ಆದಾಗ್ಯೂ, ಭಾರತದ ಕೆಲವು ವಿಮಾನಗಳನ್ನು ಹೊಡೆದುರುಳಿಸಿರುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಈ ಬಗ್ಗೆ ಭಾರತೀಯ ಸೇನೆಯು ಯಾವುದೇ ಅಂಕಿಅಂಶಗಳನ್ನು ಬಹಿರಂಗಪಡಿಸಿಲ್ಲವಾದರೂ, ‘ತನ್ನ ಎಲ್ಲ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ. ಸಂಘರ್ಷದಲ್ಲಿ ವೆಚ್ಚಗಳು ಅನಿವಾರ್ಯ’ ಎಂದಷ್ಟೇ ಹೇಳಿದೆ. ವಾಯುಪಡೆಯ ಕೆಲವು ವಿಮಾನಗಳು ಹಾನಿಗೊಳಗಾಗಿವೆ ಎಂಬುದನ್ನು ಪರೋಕ್ಷವಾಗಿ ಅಥವಾ ಸೂಚ್ಯವಾಗಿ ಒಪ್ಪಿಕೊಂಡಿದೆ. ಅಲ್ಲದೆ, ಭಾರತವು ಯಾವುದೇ ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿಲ್ಲ.

ಮೂರನೆಯದು, ಭಾರತ ಅಥವಾ ಪಾಕಿಸ್ತಾನ ಎರಡೂ ತಮ್ಮ ಎದುರಾಳಿಗಳ ವಿರುದ್ಧ ವಿಜಯವನ್ನು ಘೋಷಿಸಲು ಸಾಧ್ಯವಾಗಲಿಲ್ಲ. ಎರಡೂ ದೇಶಗಳ ಗಡಿ ಉಲ್ಲಂಘನೆ ಆರೋಪಗಳ ನಡುವೆ, 2025ರ ಮೇ 10 ರಂದು ಕದನ ವಿರಾಮ ಘೋಷಿಸಲಾಯಿತು. ಅದರ ಯಶಸ್ಸನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಹೆಗಲಿಗೇರಿಸಿಕೊಂಡರು.

ನಾಲ್ಕನೆಯದು, ನೆರೆಹೊರೆಯ ಅಥವಾ ಜಗತ್ತಿನಲ್ಲಿ ಯಾವುದೇ ಪ್ರಭಾವಿ ದೇಶವು ಭಾರತದ ಕ್ರಮಗಳನ್ನು ಬೇಷರತ್ ಬೆಂಬಲಿಸಲಿಲ್ಲ. ವಾಸ್ತವವಾಗಿ, ಭಾರತ ಅಥವಾ ಪಾಕಿಸ್ತಾನ ಸಾರ್ವಜನಿಕವಾಗಿ ಕದನ ವಿರಾಮ ಒಪ್ಪಿಕೊಳ್ಳುವುದಕ್ಕೂ ಒಂದು ಗಂಟೆ ಮುನ್ನವೇ ಕದನ ವಿರಾಮದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಘೋಷಿಸಿದರು. ಎರಡೂ ರಾಷ್ಟ್ರಗಳನ್ನು ‘ಮೂರ್ಖರು’ ಎಂಬಂತೆ ಹಲವು ಪೋಸ್ಟ್‌ಗಳನ್ನು ಟ್ರಂಪ್ ಹಂಚಿಕೊಂಡರು.

ಮೇಲಿನ ನಾಲ್ಕು ಸಂಗತಿಗಳ ಬಗ್ಗೆ ಉಭಯ ರಾಷ್ಟ್ರಗಳು ಕ್ರಿಯೆ-ಪ್ರತಿಕ್ರಿಯೆ ಇಲ್ಲದೆ, ವಿವಾದಗೊಳಿಸದೆ ಬಿಟ್ಟಿವೆ. ಈ ಅಂಶಗಳ ನಡುವೆ, ಭಾರತದ ಯುದ್ಧತಂತ್ರ, ಕಾರ್ಯತಂತ್ರ ಮತ್ತು ರಾಜತಾಂತ್ರಿಕತೆಯ ಕೆಲವು ಸಂಗತಿಗಳು ಆಪರೇಷನ್ ಸಿಂಧೂರ ಕಾರ್ಯಾಚರಣೆ ವಿಫಲವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ.

ಯುದ್ಧತಂತ್ರ, ಕಾರ್ಯತಂತ್ರ ಮತ್ತು ರಾಜತಾಂತ್ರಿಕ ವೈಫಲ್ಯ

ಯುದ್ಧತಂತ್ರದ ವಿಚಾರ – ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ಭಯೋತ್ಪಾದಕ ದಾಳಿ ನಡೆಸಿ 28 ಮಂದಿಯನ್ನು ಕೊಂದವರನ್ನು ‘ಭೂಮಿಯ ಕೊನೆಯ ಅಂಚಿನವರೆಗೂ ಬೆನ್ನಟ್ಟಿ ಕೊಲ್ಲುತ್ತೇವೆ’ ಎಂದು ಭಾರತದ ಪ್ರಧಾನಿ ಘೋಷಿಸಿದರು. ಇದು ಭಾರತದ ಹಕ್ಕು ಮತ್ತು ಕರ್ತವ್ಯ ಎರಡೂ ಆಗಿದೆ. ಏಕೆಂದರೆ, ರಾಜಕೀಯ ಉದ್ದೇಶಗಳಿಗಾಗಿ ನಾಗರಿಕರನ್ನು ಹತ್ಯೆಗೈಯುವುದು ಅತ್ಯಂತ ಘೋರ ಅಪರಾಧಗಳಲ್ಲಿ ಒಂದು. ಭಾರತೀಯ ನಾಗರಿಕರಿಗೆ ಸುರಕ್ಷತೆ ಒದಗಿಸುವುದು ಸರ್ಕಾರದ ಅತ್ಯುನ್ನತ ಕರ್ತವ್ಯವೂ ಆಗಿದೆ.

ಪಹಲ್ಗಾಮ್ ಕೊಲೆಗಳ ಹೊಣೆಗಾರಿಕೆಯನ್ನ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಎಂಬ ಸಂಘಟನೆ ಹೊತ್ತುಕೊಂಡಿತು. ಜೊತೆಗೆ, ಭಾರತೀಯ ತನಿಖಾ ಸಂಸ್ಥೆಗಳು ನಾಲ್ವರು ಭಯೋತ್ಪಾದಕರನ್ನು ಕೃತ್ಯದ ನೇರ ಹೊಣೆಗಾರರನ್ನಾಗಿ ಪಟ್ಟಿಮಾಡಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ‘ಲಷ್ಕರ್-ಎ-­ತೈಬಾ’ದ ನಾಯಕರು ದಾಳಿಯ ಸೂತ್ರಧಾರಿಗಳು ಎಂದು ತನಿಖಾ ಸಂಸ್ಥೆಗಳು ಹೇಳಿವೆ.

ತನಿಖೆಯ ವಿಚಾರದಲ್ಲಿ ಯಾರು ಏನೇ ನಂಬಿದ್ದರೂ, ಭಾರತವು ಕೆಲವು ಗಂಭೀರ ತಪ್ಪುಗಳನ್ನು ಮಾಡಿದೆ. (ಅದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನಿರ್ದೇಶನದಲ್ಲಿ ಸಿದ್ಧಪಡಿಸಲಾದ ದಾಖಲೆಯೂ ಸೇರಿದೆ.) ಇದರಲ್ಲಿ, ಯುದ್ಧತಂತ್ರದ ಫಲಿತಾಂಶ ಕಾಣಿಸುವುದು ಭಾರತವು ಅಪರಾಧಿಗಳು ಎಂದು ಗುರುತಿಸಿದ ಜನರನ್ನು ನಿರ್ಮೂಲನೆ ಮಾಡುವುದರಿಂದ ಅಥವಾ ಸೆರೆಹಿಡಿದಾಗ. ಆದರೆ, ಭಯೋತ್ಪಾದಕ ದಾಳಿ ನಡೆಸಿದ ಮತ್ತು ದಾಳಿಯ ಹಿಂದಿನ ಸೂತ್ರಧಾರಿಗಳನ್ನು ಹಿಡಿಯಲಾಗಿಲ್ಲ, ಕೊಲ್ಲಲಾಗಿಲ್ಲ. ದಾಳಿಯ ಹೊಣೆ ಹೊತ್ತಿರುವ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆಯನ್ನು ನಿರ್ಮೂಲನೆ ಮಾಡಲಾಗಿಲ್ಲ.

ಇದೆಲ್ಲವೂ ಪಹಲ್ಗಾಮ್ ಹತ್ಯೆಗಳು ಮತ್ತು ಭಾರತೀಯ ಕ್ಷಿಪಣಿ ದಾಳಿಗಳ ನಡುವಿನ ಸಮಯದಲ್ಲಿನ ವಿಳಂಬವನ್ನು ಇನ್ನಷ್ಟು ಎದ್ದುಕಾಣುವಂತೆ ಮಾಡುತ್ತದೆ. ಪಹಲ್ಗಾಮ್ ದಾಳಿಗೆ ಭಾರತವು ಪ್ರತಿಕ್ರಿಯಿಸಲು 15 ದಿನಗಳನ್ನು ತೆಗೆದುಕೊಂಡಿತು. ಈ ದೀರ್ಘ ಅವಧಿಯ ವಿಳಂಬಕ್ಕೆ ಒಂದೇ ಒಂದು ಒಳ್ಳೆಯ ಕಾರಣವೆಂದರೆ ದುಷ್ಕರ್ಮಿಗಳನ್ನು ಪತ್ತೆಹಚ್ಚುವುದು ಎಂದು ಬಿಂಬಿಸಲಾಯಿತು. ಆದರೆ, ಪ್ರತಿ ಗಂಟೆಯ ವಿಳಂಬವು ದಾಳಿಯ ಹೊಣೆಗಾರರು, ಪಿತೂರಿದಾರರು ತಪ್ಪಿಸಿಕೊಳ್ಳಲು ಮತ್ತು ಅಡಗಿಕೊಳ್ಳಲು ಹೆಚ್ಚು ಸಮಯ ಒದಗಿಸಿತು. ಹೀಗಾಗಿ, ಅಪರಾಧಿಗಳು ನೆಲೆಸಿದ್ದರೆಂಬ ಬಾಹ್ಯ ನೆಲೆಗಳ ಮೇಲೆ ಮಾತ್ರವೇ ದಾಳಿ ಮಾಡಲಾಯಿತು. ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಲು ನಾವು ಎರಡು ವಾರಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು.

ಆ ನೆಲೆಗಳ ಮೇಲೆ ದಾಳಿ ಮಾಡುವುದೇ ಉದ್ದೇಶವಾಗಿದ್ದರೆ, ಪಹಲ್ಗಾಮ್ ಕೃತ್ಯ ನಡೆದ ಮೊದಲ ದಿನವೇ ಅವುಗಳನ್ನು ಹೊಡೆದು ಹಾಕಬಹುದಿತ್ತು. ಆದರೆ, ಅದು ಆಗಲಿಲ್ಲ. ಇಲ್ಲಿ, ಕಾಶ್ಮೀರದಲ್ಲಿ ನಾಗರಿಕರನ್ನು ರಕ್ಷಿಸುವಲ್ಲಿ ಸರ್ಕಾರವು ತನ್ನ ಸಂಪೂರ್ಣ ಅಸಮರ್ಥತೆಯನ್ನು ತೋರಿಸಿದಂತೆಯೇ, ಭಯೋತ್ಪಾದಕ ದಾಳಿಗೆ ತ್ವರಿತವಾಗಿ ಕಾರ್ಯಸಾಧ್ಯವಾದ ಪ್ರತಿಕ್ರಿಯೆ ನೀಡುವಲ್ಲಿಯೂ ಅಸಮರ್ಥತೆಯನ್ನು ಪ್ರದರ್ಶಿಸಿತು.

ಕಾರ್ಯತಂತ್ರದ ವಿಚಾರ – ಭಾರತದ ಪ್ರತಿಕ್ರಿಯೆಯು ಕೇವಲ ಯುದ್ಧತಂತ್ರದ್ದಾಗಿರಲಿಲ್ಲ. ಬದಲಾಗಿ ಕಾರ್ಯತಂತ್ರದ್ದೂ ಆಗಿತ್ತು ಎಂದು ಹಲವರು ವಾದಿಸಬಹುದು. ”ಪಹಲ್ಗಾಮ್ ಹತ್ಯೆಗಳ ನೇರ ಅಪರಾಧಿಗಳನ್ನು ಮೀರಿ, ಪಾಕಿಸ್ತಾನ ಮೂಲದ ಯಾವುದೇ ಇತರ ಉಗ್ರಗಾಮಿ ಸಂಘಟನೆಗಳು ಮತ್ತೆ ಇಂತಹ ಯಾವುದೇ ದಾಳಿಗಳನ್ನು ನಡೆಸದಂತೆ ತಡೆಯಲು ಕಾರ್ಯತಂತ್ರ ರೂಪಿಸಲಾಗಿದೆ” ಎಂದು ಹೇಳಲಾಗುತ್ತಿದೆ.

ಮಾತ್ರವಲ್ಲದೆ, ಹಲವಾರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಅದು ಇಲ್ಲಿಯೂ (ಭಾರತ) ಅಲ್ಲ ಅಥವಾ ಅಲ್ಲಿಯೂ (ಪಾಕಿಸ್ತಾನ) ಅಲ್ಲ. ಕಳೆದ ಕೆಲವು ದಶಕಗಳಿಂದ, ಕಾಶ್ಮೀರದಲ್ಲಿ ನೂರಕ್ಕಿಂತ ಕಡಿಮೆ ಭಯೋತ್ಪಾದಕರು ಇದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ. ಆದಾಗ್ಯೂ, ಕಾಶ್ಮೀರದಲ್ಲಿ ಇನ್ನೂ ಕೊಲೆಗಳು, ಬಾಂಬ್ ದಾಳಿಗಳು ಮುಂದುವರೆದಿವೆ. ಇಲ್ಲಿ ಸ್ಪಷ್ಟವಾದ ಅಂತ್ಯವಿಲ್ಲ, ಅಂತ್ಯ ಕಾಣುತ್ತಲೂ ಇಲ್ಲ. ಹೀಗಿರುವಾಗ ಕಾರ್ಯತಂತ್ರದ ಗೆಲುವು ಎಲ್ಲಿದೆ?

ಹೆಚ್ಚು ಮುಖ್ಯವಾಗಿ, ಭಾರತದ ವಿರುದ್ಧ ದ್ವೇಷ ಸಾಧಿಸುತ್ತಿರುವ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ನಾವು ಅವರ ಸ್ಥಳಗಳ ಮೇಲೆ ದಾಳಿ ಮಾಡಿದ್ದೇವೆ. ಅದಕ್ಕೂ ಹದಿನೈದು ದಿನಗಳ ವಿಳಂಬ ಏಕೆ? ಪಾಕಿಸ್ತಾನದಲ್ಲಿ ಭಯೋತ್ಪಾದಕರು ತಮ್ಮ ದಾಳಿಗಳ ಕುರಿತು ಎಲ್ಲಿ ಯೋಜಿಸುತ್ತಿದ್ದಾರೆ ಎಂಬುದು ನಮಗೆ ನಿಖರವಾಗಿ ತಿಳಿದಿದ್ದರೆ, ನಾವು ತ್ವರಿತವಾಗಿ ದಾಳಿ ಮಾಡಬಹುದು. ಅದಕ್ಕೆ, ಯುಎನ್ ಚಾರ್ಟರ್ (ಆರ್ಟಿಕಲ್ 51) ಅಡಿಯಲ್ಲಿಯೂ ನಮಗೆ ಆತ್ಮರಕ್ಷಣೆಯ ಹಕ್ಕಿದೆ. ಆದಾಗ್ಯೂ, ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿರುವ ಯಾರೊಬ್ಬರನ್ನೂ ಭಾರತ ಗುರಿಯಾಗಿಸಿಕೊಂಡು ದಾಳಿ ಮಾಡಲಿಲ್ಲ. ಯಾವುದೇ ಭಯೋತ್ಪಾದಕರನ್ನು ಕೊಲ್ಲಲಿಲ್ಲ. ಭಾರತವು ತಾನು ಗುರಿಯಾಗಿಸಿಕೊಂಡ ಭಯೋತ್ಪಾದಕ ನೆಲೆಗಳ ಮೇಲೆ ತನ್ನ ವಾಯುಪ್ರದೇಶದಿಂದ ದಾಳಿ ಮಾಡಿತು. ದಾಳಿಗೆ ಬಳಸಲಾದ ವಿಮಾನಗಳಿಗೆ ಸ್ವಲ್ಪ ಹಾನಿಯಾಯಿತು. ಆದರೆ, ಪಾಕಿಸ್ತಾನದ ವಿಮಾನಗಳಿಗೆ ಹಾನಿಯಾಗಿರುವ ಬಗ್ಗೆ ಈವರೆಗೆ ಅಧಿಕೃತ ಮಾಹಿತಿ ಬಂದಿಲ್ಲ.

ಈ ಲೇಖನ ಓದಿದ್ದೀರಾ?: ಪಹಲ್ಗಾಮ್‌ ದಾಳಿಗೆ ಒಂದು ತಿಂಗಳು; ಸಿಂಧೂರ ಅಳಿಸಿದ ಹಂತಕರನ್ನು ಹಿಡಿದರೇ ಮೋದಿ?

ಅಲ್ಲದೆ, ಭಾರತವು ನಡೆಸಿದ ದಾಳಿಯ ವೇಳೆ ನಮ್ಮದೇ ಸ್ವಂತ ವಾಯುಪ್ರದೇಶದೊಳಗೆ ನಮ್ಮದೇ ವಿಮಾನಗಳಿಗೆ ಪಾಕಿಸ್ತಾನವು ಹಾನಿಯುಂಟು ಮಾಡಿದೆ ಎಂಬುದು ವಿರೋಧಾಭಾಸವನ್ನು ಉಂಟುಮಾಡುತ್ತದೆ. ನಾವು ಪ್ರತಿ ಬಾರಿ ದಾಳಿ ಮಾಡಲು ಪ್ರಯತ್ನಿಸಿದಾಗಲೂ ಪಾಕಿಸ್ತಾನವು ನಮ್ಮ ಸ್ವಂತ ಗಡಿಯೊಳಗೆ ನಮಗೆ ಹಾನಿಯನ್ನುಂಟುಮಾಡಬಹುದಾದರೆ, ಪಾಕ್ ಆಡಳಿತವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಕಂಡುಕೊಳ್ಳುವ ಅಗತ್ಯ ಇದೆಯಲ್ಲವೇ?

ರಾಜತಂತ್ರಿಕ ವೈಫಲ್ಯ ವಿಚಾರ – ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಅತ್ಯಂತ ದೊಡ್ಡ ವೈಫಲ್ಯವೆಂದರೆ ರಾಜತಾಂತ್ರಿಕ ವೈಫಲ್ಯ. ಭಾರತವು ಕಾರ್ಯತಂತ್ರದ ಪಾಲುದಾರಿಕೆ ಅಥವಾ ನಿಕಟ ಸಂಬಂಧ ಹೊಂದಿರುವ ಅನೇಕ ದೇಶಗಳಲ್ಲಿ ಯಾವುದೇ ಒಂದು ದೇಶವು ಭಾರತದ ಕಾರ್ಯಾಚರಣೆಯನ್ನು ಬೆಂಬಲಿಸಲಿಲ್ಲ. ವಾಸ್ತವವಾಗಿ, ಭಾರತದ ಅತ್ಯಂತ ಶಕ್ತಿಶಾಲಿ ಮಿತ್ರರಾಷ್ಟ್ರ ಅಮೆರಿಕವು ಭಾರತ ಮತ್ತು ಪಾಕಿಸ್ತಾನ ಇಬ್ಬರೂ ನಮ್ಮ ಮಿತ್ರರು ಎಂದು ಹೇಳಿಕೊಂಡಿತು. ಜೊತೆಗೆ, ಉಭಯ ರಾಷ್ಟ್ರಗಳ ನಡುವಿನ ಕದನ ವಿರಾಮದ ಕ್ರೆಡಿಟ್ ಪಡೆದುಕೊಂಡಿತು.

ತನ್ನ ಭೂಪ್ರದೇಶದೊಳಗಿನ ಯಾವುದೇ ಉಗ್ರಗಾಮಿ ಗುಂಪುಗಳನ್ನು ನಿಗ್ರಹಿಸಲು, ಅವುಗಳ ಸದೆಬಡಿಯಲು ಪಾಕಿಸ್ತಾನದ ಮೇಲೆ ಹೆಚ್ಚುವರಿ ಒತ್ತಡವನ್ನು ಸೃಷ್ಟಿಸಬೇಕೆಂದು ಭಾರತ ಬಯಸಿದ್ದರೆ, ಇದು ಕೆಲಸ ಮಾಡಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಬದಲಾಗಿ, ಭಾರತ ಮತ್ತು ಪಾಕಿಸ್ತಾನ ಎರಡನ್ನೂ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಅಪಾಯವನ್ನುಂಟುಮಾಡುತ್ತಿರುವ ಯುದ್ಧಪ್ರೇಮಿ ರಾಷ್ಟ್ರಗಳೆಂದು ಒಂದೇ ಪಟ್ಟಿಯಲ್ಲಿ ಇರಿಸಲಾಯಿತು.

ಇನ್ನೂ ಹೆಚ್ಚಿನ ವಿವರಗಳು ಹೊರಬರಲಿವೆ

ಪಹಲ್ಗಾಮ್ ದಾಳಿಯ ನಂತರ ಎದುರಾದ ಸಂಘರ್ಷದ ಕುರಿತ ಚರ್ಚೆಗಳು ಮುಗಿದಿಲ್ಲ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಳು, ವಿವರಗಳು ಹೊರಬರಲಿವೆ. ಈ ಸಂಘರ್ಷದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆ, ಸಾಧನೆ, ವಿಜಯ ಹಾಗೂ ವೈಫಲ್ಯಗಳ ಬಗ್ಗೆ ನಮಗೆ ಇನ್ನೂ ಹೆಚ್ಚಿನ ಒಳನೋಟ ಸಿಗಲಿದೆ.

ಆದಾಗ್ಯೂ, ಸಾರ್ವಜನಿಕ ವಲಯದಲ್ಲಿ ಈಗಾಗಲೇ ಹೊರಬಂದಿರುವ ಕೆಲವು ಸರಳ ಸಂಗತಿಗಳು, ಭಾರತ-ಪಾಕ್ ಸರ್ಕಾರಗಳು ಸ್ಪಷ್ಟನೆ ಕೊಡದ ಹಲವು ಸಂಗತಿಗಳು ಈ ಸಂಘರ್ಷದಲ್ಲಿ ನಾವು ಏನು ಮಾಡಿದ್ದೇವೆ ಮತ್ತು ನಾವು ಯಾವ ಫಲಿತಾಂಶವನ್ನು ಪಡೆದುಕೊಂಡಿದ್ದೇವೆ ಎಂಬುದನ್ನು ತರ್ಕಿಸಲು ಮತ್ತು ಗ್ರಹಿಸಲು ನೆರವಾಗುತ್ತವೆ.

ಈ ಹಿಂದೆ, ಕೇಂದ್ರ ಸರ್ಕಾರ ಮತ್ತು ಅದರ ಬೆಂಬಲಿಗರು ಭಾರತವು ಕೊರೋನ ವಿರುದ್ಧದ ಹೋರಾಟದಲ್ಲಿ ದೊಡ್ಡ ಯಶಸ್ಸು ಕಂಡಿದೆ. ಕೋವಿಡ್‌-19ಗೆ ಕೇವಲ 5 ಲಕ್ಷ ಮಂದಿ ಮಾತ್ರ ಬಲಿಯಾಗಿದ್ದಾರೆ ಎಂದು ಹೇಳಿಕೊಂಡಿತ್ತು. ಇದೀಗ, 20 ಲಕ್ಷ ಸಾವುಗಳಾಗಿವೆ ಎಂದು ಸರ್ಕಾರವೇ ಅಂಕಿಅಂಶ ಬಿಡುಗಡೆ ಮಾಡಿದೆ. ಆದಾಗ್ಯೂ, 40 ಲಕ್ಷಕ್ಕೂ ಅಧಿಕ ಸಾವುಗಳಾಗಿವೆ ಎಂದು ಡಬ್ಲ್ಯೂಎಚ್‌ಒದ ಅಂಕಿಅಂಶಗಳು ಹೇಳುತ್ತಿವೆ.

ಈಗ, ಪಹಲ್ಗಾಮ್‌ ದಾಳಿ, ಹತ್ಯೆ, ಭಾರತದ ಪ್ರತಿದಾಳಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳು ಹೊರಬರಲು ವರ್ಷಗಳೇ ಬೇಕಾಗಬಹುದು. ಆದರೆ, ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಗೆ ಬಗ್ಗೆ ತರ್ಕಿಸಿ, ನಿರ್ಧರಿಸಲು ಈಗಾಗಲೇ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ದತ್ತಾಂಶಗಳಿವೆ. ಸರ್ಕಾರವು ಅದನ್ನು ಹೇಗೆ ತಿರುಚಿದರೂ, 2 + 2 ಎಂದರೆ 4 ಬರುತ್ತದೆ ಎಂಬುದು ಸಾರ್ವಜನಿಕರಿಗೆ ಚೆನ್ನಾಗಿಯೇ ಗೊತ್ತಿದೆ.

ಮಾಹಿತಿ ಕೃಪೆ: ದಿ ವೈರ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

9 COMMENTS

  1. Looks like this war was carried out becoz, to check the capability of China and France defence systems, based on this America can push their defence products to both India and Pak. This will boost the revenue for America and Trump can say to the people of America that, he contributed the money for growth of USA. In return, one person can save his friend from the clutches of law in USA. It’s a win win situation for all three. And we are here to say Bharat mata ki Jai.
    We people not understanding who is making fool of us.. Really….
    Where are the absconding terrorists??

  2. ಸೈನ್ಯದ ಸೇನಾಧಿಕಾರಿಗಳು ಹಲವು ಬಾರಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದರು ಸಹ ಕೇಂದ್ರ ಸರ್ಕಾರ ಮಾತ್ರ ಹೇಳಿಕೊಂಡಿದೆ ಎಂದು ಬಾಯಿ ಆಡುತ್ತಿರುವ ನಿಮ್ಮಂಥವರಿಗೆ ಯಾವುದರಲ್ಲಾದರೂ ಹೊಡೆಯಬೇಕು

    • ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಎಂಬಂತೆ ನಿಮ್ಮ ಎಲ್ಲಾ ಪ್ರಕಟಿತ ಲೇಖನಗಳು ದೇಶದ ಬಗ್ಗೆ ಸರ್ಕಾರದ ಬಗ್ಗೆ ಅನುಮಾನದ ವಕ್ರ ದೃಷ್ಟಿಯಿಂದಲೇ ತುಂಬಿದೆ. ನಿಮ್ಮ ಲೇಖನಗಳು ನಿಮ್ಮ ದುರುಳ ಚೆಂತನೆಗಳು, ಆಲೋಚನೆಗಳು, ಅಭಿಪ್ರಾಯಗಳ ಕೈಗನ್ನಡಿ …. ಥೂ

  3. ಸ್ವಲ್ಪವೂ ಸ್ವಾಭಿಮಾನ, ದೇಶ ಪ್ರೇಮ ವಿಲ್ಲದವನ ಲೇಖನ. ಯಾವುದೆೇ ನಿಜವಾದ ಭಾರತೀಯ ಬರೆಯದ ಬರೆಯಲಾಗದ ಲೇಖನ. ಸಂಕುಚಿತ ಬುದ್ಧಿಯ ಶಾಂತಿ ಕದಡುವ ಮತಾಂಧರನ್ನು ಓಲೈಸುವ ವಿಶ್ಲೇಷಣೆ. ನಿಷ್ಪಕ್ಷವಾದುದೆಂದು ತೋರಿಕೆಯ ಆತ್ಮಘಾತುಕ ಅಸತ್ಯ ವಲ್ಲವೇ ………….

  4. This article is done with the sole purpose of demoralising our nation. I will believe our armed forces and the government (irrespective of the party in power) rather than a sundry report by you. This looks more like a report by a mouthpiece of some destabilizing force acting against India.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X