ಸಮಾನ ಅವಕಾಶಗಳಿಂದ ನೆಮ್ಮದಿ ಶಾಂತಿಯಿಂದ, ಸರ್ವಜನಾಂಗದ ಶಾಂತಿಯ ತೋಟವನ್ನು ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಕಟ್ಟುತ್ತೇವೆಂಬ ನಂಬಿಕೆಯಿಂದ ಜನರು ಕಾಂಗ್ರೆಸ್ ನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶುಕ್ರವಾರ ವಿಧಾನ ಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸಿ, “ರಾಜ್ಯದ ಜನರು ಯಾವತ್ತು ಬಿಜೆಪಿಯವರಿಗೆ ಆರ್ಶೀವಾದ ಮಾಡಿಲ್ಲ. ಅವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದು, ಮ್ಯಾಂಡೇಟ್ ಇಲ್ಲದೆ ಆಡಳಿತ ನಡೆಸಿದ್ದಾರೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿಗಳ ಮೆಚ್ಚುಗೆ
“ಧರ್ಮಸ್ಥಳದ ಧರ್ಮಾಧಿಕಾರಿ ಅವರು ಪತ್ರ ಮೂಲಕ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಅಲ್ಲಿಗೆ ಬಂದು ಮುಖ್ಯಮಂತ್ರಿಗಳ ಹೆಸರಿನಲ್ಲಿ ಪೂಜೆ ಮಾಡಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದದಾರೆ. ಮಹಿಳಾ ಮೀಸಲಾತಿ ಹೆಚ್ಚಿಸಿದವರು ಕಾಂಗ್ರೆಸ್‌ನವರು. ಈಗ ಮಹಿಳಾ ಮೀಸಲಾತಿ ಮಸೂದೆ ಕೇಂದ್ರ ಸರ್ಕಾರದಲ್ಲಿದ್ದು, ಬಿಜೆಪಿಯವರು ಅದನ್ನು ಮಾಡಿಸಲಿ” ಎಂದರು.
ಇದೇ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದಿಸಿ, ಅರ್ಚನೆ ಮಾಡಿದ ಮಹಿಳೆಯರಿಗೆ ಮುಖ್ಯಮಂತ್ರಿಗಳು ಕೈ ಮುಗಿದರು.
ಧರ್ಮಗಳ ನಡುವೆ ಬೆಂಕಿಯಿಡುವುದು ನಮ್ಮ ಪರಂಪರೆಯಲ್ಲ
“ನಮ್ಮ ದೇಶದಲ್ಲಿ ಧರ್ಮಗಳು ಬೇರೆ ಇರಬಹುದು . ಆದರೆ ಎಲ್ಲ ಧರ್ಮಗಳ ಸಾರ ಒಂದೇ. ಮನುಷ್ಯರ ನಡುವೆ ಗೋಡೆ ಕಟ್ಟುವುದು, ಧರ್ಮಗಳ ನಡುವೆ ಬೆಂಕಿ ಇಡುವುದು ಅಮಾನವೀಯ. ಅದು ನಮ್ಮ ಪರಂಪರೆ ಅಲ್ಲ. ಎಲ್ಲರದರಲ್ಲೂ ವೈರುಧ್ಯಗಳಿದ್ದರೂ , ಏಕತೆಯನ್ನು ಕಾಣಬೇಕು. ಅದರಲ್ಲಿ ನಂಬಿಕೆ ಇಟ್ಟವರು ನಾವು. ಯಾವುದು ಒಂದು ಧರ್ಮ, ಜಾತಿಗೆ ಅಂಟಿಕೊಂಡವರಲ್ಲ” ಎಂದರು.