ಬೆಂಗಳೂರಿನ ಲಕ್ಕಸಂದ್ರದಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪರಿಶೀಲನೆ ನಡೆಸಿದರು.
ಬಳಿಕ ಬಿಎಂಆರ್‍ಸಿಎಲ್ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ ಅವರು, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನೀಗಿಸುವಲ್ಲಿ ಮೆಟ್ರೋ ಪ್ರಮುಖ ಪಾತ್ರ ವಹಿಸುತ್ತಿದೆ. ‘ನಮ್ಮ ಮೆಟ್ರೋ’ ಸುರಂಗ ಮಾರ್ಗದ ಕಾಮಗಾರಿಯನ್ನು ಆದಷ್ಟು ಬೇಗನೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಬಿಎಂಆರ್‍ಸಿಎಲ್ ಎಂಡಿ ಅಂಜುಮ್ ಪರ್ವೇಝ್, ಕಾಳೇನ ಅಗ್ರಹಾರ-ನಾಗವಾರ ಮೆಟ್ರೋ ಸುರಂಗ ಮಾರ್ಗದಲ್ಲಿ ಒಟ್ಟು 21.26 ಕಿ.ಮೀ. ಮಾರ್ಗವಿದ್ದು, ಒಟ್ಟು 18 ನಿಲ್ದಾಣಗಳಿವೆ. ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ ಇರುವ ಸುರಂಗ ಮಾರ್ಗವು ಒಟ್ಟು 13.89 ಕಿ.ಮೀ. ಉದ್ದ ಇರಲಿದೆ. ಇದರಲ್ಲಿ 12 ನಿಲ್ದಾಣ ನಿರ್ಮಾಣಗೊಳ್ಳಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ ಕೆ ಶಿವಕುಮಾರ್ ಅವರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಬಿಎಂಆರ್‍ಸಿಎಲ್‌ನ ಅಧಿಕಾರಿಗಳು ಇದ್ದರು.