ಕೆ.ಆರ್.ಪೇಟೆಯಲ್ಲಿ ಗುಡುಗಿದ ದಲಿತರು; ಜಯಕುಮಾರ್ ಸಾವಿಗೆ ಕಂಬನಿ ಮಿಡಿದ ಹೋರಾಟಗಾರರು

Date:

Advertisements
"ಪ್ರಕರಣವು ಕಂಬಾಲಪಲ್ಲಿ ಘಟನೆಯನ್ನು  ನೆನಪಿಸುತ್ತಿದೆ. ಆ ಪ್ರಕರಣದಲ್ಲೂ ನಮಗೆ ನ್ಯಾಯ ದೊರಕಲಿಲ್ಲ. ಹೀಗೆ ಹತ್ಯೆಯಾದ ದಲಿತರು ಪ್ರೇತಾತ್ಮಗಳಾಗಿ ಬಂದು ತಮ್ಮ ಸಾವಿಗೆ ನ್ಯಾಯ ಕೇಳುತ್ತಿವೆ."

ದಲಿತ ಯುವಕ ಜಯಕುಮಾರ್ ಅನುಮಾನಾಸ್ಪದ ಸಾವನ್ನು ಆತ್ಮಹತ್ಯೆ ಪ್ರಕರಣವೆಂದು ದಾಖಲು ಮಾಡಿರುವ ಸಂಬಂಧ ಆಕ್ರೋಶ ಭುಗಿಲೆದ್ದಿದ್ದು, ಕೆ.ಆರ್.ಪೇಟೆ ಪಟ್ಟಣದಲ್ಲಿ ಮಂಗಳವಾರ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು. ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಮತಗಳಿಂದಾಗಿ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರವಿದ್ದರೂ ದಲಿತರಿಗೆ ರಕ್ಷಣೆ ಇಲ್ಲವಾಗಿದೆ ಎಂದು ಹೋರಾಟಗಾರರು ಗುಡುಗಿದರು.

ಪಟ್ಟಣದ ಟಿ.ಬಿ.ವೃತ್ತದಿಂದ ಹೊರಟ ಮೆರವಣಿಗೆಯು ತಾಲ್ಲೂಕು ಪಂಚಾಯಿತಿ ಕಚೇರಿಯನ್ನು ಸೇರಿತು. ಅಲ್ಲಿ ಬಹಿರಂಗ ಸಭೆ ನಡೆಸಿದ ಹೋರಾಟಗಾರರು, “ಪ್ರಕರಣವನ್ನು ಎಸ್‌ಐಟಿ ಅಥವಾ ಸಿಐಡಿ ತನಿಖೆಗೆ ವಹಿಸಬೇಕು, ಕೊಲೆ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಿ ಕರ್ತವ್ಯ ಲೋಪ ಎಸಗಿರುವ ಪೊಲೀಸರನ್ನು ಅಮಾನತು ಮಾಡಬೇಕು, ಜಯಕುಮಾರ್ ಅವರ ಪತ್ನಿ ಲಕ್ಷ್ಮಿ ಅವರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು ಹಾಗೂ ಈ ಹಿಂದೆ ಕೋಮು ಆಯಾಮದಲ್ಲಿ ಕೊಲೆಗಳಾದ ಸಂದರ್ಭದಲ್ಲಿ ಪರಿಹಾರ ನೀಡಿದಂತೆ ಜಯಕುಮಾರ್ ಕುಟುಂಬಕ್ಕೂ 25 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಲಾಯಿತು.

kr4
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಂತ್ರಸ್ತೆ ಲಕ್ಷ್ಮಿ ಕಣ್ಣೀರು ಹಾಕುತ್ತಾ ಹೆಜ್ಜೆ ಹಾಕಿದರು..

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜಯಕುಮಾರ್ ಪತ್ನಿ ಕೆ.ಬಿ.ಲಕ್ಷ್ಮಿ ಕಣ್ಣೀರು ಹಾಕುತ್ತಲೇ ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಕೆ.ಆರ್.ಪೇಟೆ ಪೊಲೀಸರ ವಿರುದ್ಧ ಆಕ್ರೋಶ ಮೊಳಗಿತು. ಮೆರವಣಿಗೆಯು ಗ್ರಾಮಾಂತರ ಪೊಲೀಸ್ ಠಾಣೆಯ ಮುಂದೆ ಸಾಗಿದ ಸಂದರ್ಭದಲ್ಲಿ ಮಳೆ ಶುರುವಾಯಿತು. ಸುರಿಯುತ್ತಿದ್ದ ಮಳೆಯಲ್ಲೇ ರಸ್ತೆಯಲ್ಲಿ ಕುಳಿತ ಹೋರಾಟಗಾರರು ಪೊಲೀಸರ ವಿರುದ್ಧ ಘೋಷಣೆಗನ್ನು ಕೂಗಿದರು.

Advertisements
kr3
ಕೆ.ಆರ್.ಪೇಟೆ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು

ಇದನ್ನೂ ಓದಿರಿ: ‘ಕೊಲೆಯನ್ನು ಆತ್ಮಹತ್ಯೆ ಎಂದು ತಿರುಚಿದ ಕೆ.ಆರ್.ಪೇಟೆ ಪೊಲೀಸರು’; ಸಂತ್ರಸ್ತ ದಲಿತ ಮಹಿಳೆ ಮರುದೂರು

ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ, ಹಿರಿಯ ದಲಿತ ಹೋರಾಟಗಾರರಾದ ಗುರುಪ್ರಸಾದ್ ಕೆರಗೋಡು, ಮಾವಳ್ಳಿ ಶಂಕರ್, ಬಸ್ತಿ ರಂಗಪ್ಪ, ಬಸವರಾಜ ಕೌತಾಳ್, ಪ್ರೇಮ್ ಕುಮಾರ್, ಜಯರಾಮ್ ಮಾಂಬಳ್ಳಿ, ಆಲಗೂಡು ಶಿವು, ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ, ಸಿಐಟಿಯು ಮುಖಂಡರಾದ ಸಿ.ಕುಮಾರಿ, ಜನಶಕ್ತಿ ಸಂಘಟನೆಯ ಗೌರಿ, ಮಲ್ಲಿಗೆ ಸಿರಿಮನೆ, ಮಹಿಳಾ ಮುನ್ನಡೆ ಸಂಘಟನೆಯ ಪೂರ್ಣಿಮಾ, ಹಿರಿಯ ರೈತ ಹೋರಾಟಗಾರರಾದ ರಾಜೇಗೌಡ, ನಾವು ದ್ರಾವಿಡ ಕನ್ನಡ ಚಳವಳಿಯ ಅಭಿಗೌಡ ಹನಕೆರೆ, ವಕೀಲರಾದ ಮೈತ್ರಿ, ಲೇಖಾ, ಕ್ಲಿಫ್ಟನ್, ಬರಹಗಾರರು ಹಾಗೂ ಚಿಂತಕರಾದ ಶಿವಸುಂದರ್, ಶ್ರೀಪಾದ ಭಟ್, ಹುಲಿಕುಂಟೆ ಮೂರ್ತಿ, ಸಿ.ಜೆ.ಲಕ್ಷ್ಮಿಪತಿ, ವಿಕಾಸ್ ಆರ್.ಮೌರ್ಯ, ದು.ಸರಸ್ವತಿ, ಕೆ.ಎಂ.ವಾಸು, ಅಪ್ಪಗೆರೆ ಸೋಮಶೇಖರ್, ಆರ್.ಸಿ.ರುದ್ರ ಪುನೀತ್, ಮುಸ್ಲಿಂ ಸಮುದಾಯದ ಮುಖಂಡರು ಸೇರಿದಂತೆ ರಾಜ್ಯದ ಮೂಲೆಮೂಲೆಯಿಂದ ಬಂದ ಜನರು ಪೊಲೀಸ್ ವೈಫಲ್ಯದ ವಿರುದ್ಧ ಆಕ್ರೋಶ ಹೊರಹಾಕಿದರು.

kr5

ಗುರುಪ್ರಸಾದ್ ಕೆರಗೋಡು ಅವರು ಮಾತನಾಡಿ, “ಜಯಕುಮಾರ್ ಅವರ ಶವ ಸಿಕ್ಕ ಸ್ಥಿತಿ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಆತ್ಮಹತ್ಯೆ ಮಾಡಿಕೊಂಡಿರುವ ಯಾವುದೇ ಕುರುಹು ಕಾಣಿಸುವುದಿಲ್ಲ. ಬೆಂಕಿ ಹಚ್ಚಿಕೊಂಡ ಬಳಿಕ ಸುತ್ತಲು ಓಡಾಡಿರುವ ಕುರುಹುಗಳಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಬಲವಾದ ಯಾವುದೇ ಕಾರಣವಿರಲಿಲ್ಲ. ಜಯಕುಮಾರ್ ಜಮೀನಿನಲ್ಲಿ ಹುಲ್ಲಿನ ಮೆದೆ ಹಾಕಿಕೊಂಡು ಕಿರುಕುಳ ಕೊಡುತ್ತಿದ್ದ ಆರೋಪಿ ಅನಿಲ್ ಕುಮಾರ್‌ನ ಹಿನ್ನೆಲೆ ಗೊತ್ತಿದ್ದರೂ ಕ್ರಮ ಜರುಗಿಸಿಲ್ಲ. ಇಲ್ಲಿ ಪೊಲೀಸ್ ವೈಫಲ್ಯ ಎದ್ದು ಕಾಣುತ್ತದೆ” ಎಂದರು.

ಮಾವಳ್ಳಿ ಶಂಕರ್ ಅವರು ಮಾತನಾಡಿ, “ಪ್ರಕರಣವು ಕಂಬಾಲಪಲ್ಲಿ ಘಟನೆಯನ್ನು ನೆನಪಿಸುತ್ತಿದೆ. ಆ ಪ್ರಕರಣದಲ್ಲೂ ನಮಗೆ ನ್ಯಾಯ ದೊರಕಲಿಲ್ಲ. ಹೀಗೆ ಹತ್ಯೆಯಾದ ದಲಿತರು ಪ್ರೇತಾತ್ಮಗಳಾಗಿ ಬಂದು ತಮ್ಮ ಸಾವಿಗೆ ನ್ಯಾಯ ಕೇಳುತ್ತಿವೆ. ನಾವಿನ್ನೂ ಸುಮ್ಮನೆ ಕೂರಬಾರದು” ಎಂದು ಕರೆ ನೀಡಿದರು.

ರಾಜೇಗೌಡ ಅವರು ಮಾತನಾಡಿ, “ಇದೊಂದು ಅಮಾನವೀಯವಾದ ಕೃತ್ಯ. ವಿದ್ಯಾವಂತರಾಗುತ್ತಾ ಮನುಷ್ಯರಾಗಬೇಕಾಗಿದ್ದ ಸಂದರ್ಭದಲ್ಲಿ ಗೋಮುಖ ವ್ಯಾಘ್ರಗಳಾಗಿ ವರ್ತಿಸಿ ಇಂತಹ ಕೃತ್ಯವನ್ನು ನಡೆಸಿರುವುದು ಖಂಡನೀಯ” ಎಂದು ತಿಳಿಸಿದರು.

ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, “ಕಾನೂನು ಕೈಗೆತ್ತಿಕೊಳ್ಳುವ ಕೆಲಸವನ್ನು ನಾವೆಂದೂ ಮಾಡಿಲ್ಲ. ಪೊಲೀಸರು ನಿಷ್ಕ್ರಿಯರಾದರೆ ನಾವು ಕಾನೂನನ್ನು ಖಂಡಿತವಾಗಿಯೂ ಕೈಗೆತ್ತಿಕೊಳ್ಳುತ್ತೇವೆ. ನಾವೇ ನಮ್ಮ ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಸಿದರು.

“ಕೊಂದ ಬಳಿಕ ಶವವನ್ನು ಹುಲ್ಲಿನ ಮೆದೆಗೆ ಒರಗಿಸಿ ಬೆಂಕಿ ಹಚ್ಚಿರುವುದು ಸ್ಪಷ್ಟವಾಗುತ್ತದೆ. ಈ ಘಟನೆ ಇಡೀ ಕೆ.ಆರ್.ಪೇಟೆಗೆ ಕಪ್ಪು ಚುಕ್ಕಿ. ಬೆಂದು ಬೂದಿಯಾದವರ ಸಾಕ್ಷಿ ಇಲ್ಲದಂತೆ ಮಾಡಿದ್ದಾರೆ. ಎಲ್ಲ ಹೋರಾಟಗಾರರು ಸೇರುವವರೆಗೂ ದಫನ್ ಮಾಡಲು ಅವಕಾಶ ಹೇಗೆ ಕೊಟ್ಟಿರಿ? ಈ ಘಟನೆ ಮುಂದೊಂದು ದಿನ ನಿಮ್ಮ ಮನೆಗಳಲ್ಲಿ ಆಗಲ್ಲವಾ?” ಎಂದು ಪ್ರಶ್ನಿಸಿದರು.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕೆ.ಆರ್.ಪೇಟೆ ದಲಿತ ಯುವಕ ಜಯಕುಮಾರ್ ಕೇಸ್‌ನಲ್ಲಿ ಪೊಲೀಸರು ಕುರುಡಾಗಿದ್ದು ಅಕ್ಷಮ್ಯ

ಕೃಷ್ಣಮೂರ್ತಿಯವರು ಮಾತನಾಡಿ, “ದಲಿತರ ಮೇಲಿನ ದೌರ್ಜನ್ಯ ಪ್ರಕರಣವನ್ನು ನಿರ್ವಹಿಸಬೇಕಾಗಿರುವ ಡಿವೈಎಸ್ಪಿಯವರೇ ನೇರ ಹೊಣೆಗಾರರಾಗುತ್ತಾರೆ. ಸರ್ಕಲ್‌ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ನಂತರದ ತಪ್ಪಿತಸ್ಥರು. ತಾವೇ ಮುಂದೆ ನಿಂತು ಶವವನ್ನು ಸುಟ್ಟು ಹಾಕಿಸಿರುವ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರೂ ಈ ಪ್ರಕರಣದ ಆರೋಪಿಯಾಗಿದ್ದಾರೆ. ಯಾಕೆಂದರೆ ಇವರು ಸಾಕ್ಷ್ಯ ನಾಶ ಮಾಡಿದ್ದಾರೆ. ಹೊರಗಡೆ ಜಯಕುಮಾರ್ ಕೊಲೆಯಾಯಿತು. ಪೊಲೀಸ್ ಸ್ಟೇಷನ್ ಒಳಗೆ ಪ್ರಕರಣದ ಕೊಲೆ ಮಾಡಲಾಯಿತು. ಅನಕ್ಷರಸ್ಥ ಲಕ್ಷ್ಮಿ ಅವರ ದೂರನ್ನು ತಿರುಚಿದವರ ವಿರುದ್ಧ ಕ್ರಮ ಆಗಬೇಕು. ಪೊಲೀಸ್ ಠಾಣೆಯಲ್ಲಿ ಇರುವ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಬೇಕು. ಕಿರುಕುಳದ ಕುರಿತು ಮೊದಲು ದೂರ ಕೊಟ್ಟ ಕೂಡಲೇ ಪೊಲೀಸರು ಕ್ರಮ ಜರುಗಿಸಿದ್ದರೆ ಜಯಕುಮಾರ್ ಉಳಿಯುತ್ತಿದ್ದರು” ಎಂದು ಹೇಳಿದರು.

kr2

ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಮಾತನಾಡಿ, “ಪೊಲೀಸ್ ದೋಷಗಳ ಕುರಿತು ನಾನೇ ತನಿಖೆ ಕೈಗೆತ್ತಿಕೊಂಡಿದ್ದೇನೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಖಂಡಿತ ಕ್ರಮವಾಗುತ್ತದೆ. ಎಸ್‌ಐಟಿ ಅಥವಾ ಸಿಐಡಿ ತನಿಖೆಯಾಗಬೇಕೆಂದು ಆಗ್ರಹಿಸಿದ್ದೀರಿ. ಆ ನಿರ್ಧಾರವನ್ನು ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಬೇಕಾಗುತ್ತದೆ. ನಿಮ್ಮ ಆಗ್ರಹಗಳನ್ನು ಸರ್ಕಾರಗಳಿಗೆ ತಲುಪಿಸುತ್ತೇನೆ” ಎಂದು ಭರವಸೆ ನೀಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X