ಕನ್ನಡ ಚಿತ್ರರಂದ ನಟ ಅನಂತನಾಗ್, ಕರ್ನಾಟಕದ ವಯಲಿನ್ ವಾದಕ ಎಲ್ ಸುಬ್ರಹ್ಮಣ್ಯಂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 71 ಮಂದಿ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಪದ್ಮ ಪ್ರಶಸ್ತಿ’ ಪ್ರದಾನ ಮಾಡಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಗೌರವಗಳಾದ ‘ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ’ – ಈ ಮೂರು ವಿಭಾಗಗಳಲ್ಲಿ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಐದು ತಿಂಗಳ ಹಿಂದೆಯೇ, ಜನವರಿ 25ರಂದು ಪದ್ಮ ಪ್ರಶಸ್ತಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿರುವ 71 ಮಂದಿಯನ್ನು ಆಯ್ಕೆ ಮಾಡಿ, ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಇದೀಗ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಗಳು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಕಲಾ ಕ್ಷೇತ್ರದ ಸಾಧನೆ ಮಾಡಿದಕ್ಕಾಗಿ ಅನಂತನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಅಂತೆಯೇ, ನಟಿ ಶೋಭನಾ, ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರಿಗೂ ಪದ್ಮಭೂಷಣ ಪ್ರಶಸ್ತಿಗಳು ದೊರೆತಿವೆ. ವಯಲಿನ್ ವಾದಕ ಎಲ್ ಸುಬ್ರಹ್ಮಣ್ಯಂ ಅವರಿಗೂ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.
ಈ ಲೇಖನ ಓದಿದ್ದೀರಾ?: ಸಮಾಜದ ಫತ್ವಾ ಎದುರಿಸಿ ʼಬೆಂಕಿಮಳೆʼಯೇ ಆಗಿದ್ದರು ಬಾನು
ಸಾರ್ವಜನಿಕ ವ್ಯವಹಾರಗಳ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಕ್ಕಾಗಿ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಜಾನಪದ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಕ್ಕಾಗಿ ಜಾನಪದ ಗಾಯಕಿ ಶಾರದಾ ಸಿನ್ಹಾ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದ್ದು, ಪ್ರಶಸ್ತಿಯನ್ನು ಅವರ ಪುತ್ರ ಅಂಶುಮಾನ್ ಸಿನ್ಹಾ ಸ್ವೀಕರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧಂಕರ್, ಕೇಂದ್ರ ಸಚಿವ ಅಮಿತ್ ಶಾ, ಎಸ್ ಜೈಶಂಕರ್, ಪ್ರಹ್ಲಾದ್ ಜೋಶಿ, ಜಿತೇಂದ್ರ ಸಿಂಗ್, ಜಿ ಕಿಶನ್ ರೆಡ್ಡಿ ಹಾಗೂ ಇತರ ಸಚಿವರು ಇದ್ದರು.