ಸ್ವಿಗ್ಗಿ, ಜೊಮಾಟೋ, ಅಮೆಜಾನ್, ಫ್ಲಿಪ್‌ಕಾರ್ಟ್, ಒಲಾ, ಉಬರ್ ಮುಂತಾದ ವೇದಿಕೆಗಳಲ್ಲಿ ಕಾರ್ಮಿಕರು ಪಡೆಯುವ ಪ್ರತಿ ವಹಿವಾಟಿನ ಮೇಲೆ ಶೇಕಡ 1 ರಿಂದ 5 ರವರೆಗೆ ಕಲ್ಯಾಣ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕವು ಕಲ್ಯಾಣ ಮಂಡಳಿಯಿಂದ ನಿರ್ವಹಿಸಲ್ಪಡುವ ಕಲ್ಯಾಣ ನಿಧಿಗೆ ಸೇರುತ್ತದೆ. ಈ ನಿಧಿಯನ್ನು ಆರೋಗ್ಯ ವಿಮೆ, ಆದಾಯ ಭದ್ರತೆ, ಮಾತೃತ್ವ ಲಾಭಗಳು, ವೃದ್ಧಾಪ್ಯ ಮತ್ತು ಅಂಗವಿಕಲತೆಯ ಸಂದರ್ಭಗಳಲ್ಲಿ ಸಹಾಯಕ್ಕಾಗಿ ಬಳಸಲಾಗುತ್ತದೆ
ಎರಡು ವರ್ಷದ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ವಿಧಾನಸಭೆ ನಡೆಯುವುದಕ್ಕಿಂತ ಮುಂಚಿತವಾಗಿ ಬೆಂಗಳೂರಿನ ಏರ್‌ಲೈನ್ಸ್ ಹೋಟೆಲ್‌ನಲ್ಲಿ ಗಿಗ್ ಕಾರ್ಮಿಕರೊಂದಿಗೆ ಉಪಾಹಾರ ಸೇವಿಸುತ್ತ ಸಂವಾದ ನಡೆಸಿದ್ದರು. ಈ ಮಾತುಕತೆಯಲ್ಲಿ ಸ್ವಿಗ್ಗಿ, ಜೊಮಾಟೋ, ಡನ್ಜೋ ಮತ್ತು ಇತರ ವೇದಿಕೆಗಳ ಡೆಲಿವರಿ ಕಾರ್ಮಿಕರು ಭಾಗವಹಿಸಿದ್ದರು. ಕಾರ್ಮಿಕರು ತಮ್ಮ ದೈನಂದಿನ ಜೀವನದ ಕಠಿಣತೆಗಳಾದ ಕಡಿಮೆ ವೇತನ, ಉದ್ಯೋಗದ ಅಸ್ಥಿರತೆ, ರಸ್ತೆ ಅಪಘಾತಗಳಿಂದ ಉಂಟಾಗುವ ಅಪಾಯಗಳು ಮತ್ತು ಸಾಮಾಜಿಕ ಭದ್ರತೆಯ ಕೊರತೆಯ ಬಗ್ಗೆ ತಮ್ಮ ಆತಂಕವನ್ನು ಹಂಚಿಕೊಂಡಿದ್ದರು. ಗಿಗ್ ಕಾರ್ಮಿಕರ ನಿತ್ಯದ ಜಂಜಾಟ ಹೇಗಿರುತ್ತದೆ ಎಂದು ಸ್ವತಃ ತಿಳಿದುಕೊಳ್ಳಲು ಬೆಂಗಳೂರಿನ ಕೆಲವು ಬೀದಿಗಳಲ್ಲಿ ಕಾರ್ಮಿಕರ ಸ್ಕೂಟರ್‌ನಲ್ಲಿಯೇ ಸುತ್ತಾಡಿದ್ದರು. ಗಿಗ್ ಕಾರ್ಮಿಕರ ಉದ್ಯೋಗಕ್ಕೆ ಯಾವುದೇ ಭದ್ರತೆಯಿಲ್ಲದೆ ಜೀವನ ಸಾಗಿಸುತ್ತಿರುವುದನ್ನು ಮನಗಂಡು ಅವರ ಕಲ್ಯಾಣಕ್ಕಾಗಿ ಶಾಶ್ವತ ಸಾಮಾಜಿಕ ಭದ್ರತೆಯನ್ನು ಒದಗಿಸುವ ಆಶಯವನ್ನು ವ್ಯಕ್ತಪಡಿಸಿದ್ದರು.
ಇದಾದ ಕೆಲವು ದಿನಗಳ ನಂತರ ರಾಜ್ಯ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಗಿಗ್ ಕಾರ್ಮಿಕರಿಗಾಗಿ 3,000 ಕೋಟಿ ರೂ. ಸ್ಥಿರ ನಿಧಿಯೊಂದಿಗೆ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಯ ಸ್ಥಾಪನೆ ಮತ್ತು ಕನಿಷ್ಠ ಗಂಟೆಯ ವೇತನವನ್ನು ಖಾತರಿಪಡಿಸುವ ಭರವಸೆಯನ್ನು ನೀಡಲಾಗಿತ್ತು. ಕಳೆದ ತಿಂಗಳು ಏಪ್ರಿಲ್ 3ರಂದು, ರಾಹುಲ್ ಗಾಂಧಿ ಅವರು ನವದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರನ್ನು ಭೇಟಿಯಾಗಿ ಕಾಯ್ದೆಯ ಕರಡಿನ ಬಗ್ಗೆ ಚರ್ಚಿಸಿದ್ದರು. ಇದೀಗ ಕಾಯ್ದೆಯು ಕರ್ನಾಟಕದಲ್ಲಿ ಜಾರಿಗೊಂಡಿದ್ದು, ರಾಜ್ಯಪಾಲರು ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) 2025ರ ಮಸೂದೆಯ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.
ಗಿಗ್ ಕಾರ್ಮಿಕರ ಸಂಖ್ಯೆಯ ಬಗ್ಗೆ ನಿಖರವಾದ ದತ್ತಾಂಶವಿಲ್ಲ. ಆದರೆ, ನೀತಿ ಆಯೋಗ 2023ರ ವರದಿ ಅನ್ವಯ ಸ್ವಿಗ್ಗಿ, ಜೊಮ್ಯಾಟೋಗಳಲ್ಲಿ ಫುಡ್ ಡೆಲಿವರಿ ಮಾಡುವ, ರೈಡ್ ಶೇರಿಂಗ್ ಸೇವೆಗಳಾದ ಓಲಾ, ಉಬರ್, ರ್‍ಯಾಪಿಡೊ ಮತ್ತು ನಮ್ಮ ಯಾತ್ರಿ ಇತರೆ ಅಪ್ಲಿಕೇಷನ್ ಆಧಾರಿತ ಚಾಲಕರು, ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಬಿಗ್‌ಬ್ಯಾಸ್ಕೆಟ್, ಜೆಪ್ಟೋ ಇತರೆ ವೇದಿಕೆಗಳ ಮೂಲಕ ಪೂರ್ಣಕಾಲಿಕ/ಅರೆಕಾಲಿಕ ಡೆಲಿವರಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರ ಸಂಖ್ಯೆ 5 ಲಕ್ಷದಷ್ಟಿದೆ ಎನ್ನಲಾಗಿದೆ.
ಗಿಗ್ ಕಾರ್ಮಿಕರು ಎಂದರೆ ಯಾರು?
ಗಿಗ್ ಕಾರ್ಮಿಕರು ಎಂದರೆ ಸಾಂಪ್ರದಾಯಿಕ ಪೂರ್ಣಕಾಲಿಕ ಉದ್ಯೋಗದ ಬದಲು ತಾತ್ಕಾಲಿಕ, ಒಪ್ಪಂದದ ಆಧಾರದ ಅಥವಾ ಸ್ವತಂತ್ರವಾಗಿ ಕೆಲಸ ಮಾಡುವ ವ್ಯಕ್ತಿಗಳಾಗಿರುತ್ತಾರೆ. ಇವರು ಸಾಮಾನ್ಯವಾಗಿ ನಿರ್ದಿಷ್ಟ ಯೋಜನೆಗಳು, ಕಾರ್ಯಗಳು ಅಥವಾ ಸೇವೆಗಳಿಗಾಗಿ ಕೆಲಸ ಮಾಡುತ್ತಾರೆ ಮತ್ತು ಒಂದು ಸಂಸ್ಥೆಗೆ ಶಾಶ್ವತವಾಗಿ ಬದ್ಧರಾಗಿರುವುದಿಲ್ಲ. ಕಾರ್ಯ ಮುಗಿದ ನಂತರ ಅಥವಾ ಅದಕ್ಕೂ ಮೊದಲೇ ಇವರನ್ನು ವಜಾ ಮಾಡುವುದರಿಂದ ಇವರು ಅಸಂಘಟಿತರಾಗಿರುತ್ತಾರೆ. ಸ್ವಿಗ್ಗಿ/ಜೊಮ್ಯಾಟೊದಲ್ಲಿ ಆಹಾರ ವಿತರಣೆ ಮಾಡುವವರು, ಓಲಾ/ಉಬರ್‌ನಂಥ ಚಾಲಕರಾಗಿ ಕೆಲಸ ಮಾಡುವವರು, ಫ್ರೀಲಾನ್ಸರ್‌ಗಳು, ಒಪ್ಪಂದದ ಕಾರ್ಮಿಕರು ಅಥವಾ ಗಿಗ್ ಆಪ್‌ಗಳ ಮೂಲಕ ಕೆಲಸ ಮಾಡುವವರಾಗಿರುತ್ತಾರೆ.
ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಯ ಸ್ಥಾಪನೆ
ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲಾಗಿದೆ. ಈ ಮಂಡಳಿಯು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಇಬ್ಬರು ಗಿಗ್ ಕಾರ್ಮಿಕರ ಪ್ರತಿನಿಧಿಗಳು, ಇಬ್ಬರು ಪ್ಲಾಟ್‌ಫಾರ್ಮ್ ಪ್ರತಿನಿಧಿಗಳು ಮತ್ತು ಒಬ್ಬ ಸಿವಿಲ್ ಸೊಸೈಟಿ ಸದಸ್ಯರನ್ನು ಸರ್ಕಾರದಿಂದ ನಾಮನಿರ್ದೇಶನ ಮಾಡಲಾಗುತ್ತದೆ. ಮಂಡಳಿಯು ಕಲ್ಯಾಣ ಶುಲ್ಕವನ್ನು ಸಂಗ್ರಹಿಸುವುದು, ದೂರುಗಳನ್ನು ಪರಿಹರಿಸುವುದು ಮತ್ತು ಸಾಮಾಜಿಕ ಭದ್ರತೆ ಯೋಜನೆಗಳನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.

ಕಲ್ಯಾಣ ಶುಲ್ಕ
ವಿವಿಧ ವೇದಿಕೆಗಳಾದ ಸ್ವಿಗ್ಗಿ, ಜೊಮ್ಯಾಟೋ, ಅಮೆಜಾನ್, ಫ್ಲಿಪ್‌ಕಾರ್ಟ್, ಒಲಾ, ಉಬರ್‌ನಿಂದ ಕಾರ್ಮಿಕರು ನಿರ್ವಹಿಸುವ ಪ್ರತಿ ವಹಿವಾಟಿನ ಮೇಲೆ ಶೇ. 1 ರಿಂದ 5ರವರೆಗೆ ಕಲ್ಯಾಣ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಶುಲ್ಕವು ಕಲ್ಯಾಣ ಮಂಡಳಿಯಿಂದ ನಿರ್ವಹಿಸಲ್ಪಡುವ ಕಲ್ಯಾಣ ನಿಧಿಗೆ ಸೇರುತ್ತದೆ. ಈ ನಿಧಿಯನ್ನು ಆರೋಗ್ಯ ವಿಮೆ, ಆದಾಯ ಭದ್ರತೆ, ಮಾತೃತ್ವ ಲಾಭಗಳು, ವೃದ್ಧಾಪ್ಯ ಮತ್ತು ಅಂಗವಿಕಲತೆಯ ಸಂದರ್ಭಗಳಲ್ಲಿ ಸಹಾಯಕ್ಕಾಗಿ ಬಳಸಲಾಗುತ್ತದೆ.
ಜೀವ ವಿಮೆ ಮತ್ತು ಅಪಘಾತ ವಿಮೆ
ಕರ್ನಾಟಕ ಸರ್ಕಾರವು ಗಿಗ್ ಕಾರ್ಮಿಕರಿಗೆ 4 ಲಕ್ಷ ರೂ. ವಿಮಾ ಯೋಜನೆಯನ್ನು ಘೋಷಿಸಿತ್ತು. ಇದರಲ್ಲಿ 2 ಲಕ್ಷ ರೂ. ಜೀವ ವಿಮೆ ಮತ್ತು 2 ಲಕ್ಷ ರೂ. ಅಪಘಾತ ವಿಮೆಯಾಗಿದೆ. ಈ ಯೋಜನೆಯ ವಾರ್ಷಿಕ ಪ್ರೀಮಿಯಂ ಅನ್ನು ಸರ್ಕಾರವೇ ಭರಿಸುತ್ತದೆ. ಇದು ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಅಪಘಾತ ಪರಿಹಾರ, ನೈಸರ್ಗಿಕ ಮರಣ ಪರಿಹಾರ, ಅಂತ್ಯ ಸಂಸ್ಕಾರ ವೆಚ್ಚ, ವಿವಾಹ ಭತ್ಯೆ, ಹರಿಗೆ ಭತ್ಯೆ, ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಭವಿಷ್ಯ ನಿಧಿ ವಸತಿ ಸೌಲಭ್ಯ ಕೌಶಲಾಭಿವೃದ್ಧಿ ಹಾಗೂ ವ್ಯದ್ಯಾಪ್ಯ ನೆರವು ಇತ್ಯಾದಿ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸುವುದು.
ಕಾರ್ಮಿಕರ ದಾಖಲಾತಿ ಮತ್ತು ಏಕೀಕೃತ ಗುರುತಿನ ಟೀಟಿ
ಎಲ್ಲ ಗಿಗ್ ಕಾರ್ಮಿಕರು ಕಲ್ಯಾಣ ಮಂಡಳಿಯಲ್ಲಿ ದಾಖಲಾಗಬೇಕು ಮತ್ತು ಎಲ್ಲ ವೇದಿಕೆಗಳಿಗೆ ಸಾರ್ವತ್ರಿಕವಾದ ಏಕೀಕೃತ ಗುರುತಿನ ಚೀಟಿಯನ್ನು ಪಡೆಯುತ್ತಾರೆ. ಇದಕ್ಕಾಗಿ ಆನ್‌ಲೈನ್ ಪೋರ್ಟಲ್ ಒಂದನ್ನು ಸ್ಥಾಪಿಸಲಾಗಿದೆ. ಇದರ ಮೂಲಕ ಕಾರ್ಮಿಕರು ತಮ್ಮ ವಿವರಗಳನ್ನು ಸಲ್ಲಿಸಬಹುದು. ಇದು ಸಾಮಾಜಿಕ ಭದ್ರತೆ ಯೋಜನೆಗಳಿಗೆ ಪ್ರವೇಶವನ್ನು ಸುಗಮಗೊಳಿಸುತ್ತದೆ ಮತ್ತು ಸರ್ಕಾರಕ್ಕೆ ಕಾರ್ಮಿಕರ ಸಂಖ್ಯೆಯನ್ನು ಗುರುತಿಸಲು ಸಹಾಯ ಮಾಡುತ್ತದೆ.

ಕುಂದುಕೊರತೆ ಪರಿಹಾರ ಕಾರ್ಯವಿಧಾನ
ಕಾರ್ಮಿಕರ ದೂರುಗಳನ್ನು ಪರಿಹರಿಸಲು ಒಂದು ಕುಂದುಕೊರತೆ ಪರಿಹಾರ ಕಾರ್ಯವಿಧಾನ ಮಂಡಳಿಯನ್ನು ಸ್ಥಾಪಿಸಲಾಗಿದೆ. ಇದು ಕಾರ್ಮಿಕರಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಲು ಮತ್ತು ನ್ಯಾಯಯುತ ಪರಿಹಾರವನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ. ವೇತನ ವಿಳಂಬ, ಅನ್ಯಾಯವಾದ ಕೆಲಸದಿಂದ ಕಿರುಕುಳ ಅಥವಾ ವೇದಿಕೆಗಳಿಂದಾಗುವ ತಾರತಮ್ಯದ ದೂರುಗಳನ್ನು ಈ ವ್ಯವಸ್ಥೆಯ ಮೂಲಕ ಪರಿಹರಿಸಬಹುದು. ಈ ಕಾನೂನು ಕಾರ್ಮಿಕರಿಗೆ ಕನಿಷ್ಠ ಕೆಲಸದ ಭದ್ರತೆಯನ್ನು ಖಾತರಿಪಡಿಸುತ್ತದೆ. ಇದರಲ್ಲಿ ವೇತನದ ಪಾರದರ್ಶಕತೆ, ಕೆಲಸದ ಸ್ಥಳದ ಸುರಕ್ಷತೆ, ಮತ್ತು ಅನ್ಯಾಯವಾದ ಕೆಲಸದಿಂದ ರಕ್ಷಣೆ ಸೇರಿವೆ. ವೇದಿಕೆಗಳು ಕಾರ್ಮಿಕರಿಗೆ ಸಕಾಲಿಕ ವೇತನ ಮತ್ತು ಕೆಲಸದ ಸ್ಥಿತಿಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಒದಗಿಸಬೇಕು.
ಯಾರಿಗೆ ಅನುಕೂಲವಾಗುತ್ತದೆ?
ಆನ್‌ಲೈನ್ ವೇದಿಕೆಗಳ ಮೂಲಕ ಕೆಲಸ ಮಾಡುವವರು, ಉದಾಹರಣೆಗೆ, ಫುಡ್ ಡೆಲಿವರಿ, ಕ್ಯಾಬ್ ಚಾಲಕರು, ಇ-ಕಾಮರ್ಸ್ ಡೆಲಿವರಿ ಕಾರ್ಮಿಕರು ಮುಂತಾದ ಕಾರ್ಮಿಕರಿಗೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಈ ಕಾಯ್ದೆ ಹೊಂದಿದೆ. ಅಲ್ಲದೆ ಅವರ ಕುಟುಂಬಗಳ ಆಶ್ರಿತರಿಗೆ ಜೀವ ವಿಮೆ ಮತ್ತು ಅಪಘಾತ ವಿಮೆಯ ಸೌಲಭ್ಯಗಳನ್ನು ಒದಗಿಸುತ್ತದೆ.
.@RahulGandhi ji had a candid conversation with gig workers and delivery partners of Dunzo, Swiggy, Zomato, Blinkit etc at the iconic Airlines Hotel in Bengaluru, today.
— Congress (@INCIndia) May 7, 2023
Over a cup of coffee and masala dosa, they discussed the lives of delivery workers, lack of stable employment… pic.twitter.com/qYjY7L03sh