ಕಮಲ್‌ ಹಾಸನ್‌ ಎಂಬ ಅಜ್ಞಾನಿಯಿಂದ ಕನ್ನಡಕ್ಕೆ ಅವಮಾನ: ಇಂಥವರಿಗೆ ನಿರ್ಲಕ್ಷ್ಯವೇ ಮದ್ದು

Date:

Advertisements
ನಟ ಶಿವರಾಜ್ ಕುಮಾರ್‌ ಅವರಿಗೆ ಕನ್ನಡ ಭಾಷಾ ಜ್ಞಾನದ ತಿಳಿವಳಿಕೆ ಇದ್ದಿದ್ದರೆ ತಮಿಳು ನಟ ಕಮಲ್‌ ಹಾಸನ್‌ ಹೇಳಿಕೆಯನ್ನು ಅದೇ ವೇದಿಕೆಯಲ್ಲಿ ಖಂಡಿಸಬಹುದಿತ್ತು. ಆದರೆ, ನಕ್ಕು, ಅಪ್ಪಿ ಬಂದಿದ್ದಾರೆ.

ಚೆನ್ನೈನಲ್ಲಿ ಇತ್ತೀಚೆಗೆ ನಡೆದ ತಮಿಳು ಸಿನಿಮಾ ‘ಥಗ್‌ ಲೈಫ್’ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ತಮಿಳು ನಟ ಕಮಲ್‌ ಹಾಸನ್‌ ಅವರು ‘ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ’ ಎಂದಿರುವ ಹೇಳಿಕೆ ಕನ್ನಡಿಗರ ಮತ್ತು ಕನ್ನಡ ಭಾಷಾ ಶಾಸ್ತ್ರಜ್ಞರ ಆಕ್ರೋಶಕ್ಕೆ ಕಾರಣವಾಗಿದೆ.

ಗಮನಾರ್ಹ ಸಂಗತಿ ಎಂದರೆ ನಟ ಶಿವರಾಜ್ ಕುಮಾರ್‌ ಅದೇ ಕಾರ್ಯಕ್ರಮದಲ್ಲಿ ಹಾಜರಿದ್ದರು. ಆ ವೇಳೆ ಕಮಲ್ ಹಾಸನ್ ಅವರು ಡಾ.ರಾಜ್‍ಕುಮಾರ್ ಅವರೊಂದಿಗಿನ ಒಡನಾಟವನ್ನು ಸ್ಮರಿಸುತ್ತಾ ಮಾತನಾಡುವಾಗ, “ನಿಮ್ಮ ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ” ಎಂದು ಶಿವರಾಜ್‌ ಕುಮಾರ್‌ ಅವರನ್ನು ಉದ್ದೇಶಿಸಿ ಹೇಳುತ್ತಾರೆ. ಅದಕ್ಕೆ ನಟ ಶಿವರಾಜ್ ಕುಮಾರ್‌ ನಕ್ಕು ಸುಮ್ಮನಾಗುತ್ತಾರೆ.

ವಾಸ್ತವದಲ್ಲಿ ನಟ ಶಿವರಾಜ್ ಕುಮಾರ್‌ ಅವರಿಗೆ ಭಾಷಾ ಜ್ಞಾನದ ತಿಳಿವಳಿಕೆ ಇದ್ದಿದ್ದರೆ ಕಮಲ್‌ ಹಾಸನ್‌ ಹೇಳಿಕೆಯನ್ನು ಅದೇ ವೇದಿಕೆಯಲ್ಲಿ ಬಹುಶಃ ಖಂಡಿಸಿ ಬರುತ್ತಿದ್ದರು. ಆದರೆ, ನಟ ಶಿವರಾಜ್ ಕುಮಾರ್‌ ಅವರಿಗೂ ಕನ್ನಡ ಭಾಷಾ ಅಸ್ಮಿತೆ ಬಗ್ಗೆ ತಿಳಿವಳಿಕೆ ಇಲ್ಲದಿರುವುದರಿಂದ ಕಮಲ್‌ ಹಾಸನ್‌ ಮುಂದೆ ನಕ್ಕು, ಅವರನ್ನು ಅಪ್ಪಿ ಬಂದಿದ್ದಾರೆ ಅನ್ನಿಸುತ್ತದೆ.

Advertisements

ನಟ ಕಮಲ್‌ ಹಾಸನ್‌ ಹೇಳಿಕೆ ಮತ್ತು ಆ ಹೇಳಿಕೆಯನ್ನು ಒಪ್ಪಿಕೊಂಡು ಬಂದ ನಟ ಶಿವರಾಜ್‌ ಕುಮಾರ್‌ ಇಬ್ಬರ ಬಗ್ಗೆಯೂ ಈಗ ರಾಜ್ಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಶಿವಮೊಗ್ಗದ ಸಹ್ಯಾದ್ರಿ ಆರ್ಟ್ಸ್ ಕಾಲೇಜಿನ ಭಾಷಾಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಮೇಟಿ ಮಲ್ಲಿಕಾರ್ಜುನ ಅವರು ಈ ದಿನ.ಕಾಮ್‌ ಈ ವಿಚಾರವಾಗಿ ಮಾತನಾಡಿ, “ನಮ್ಮ ತಾಯಿಗೆ ಅವಮಾನ ಮಾಡಿದಾಗ ನಟ ಶಿವರಾಜ್ ಕುಮಾರ್‌ ಅವರು ನಕ್ಕು, ಅವರನ್ನು ಅಪ್ಪಿ ಬರುತ್ತಾರೆ ಎಂದರೆ ಮೊದಲು ಕನ್ನಡ ಭಾಷೆ ಬಗ್ಗೆ ಶಿವರಾಜ್ ಕುಮಾರ್‌ ಅವರಿಗೆ ತಿಳಿವಳಿಕೆ ಇಲ್ಲ ಎಂಬುದು ಅರ್ಥವಾಗುತ್ತದೆ. ಇನ್ನು ಕಮಲ್ ಹಾಸನ್‌ ಒಬ್ಬ ಕಮಂಗಿ ನಟ. ಅವನ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಅರ್ಥವೇ ಇಲ್ಲ” ಎಂದರು.

“ಕಮಲ್ ಹಾಸನ್‌ ಒಬ್ಬ ಕಲಾವಿದ ಅಷ್ಟೇ. ಅವನಿಗೆ ಭಾಷೆಯ ಬಗ್ಗೆ ಏನು ಗೊತ್ತಿದೆ? ಭಾಷೆಯ ಬಗ್ಗೆ ಆಳವಾಗಿ ತಿಳಿದುಕೊಂಡು ಮಾತನಾಡಿದ್ದರೆ ಕಮಲ್ ಹಾಸನ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಒಂದು ಅರ್ಥ ಇರುತ್ತಿತ್ತು. ಸುಮ್ಮನೇ ನಾವು ಇಂಥವರನ್ನು ನಿರ್ಲಕ್ಷ್ಯ ಮಾಡಬೇಕು. ಇವರ ಬಗ್ಗೆ ಹೆಚ್ಚು ಮಾತನಾಡಿ ಅವರಿಗೆ ಅನಗತ್ಯ ಸ್ಪೇಸ್‌ ಮಾಡಿಕೊಡುತ್ತಿದ್ದೇವೆ ಅನ್ನಿಸುತ್ತದೆ” ಎಂದು ಹೇಳಿದರು.

“ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದ್ದು ಎಂಬುದೇ ಮೂರ್ಖತನದ ಹೇಳಿಕೆ. ದ್ರಾವಿಡ ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ- ಪ್ರೊಟೊ-ದ್ರಾವಿಡಿಯನ್‌ನಿಂದ- ಸಾಮ್ಯತೆ ಹೊಂದಿವೆ. ಇದು ತಮಿಳು ಭಾಷೆಯ ಯಜಮಾನಿಕೆಯನ್ನು ನಮ್ಮ ಮೇಲೆ ಹೇರುವ ಉದ್ದೇಶದಿಂದ ಈ ರೀತಿ ಮಾತನಾಡುತ್ತಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ತುಳು ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ ಬಂದ ಭಾಷೆಗಳು. ದ್ರಾವಿಡ ಭಾಷೆಗಳಲ್ಲಿ ಧ್ವನಿ ರಚನೆ ಮತ್ತು ವಾಕ್ಯ ರಚನೆಯಲ್ಲಿ ಒಂದಕ್ಕೊಂದು ಸಾಮ್ಯತೆಗಳು ಇವೆ” ಎಂದು ತಿಳಿಸಿದರು.

ಮೇಟಿ

ಪುರುಷೋತ್ತಮ ಬಿಳಿಮಲೆ ಮಾತು ಸಹ ಸುಳ್ಳು: ಮೇಟಿ ಮಲ್ಲಿಕಾರ್ಜುನ

“ಡಾ. ಪುರುಷೋತ್ತಮ ಬಿಳಿಮಲೆ ಅಂತವರು ತುಳು, ಕೊಂಕಣಿ, ಕೊಡವ ಇವೆಲ್ಲ ಕನ್ನಡದ ಉಪಭಾಷೆಗಳು ಎನ್ನುತ್ತಾರೆ. ಇದು ಸಹ ಕಮಲ್‌ ಹಾಸನ್‌ ಹೇಳಿಕೆ ತರಹವೇ ಶುದ್ಧ ಸುಳ್ಳು ಹೇಳಿಕೆ. ಪುರುಷೋತ್ತಮ ಬಿಳಿಮಲೆ ಅವರ ಮಾತಿನ ಹಿಂದೆಯೂ ಕನ್ನಡದ ಯಜಮಾನಿಕೆ ಎದ್ದು ಕಾಣುತ್ತದೆ. ನನ್ನ ಪ್ರಕಾರ ಕಮಲ್ ಹಾಸನ್ ಎಂಬ ಕಮಂಗಿ ಹೇಳಿದ್ದಕ್ಕೆ ಪ್ರತಿಕ್ರಿಯಿಸಲು ತೋರಿಸುವ ಹುಮ್ಮಸ್ಸು ಕನ್ನಡವನ್ನು ಬೆಳೆಸುವ ಕೆಲಸದಲ್ಲಿ ತೋರಿಸಿದರೆ ಒಳ್ಳೆಯದು” ಎಂದರು.

“ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ತಮಿಳುನಾಡು ಮುಖ್ಯಮಂತ್ರಿಗೆ ಪತ್ರ ಬರೆದು, ಭಾಷಾ ವಿಚಾರದಲ್ಲಿ ಕನ್ನಡಕ್ಕೆ ಅವಮಾನ ಮಾಡಿರುವ ಕಮಲ್‌ ಹಾಸನ್‌ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಬೇಕು” ಎಂದು ಸಲಹೆ ನೀಡಿದರು.

ಕನ್ನಡ ತಮಿಳು ಭಾಷೆಯಿಂದ ಹುಟ್ಟಿಲ್ಲ: ಪುರುಷೋತ್ತಮ ಬಿಳಿಮಲೆ

“ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿಲ್ಲ ಎಂದು ವಿ ಐ ಸುಬ್ರಮಣಿಯನ್‌ ಮೊದಲಾದ ತಮಿಳಿನ ಪ್ರಸಿದ್ಧ ಭಾಷಾ ವಿಜ್ಞಾನಿಗಳೇ ಹೇಳಿದ್ದನ್ನು ನಟ ಕಮಲ್‌ ಹಾಸನ್‌ ಗಮನಿಸಿದಂತಿಲ್ಲ. ದ್ರಾವಿಡ ಭಾಷಾ ಕುಟುಂಬದಲ್ಲಿ 130ಕ್ಕೂ ಹೆಚ್ಚು ಭಾಷೆಗಳಿವೆ. ಈ ಎಲ್ಲ ಭಾಷೆಗಳಿಗೂ ಮೂಲವಾಗಿರಬಹುದಾದ ಪ್ರಾಗ್‌ದ್ರಾವಿಡ ಭಾಷೆಯೊಂದನ್ನು (ಇದನ್ನು ಮೂಲ ದ್ರಾವಿಡ ಭಾಷೆ ಎಂದೂ ಕರೆಯಲಾಗಿದೆ) ಭಾಷಾ ವಿಜ್ಞಾನಿಗಳು ಪುನಾರಚಿಸಿದ್ದಾರೆ. ಕಾಲಾಂತರದಲ್ಲಿ ದ್ರಾವಿಡ ಭಾಷಾ ಗುಂಪಿನ ಜನರು ಬೇರೆ ಬೇರೆ ಕಡೆಗಳಲ್ಲಿ ಪಸರಿಸಿಕೊಂಡಾಗ ಭಾಷೆಯೂ ಸ್ವತಂತ್ರವಾಗಿ ಬೆಳೆಯತೊಡಗಿತು. ಹೀಗೆ ಮೂಲ ದ್ರಾವಿಡದಿಂದ ಮೊದಲು ಬೇರೆಯಾದ ಭಾಷೆ ಕುಯಿ ಮತ್ತು ತಮಿಳು. ಅವು ಇವತ್ತಿಗೂ ಮೂಲದ್ರಾವಿಡ ಭಾಷೆಯ ಅನೇಕ ಗುಣ ಲಕ್ಷಣಗಳನ್ನು ಹೊಂದಿವೆ. ಆಮೇಲೆ ತುಳು, ತದನಂತರ ಕನ್ನಡ, ತೆಲುಗು, ಮಲಯಾಳಂ- ಹೀಗೆ ಬೇರೆ ಬೇರೆ ಭಾಷೆಗಳು ಬೆಳೆದವು. ಇವುಗಳದು ಸೋದರ ಸಂಬಂಧವೇ ಹೊರತು ತಾಯಿ ಮಕ್ಕಳ ಸಂಬಂಧವಲ್ಲ” ಎಂದು ಅವರು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಪುರುಷೋತ್ತಮ ಬಿಳಿಮಲೆ 2

ದಕ್ಷಿಣ ಭಾರತದ ಎಲ್ಲ ಭಾಷೆಗಳ ಗೌರವಕ್ಕೆ ಧಕ್ಕೆ: ಟಿ.ಎ.ನಾರಾಯಣಗೌಡ

“ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರು ಕನ್ನಡ ಭಾಷೆಯು ತಮಿಳಿನಿಂದ ಉಗಮವಾಯಿತು ಎಂದು ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು, ದುರುದ್ದೇಶಪೂರಿತ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹದ್ದಾಗಿದೆ. ಈ ಹೇಳಿಕೆ ಅವರ ಅಜ್ಞಾನವನ್ನು ಬಯಲುಗೊಳಿಸುತ್ತದೆ. ಕನ್ನಡ ಮತ್ತು ತಮಿಳು ಭಾಷೆಗಳು ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ್ದರೂ, ಇವು ತಮ್ಮದೇ ಆದ ಸ್ವತಂತ್ರ ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹೊಂದಿವೆ” ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

“ಕನ್ನಡ ಭಾಷೆಗೆ ಸುಮಾರು 4600–5000 ವರ್ಷಗಳ ಇತಿಹಾಸವಿದೆ. ಭಾಷಾಶಾಸ್ತ್ರೀಯ ಅಧ್ಯಯನಗಳ ಪ್ರಕಾರ, ದ್ರಾವಿಡ ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ (ಪ್ರೊಟೊ-ದ್ರಾವಿಡಿಯನ್) ಸುಮಾರು 2500–3000 ಕ್ರಿ.ಪೂ. ಆಸುಪಾಸಿನಲ್ಲಿ ಕವಲೊಡೆದಿವೆ. ಅಶೋಕನ ಕಾಲದ ಪ್ರಾಕೃತ ಶಾಸನಗಳಲ್ಲಿ (ಕ್ರಿ.ಪೂ. 3ನೇ ಶತಮಾನ) ಕರ್ನಾಟಕದಲ್ಲಿ ಕಂಡುಬಂದ ಕೆಲವು ಶಾಸನಗಳು ಕನ್ನಡದ ಆದಿಪದಗಳ ಬಳಕೆಯನ್ನು ಸೂಚಿಸುತ್ತವೆ. ಕನ್ನಡದ ಲಿಖಿತ ರೂಪಕ್ಕೆ 2000 ವರ್ಷಗಳ ಇತಿಹಾಸವಿದ್ದು, ಇದಕ್ಕೂ ಮುಂಚಿನ 2000 ವರ್ಷಗಳ ಭಾಷಿಕ ಇತಿಹಾಸವನ್ನು ಒಳಗೊಂಡಂತೆ, ಕನ್ನಡ ನುಡಿಯ ಒಟ್ಟಾರೆ ಇತಿಹಾಸ 4600 ವರ್ಷಗಳಿಗೂ ಹೆಚ್ಚಿನದಾಗಿದೆ” ಎಂದು ತಿಳಿಸಿದ್ದಾರೆ.

“ತಮಿಳು ಸಾಹಿತ್ಯಕ್ಕೆ ಪ್ರಾಚೀನತೆಯಿದ್ದರೂ, ತಮಿಳು ಭಾಷೆಯು ಕನ್ನಡಕ್ಕಿಂತ ಹಳೆಯದು ಎನ್ನಲು ಯಾವುದೇ ಐತಿಹಾಸಿಕ ಅಥವಾ ಭಾಷಾಶಾಸ್ತ್ರೀಯ ಆಧಾರಗಳಿಲ್ಲ. ಇತ್ತೀಚಿನ ಭಾಷಾಶಾಸ್ತ್ರೀಯ ಸಂಶೋಧನೆಗಳು ತಮಿಳು, ಕನ್ನಡ, ತುಳು, ತೆಲುಗು ಮೊದಲಾದ ದ್ರಾವಿಡ ಭಾಷೆಗಳು ಮೂಲ ದ್ರಾವಿಡ ಭಾಷೆಯಿಂದ ಏಕಕಾಲಕ್ಕೆ ವಿಕಾಸಗೊಂಡಿವೆ ಎಂದು ಸ್ಪಷ್ಟಪಡಿಸಿವೆ. ಹಲ್ಮಿಡಿ ಶಾಸನ (ಕ್ರಿ.ಶ. 450) ಕನ್ನಡದ ಅತ್ಯಂತ ಪ್ರಾಚೀನ ಲಿಖಿತ ದಾಖಲೆಯಾಗಿದ್ದು, ಕನ್ನಡದ ಸ್ವತಂತ್ರ ಅಸ್ತಿತ್ವವನ್ನು ದೃಢಪಡಿಸುತ್ತದೆ. ಇದಕ್ಕಿಂತಲೂ ಹಳೆಯ ಬ್ರಾಹ್ಮೀ ಲಿಪಿಯ ಶಾಸನಗಳು ಕರ್ನಾಟಕದ ಬನವಾಸಿ, ಚಂದ್ರವಳ್ಳಿಯಂತಹ ಕಡೆಗಳಲ್ಲಿ ಕಂಡುಬಂದಿವೆ, ಇದು ಕನ್ನಡ ಭಾಷೆಯು ತಮಿಳಿನಿಂದ ಉಗಮವಾಗಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ” ಎಂದು ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

“ಕಮಲ್ ಹಾಸನ್ ಅವರ ಈ ಹೇಳಿಕೆಯು ದಕ್ಷಿಣ ಭಾರತದ ಜನತೆಯು ಹಿಂದಿ ಹೇರಿಕೆ ಮತ್ತು ಸಾಮ್ರಾಜ್ಯಶಾಹಿಯ ವಿರುದ್ಧ ನಡೆಸುತ್ತಿರುವ ಒಗ್ಗಟ್ಟಿನ ಹೋರಾಟಕ್ಕೆ ಗಂಭೀರ ಹಾನಿಯುಂಟುಮಾಡುತ್ತದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮೊದಲಾದ ದ್ರಾವಿಡ ಭಾಷೆಗಳು ಒಂದಾಗಿ ನಿಲ್ಲಬೇಕಾದ ಈ ಸಂದರ್ಭದಲ್ಲಿ, ಈ ಜವಾಬ್ದಾರಿಯಿಲ್ಲದ ಹೇಳಿಕೆಯು ಭಾಷಿಕ ಸಮುದಾಯಗಳ ನಡುವೆ ಒಡಕು ಮತ್ತು ಭಿನ್ನಾಭಿಪ್ರಾಯವನ್ನು ಉಂಟುಮಾಡುವ ಕೀಳುಮಟ್ಟದ ರಾಜಕೀಯ ತಂತ್ರವಾಗಿದೆ. ಇದು ಕೇವಲ ಕನ್ನಡಿಗರಿಗೆ ಅವಮಾನವಲ್ಲ, ದಕ್ಷಿಣ ಭಾರತದ ಎಲ್ಲ ಭಾಷೆಗಳ ಗೌರವಕ್ಕೆ ಧಕ್ಕೆ ತರುವ ಕೃತ್ಯವಾಗಿದೆ” ಎಂದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X