ಕನ್ನಡ ತಮಿಳಿನಿಂದ ಹುಟ್ಟಿರುವುದು ಎಂದು ಹೇಳಿಕ ನೀಡಿದ ಚಿತ್ರನಟ ಕಮಲ್ ಹಾಸನ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಕರವೇ ಹಾಗೂ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಕಮಲ್ ಹಾಸನ್ ಅವರ ಭಾವಚಿತ್ರಕ್ಕೆ ಬೂಟ್‌ನಿಂದ ಹೊಡೆದು ಆಕ್ರೋಶ ಹೊರ ಹಾಕಿ ತಕ್ಷಣ ತಮ್ಮ ಹೇಳಿಕೆಗೆ ತಪ್ಪಾಗಿದೆ ಎಂದು ಕನ್ನಡಿಗರಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಕಮಲ್ ಹಾಸನ್ ಅನೇಕ ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ.ನಟನ ಹೇಳಿಕೆಯಿಂದ ಕನ್ನಡಿಗರು ಹಾಗೂ ತಮಿಳರ ನಡುವೆ ದ್ವೇಷ ಹುಟ್ಟುವಂತೆ ಮಾಡಿದ್ದಾರೆ.ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿ ಅವಮಾನ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕನ್ನಡ ಪರ ಸಂಘಟನೆ ಮುಖಂಡ ಬಸವರಾಜ ಕಳಸ ಮಾತನಾಡಿ, ಬೆಂಗಳೂರಿಗೆ ಪ್ರಚಾರ ಕಾರ್ಯಕ್ಕೆ ಆಗಮಿಸಿದ ಕಮಲ್ ಹಾಸನ್ ಅವರು ತಮಿಳ್‌ನಿಂದ ಕನ್ನಡ ಹುಟ್ಟಿಕೊಂಡಿದೆ ಎಂದು ಮಾತನಾಡಿದ್ದು, ಅಲ್ಲಿಯೇ ಇದ್ದ ನಟ ಶಿವರಾಜ್ ಕುಮಾರ ಅವರು ಖಂಡಿಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಕರ್ನಾಟಕದಲ್ಲಿರುವ 6 ಸಾವಿರ ಕೋಟಿ ಜನರಿಗೆ ಬೆಂಕಿ ಕೆಂಡವಾಗಿದೆ. ಕನ್ನಡದ ಬಗ್ಗೆ ಹಗುರವಾಗಿ ಮಾತನಾಡಿದ್ದು, ನಾಡಿಗೆ ದ್ರೋಹ ಬಗೆದಂತೆ, ಕನ್ನಡದಲ್ಲಿಯೇ ಸಾಕಷ್ಟು ಸಿನಿಮಾ ಮಾಡಿದ್ದು ಭಾಷಾ ವಿರೋಧಿಯಾಗಿದ್ದಾರೆ ಎಂದು ಕಿಡಿ ಕಾರಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಡ್ರಗ್ಸ್ ಸೇವನೆ ಆರೋಗ್ಯಕ್ಕೆ ಮಾರಕ;ಎಸ್ ಪಿ ಎಂ.ಪುಟ್ಟಮಾದಯ್ಯ
ಕಮಲ ಹಾಸನ್ ಅವರು ಕನ್ನಡ ಜನತೆಗೆ ಬೇಷರತ್ತಾಗಿ ಕ್ಷಮೆಯಾಚಿಸಬೇಕು, ರಾಜ್ಯದಲ್ಲಿ ಕಮಲ್ ಹಾಸನ್ ಹಾಗೂ ತಮಿಳ್ ಸಿನಿಮಾಗಳ ಪ್ರದರ್ಶನ ರದ್ದುಪಡಿಸಬೇಕು.ಕನ್ನಡ ಚಲನಚಿತ್ರ ಮಂಡಳಿಗೆ ಈ ಬಗ್ಗೆ ದೂರು ನೀಡಲಾಗುವುದು. ಭಾಷಾ ವಿರೋಧಿ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು.
ನಂತರ ಮಾತನಾಡಿದ ಅಶೋಕ ಕುಮಾರ ಸಿಕೆ ಜೈನ್ ಮಾತನಾಡಿ, ಕಮಲ್ ಹಾಸನ ಅವರು ರಾಜ್ಯಕ್ಕೆ ಬಂದು ಕನ್ನಡ ತಮಿಳನಿಂದ ಬಂದಿದೆ ಎಂದು ಹೇಳುವ ಮೂಲಕ ಕನ್ನಡಿಗರನ್ನು ರೊಚ್ಚಿಗೆಳುವಂತೆ ಮಾಡಿದ್ದಾರೆ.ನಾಡು ನುಡಿಗೆ ಹೆಸರಾದ ಕರ್ನಾಟಕ, ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿದನ್ನು ಖಂಡಿಸಿದರು.ರಾಜ್ಯದಲ್ಲಿ ತಮಿಳ್ ಸಿನಿಮಾಗಳ ಪ್ರದರ್ಶನ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಇ. ಕುಮಾರ, ಬಷೀರ ಅಹಮದ್ ಹೊಸಮನಿ, ಸರೋಜಾ ಸಂಘ, ಕಲ್ಲೂರುಕರ್, ಜಗದೀಶ ಪಾಟೀಲ್ ವಿಶ್ವನಾಥ ಪಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
