2014 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಧಾರವಾಡಕ್ಕೆ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾರಂಭಿಸಲು ಅನುಮೋದನೆ ನೀಡಿದ್ದು, 10 ಮಕ್ಕಳೊಂದಿಗೆ ಪ್ರಾರಂಭವಾದ ಈ ಕಾಲೇಜನಲ್ಲಿ ಈಗ 450 ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಈ ನೂತನ ಕಟ್ಟಡವು 3.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ನೂತನ ಕಟ್ಟಡದ ಭೂಮಿ ಪೂಜೆ ಹಾಗೂ ಅಡಿಗಲ್ಲು ಕಾರ್ಯಕ್ರಮವನ್ನು ನೆರವೇರಿಸಿ, ಮಾತನಾಡಿದ ಅವರು, ಮೊದಲು ಹಳ್ಳಿಗಳಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಬಿಸಿ ಊಟ ಪ್ರಾರಂಭವಾದ ಮೇಲೆ ಬಡವರ ಮಕ್ಕಳಿಗೆ ಅನುಕೂಲವಾಗಿ ಹೆಣ್ಣು ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದರು. ಆ ಸಮಯದಿಂದ ತರಗತಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳು ಸಮವಾಗಿರಲು ಆರಂಭವಾಯಿತು. ಆದರೆ ಈ ದಿನಮಾನಗಳಲ್ಲಿ ಕೆಲವೊಂದು ಶಾಲಾ ಕೊಠಡಿಗಳಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಹೆಚ್ಚಾಗಿ ಕಾಣುತ್ತಿದ್ದಾರೆ ಎಂದರು.
ಇತ್ತೀಚಿಗೆ ರಾಜ್ಯಮಟ್ಟದಲ್ಲಿ ಹೆಣ್ಣು ಮಕ್ಕಳು ಪ್ರಥಮ ಸ್ಥಾನ ಪಡೆಯುತ್ತಿದ್ದಾರೆ. ವಿಶ್ವವಿದ್ಯಾಲಯದ ಮೊದಲನೆಯ ರ‌್ಯಾಂಕ್‌ನಲ್ಲೂ ಹೆಣ್ಣುಮಕ್ಕಳೇ ಮುಂದಿದ್ದಾರೆ. ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂದು ಪ್ರತ್ಯೇಕ ಕಾಲೇಜು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಹೆಣ್ಣು ಮಕ್ಕಳು ದೃಢ ನಿರ್ಧಾರದಿಂದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಪ್ರಾಮಾಣಿಕತೆಯನ್ನು ರೂಢಿಸಿಕೊಂಡು ದೃಢ ಸಂಕಲ್ಪದ ಮೂಲಕ ಹೆಚ್ಚಿನ ಉದ್ಯೋಗಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಧಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಮಹಿಳಾ ಕಾಲೇಜು ಉತ್ತಮ ಸ್ಥಳದಲ್ಲಿ ಆರಂಭವಾಗಿದೆ. ಸಾರ್ವಜನಿಕರ ಸ್ಪಂದನೆ ಚನ್ನಾಗಿದೆ. ದಿನದಿಂದ ದಿನಕ್ಕೆ ಮಹಿಳಾ ಕಾಲೇಜು ಬೆಳೆಯುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಉನ್ನತ ಶಿಕ್ಷಣ ಸಚಿವರ ಸಹಕಾರ ಮತ್ತು ಕಾಳಜಿಯಿಂದ ಇಂದು ಕಾಲೇಜು ನೂತನ ಕಟ್ಟಡ ಕಾಮಗಾರಿ ಆರಂಭವಾಗಿದೆ. ತಮ್ಮ ಅನುದಾನದಲ್ಲಿ ಹಳೆಯ ಕಟ್ಟಡಕ್ಕೆ ತಾತ್ಕಾಲಿಕ ಹೊದಿಕೆ ಮಾಡಲಾಗಿದೆ. ನಿರಂತರ ಪ್ರಯತ್ನದ ಫಲವಾಗಿ ಇಂದು ನೂತನ ಕಟ್ಟಡದ ಕನಸು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಕಳೆದ ವರ್ಷದಲ್ಲಿ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳಿಂದ ದೂರು ಬಂದಿತ್ತು. ಮಹಿಳಾ ಕಾಲೇಜಿನ ತರಗತಿಯ ಕೊಠಡಿಗಳು ಸೋರುತಿವೆ, ಮಕ್ಕಳಿಗೆ ಕುಳಿತುಕೊಳ್ಳಲು ಜಾಗವಿಲ್ಲದ ಪರಿಸ್ಥಿತಿಯು ಬಂದಿದೆ ಎಂದಾಗ ತಕ್ಷಣ ಕ್ರಮವಹಿಸಿ, ಪರ್ಯಾಯ ವ್ಯವಸ್ಥೆ ಮಾಡಲಾಯಿತು. ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಸಚಿವರು ಅಭಯ ನೀಡಿ, ಆರ್ಥಿಕ ಅನುಮೋದನೆ ಕೊಡಿಸಿದರು. ಅದೇ ರೀತಿಯಲ್ಲಿ ಈ ವರ್ಷ ನೂತನ ಕಟ್ಟಡದ ಭೂಮಿ ಪೂಜೆ ಹಾಗೂ ಅಡಿಗಲ್ಲು ಸಮಾರಂಭದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಈ ದಿನಮಾನಗಳಲ್ಲಿ ಹೆಣ್ಣು ಮಕ್ಕಳು ಸಾಧಕೀಯರಾಗಬೇಕು. ಈಗಿನ ದಿನಗಳಲ್ಲಿ ಹೆಣ್ಣು ಮಕ್ಕಳು ಪದವಿಯನ್ನು ಪಡೆದುಕೊಂಡು, ವಿದ್ಯಾವಂತರಾಗಿ ಸಮಾಜಕ್ಕೆ ಒಳಿತನ್ನು ಬಯಸಿ, ಉನ್ನತ ಸ್ಥಾನದಲ್ಲಿ ಕೆಲಸ ನಿರ್ವಹಿಸಬೇಕು ಎಂದರು.
ಕಾಲೇಜು ಪ್ರಾಂಶುಪಾಲ ಡಾ.ಎಸ್.ಎಸ್.ಅಂಗಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರ ರಾಮಪ್ಪ ಬಡಿಗೇರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಮಹಾನಗರ ಪೆÇಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಮಹಾನಗರ ಪಾಲಿಕೆ ಸದಸ್ಯರಾದ ಸುರೇಶ ಬೆದ್ರೆ, ಡಾ.ಮಯೂರ ಮೋರೆ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ ಹೊಸಮನಿ ಸೇರಿದಂತೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಕಾಲೇಜು ಅಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.