ಬಸವಕಲ್ಯಾಣ ನಗರದಿಂದ ನಾರಾಯಣಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ನಿರ್ಮಿಸಿದ ಸೇತುವೆ ಮೇಲೆ ದೊಡ್ಡ ಪ್ರಮಾಣದ ತಗ್ಗು-ಗುಂಡಿಗಳು ಬಿದ್ದಿದ್ದು, ಸಂಚಾರಕ್ಕೆ ಸರ್ಕಸ್ ಮಾಡುವಂತಾಗಿದೆ.
ಕಳೆದ ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸೇತುವೆ ಶಿಥಿಲಗೊಂಡಿದ್ದು, ಸವಾರರು ಭಯದಿಂದ ಓಡಾಡುವಂತಾಗಿದೆ. ಕೂಡಲೇ ನೂತನ ಸೇತುವೆ ನಿರ್ಮಿಸಿ ಪ್ರಯಾಣಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಾಹನ ಸವಾರರು ಸೇತುವೆ ಮೇಲಿಂದ ಆಯ ತಪ್ಪಿ ಬಿದ್ದರೆ ಕಾಲುವೆ ಪಾಲಾಗುವಂತಾಗಿದೆ. ಕಾಂಕ್ರಿಟ್ ಸೇತುವೆ ಮೇಲೆ ಸತತ ನೀರು ನಿಲ್ಲುವುದರಿಂದ ಸೇತುವೆ ಕುಸಿದು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆಯನ್ನು ಇತ್ಯರ್ಥಪಡಿಸಲಿ ಎಂದು ಸಾಮಾಜಿಕ ಕಾರ್ಯಕರ್ತ ಆಕಾಶ ಖಂಡಾಳೆ ಆಗ್ರಹಿಸಿದ್ದಾರೆ.
ವಿಷಯ ಗಮನಕ್ಕೆ ಬಂದ ಬಳಿಕ ಬಸವಕಲ್ಯಾಣ ನಗರಸಭೆಯ ಇಂಜಿನಿಯರ್ ಸಂಜು ಚವ್ಹಾಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಭಾರಿ ಮಳೆಯಿಂದಾಗಿ ಸೇತುವೆ ಮೇಲೆ ಬೃಹತ್ ಗುಂಡಿ ಬಿದ್ದಿರುವ ಸುತ್ತ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದು ಹೇಳಿದರು.