ಪ್ರಸವ ಪೂರ್ವದಲ್ಲಿ ಭ್ರೂಣಲಿಂಗಪತ್ತೆ ಮಾಡುವುದು ಕಾನೂನು ಬಾಹಿರವಾಗಿದೆ. ಮತ್ತು ಸಮಾಜದಲ್ಲಿ ಗಂಡು, ಹೆಣ್ಣು ಎನ್ನುವ ಲಿಂಗ ತಾರತಮ್ಯಕ್ಕೆ ಕಾರಣವಾಗುತ್ತದೆ. ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್ ಸೂಚನೆ ನೀಡಿದರು.
ಬುಧವಾರ ದಾವಣಗೆರೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆದ ಪಿ.ಸಿ ಮತ್ತು ಪಿಎನ್‍ಡಿಟಿ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು “ಭ್ರೂಣಲಿಂಗಪತ್ತೆ ಮಾಡುವುದು ಕಾನೂನು ಬಾಹಿರವಾಗಿದೆ. ಆದರೂ ಸಹ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಲಿಂಗಪತ್ತೆಯಂತಹ ಕೃತ್ಯಗಳು ನಡೆಯುತ್ತಿರುವ ವರದಿಯನ್ನು ಗಮನಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಲಿಂಗಪತ್ತೆ ಮಾಡಿ ಭ್ರೂಣಹತ್ಯೆಗೆ ಸಹಕಾರ ನೀಡುವಂತಹ ಕೆಲಸವನ್ನು ಯಾವುದೇ ವೈದ್ಯರು ಮಾಡಬಾರದು” ಎಂದು ಎಚ್ಚರಿಸಿದರು.
ಮುಂದಿನ ದಿನಗಳಲ್ಲಿ ಸ್ಕ್ಯಾನಿಂಗ್ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ. ಒಂದು ವೇಳೆ ನಿಯಮಬಾಹಿರವಾಗಿ ಸ್ಕ್ಯಾನಿಂಗ್ ಮಾಡುತ್ತಿದ್ದಲ್ಲಿ, ಅಂತಹ ಕೇಂದ್ರಗಳ ಪರವಾನಗಿ ರದ್ದು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಜಿಲ್ಲೆಯ ಎಲ್ಲಾ ಸ್ಕ್ಯಾನಿಂಗ್ ಕೇಂದ್ರಗಳು ಜಿಲ್ಲಾ ಮಟ್ಟದ ಸಲಹಾ ಸಮಿತಿಯಿಂದ ಅನುಮೋದನೆ ಪಡೆದುಕೊಂಡು ಪ್ರಾರಂಭಿಸಬೇಕು. ಆದರೆ ಕೆಲವು ಸೆಂಟರ್ ಗಳಿಗೆ ಅನುಮೋದನೆ ನೀಡಿ ನಂತರ ಸಮಿತಿಯಿಂದ ಘಟನೋತ್ತರ ಅನುಮತಿ ಪಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ನೀಡುವುದಿಲ್ಲ. ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಕಡ್ಡಾಯವಾಗಿ ರೇಡಿಯೋಲಾಜಿಸ್ಟ್ ವೈದ್ಯರು ಇರಲೇಬೇಕು ಮತ್ತು ಯಾವುದೇ ಕಾರಣಕ್ಕೂ ತಾಂತ್ರಿಕ ಸಹಾಯಕರು ಸ್ಕ್ಯಾನಿಂಗ್ ಮಾಡುವಂತಿಲ್ಲ, ಸ್ಕ್ಯಾನಿಂಗ್ ದರಗಳನ್ನು ಆಯಾ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶನ ಮಾಡಬೇಕು” ಎಂದು ಸೂಚಿಸಿದರು.
ರಾಜ್ಯದಲ್ಲಿ ನವಜಾತ ಶಿಶುಗಳ ಜನನದ ಲಿಂಗಾನುಪಾತದಲ್ಲಿ ದಾವಣಗೆರೆ ಜಿಲ್ಲೆ 2 ನೇ ಸ್ಥಾನದಲ್ಲಿದೆ. 2024 ರ ಏಪ್ರಿಲ್ ನಿಂದ 2025 ರ ಮಾರ್ಚ್ ವರೆಗಿನ ಅಂಕಿಅಂಶಗಳನ್ವಯ 21938 ನವಜಾತ ಶಿಶುಗಳ ಜನನವಾಗಿದ್ದು ಇದರಲ್ಲಿ 10765 ಹೆಣ್ಣು ಮತ್ತು 11173 ಗಂಡು ಮಗುವಿನ ಜನನವಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ 7 ಮತ್ತು ಖಾಸಗಿ ಮತ್ತು ಇತರೆ ಸಂಸ್ಥೆಗಳಲ್ಲಿ 125 ಸೇರಿ ಒಟ್ಟು 132 ಸ್ಕ್ಯಾನಿಂಗ್ ಕೇಂದ್ರಗಳಿವೆ. ಇದರಲ್ಲಿ ಪ್ರಸ್ತುತ 113 ಕಾರ್ಯನಿರ್ವಹಿಸುತ್ತಿವೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮೈಸೂರಿನಲ್ಲಿ ಕ್ರಾಂತಿಕಾರಿ ರಥಯಾತ್ರೆ ಹೋರಾಟಗಾರರ ಬಂಧನ. ದಲಿತ ಸಂಘಟನೆಗಳ ಒಕ್ಕೂಟ ಖಂಡನೆ.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಮಕ್ಕಳ ತಜ್ಞ ಹಾಗೂ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಎನ್.ಕೆ.ಕಾಳಪ್ಪನವರ್, ಜಿಲ್ಲಾ ಸಲಹಾ ಸಮಿತಿ ನೋಡಲ್ ಅಧಿಕಾರಿ ಡಾ. ರುದ್ರಸ್ವಾಮಿ ಎಂ.ಕೆ, ಹಿಮೋಪೋಲಿಯೋ ಸೊಸೈಟಿ ಡಾ. ಮೀರಾ ಹನಗವಾಡಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ. ಪ್ರವೀಣ ಎಸ್.ಎನ್, ಚಿಗಟೇರಿ ಆಸ್ಪತ್ರೆ ರೇಡಿಯೋಲಾಜಿಸ್ಟ್ ಡಾ. ಸುಮಿತ್ರ ಎಲ್ ಉಪಸ್ಥಿತರಿದ್ದರು.