‘ವಾರಕರಿ ಚಳವಳಿ’ಯ ಮೇಲೆ ಶರಣ ಧರ್ಮದ ಪ್ರಭಾವ

Date:

Advertisements

ಶಿವ ಸಂಸ್ಕೃತಿಯು ಸಂಪೂರ್ಣ ನಾಶವಾಗದಿದ್ದಾಗ ಆರ್ಯನ್ನರು ಶಿವನ ಮೂಲ ಸ್ವರೂಪವನ್ನು ಬದಲಾಯಿಸಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಹುಜನ ನಾಯಕ ಶಿವನ ಮೂಲ ಸ್ವರೂಪದಲ್ಲಿ ವೈದಿಕ ಬ್ರಾಹ್ಮಣರು ಮಾಡಿದ ತಿರುಚುವಿಕೆ ಹಾಗೂ ಬದಲಾವಣೆಗಳ ಬಗ್ಗೆ ತಮ್ಮ ‘ಹಿಂದೂ ಧರ್ಮದ ಒಗಟುಗಳು’ ಎಂಬ ಗ್ರಂಥದಲ್ಲಿ ವಿವರವಾಗಿ ಬರೆದಿದ್ದಾರೆ. ಮಹಾರಾಷ್ಟ್ರವಂತೂ ಶಿವ ಸಂಸ್ಕೃತಿಯ ನೆಚ್ಚಿನ ನೆಲ. ಅಲ್ಲಿ ಮಹಾದೇವನ ಗುಡಿ ಇಲ್ಲದ ಊರುಗಳೇ ಇಲ್ಲ.

ಭಾರತವು ಪೂರ್ವದಿಂದ ಸಿಂಧೂ ಕಣಿವೆಯ ಶಿವ-ದ್ರಾವಿಡ ಸಂಸ್ಚೃತಿಯ ನೆಲೆವೀಡು. ಇಲ್ಲಿನ ಜನರಿಗೆ ದೇವೆಂದ್ರ ಆಗಲಿˌ ಶ್ರೀರಾಮಚಂದ್ರರಾಗಲಿ ಗೊತ್ತಿರಲಿಲ್ಲ. ಕೃಷ್ಣ, ಪಾಂಡವರ ಹೆಸರು ಇವರಾರೂ ಕೇಳಿರಲಿಲ್ಲ. ಆಗ ಈ ನೆಲಲ್ಲಿ ಇದ್ದದ್ದು ಒಂದೇ ಧ್ವನಿ ಅದು “ಶಿವ ಶಿವ ಶಂಭೋ. ಹಿಂದೂ ಬಹುಜನರ ಪೂರ್ವಜರ ಸಂಸ್ಕೃತಿಯಲ್ಲಿ ‘ಶಿವ’ ಅಥವಾ ‘ಶಂಕರ್’ ಬಹಳ ಮಹತ್ವದ ಹೆಸರು. ಆರ್ಯ ವೈದಿಕರ ದೇವರು ದೇವೇಂದ್ರ. ವೇದಪೂರ್ವದಲ್ಲಿ ಈ ಇಂದ್ರನ ಅಸ್ತಿತ್ವದ ಕುರಿತು ಯಾವುದೇ ಪುರಾವೆಗಳು ಲಭ್ಯವಿಲ್ಲ. ವೇದಕಾಲದ ನಂತರ ರಾಮಾಯಣ-ಮಹಾಭಾರತ ಕಥೆಗಳು ಸೃಷ್ಟಿಯಾದವು. ಅವೆಲ್ಲವುಕ್ಕಿಂತ ಮೊದಲು ಈ ನೆಲದಲ್ಲಿ ಇದ್ದದ್ದು ಆದಿಯೋಗಿ ಶಿವ ಮಾತ್ರ. ಬಹು ಹಿಂದಿನಿಂದ ನಮ್ಮ ದೇಶದ ಹಳ್ಳಿಗಾಡಿನ ಜನರು ಶಿವನನ್ನು ಭಕ್ತಿಯಿಂದ ಪೂಜಿಸುತ್ತಾ ಬಂದಿದ್ದಾರೆ. ಆ ಕಾರಣದಿಂದ ದೇಶದ ಪ್ರತಿ ಹಳ್ಳಿಯಲ್ಲೂ ಮಹಾದೇವನ ದೇವಾಲಯಗಳು ಕಾಣಸಿಗುತ್ತವೆ. ರೈತನ ಸಂಗಾತಿಯಾಗಿರುಮ ಎತ್ತನ್ನು ನಂದಿ ರೂಪದಲ್ಲಿ ವಸ್ತ್ರಧಾರಿಯಾಗಿಸಿ ಪ್ರತಿ ದೇವಾಲಯದ ಹೊರಗೆ ಕುಳ್ಳಿರಿಸಿದ್ದಾರೆ. ಶಿವನಿಗೆ ಪೂಜೆ, ಅರ್ಚನೆ, ಆರಾಧನೆ, ನೈವೇದ್ಯಗಳ ಅಗತ್ಯವಿಲ್ಲ. ‘ಶಂಭೋ’ ಎನ್ನುತ್ತಾ ಬಿಲ್ವಪತ್ರೆ ಅರ್ಪಿಸಿ, ಕರ್ಪೂರವನ್ನು ಬೆಳಗಿದರೆ ಸಾಕು.

ವೈದಿಕರ ಆಚರಣೆಗಳು, ಅಗ್ನಿ ಆರಾಧನೆ ಮತ್ತು ಯಜ್ಞ-ಯಾಗಗಳನ್ನು ಶಿವ ವಿರೋಧಿಸುತ್ತಿದ್ದ. ಈ ನೆಲದ ಹಿಂದೂ ಅಥವಾ ಸಿಂಧೂ ಸಂಸ್ಕೃತಿಯಲ್ಲಿ ವೈದಿಕೇತರ ಬಹುಜನರ ಮಹಾನಾಯಕನಾಗಿ ಶಿವ ಗುರುತಿಸಿಕೊಂಡಿದ್ದ. ಶಿವ ಈ ನೆಲದ ಪ್ರತಿ ಕಣದಲ್ಲಿ ಹಾಸುಹೊಕ್ಕಾಗಿ ಹರಡಿಕೊಂಡಿದ್ದ. ಅದನ್ನು ಸುಳ್ಳುಮಾಡಲು ವಲಸಿಗ ಆರ್ಯ ವೈದಿಕರು ಶಿವ ಪಾರಮ್ಯವನ್ನು ಭಂಜಿಸುವ ದೇವ-ದಾನವರ ಕತೆಗಳನ್ನು ಸೃಷ್ಟಿಸಿದರು. ಈ ಎಲ್ಲಾ ಕಾಲ್ಪನಿಕ ಪುರಾಣದ ಕತೆಗಳಲ್ಲಿ ಶಿವಭಕ್ತರನ್ನು ರಾಕ್ಷಸರಂತೆ ಚಿತ್ರಿಸಿ ಅವರನ್ನು ಹರಿಯಿಂದ ಹತ್ಯೆ ಮಾಡಿಸಲಾಗಿದೆ. ಶಿವ ಸಂಸ್ಕೃತಿಯು ಸಂಪೂರ್ಣ ನಾಶವಾಗದಿದ್ದಾಗ ಆರ್ಯನ್ನರು ಶಿವನ ಮೂಲ ಸ್ವರೂಪವನ್ನು ಬದಲಾಯಿಸಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಹುಜನ ನಾಯಕ ಶಿವನ ಮೂಲ ಸ್ವರೂಪದಲ್ಲಿ ವೈದಿಕ ಬ್ರಾಹ್ಮಣರು ಮಾಡಿದ ತಿರುಚುವಿಕೆ ಹಾಗೂ ಬದಲಾವಣೆಗಳ ಬಗ್ಗೆ ತಮ್ಮ ‘ಹಿಂದೂ ಧರ್ಮದ ಒಗಟುಗಳು’ ಎಂಬ ಗ್ರಂಥದಲ್ಲಿ ವಿವರವಾಗಿ ಬರೆದಿದ್ದಾರೆ. ಮಹಾರಾಷ್ಟ್ರವಂತೂ ಶಿವ ಸಂಸ್ಕೃತಿಯ ನೆಚ್ಚಿನ ನೆಲ. ಅಲ್ಲಿ ಮಹಾದೇವನ ಗುಡಿ ಇಲ್ಲದ ಊರುಗಳೇ ಇಲ್ಲ. ಹನ್ನೆರಡು ಜೋತಿರ್ಲಿಂಗಗಳಲ್ಲಿ ಭೀಮಾಶಂಕರ, ಘೃಷ್ಣೇಶ್ವರ ಮತ್ತು ತ್ರಯಂಬಕೇಶ್ವರ ಮೂರು ದೇಗುಲಗಳು ಮಹಾರಾಷ್ಟ್ರದಲ್ಲಿರುವುದು ವಿಶೇಷ.

Advertisements

ಅಲ್ಲದೆˌ ಪರಳಿಯ ವೈದ್ಯನಾಥˌ ಔಂಧದ ನಾಗನಾಥ ಮತ್ತು ಶಿಗಣಾಪುರದ ಮಹಾದೇವ ದೇವಾಲಯಗಳು ಅತ್ಯಂತ ಜನಪ್ರೀಯ ಶಿವ ದೇಗುಲಗಳು. ಮಹಾರಾಷ್ಟ್ರದ ಜೀವನ ಪದ್ದತಿಯು ಒಂದು ಕಾಲಕ್ಕೆ ಶಿವಮಯವಾಗಿತ್ತು. ಮಹಾಯುದ್ಧಗಳಲ್ಲಿ ಯೋಧರಿಗೆ ಶಕ್ತಿ, ಸ್ಫೂರ್ತಿ ಮತ್ತು ಚೈತನ್ಯವನ್ನು ನೀಡಲು ಛತ್ರಪತಿ ಶಿವಾಜಿ ಮಹಾರಾಜರ ಘೋಷಣೆ ‘ಹರ್ ಹರ್ ಮಹಾದೇವ್’ ಆಗಿತ್ತು. ಇಂದಿಗೂ ಅನೇಕ ಜಾನಪದ ಕಲೆಗಳ ಪ್ರದರ್ಶನ ಪ್ರಾರಂಭಿಸುವಾಗ ಶಿವನನ್ನು ಸ್ತುತಿಸಲಾಗುತ್ತದೆ. ಅದು ಗೋಂಧಳಿ, ವಾಸುದೇವ, ಆರಾಧಿ, ಭಾರೂಡ, ಚಿತ್ರಕತಿ ಈ ಎಲ್ಲಾ ಪೂಜಾ ಕತಾ ಪಠಣದ ಮೊದಲು ಶಿವನಿಗೆ ನಮನ ಸಲ್ಲಿಸಲಾಗುತ್ತದೆ. ಅಷ್ಟೇ ಅಲ್ಲದೆ, ಮಹಾರಾಷ್ಟ್ರದ ಜನಪ್ರಿಯ ಜನಪದ ಕಥಾ ನೃತ್ಯ ‘ತಮಾಷ’ ದಲ್ಲಿಯೂ ಸಹ ಶಿವನ ಮಹಿಮೆಯನ್ನು”ಓ ಶಿವಶಂಕರˌ ಗಿರಿಜಾತನಯ ಗಣನಾಯಕ ಪ್ರಭುವರ” ಎಂದು ಹಾಡಲಾಗುತ್ತದೆ. ಮಹಾರಾಷ್ಟ್ರವು ಒಂದು ಕಾಲದಲ್ಲಿ ನಾಥಪಂಥೀಯರು, ಸಿದ್ಧರು, ಶೈವರ ಬೀಡಾಗಿತ್ತು. ಕಾಲಾನಂತರದಲ್ಲಿ ಚಿತ್ಪಾವನ ಬ್ರಾಹ್ಮಣರ ಆಕ್ರಮಣಕಾರಿ ಪ್ರಭಾವದಿಂದ ವಿಷ್ಣು ˌ ಗಣಪತಿ, ಪರಶುರಾಮ ಹಾಗೂ ಇತರ ವೈಷ್ಣವ ದೇವರುಗಳ ಆರಾಧಾನೆ ಆರಂಭವಾಗಿ ಶಿವ ಪಾರಮ್ಯ ಕ್ರಮೇಣವಾಗಿ ಕ್ಷಿಣಿಸಿತು. ರಾಜಾ ಶಿವಾಜಿಯ ಪ್ರಾಬಲ್ಯ ತಗ್ಗಿಸಲೆಂದೆ ಚಿತ್ಪಾವನರು ಸಾರ್ವಜನಿಕ ಗಣೇಶ ಚತುರ್ಥಿಯನ್ನು ಆರಂಭಿಸಿದರು.

warakari2

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದ ವಚನ ಚಳವಳಿ ಪಕ್ಕದ ಮಹಾರಾಷ್ಟ್ರದ ವೈಚಾರಿಕ ಮನಸ್ಸುಗಳನ್ನು ಘಾಡವಾಗಿ ಪ್ರಭಾವಿಸಿತು. ಗಂಗಾ ಬಯಲಿನಲ್ಲಿ ಬುದ್ದನಿಂದ ಆರಂಭಗೊಂಡ ಈ ವೈದಿಕ ವಿರೋಧಿ ವೈಚಾರಿಕ ಆಂದೋಲನ ಕಲ್ಯಾಣದಲ್ಲಿ ಪುನಃ ಹುಟ್ಟಿ ಮುಂದೆ ಮಹಾರಾಷ್ಟ್ರದಲ್ಲಿ ವಾರಕರಿ ಚಳವಳಿಯ ಮೂಲಕ ಬೆಳೆಯಿತು. ಆಮೇಲೆ ಅದು ಉತ್ತರದ ರವಿದಾಸ ಮತ್ತು ಕಬೀರದಾಸರನ್ನು ಪ್ರಭಾವಿಸಿ ಕೊನೆಗೆ ಪಂಜಾಬಿನಲ್ಲಿ ಸಿಖ್ ಧರ್ಮದ ಉದಯದೊಂದಿಗೆ ಕೊನೆಗೊಂಡಿತು. ಇಂದಿಗೂ ವಾರಕರಿ ಚಳವಳಿಯ ಮಹಾನ್ ಸಂತ ನಾಮದೇವನನ್ನು ಸಿಖ್‌ ವಿಶೇಷವಾಗಿ ಸ್ಮರಿಸಿಕೊಳ್ಳುತ್ತಾರೆ. ಶಿವ ಸಂಸ್ಕೃತಿಯ ಮಹಾರಾಷ್ಟ್ರದ ನೆಲದಲ್ಲಿ ಹರಿ ಸಂಸ್ಕೃತಿ ಅಟ್ಟಹಾಸದ ವಿರುದ್ಧ ಅಲ್ಲಿ ಪ್ರತಿರೋಧದ ಚಳವಳಿ ಅನಿವಾರ್ಯವಾಗಿತ್ತು. ವಿಷ್ಣು ಭಕ್ತಿಯನ್ನೆ ದಾಳವಾಗಿಟ್ಟುಕೊಂಡು ಬ್ರಾಹ್ಮಣ ಪ್ರಾಬಲ್ಯವನ್ನು ಹಿಮ್ಮೆಟ್ಟಿಸಲು ವಾರಕರಿ ಚಳವಳಿ ಹುಟ್ಟಿಕೊಂಡು ಜಾತ್ಯತೀತ ಭಾಗವತ ಪಂತವನ್ನು ಆರಂಭಿಸಿತು. ಈ ಚಳವಳಿ ಯಾವಾಗ ಆರಂಭವಾಯಿತು ಎನ್ನುವ ಕುರಿತು ಸ್ಪಷ್ಟವಾದ ದಾಖಲೆಗಳು ಲಭ್ಯವಿಲ್ಲ. ಅದು ಪುಂಡಲೀಕ ಮತ್ತು ಪಾಂಡುರಂಗರಿಂದ ಆರಂಭವಾಯಿತು ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ಆದರೆ ಅವರಿಬ್ಬರ ಕಾಲಘಟ್ಟ ಯಾವುದು ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ವಾರಕರಿ ಚಳವಳಿ ತೀವ್ರವಾಗಿ ಪ್ರವರ್ಧಮಾನಕ್ಕೆ ಬಂದದ್ದು ಸಂತ ನಾಮದೇವನ ಕಾಲಘಟ್ಟದಲ್ಲಿ. ನಾಮದೇವನ ಜೊತೆಗೆ ಸಂತ ಜ್ಞಾನದೇವˌ ಗೊರ ಕುಂಬಾರˌ ಸಂತ ತುಕಾರಾಮ ಹಾಗೂ ಸಂತ ವಿಸೋಬಾ ಖೇಚರ ವಾರಕರಿ ಚಳವಳಿಯನ್ನು ಕಟ್ಟಿದವರಲ್ಲಿ ಪ್ರಮುಖರು. ಸಂತ ನಾಮದೇವ ಬಸವಕಲ್ಯಾಣದೊಂದಿದೆ ಹೊಂದಿದ್ದ ರಕ್ತ ಸಂಬಂಧವು ಆತನ ಮೇಲೆ ಕಲ್ಯಾಣದಲ್ಲಿ ಘಟಿಸಿದ ವಚನ ಚಳವಳಿಯ ಪ್ರಭಾವಕ್ಕೆ ಕಾರಣವಾಯಿತು. ಸಂತ ನಾಮದೇವನ ಗುರು ಸಂತ ವಿಸೋಬಾ ಖೇಚರ ಕೂಡ ಶರಣ ಚಳವಳಿಯಿಂದ ಪ್ರಭಾವಿತನಾಗಿರಬಹುದು ಎನ್ನುವ ಕುರಿತು ಇಂದು ಚರ್ಚೆಗಳು ಆರಂಭಗೊಂಡಿವೆ. ಮಹಾರಾಷ್ಟ್ರದಲ್ಲಿ ಇಂದು ಶರಣ ಚಳುವಳಿಯ ಅಧ್ಯಯನಕಾರರು ಈ ಕುರಿತು ಹೆಚ್ಚಿನ ಅಧ್ಯಯನವನ್ನು ಮಾಡುತ್ತಿದ್ದಾರೆ. ಸೊಲಾಪುರದ ನನ್ನ ಸ್ನೇಹಿತ ಚನ್ನವೀರ ಭದ್ರೇಶ್ವರಮಠ ಅವರು ಈ ಕುರಿತು ಅನೇಕ ಲೇಖನಗಳನ್ನು ಬರೆದಿದ್ದಾರೆ. ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯತೆಯನ್ನು ಅವರು ಪ್ರತಿಪಾದಿಸಿದ್ದಾರೆ. ಏಕೆಂದರೆ ಬ್ರಾಹ್ಮಣ ಪ್ರಾಬಲ್ಯದ ವಿರುದ್ಧ ಹುಟ್ಟಿದ ವಾರಕರಿ ಚಳವಳಿಯು ಖಂಡಿತ ಶರಣ ಚಳವಳಿಯ ಪ್ರಭಾವಕ್ಕೆ ಒಳಗಾಗಿರಲೆಬೇಕು ಎನ್ನುವುದು ಅವರ ವಾದ.

ನಾಮದೇವ್‌
ನಾಮದೇವ ಮಹಾರಾಜ

ಹದಿಮೂರನೇ ಶತಮಾನದ ಪೂರ್ವಾರ್ಧದಲ್ಲಿ ಆರಂಭವಾದ ವಾರಕರಿ ಚಳವಳಿ ವಚನ ಚಳವಳಿಯ ಕಾಲಘಟ್ಟಕ್ಕೆ ಅತ್ಯಂತ ಹತ್ತಿರದ ಸಮಕಾಲೀನ ಚಳವಳಿಯಾಗಿದೆ. ಶರಣ ಚಳವಳಿಯಲ್ಲಿ ಮಹಾರಾಷ್ಟ್ರದ ಅನೇಕ ಶರಣರು ಭಾಗವಹಿಸಿದ್ದರು. ಶಿವಯೋಗಿ ಸಿದ್ಧರಾಮ,ˌದಾನಮ್ಮ, ಗಜೇಶ ಮಸಣಯ್ಯ, ಉರಿಲಿಂಗದೇವ, ಮತ್ತು ಆತನ ಶಿಷ್ಯ ಉರಿಲಿಂಗಪೆದ್ದಿ ಹೀಗೆ ಅನೇಕ ಶರಣರು ನಮಗೆ ನೆನಪಾಗುತ್ತಾರೆ. ನಾಂದೇಡ್ ಜಿಲ್ಲೆಯ ಕಂಧಾರ ಗ್ರಾಮದ ಉರಿಲಿಂಗದೇವ ಮತ್ತು ಆತನ ಶಿಷ್ಯ ಉರಿಲಿಂಗಪೆದ್ದಿ ಇವರಿಬ್ಬರ ವಚನಗಳ ಅಂಕಿತವು “ವಿಶ್ವನಾಥ” ಎಂದಿದೆ. ಸಂತ ವಿಸೋಬಾ ಖೇಚರ ಅವರ ಮೂಲ ಹೆಸರು ಕೂಡ ವಿಶ್ವನಾಥ ಸ್ವಾಮಿ ಆಗಿತ್ತು ಹಾಗೂ ಆತ ಲಿಂಗಾಯತ ಧರ್ಮಕ್ಕೆ ಸೇರಿದವನಾಗಿದ್ದ ಎನ್ನುವ ಊಹೆಗಳಿವೆ. ಸಂತ ವಿಸೋಬಾ ಖೇಚರ ಸಂತ ನಾಮದೇವನ ಗುರುವಾಗಿದ್ದ. ನಾಮದೇವ ಹಿಂದುಳಿದ ಶೂದ್ರ ವರ್ಗದ ಸಿಂಪಿ ಸಮಾಜಕ್ಕೆ ಸೇರಿದವನು. ಆತ ಔಂಧ ನಾಗನಾಥನ ಪರಮ ಭಕ್ತನಾಗಿದ್ದನು. ಆದರೆ ಶೂದ್ರತ್ವದ ದೆಸೆಯಿಂದ ಆತನಿಗೆ ನಾಗನಾಥನ ದರ್ಶನಕ್ಕಾಗಲಿˌ ಮಂದಿರ ಪರಿಸರದಲ್ಲಿ ಕೀರ್ತನೆ ಮಾಡುವುದಕ್ಕಾಗಲಿ ಬ್ರಾಹ್ಮಣ ಅರ್ಚಕರು ಬಿಡುತ್ತಿರಲಿಲ್ಲ. ಒಮ್ಮೆ ನಾಮದೇವ ಮಂದಿರದ ಎದುರಿಗೆ ಕೀರ್ತನೆ ಮಾಡಲು ಸಿದ್ಧತೆ ಮಾಡಿಕೊಂಡಾಗ ಅನುಮತಿ ನಿರಾಕರಿಸಲಾಗಿ ಆತ ಮಂದಿರದ ಹಿಂಬದಿಯಲ್ಲಿ ಕೀರ್ತನೆ ಮಾಡಬೇಕಾಯಿತು.

ನಾಮದೇವನ ಕೀರ್ತನೆಯಿಂದ ಪ್ರಸನ್ನನಾದ ನಾಗನಾಥ ತಮ್ಮ ಮುಖವನ್ನು ಮಂದಿರದ ಹಿಂಭಾಗಕ್ಕೆ ತಿರುಗಿಸಿದ ಎನ್ನುವ ಕತೆಯಿದೆ. ಇದು ನಮ್ಮ ಉಡುಪಿಯ ಸಂತ ಕನಕದಾಸದ ಕತೆಯನ್ನು ಹೋಲುತ್ತದೆ. ನಾಗನಾಥ ಮಂದಿರವು ಮಹಾರಾಷ್ಟ್ರದ ಇಂದಿನ ಹಿಂಗೋಳಿ ಜಿಲ್ಲೆಯ ಔಂಧ್ ಗ್ರಾಮದಲ್ಲಿದೆ. ಅದೇ ಪರಿಸರದಲ್ಲಿ ನಾಗನಾಥ ಮಂದಿರದ ಪಶ್ಚಿಮಕ್ಕೆ ಸಂತ ನಾಮದೇವನ ಮಂದಿರ ಹಾಗೂ ಉತ್ತರ ದಿಕ್ಕಿನಲ್ಲಿ ಸಂತ ವಿಸೋಬಾ ಖೇಚರನ ಮಂದಿರಗಳಿವೆ. ಅಲ್ಲಿಯೇ ಲಿಂಗಾಯತರು ನಡೆದುಕೊಳ್ಳುವ ಕೇದಾರ ಪೀಠದ ಶಾಖಾ ಮಠ, ವಿಶ್ವನಾಥ ಮಠ ಕೂಡ ಇದೆ. ವರ್ಷದ ಹನ್ನೆರಡೂ ತಿಂಗಳು ನಾಗನಾಥ ಮಂದಿರ ಭಕ್ತರಿಂದ ತುಂಬಿರುತ್ತದೆ. ಸಂತ ವಿಸೋಬಾ ಖೇಚರನ ಮಂದಿರದಲ್ಲಿ ಯಾವುದೆ ಉತ್ಸವಗಳು ನಡೆಯುವುದಿಲ್ಲ. ಆದರೆ ಆಷಾಡ ಏಕಾದಶಿಯ ಸಂದರ್ಭದಲ್ಲಿ ಉಸ್ಮಾನಾಬಾದ್ ಮತ್ತು ಅಹಮದನಗರ ಜಿಲ್ಲೆಯ ಕೆಲವು ವಾರಕರಿಗಳು ಸಂತ ವಿಸೋಬಾ ಮಂದಿರಕ್ಕೆ ಭೇಟಿ ಕೊಡುತ್ತಾರೆಂದು ಅಲ್ಲಿನ ವ್ಯಾಪಾರಿಗಳು ಹೇಳುತ್ತಾರೆ. ಸಂತ ನಾಮದೇವ ನಾಗನಾಥನನ್ನು ತನ್ನ ಕಡೆಗೆ ತಿರುಗುವಂತೆ ಮಾಡಿದ ಮಹಾನ್ ಸಂತನೆಂದು ಖ್ಯಾತನಾಮನಾಗಿ ಗರ್ವದಿಂದ ಮೆರೆಯುತ್ತಿದ್ದನಂತೆ. ಆತನ ಗರ್ವ ಮುರಿಯಲೆಂದೆ ಸಂತ ವಿಸೋಬಾ ಔಂಧಕ್ಕೆ ಬಂದ ಎನ್ನುವ ಕತೆ ಅಲ್ಲಿ ಜನಜನಿತವಾಗಿದೆ.

ಸಂತ ವಿಸೋಬಾ ಖೇಚರನ ಹಿನ್ನೆಲೆಯ ಕುರಿತು ಮೂರು ಕತೆಗಳು ಪ್ರಚಲಿತದಲ್ಲಿವೆ. ಒಂದು ಕತೆಯ ಪ್ರಕಾರ ವಿಸೋಬಾ ಒಬ್ಬ ಲಿಂಗಾಯತ ಶರಣ ಜಂಗಮನಾಗಿದ್ದ. ಆತ ಅತ್ಯಂತ ಪ್ರಖರ ವಿದ್ವಾಂಸ ಮತ್ತು ವಿಚಾರವಂತನಾಗಿದ್ದ. ಔಂಧ ನಾಗನಾಥನ ಪರಮ ಭಕ್ತನಾಗಿದ್ದ. ಆತನ ಪೂರ್ವಾಶ್ರಮದ ಹೆಸರು ವಿಶ್ವನಾಥ ಸ್ವಾಮಿ ಆಗಿತ್ತು ಹಾಗೂ ಮುಂದೆ ಆತನನ್ನು ವಿಸೋಬಾ ಎಂದು ಕರೆಯಲಾಯಿತು. ಆತನ ಜ್ಞಾನವನ್ನು ಕಂಡು ಬೆರಗಾದ ಸಂತ ಜ್ಞಾನದೇವ ಮತ್ತು ಆತನ ಸಹೋದರಿ ಮುಕ್ತಾಯಿ ಇಬ್ಬರೂ ನಾಗನಾಥ ಲಿಂಗವೇ ಮುಖ ತಿರುಗುವಂತೆ ಮಾಡಿದ್ದೇನೆಂದು ಮೆರೆಯುತ್ತಿದ್ದ ನಾಮದೇವನ ಗರ್ವ ಮುರಿಯಲು ವಿಸೋಬಾ ಸೂಕ್ತವೆಂದು ಗ್ರಹಿಸಿ ಆತನನ್ನು ಔಂಧಕ್ಕೆ ಕಳುಹಿಸಿದರು. ನಾಗನಾಥ ಲಿಂಗದ ಮೇಲೆ ಕಾಲಿಟ್ಟು ಮಲಗಿದ ವಿಸೋಬಾನನ್ನು ನಾಮದೇವ ತರಾಟೆಗೆ ತೆಗೆದುಕೊಂಡ. ದೇವರಿಲ್ಲದ ಜಾಗದಲ್ಲಿ ನನ್ನ ಕಾಲು ಇರಿಸು ಎಂದು ವಿಸೋಬಾ ಕೇಳಿಕೊಂಡಾಗ ವಿಸೋಬಾನ ಕಾಲು ಎತ್ತಿಟ್ಟಲ್ಲೆಲ್ಲ ನಾಮದೇವನಿಗೆ ಶಿವಲಿಂಗಗಳೆ ಕಂಡವು. ಇದರಿಂದ ಶರಣಾಗತನಾದ ನಾಮದೇವ ವಿಸೋಬಾನ ಶಿಷ್ಯತ್ವ ಸ್ವೀಕರಿಸಿದ. ಎರಡನೇ ಕತೆಯ ಪ್ರಕಾರˌ ವಿಸೋಬಾ ಒಬ್ಬ ಶೂದ್ರ ಲಿಂಗಾಯತನಾಗಿರುವುದರಿಂದ ಆತನಿಗೆ ಬ್ರಾಹ್ಮಣ ಅರ್ಚಕರು ನಾಗನಾಥ ಶಿವಲಿಂಗದ ದರ್ಶನ ಪಡೆಯಲು ಬಿಡಲಿಲ್ಲ. ಆದರಿಂದ ಆತ ದೇಗುಲದ ಒಂದು ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದ.

ಹೀಗೆ ಅನೇಕ ದಿನಗಳಿಂದ ನಾಗನಾಥ ದೇಗುಲದಲ್ಲಿ ಒಂದೇ ಕಡೆ ಕುಳಿತುಕೊಂಡು ವಿಸೋಬಾನ ಕಾಲುಗಳು ಭಾರವಾದವು. ದೇಗುಲದ ಅರ್ಚಕ ಇಲ್ಲದಿರುವ ಸಮಯದಲ್ಲಿ ವಿಸೋಬಾ ತನ್ನ ಕಾಲುಗಳನ್ನು ನಾಗನಾಥ ಲಿಂಗದ ಮೇಲಿಟ್ಟು ವಿಶ್ರಾಂತಿ ಪಡೆಯುತ್ತಿದ್ದ. ಹಾಗೆ ಮಾಡುವುದರಿಂದ ಆತನಿಗೆ ಆರಾಮವೆನ್ನಿಸುತ್ತಿತ್ತು. ಇದನ್ನು ನೋಡಿದ ಸಂತ ನಾಮದೇವನಿಗೆ ಕೋಪ ಬಂತು. ಆತನ ಕಾಲು ಬೇರೆಕಡೆ ಎತ್ತಿಡಲು ಪ್ರಯತ್ನಿಸಿದ. ಆದರೆ ಎಲ್ಲಾ ಕಡೆಗೆ ಶಿವಲಿಂಗಗಳು ಉದ್ಭವವಾದವು. ಕೊನೆಗೆ ನಾಮದೇವ ಶರಣಾಗತನಾಗಿ ವಿಸೋಬಾನ ಶಿಷ್ಯತ್ವ ಸ್ವೀಕರಿಸಿದ. ಮೂರನೆ ಕತೆಯ ಪ್ರಕಾರ ವಿಸೋಬಾ ಬಾರ್ಶಿಯ ನಿವಾಸಿಯಾಗಿದ್ದ. ಮಹಿಪತಿ ವಿರಚಿತ ಭಕ್ತಿವಿಜಯ ಕೃತಿಯ ಪ್ರಕಾರ ವಿಸೋಬಾ ಒಬ್ಬ ಪಾಂಚಾಳ ವಿಶ್ವಕರ್ಮ ಬ್ರಾಹ್ಮಣನಾಗಿದ್ದ. ಆತ ಆಭರಣ ವ್ಯಾಪಾರಿಯಾಗಿದ್ದು ಕಳ್ಳ ಮಾಲುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ. ಒಮ್ಮೆ ಒಬ್ಬ ಬಡ ಕುಂಬಾರನಿಗೆ ತಾನು ಮಾಡಿದ ಮೋಸದಿಂದ ಪಶ್ಚಾತಾಪ ಪಟ್ಟು ತನ್ನಿಡಿ ಆಸ್ತಿಯನ್ನು ದಾನ ಮಾಡಿ ಸನ್ಯಾಸಿಯಾದ. ಔಂಧದ ನಾಗನಾಥನಲ್ಲಿ ಭಕ್ತಿ ಹೊಂದಿ ವಿರಕ್ತವಾಗಿ ನಾಥ ಪಂಥೀಯ ತತ್ವವನ್ನು ಪ್ರಚಾರ ಮಾಡುತ್ತಿದ್ದಾಗ ನಾಗನಾಥ ಮಂದಿರದಲ್ಲಿ ನಡೆದ ಘಟನೆಯಿಂದ ನಾಮದೇವನಿಗೆ ಗುರುವಾದ.

Warkari Feature1

ವಿಸೋಬಾ ಎಂಬ ಹೆಸರು ವಿಷ್ಣು ಎಂಬ ಪದದಿಂದ ಉತ್ಪತ್ತಿಯಾಗಿದೆ ಎಂತಲೂ, ಇದರ ಅರ್ಥ ವಿಶ್ರಾಂತಿ ಪಡೆಯುವುದು ಎಂತಲೂ ಅರ್ಥೈಸಲಾಗುತ್ತದೆ. ಅಂದರೆ ವಿಸೋಬಾ ತನ್ನ ಕಾಲುಗಳನ್ನು ನಾಗನಾಥ ಶಿವಲಿಂಗದ ತಲೆಯ ಮೇಲಿಟ್ಟು ವಿಶ್ರಾಂತಿ ಪಡೆಯುವದಕ್ಕೆ ಸಂಬಂಧಿಸಿದೆ. ಖೇಚರ ಅಂದರೆ ಅಕ್ಷರಶಃ ಗಾಳಿಯಲ್ಲಿ ಚಲಿಸುವವನು ಎಂದಾಗುತ್ತದೆ. ಈ ಖೇಚರ ಪದವು ವೀಸೋಬಾ ಒಬ್ಬ ಸಿದ್ಧ, ಮಾಂತ್ರಿಕ ಶಕ್ತಿಯನ್ನು ಹೊಂದಿರುವ ತಾಂತ್ರಿಕ ಗುರು ಹಾಗೂ ಮಹಾರಾಷ್ಟ್ರದ ನಾಥ ಪಂಥದ ಮಹಾನ್ ನಾಯಕನಾಗಿದ್ದ ಎನ್ನುವುದನ್ನು ವಿವರಿಸುತ್ತದೆ. ಜ್ಞಾನದೇವ ಮತ್ತು ಆತನ ಸಹೋದರಿ ಮುಕ್ತಾಯಿಯನ್ನು ಆರಂಭದಲ್ಲಿ ಸಂತ ವಿಸೋಬಾ ಮುಕ್ತವಾಗಿ ಸ್ವೀಕರಿಸುವುದಿಲ್ಲ. ಇವೆಲ್ಲವನ್ನು ಗಮನಿಸಿದಾಗ ಸಂತ ವಿಸೋಬಾ ಒಬ್ಬ ನಾಥಪಂಥೀಯನಾಗಿದ್ದು ಆತ ಮುಂದೆ ಕಲ್ಯಾಣದ ಶರಣ ಪರಂಪರೆಯಿಂದ ಪ್ರಭಾವಿತನಾದ ಎಂದು ಊಹಿಸಬಹುದಾಗಿದೆ. ಔಂಧದ ನಾಗನಾಥ ದೇವಾಲಯ ಪರಿಸರದಲ್ಲಿ ಕೇದಾರ ಪೀಠದ ಶಾಖಾ ಮಠ ವಿಶ್ವನಾಥ ಮಠವಿರುವುದು ಇದು ಇನ್ನಷ್ಟು ಪುಷ್ಟೀಕರಿಸುತ್ತದೆ. ಸಂತ ವಿಸೋಬಾ ಖೇಚರ ಸಂತ ನಾಮದೇವನ ಗುರುವಾಗಿದ್ದ ಎನ್ನುವ ಸಂಗತಿ ಸಿಖ್ ಧರ್ಮಗ್ರಂಥ ಗುರು ಗ್ರಂಥ ಸಾಹಿಬ್ ನಲ್ಲೂ ದಾಖಲಾಗಿದೆಯಂತೆ.

ಸಂತ ವಿಸೋಬಾ ಖೇಚರ ಕಲ್ಯಾಣದ ಶರಣರಂತೆ ವಿಚಾರವಾದಿಯಾಗಿದ್ದ. ಆತ ವಿಗ್ರಹಾರಾಧನೆಯನ್ನು ಖಂಡಿಸಿಸುತ್ತಿದ್ದ ಮತ್ತು ಕಲ್ಲು ದೇವರ ಪೂಜೆಯನ್ನು ಟೀಕಿಸುತ್ತಿದ್ದ. ಕಲ್ಲು ದೇವರು ಎಂದಿಗೂ ಮಾತನಾಡುವುದಿಲ್ಲ. ಕಲ್ಲಿಗೆ ಜೀವ ಮತ್ತು ಸಂವೇದನೆ ಇಲ್ಲವಾಗಿ ಅದು ಮನುಷ್ಯರ ಲೌಕಿಕದ ರೋಗವನ್ನು ನಿವಾರಿಸಲಾರದು. ಸುತ್ತಿಗೆಯ ಹೊಡೆತಕ್ಕೆ ತುಂಡಾಗುವ ಕಲ್ಲು ದೇವರಾಗುವುದಿಲ್ಲ. ಕಲ್ಲು ದೇವರನ್ನು ಆರಾಧಿಸುವವರು ಮೂರ್ಖರು. ದೇವರಿಲ್ಲದ ಸ್ಥಳವಿಲ್ಲ. ಆತ ಪ್ರತಿಯೊಬ್ಬರ ಹೃದಯದಲ್ಲಿದ್ದಾನೆ ಎನ್ನುವುದು ವಿಸೋಬಾ ಖೇಚರನ ಖಚಿತವಾದ ಬೋಧನೆಯಾಗಿತ್ತು. ವಿಸೋಬಾನ ಚಿಂತನೆಗಳು ಕಲ್ಯಾಣದ ಶರಣರ ಚಿಂತನೆಗೆ ತೀರ ಹತ್ತಿರದಲ್ಲಿವೆ. ವಾರಕರಿ ಚಳವಳಿಯ ನಾಯಕರಾಗಿದ್ದ ಸಂತ ನಾಮದೇವ ಮತ್ತು ಸಂತ ವಿಸೋಬಾ ವಿಶೇಷವಾಗಿ ಇವರಿಬ್ಬರ ಮೇಲೆ ಶರಣ ಚಳುವಳಿಯ ದಟ್ಟ ಪ್ರಭಾವವನ್ನು ನಾವು ಊಹಿಸಬಹುದಾಗಿದೆ. ಈ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ವಿಸೋಬಾ ನಾಥಪಂಥˌ ಸಿದ್ಧ ಪರಂಪರೆˌ ಶೈವ ಪರಂಪರೆˌ ವಾರಕರಿ ಹಾಗೂ ಶರಣ ಪರಂಪರೆಯನ್ನು ಏಕಕಾಲಕ್ಕೆ ಪ್ರತಿನಿಧಿಸಿರುವುದು ಮೇಲ್ನೋಟಕ್ಕೆ ಕಾಣಿಸುತ್ತದೆ.

ಇದನ್ನೂ ಓದಿ ಮುಸ್ಲಿಮರು ರಾಮನ ವಂಶಸ್ಥರು: ಬಿಜೆಪಿ ನಾಯಕ ಹೇಳಿಕೆ

ಮುಂದೆ ಸಂತ ವಿಸೋಬಾ ವಾರಕರಿ ಚಳವಳಿ ಸೇರಿ ಸಂತ ಜ್ಞಾನೇಶ್ವರ ಮತ್ತು ನಾಮದೇವರ ಜೊತೆ ಕೂಡಿದ. 1309ರ ಶ್ರಾವಣ ಮಾಸದಲ್ಲಿ ಕೃಷ್ಣಪಕ್ಷ 11ನೇ ಚಾಂದ್ರಮಾನ ದಿನದ ಶ್ರಾವಣ ಶುದ್ಧ ಏಕಾದಶಿಯಂದು ಬಾರ್ಸಿಯಲ್ಲಿ ಸಂತ ವಿಸೋಬಾ ಲಿಂಗೈಕ್ಯನಾದ ಎನ್ನುತ್ತವೆ ದಾಖಲೆಗಳು. ಆರಂಭದಲ್ಲಿ ನಾಥಪಂಥೀಯನಾಗಿ ಆನಂತರ ವಾರಕರಿ ಸಂತನಾಗಿ ವಾರಕರಿಗಳ ಆರಾಧ್ಯ ದೇವತೆಯಾದ ವಿಠ್ಠಲನನ್ನು ಸ್ತುತಿಸುವ ಅಭಂಗಗಳನ್ನು ಸಂತ ವಿಸೋಬಾ ಬರೆದಿದ್ದಾನೆ. ಜ್ಞಾನದೇವ ಗಾಥದಲ್ಲಿ ಸಂತ ವಿಸೋಬಾ ಖೇಚರನು ಪಂಢರಪುರದಲ್ಲಿ ಗೋಪಾಲ-ಕಲಾ ಉತ್ಸವದಲ್ಲಿ ವಾದ್ಯ ನುಡಿಸುತ್ತಿದ್ದನೆಂದು ಉಲ್ಲೇಖಿಸಲಾಗಿದೆ. ಆಶ್ಚರ್ಯದ ವಿಷಯವೆಂದರೆ ಸಂತ ವಿಸೋಬಾ ಖೇಚರನು ಸತ್ಸ್ಥಲ ಅಥವಾ ‘ಷಡ್ಸ್ಥಲ” ಎಂಬ ಗ್ರಂಥವನ್ನು ಸಹ ಬರೆದಿರುವುದು. ಇದು ಶರಣ ಧರ್ಮದ ಷಟಸ್ಥಲ ಸಿದ್ಧಾಂತವನ್ನು ಹೋಲುತ್ತದೆ ಎನ್ನುವುದು ಇನ್ನೂ ಆಶ್ಚರ್ಯದ ಸಂಗತಿಯಾಗಿದೆ. ಈ ಜಾಡನ್ನು ಹಿಡಿದುಕೊಂಡು ಸಂತ ನಾಮದೇವ ಮತ್ತು ಸಂತ ವಿಸೋಬಾರನ್ನು ಕೇಂದ್ರವಾಗಿಟ್ಟುಕೊಂಡು ವಾರಕರಿ ಚಳುವಳಿಯ ಮೇಲೆ ಶರಣ ಚಳವಳಿಯ ಪ್ರಭಾವದ ಕುರಿತು ಅತ್ಯಂತ ಗಂಭೀರವಾದ ಸಂಶೋಧನೆಯ ಅಗತ್ಯವಿದೆ ಎನ್ನುವುದು ನನ್ನ ಅಭಿಮತವಾಗಿದೆ.

ಶರಣ ಚಿಂತಕ ಜೆ.ಎಸ್.ಪಾಟೀಲ್
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X