ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರೂ ಆದ ಬಿ.ಕೆ. ಹರಿಪ್ರಸಾದ್ ಅವರ ನಿವಾಸಕ್ಕೆ ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಡೀರ್ ಭೇಟಿ ನೀಡಿದ್ದು, ಕರಾವಳಿ ಜಿಲ್ಲೆಗಳ ಪರಿಸ್ಥಿತಿಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ಬಗ್ಗೆ ಈದಿನ ಡಾಟ್ ಕಾಮ್ ಬಿ.ಕೆ. ಹರಿಪ್ರಸಾದ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, “ನಾನೇ ಸಿಎಂ ಸಿದ್ದರಾಮಯ್ಯ ಅವರನ್ನು ಬೆಳಗಿನ ಉಪಾಹಾರಕ್ಕೆ ಆಹ್ವಾನಿಸಿದ್ದೆ. ಭೇಟಿ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಸರಣಿ ಕೊಲೆಗಳು, ಹಿಂಸೆಯ ಘಟನೆಗಳು, ಪ್ರಚೋದನಕಾರಿ ಭಾಷಣಗಳು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಇತ್ಯಾದಿಗಳ ಬಗ್ಗೆ ಸಿಎಂ ಅವರು ನನ್ನ ಜೊತೆ ಚರ್ಚಿಸಿದ್ದಾರೆ” ಎಂದು ತಿಳಿಸಿದರು.
ಮಂಗಳೂರಿಗೆ ಹೋಗಲು ಸಿಎಂ ತಮಗೆ ಸೂಚನೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದಾಗ, “ಮಂಗಳೂರಿಗೆ ತೆರಳಲು ನನಗೆ ಸೂಚನೆ ನೀಡಿಲ್ಲ, ಚರ್ಚಿಸಿದ್ದಾರಷ್ಟೇ. ಹಾಗಾಗಿ, ನಾನು ಮಂಗಳೂರಿಗೆ ಹೋಗುವುದಿಲ್ಲ” ಎಂದು ಈ ದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸುತ್ತಾ ಬಿ ಕೆ ಹರಿಪ್ರಸಾದ್ ತಿಳಿಸಿದರು.
ಕಳೆದ 2023ರ ವಿಧಾನಸಭಾ ಚುನಾವಣೆಯ ಹೊತ್ತಲ್ಲಿ ಬಿ ಕೆ ಹರಿಪ್ರಸಾದ್ ಸಿದ್ದರಾಮಯ್ಯ ಜೊತೆ ಮುನಿಸಿಕೊಂಡಿದ್ದರು. ನಂತರ ಸಿಎಂ ನಿವಾಸಕ್ಕೆ ಹರಿಪ್ರಸಾದ್ ತೆರಳಿ ಚರ್ಚೆ ನಡೆಸಿದ್ದರು. ಅಲ್ಲಿಂದ ಅವರಿಗೆ ಸಂಚಿವ ಸಂಪುಟದಲ್ಲಿ ಅವಕಾಶ ಸಿಗಲಿದೆ ಎಂಬುದು ಚರ್ಚೆಯಾಗುತ್ತಿದೆ. ಆದರೆ, ಈಗ ಅವರು ಹರಿಪ್ರಸಾದ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿರುವುದರಿಂದ ಸಿಎಂ ಅವರೇ ಅವರ ಹತ್ತಿರ ಹೋಗಿದ್ದು ಗಮನಾರ್ಹ.

ಸಿಎಂ ಅವರ ಇಂದಿನ ಭೇಟಿಯ ವೇಳೆ ರಾಜ್ಯದ ಗೃಹ ಸಚಿವ ಪರಮೇಶ್ವರ್ ಮತ್ತು ದಕ್ಷಿಣ ಕನ್ನಡ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರ ಕಾರ್ಯವೈಖರಿ ಬಗ್ಗೆ ಹಾಗೂ ಅವರನ್ನು ಬದಲಾಯಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ಸಾಮೂಹಿಕ ರಾಜೀನಾಮೆಗೆ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಕೂಡ ಬಿ ಕೆ ಹರಿಪ್ರಸಾದ್ ಅವರು, ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿರುವುದಾಗಿ ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಬಿ.ಕೆ. ಹರಿಪ್ರಸಾದ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ: ಕರಾವಳಿಯ ಪರಿಸ್ಥಿತಿಗಳ ಬಗ್ಗೆ ಗಂಭೀರ ಚರ್ಚೆ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂಬುದು ಪ್ರಮುಖ ಹುದ್ದೆ. ಹೈಕಮಾಂಡ್ ಮತ್ತು ರಾಜ್ಯ ಕಾಂಗ್ರೆಸ್‌ನ ಕೊಂಡಿಯಾಗಿ ಹರಿಪ್ರಸಾದ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ಗೆ ಹರಿಪ್ರಸಾದ್ ಮೂಲಕವೇ ಕೆಲವು ವಿಚಾರಗಳು ಪ್ರಸ್ತಾಪವಾಗುತ್ತವೆ. ಮಂಗಳೂರಿನ ಬೆಳವಣಿಗೆಯ ಬಗ್ಗೆ ಹರಿಪ್ರಸಾದ್ ಅವರ ಮೂಲಕ ಹೈಕಮಾಂಡ್ ಮಾಹಿತಿ ತರಿಸಿಕೊಳ್ಳುತ್ತಿರುವುದಾಗಿ ತಿಳಿದುಬಂದಿದೆ.