"ಪರಿಶಿಷ್ಟ ಜಾತಿ ಮಾದಿಗ ಸಮುದಾಯಕ್ಕೆ ಸೇರಿದ ಮುನಿಸ್ವಾಮಿ ಅವರ ಕುಟುಂಬ ಹಲವು ದಶಕಗಳಿಂದ ಉಳುಮೆ ಮಾಡುತ್ತಿದ್ದ ಭೂಮಿಯನ್ನು ಹೇಗಾದರೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಜಿದ್ದಿಗೆ ಪ್ರೆಸ್ಟೀಜ್ ಕಂಪನಿ ಬಿದ್ದಿದ್ದು, ಅದಕ್ಕೆ ಪೊಲೀಸರೂ ಸಹಕರಿಸುತ್ತಿದ್ದಾರೆ" ಎಂದು ಹೋರಾಟಗಾರರು ಆರೋಪಿಸಿದ್ದಾರೆ
“ನೂರಾರು ಜನ ಬುಧವಾರ ರಾತ್ರಿ ಹನ್ನೆರಡು ಗಂಟೆಯ ವೇಳೆಗೆ ಬಂದು, ಮನೆಯ ಡೋರ್ ಒದ್ದರು. ಎಲ್ಲರನ್ನೂ ಹೊರಗೆ ತಳ್ಳಿದರು. ಆ ಗುಂಪಿನಲ್ಲಿ ಹೆಂಗಸರು, ಗಂಡಸರೂ ಇದ್ದರು. ಈ ಮೊದಲು ಅವರ್ಯಾರನ್ನೂ ನೋಡಿರಲಿಲ್ಲ. ನಮ್ಮ ಮನೆ ಮತ್ತು ರೇಣುಕಾ ಯಲ್ಲಮ್ಮ, ಮುನೇಶ್ವರ ಸ್ವಾಮಿಯ ದೇವಾಲಯವನ್ನು ಜೆಸಿಬಿಗಳು ಧ್ವಂಸ ಮಾಡಿದವು. ಅಲ್ಲಿ ಕಟ್ಟಡಗಳಿದ್ದವು ಎಂಬ ಕುರುಹೂ ಸಿಗದಂತೆ ಲಾರಿಗಳ ಮೂಲಕ ಡಬ್ರೀಸ್ ಹೊತ್ತೊಯ್ಯಲಾಯಿತು. ನಾವು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲು ಮುಂದಾದಾಗ, ಅವುಗಳನ್ನು ಕಸಿದುಕೊಂಡರು. ಈ ಕೃತ್ಯದ ಹಿಂದೆ ಶ್ರೀನಿವಾಸ್ ಮತ್ತು ರವಿಚಂದ್ರ ರೆಡ್ಡಿ ಎಂಬ ಭೂಮಾಫಿಯಾ ವ್ಯಕ್ತಿಗಳು ಇದ್ದಾರೆ. ಪ್ರೆಸ್ಟೀಜ್ ಕಂಪನಿಯವರು ನಮ್ಮ ಜಮೀನನ್ನು ಕಬಳಿಸಲು ನೋಡುತ್ತಿದ್ದಾರೆ. ಹತ್ತಾರು ದಶಕದಿಂದಲೂ ನಾವು ಉಳುಮೆ ಮಾಡುತ್ತಿರುವ ನೆಲದಿಂದ ನಮ್ಮನ್ನು ಬಲವಂತವಾಗಿ ಎತ್ತಂಗಡಿ ಮಾಡಿಸಲು ಯತ್ನಿಸುತ್ತಿದ್ದಾರೆ. ನಮ್ಮ ಜಮೀನನ್ನು ನಾವು ಬಿಟ್ಟುಕೊಡುವುದಿಲ್ಲ”- ಹೀಗೆ ಅಳಲು ತೋಡಿಕೊಳ್ಳುತ್ತಿದೆ ಮುನಿಸ್ವಾಮಿಯವರ ಕುಟುಂಬ.
ಬೆಂಗಳೂರು ನಗರ ಆಗ್ನೇಯ ಪೊಲೀಸ್ ವಿಭಾಗ ವ್ಯಾಪ್ತಿಗೆ ಬರುವ ಬೇಗೂರಿನಲ್ಲಿ ಬುಧವಾರ ರಾತ್ರಿ 85 ವರ್ಷ ಇಳಿವಯಸ್ಸಿನ ಮುನಿಸ್ವಾಮಿ ಮತ್ತು ಅವರ ಕುಟುಂಬವನ್ನು ಬೀದಿಗೆ ತಳ್ಳಲಾಗಿದೆ. ಕಾನೂನು ಬಾಹಿರವಾಗಿ, ಗೂಂಡಾಗಿರಿಯ ಮೂಲಕ ಅವರ ಮನೆ ಮತ್ತು ದೇವಾಲಯವನ್ನು ಎತ್ತಂಗಡಿ ಮಾಡಿರುವ ಗಂಭೀರ ಆರೋಪ ಬಂದಿದೆ. “ಪರಿಶಿಷ್ಟ ಜಾತಿ ಮಾದಿಗ ಸಮುದಾಯಕ್ಕೆ ಸೇರಿದ ಮುನಿಸ್ವಾಮಿ ಕುಟುಂಬ ಹಲವು ದಶಕಗಳಿಂದ ಉಳುಮೆ ಮಾಡುತ್ತಿದ್ದ ಭೂಮಿಯನ್ನು ಹೇಗಾದರೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಜಿದ್ದಿಗೆ ಪ್ರೆಸ್ಟೀಜ್ ಕಂಪನಿ ಬಿದ್ದಿದ್ದು, ಅದಕ್ಕೆ ಪೊಲೀಸರೂ ಸಹಕರಿಸುತ್ತಿದ್ದಾರೆ” ಎಂದು ಹೋರಾಟಗಾರರು ಆರೋಪಿಸಿದ್ದಾರೆ.

“ಪಿಟಿಸಿಎಲ್ ಕಾಯ್ದೆಯಡಿ ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿದ್ದಾಗಲೇ, ನೂರಾರು ಗೂಂಡಾಗಳನ್ನು ಬುಧವಾರ ತಡರಾತ್ರಿ ಕರೆತಂದು, ದೌರ್ಜನ್ಯ ಎಸಗಲಾಗಿದೆ. ಭೂಮಾಫಿಯಾ ವ್ಯಕ್ತಿ ರವಿಚಂದ್ರ ರೆಡ್ಡಿ ಎಂಬಾತ ಇದರ ಹಿಂದೆ ಇದ್ದು, ಹೇಗಾದರೂ ಭೂಮಿಯನ್ನು ಕಸಿಯಲೇಬೇಕು, ಕುಟುಂಬವನ್ನು ಬೆದರಿಸಿ, ಇಲ್ಲಿಂದ ಓಡಿಸಿ ಕಂಪನಿಗೆ ಜಾಗವನ್ನು ದೊರಕಿಸಿಕೊಡಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಈ ಕುಟುಂಬಕ್ಕೆ ನ್ಯಾಯ ಸಿಗಬೇಕಾಗಿದೆ” ಎಂದು ಸಂತ್ರಸ್ತರ ಪರ ಹೋರಾಡುತ್ತಿರುವ ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷ ಪ್ರಕಾಶ್ ಬಾಬು ಹೇಳುತ್ತಾರೆ.
ಬುಧವಾರ ರಾತ್ರಿ 12 ಗಂಟೆಯ ವೇಳೆಗೆ ಕಾನೂನುಬಾಹಿರವಾಗಿ ಶುರುವಾದ ನೆಲಸಮ ಕೃತ್ಯವನ್ನು ಸ್ಥಳೀಯ ನಿವಾಸಿ ಮನೀಶ್ ಎಂಬವರು ವಿವರಿಸಿದ್ದು ಹೀಗೆ: “ನಾನು ನನ್ನ ಸಾಕು ನಾಯಿಯ ಮಲ ವಿಸರ್ಜನೆ ಮಾಡಿಸಲು ಹೊರಗೆ ಬಂದಿದ್ದೆ. ಸದರಿ ಜಾಗದ ಎದುಗಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ನಾನು, ಐದು ಜೆಸಿಬಿಗಳನ್ನು ನೋಡಿದೆ. ಇಲ್ಲಿನ ದೇವಾಲಯ ಮತ್ತು ಮನೆಯನ್ನು ಧ್ವಂಸ ಮಾಡಲಾಗುತ್ತಿತ್ತು. ಲಾರಿಯಲ್ಲಿ ಡಬ್ರೀಸ್ (ಕಟ್ಟಡ ತ್ಯಾಜ್ಯ) ಹೊತ್ತೊಯ್ಯಲಾಗುತ್ತಿತ್ತು. ಆಗ ರಾತ್ರಿ 2 ಗಂಟೆಯಾಗಿತ್ತು”.

ಇದನ್ನೂ ಓದಿರಿ: ಹುಬ್ಬಳ್ಳಿ ಗಲಭೆ ಪ್ರಕರಣ ಸೇರಿ 43 ಕ್ರಿಮಿನಲ್ ಪ್ರಕರಣ ಹಿಂಪಡೆದ ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ‘ಈದಿನ ಡಾಟ್ ಕಾಮ್’ ತಂಡ ಭೇಟಿ ನೀಡಿತು. ಜನಾಧಿಕಾರ ಪರಿಷತ್‌ನ ಆದರ್ಶ್ ಅಯ್ಯರ್, ಪ್ರಕಾಶ್ ಬಾಬು, ದಲಿತ ಹೋರಾಟಗಾರ ಶಿವಣ್ಣ ಆ ವೇಳೆಗಾಗಲೇ ಠಾಣೆಯಲ್ಲಿದ್ದರು. ಇನ್‌ಸ್ಪೆಕ್ಟರ್ ಪಿ.ಎಸ್. ಕೃಷ್ಣಕುಮಾರ್ ರಾತ್ರಿ ಪಾಳಿಯಲ್ಲಿದ್ದರು. ಕುಟುಂಬದ ಪರ ನಿಂತು ಮಾತನಾಡಿದ ಹೋರಾಟಗಾರರು, “ಈಗಾಗಲೇ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮನೆ ಮತ್ತು ದೇವಾಲಯವನ್ನು ಕೆಡವುತ್ತಿದ್ದರೂ ಪೊಲೀಸರು ರಕ್ಷಣೆ ನೀಡಿಲ್ಲ. ಇದು ಬೇಕಂತಲೇ ಮಾಡಿರುವ ನಿರ್ಲಕ್ಷ್ಯ. ಕುಟುಂಬದ ಇಬ್ಬರು ಯುವಕರನ್ನು ಗೂಂಡಾಗಳು ಅಪಹರಿಸಿ ಬೇರೆಡೆ ಕರೆದುಕೊಂಡು ಹೋಗಿದ್ದಾರೆಂಬ ಮಾಹಿತಿ ದೊರೆತ ತಕ್ಷಣ ನಿಮಗೆ ಕರೆ ಮಾಡಿದೆವು. ಆ ಬಳಿಕವಷ್ಟೇ ಆ ಹುಡುಗರನ್ನು ವಾಪಸ್ ತಂದು ಬಿಟ್ಟು ಹೋಗಿದ್ದಾರೆ. ಅವರ ಬಟ್ಟೆಯನ್ನು ಹರಿದುಹಾಕಿ ಕಿರುಕುಳ ಕೊಟ್ಟಿದ್ದಾರೆ” ಎಂದು ಪೊಲೀಸರ ವಿರುದ್ಧ ಬೇಸರ ಹೊರಹಾಕಿದರು. ಇದೇ ವೇಳೆ ಮುನಿಸ್ವಾಮಿ ಅವರ ಪುತ್ರ ನಾಗರಾಜ್ ಇಡೀ ರಾತ್ರಿ ನಡೆದ ಕಿರುಕುಳವನ್ನು ‘ಈದಿನ ಡಾಟ್ ಕಾಮ್’ ಜೊತೆ ಹಂಚಿಕೊಂಡರು.
“ಸುಮಾರು ಐದು ನೂರು ಜನ ಇದ್ದರು. ಶ್ರೀನಿವಾಸ್ ಮತ್ತು ರವಿಚಂದ್ರ ರೆಡ್ಡಿ, ಪ್ರೆಸ್ಟೀಜ್ ಕಂಪನಿ ಇವರ ಹಿಂದೆ ಇದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ಮನೆ, ಆಸ್ತಿಪಾಸ್ತಿ ಎಲ್ಲ ಧ್ವಂಸ ಮಾಡಿದ್ದಾರೆ. ನೂರು ಕೋಳಿಗಳನ್ನು ಸಾಕಿದ್ದೆವು, ಅವುಗಳನ್ನೂ ಸಾಯಿಸಿದ್ದಾರೆ. ಲಾಪ್‌ಟಾಪ್, ತಮಟೆ, ಸಿಸಿಟಿವಿ ಕ್ಯಾಮೆರಾ, ದೇವರ ಮೂರ್ತಿಗಳನ್ನು ಹೊತ್ತೊಯ್ಯಲಾಗಿದೆ. ನಮ್ಮ ತಂದೆಗೆ 12 ಜನ ಮಕ್ಕಳಿದ್ದೇವೆ. ಆ ಜಾಗ ಬಿಟ್ಟರೆ ನಮಗೆ ಯಾವುದೇ ಆಸರೆ ಇಲ್ಲ. ಇದನ್ನೂ ಕಿತ್ತುಕೊಳ್ಳುವ ಕೆಲಸ ಆಗುತ್ತಿದೆ” ಎಂದು ಸಂಕಟ ವ್ಯಕ್ತಪಡಿಸಿದರು.
ಕೆಲಹೊತ್ತು ಅಪಹರಣಕ್ಕೆ ಒಳಗಾಗಿದ್ದ ಮುನಿಸ್ವಾಮಿ ಕುಟುಂಬದ ಯುವಕರನ್ನು ಠಾಣೆಯ ಬಳಿಗೆ ದುಷ್ಕರ್ಮಿಗಳು ಬಿಟ್ಟು ಹೋದರು. ಸ್ವಲ್ಪ ಹೊತ್ತಿನ ಬಳಿಕ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಆಗಮಿಸಿದನು. “ದುಷ್ಕೃತ್ಯಕ್ಕೆ ಯತ್ನಿಸಿದವರಲ್ಲಿ ಆತನೂ ಒಬ್ಬ” ಎಂದು ಸಂತ್ರಸ್ತರು ಗುರುತಿಸಿ ಬಂಧನಕ್ಕೆ ಒತ್ತಾಯಿಸಿದ ಬಳಿಕ, ಪೊಲೀಸರು ಆತನನ್ನು ವಶಕ್ಕೆ ಪಡೆದರು. ಸಂತ್ರಸ್ತರ ಮೊಬೈಲ್ ಕಸಿದಿದ್ದ ಮತ್ತೊಬ್ಬ ಪೊಲೀಸ್ ಠಾಣೆಗೆ ಬಂದಾಗ, ಹೋರಾಟಗಾರರ ಆಗ್ರಹದಿಂದಾಗಿ ಆತನನ್ನೂ ವಶಕ್ಕೆ ಪಡೆದು ಮೊಬೈಲ್‌ಗಳನ್ನು ಕಸಿದುಕೊಂಡರು.
ಇದನ್ನೂ ಓದಿರಿ: ಒಳಮೀಸಲಾತಿ ಸಮೀಕ್ಷೆ; ಜಾತಿ ಹೇಳಿಕೊಳ್ಳುವ ಸಂಕಟದಲ್ಲಿ ದಲಿತರು

ರಾತ್ರಿ ಇಡೀ ನಡೆದ ಈ ದೌರ್ಜನ್ಯ ನಾಲ್ಕೂವರೆ ವೇಳೆಗೆ ಮುಗಿದಿತ್ತು. ದಲಿತ ಕುಟುಂಬದ ಸದಸ್ಯರು ಹೆದರಿಕೊಂಡು ಪೊಲೀಸ್ ಠಾಣೆಗೆ ಬಂದಿದ್ದರು. ಬೆಳಗಾಗುತ್ತಿರುವ ವೇಳೆಗೆ ಜಮೀನಿನ ಬಳಿ ಹೋರಾಟಗಾರರು ಮತ್ತು ಸಂತ್ರಸ್ತರು ಭೇಟಿ ನೀಡಿದರು. ಮುಂಜಾನೆಯೇ ಡಿಸಿಪಿ ಸಾರಾ ಫಾತಿಮಾ ಸ್ಥಳಕ್ಕೆ ಆಗಮಿಸಿದರು. ಪೊಲೀಸರ ಕಣ್ಣೆದುರೇ ಈ ದೌರ್ಜನ್ಯ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಎಲ್ಲರ ಆಕ್ಷೇಪಗಳನ್ನು ಆಲಿಸಿದ ಬಳಿಕ, “ನೀವು ಲಿಖಿತ ದೂರು ಕೊಡಿ, ಪೊಲೀಸ್ ಕರ್ತವ್ಯದಲ್ಲಿ ಲೋಪವಾಗಿದ್ದರೆ ಅವರ ವಿರುದ್ಧವೇ ಕಂಪ್ಲೇಂಟ್ ಕೊಡಬಹುದು. ಮುಂದಿನ ಕ್ರಮ ಜರುಗಿಸಲಾಗುವುದು” ಎಂದು ಭರವಸೆ ನೀಡಿದರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. “ದೂರು ದಾಖಲಾದ ಬಳಿಕ ಮಾತನಾಡುವೆ” ಎಂದು ಸ್ಪಷ್ಟಪಡಿಸಿದರು.
ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಪ್ರಕರಣ ದಾಖಲಿಸಲು ಹೋರಾಟಗಾರರು ಮುಂದಾಗಿದ್ದಾರೆ. (ಹೆಚ್ಚುವರಿ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗುವುದು.)

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.