- ಅಹಿರೆ ಮೂಲಕ ನಾಸಿಕ್‌ನ ಆರು ಶಾಸಕರು ಅಜಿತ್ ಪವಾರ್ ಬಣ ಸೇರ್ಪಡೆ
- ಏಕನಾಥ್ ಶಿಂಧೆ ಸರ್ಕಾರದಲ್ಲಿ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಅಧಿಕಾರ
ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಶಾಸಕಿ ಸರೋಜ್ ಅಹಿರೆ ಅವರು ಶನಿವಾರ (ಜುಲೈ 15) ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಬಣ ಸೇರ್ಪಡೆಯಾಗಿದ್ದಾರೆ.
ಆ ಮೂಲಕ ನಾಸಿಕ್ ಜಿಲ್ಲೆಯ ಆರು ಶಾಸಕರು ಎನ್‌ಸಿಪಿಯ ಅಜಿತ್ ಪವಾರ್ ಪಾಳಯ ಸೇರಿದಂತಾಗಿದೆ.
ಅಹಿರೆ ಅವರು ನಾಸಿಕ್‌ನ ಡಿಯೋಲಲಿ ಕ್ಷೇತ್ರದ ಶಾಸಕಿಯಾಗಿದ್ದಾರೆ. ಎನ್‌ಸಿಪಿ ಎರಡು ಬಣಗಳಾಗಿ (ಶರದ್ ಪವಾರ್ ಬಣ ಮತ್ತು ಅಜಿತ್ ಪವಾರ್ ಬಣ) ವಿಭಜನೆಯಾದ ದಿನದಿಂದಲೂ ಅವರು ಯಾವುದೇ ಪಕ್ಷಕ್ಕೆ ಬಹಿರಂಗವಾಗಿ ತಮ್ಮ ಬೆಂಬಲ ಘೋಷಿಸಿರಲಿಲ್ಲ. ಇದೀಗ ಅಧಿಕೃತವಾಗಿ ಅಜಿತ್ ಪವಾರ್ ಬಣ ಸೇರಿಕೊಂಡಿದ್ದಾರೆ.
“ಅಭಿವೃದ್ಧಿಗಾಗಿ ಅಧಿಕಾರದಲ್ಲಿ ಉಳಿಯುವುದು ಅವಶ್ಯಕವಾಗಿದೆ. ನಾನು ಅಜಿತ್ ದಾದಾ ಜೊತೆಗಿದ್ದೇನೆ. ಈ ಹಿಂದೆ ನನ್ನ ಕ್ಷೇತ್ರದ ಅಭಿವೃದ್ಧಿಗೆ ಅಜಿತ್ ಪವಾರ್ ಅವರು ಸಹಕಾರ ನೀಡಿದ್ದರು. ಭವಿಷ್ಯದಲ್ಲಿಯೂ ಇದೇ ರೀತಿ ಮುಂದುವರಿಯುವಂತೆ ಅವರಲ್ಲಿ ಕೇಳುತ್ತೇನೆ” ಎಂದು ಅಹಿರೆ ಹೇಳಿದ್ದಾರೆ.
ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಜಿತ್ ಪವಾರ್ ಅವರು ನಾಸಿಕ್‌ಗೆ ಬಂದಿದ್ದು, ಈ ವೇಳೆ ಅವರನ್ನು ಸರೋಜ್ ಅಹಿರೆ ಸ್ವಾಗತಿಸಿದ್ದರು.
ಸರೋಜ್ ಅಹಿರೆ ಅವರ ಬೆಂಬಲದೊಂದಿಗೆ ನಾಸಿಕ್ ಜಿಲ್ಲೆಯ ಎಲ್ಲ ಆರು ಎನ್ಸಿಪಿ ಶಾಸಕರು (ಛಗನ್ ಭುಜಬಲ್, ನಿತಿನ್ ಪವಾರ್, ಮಾಣಿಕ್ರಾವ್ ಕೊಕಾಟೆ, ನರಹರಿ ಜಿರ್ವಾಲ್, ದಿಲೀಪ್ ಬಣಕಾರ್ ಮತ್ತು ಸರೋಜ್ ಅಹಿರೆ) ಅಜಿತ್ ಪವಾರ್ ಪರ ಬಾವುಟ ಬೀಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ಆಫ್ರಿಕಾದಿಂದ ಕರೆತಂದಿದ್ದ 8ನೇ ಚೀತಾ ಸಾವು
ಜುಲೈ ಆರಂಭದಲ್ಲಿ ಎನ್‌ಸಿಪಿ ಪಕ್ಷದಲ್ಲಿ ರಾಜಕೀಯ ಕೋಲಾಹಲ ಉಂಟಾಗಿ ಶರದ್ ಪವಾರ್ ವಿರುದ್ಧ ಅಜಿತ್ ಪವಾರ್ ಬಂಡಾಯವೆದ್ದಿದ್ದರು. ಏಕನಾಥ್ ಶಿಂದೆ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಘೋಷಿಸುವ ಮೂಲಕ ಶಿವಸೇನೆ (ಶಿಂದೆ ಬಣ) ಮತ್ತು ಬಿಜೆಪಿಯೊಂದಿಗೆ ಕೈಜೋಡಿಸಿದ್ದರು.
ಎನ್‌ಸಿಪಿ ಇಬ್ಬಾಗವಾದ ಬೆನ್ನಲ್ಲೇ ಶಾಸಕರ ವಿಶ್ವಾಸ ಪಡೆದುಕೊಳ್ಳಲು ಎನ್ಸಿಪಿಯ ಎರಡು ಬಣಗಳು ಪೈಪೋಟಿಯಲ್ಲಿ ಬಿದ್ದಿದ್ದವು. ಏಕನಾಥ್ ಶಿಂಧೆ ಸರ್ಕಾರದಲ್ಲಿ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.