ಕಾಂಗ್ರೆಸ್ ನೇತೃತ್ವದ ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಅಧಿವೇಶನದಲ್ಲಿ ಕಮಿಷನ್ ದರಪಟ್ಟಿ ಬಿಡುಗಡೆ ಮಾಡಿದ್ದರು. ಈ ವಿಚಾರವಾಗಿ ಕೃಷಿ ಇಲಾಖೆ ಸಚಿವ ಎನ್ ಚಲುವರಾಯಸ್ವಾಮಿ ಮತ್ತು ಎಚ್ ಡಿ ಕುಮಾರಸ್ವಾಮಿ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಚಲುವರಾಯಸ್ವಾಮಿ, “ಎಚ್ ಡಿ ಕುಮಾರಸ್ವಾಮಿ ಅವರಿಗೆ ನನ್ನ ಮೇಲೆ ಪ್ರೀತಿಯೋ, ದ್ವೇಷವೋ ಗೊತ್ತಿಲ್ಲ. ಪ್ರೀತಿ ಇದ್ದರೂ ಸಂತೋಷ, ದ್ವೇಷವಿದ್ದರೂ ಸಂತೋಷ” ಎಂದು ಹೇಳಿದರು.
ಕೃಷಿ ಇಲಾಖೆಯನ್ನೇ ಗುರಿಯಾಗಿಸಿಕೊಂಡು ಎಚ್ ಡಿ ಕುಮಾರಸ್ವಾಮಿ ಅವರು ವರ್ಗಾವಣೆ ದಂಧೆಯ ದರ ಪಟ್ಟಿ ಬಿಡುಗಡೆ ಮಾಡಿದ್ದಾರೆ, ಇದಕ್ಕೆ ಕಾರಣವೇನು? ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.
“2018-19ರಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ವರ್ಗಾವಣೆ ದಂಧೆಗೆ ಸಂಬಂಧಿಸಿದಂತೆ ಪ್ರಜಾವಾಣಿ ಪತ್ರಿಕೆಯಲ್ಲಿ ಇದೇ ರೀತಿಯ ರೇಟ್ ಕಾರ್ಡ್ ಪ್ರಕಟವಾಗಿತ್ತು. ಮೊನ್ನೆ ಅಧಿವೇಶನದಲ್ಲಿಯೂ ಪತ್ರಿಕೆಯನ್ನು ಪ್ರದರ್ಶಿಸಿದ್ದೇನೆ. ನೀವು ಮುಖ್ಯಮಂತ್ರಿ ಆಗಿದ್ದಾಗಲೂ ಇದೇ ರೀತಿ ರೇಟ್ ಕಾರ್ಡ್ ಪ್ರಕಟವಾಗಿತ್ತು. ಅದನ್ನೇ ಇಟ್ಟುಕೊಂಡು ಈಗ ನಮ್ಮ ಇಲಾಖೆ ವಿರುದ್ಧ ಆರೋಪ ಮಾಡುತ್ತಿದ್ದೀರ ಎಂದು ಕೇಳಿದ್ದೇನೆ” ಎಂದರು.
“ಕುಮಾರಸ್ವಾಮಿ ಅವರ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಧಿವೇಶನದ ಒಳಗೆ ಚರ್ಚೆ ಆಗಿರುವುದರಿಂದ ಮತ್ತೆ ಅದನ್ನು ಹೊರಗಡೆ ಚರ್ಚೆ ಮಾಡಲು ಹೋಗುವುದಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಜಕೀಯ ಭಿನ್ನಮತ ಮರೆತು ಮೋದಿಗೆ ಜೆಡಿಎಸ್ ಬೆಂಬಲಿಸಲಿದೆ: ಶೋಭ ಕರಂದ್ಲಾಜೆ