ರೈತರ ಜಮೀನಿನ ಅವಶ್ಯಕತೆಗನುಗುಣವಾಗಿ ಬಿತ್ತನೆಬೀಜ, ಗೊಬ್ಬರ, ಕೀಟನಾಶಕಗಳನ್ನು ವಿತರಿಸಬೇಕು ಎಂದು ಬಾಗಲಕೋಟೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ ವಿತರಕರಿಗೆ ಸೂಚಿಸಿದರು.
ನವನಗರದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ನಡೆದ ವಿತರಕರರು ಹಾಗೂ ಮಾರಾಟಗಾರರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 3,10,599 ಹೆಕ್ಟೇರ್‌ಗಳಲ್ಲಿ ಹಂಗಾಮಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಪೈಕಿ ಈಗಾಗಲೇ ಸುಮಾರು 1,02,000 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗಿದ್ದು, ಶೇ.30ರಷ್ಟು ಬಿತ್ತನೆಯಾಗಿದೆ.
“ರೈತ ಸಂಪರ್ಕ ಕೇಂದ್ರಗಳಲ್ಲಿ ಅವಶ್ಯಕ ಬಿತ್ತನೆಬೀಜ ಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಹೆಸರು, ತೊಗರಿ ಉದ್ದು, ಸೋಯಾ, ಅವರೆ, ಸಜ್ಜೆ ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಗಳ ಒಟ್ಟು 2,170 ಕ್ವಿಂಟಲ್‌ನಷ್ಟು ಬಿತ್ತನೆಬೀಜ ಸಂಗ್ರಹ ಮಾಡಲಾಗಿದೆ. ರೈತರಿಗೆ ವಿತರಣೆ ಕಾರ್ಯ ಪ್ರಾರಂಭಿಸಲಾಗಿದೆ. ಜಿಲ್ಲೆಯಲ್ಲಿ ಅವಶ್ಯಕ ರಸಗೊಬ್ಬರ ದಾಸ್ತಾನು ಇದ್ದು, ರೈತ ಬಾಂಧವರು ಒಂದು ಮತ್ತು ಎರಡು ಪೋಷಕಾಂಶ ಇರುವ ಗೊಬ್ಬರವನ್ನು ಹಾಗೂ ಕಾಂಪ್ಲೆಕ್ಸ್ ರಸಗೊಬ್ಬರ ಬಳಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಸ್ಕಿಜೋಫ್ರೇನಿಯಾವನ್ನು ಸಕಾಲದಲ್ಲಿ ಗುರುತಿಸಿ ಚಿಕಿತ್ಸೆ ಪಡೆದಲ್ಲಿ ತೊಂದರೆಯಿಲ್ಲ: ಡಾ ಭಾರತಿ
ರೈತ ಬಾಂಧವರು ಅಧಿಕೃತ ಕೃಷಿ ಮಾರಾಟಗಾರರದಿಂದ ಖರೀದಿ ಮಾಡಿ ರಶೀದಿ ಪಡೆಯಬೇಕು. ಅನಧಿಕೃತ, ಕಲಬೆರಕೆ, ನಕಲಿ ಕೃಷಿ ಪರಿಕರ ಮಾರಾಟ ಕಂಡುಬಂದಲ್ಲಿ ರೈತ ಕರೆ ಕೇಂದ್ರ 18004253553ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.
ವೇದಿಕೆಯ ಮೇಲೆ ಜಿಲ್ಲಾ ಕಾರ್ಯದರ್ಶಿ ಪ್ರಭು ಇದ್ದಲಗಿ, ಜಿಲ್ಲಾ ಕೃಷಿ ಉಪನಿರ್ದೇಶಕ ಆರ್ ಎಂ ರೂಡಗಿ ಹಾಜರಿದ್ದರು. ಸಭೆಯಲ್ಲಿ ಜಿಲ್ಲೆಯ 50ಕ್ಕೂ ಹೆಚ್ಚು ವಿತರಕರು, ಮತ್ತು 30ಕ್ಕೂ ಹೆಚ್ಚು ಕೆಮಿಕಲ್ ಡಿಸ್ಟ್ರಿಬ್ಯೂಟರ್ಸ್, ಸಂಘದ ಸದಸ್ಯರುಗಳು ಇದ್ದರು.