ಮಹಿಳೆಯರ ಸ್ವಾವಲಂಬನೆ ಹಾಗೂ ಸ್ವತಂತ್ರ ಬದುಕಿಗೆ ಮನರೇಗಾ ಆಸರೆ ಆಗಿದೆ. ಅಗತ್ಯವಿರುವ ಎಲ್ಲ ಮಹಿಳೆಯರು ತಮ್ಮ ಗ್ರಾಮ ಪಂಚಾಯತಿಗೆ ನಮೊನೆ-6ರಲ್ಲಿ ಅರ್ಜಿ ಸಲ್ಲಿಸಿ, ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ಆ ಮೂಲಕ, ಆರ್ಥಿಕವಾಗಿ ಸದೃಡರಾಗಿ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬಹುದು ಎಂದು ಗದಗ ಜಿಲ್ಲಾ ಪಂಚಾಯತಿಯ ಜಿಲ್ಲಾ ಕಾರ್ಯಕ್ರಮ ಸಂಯೋಜಕ (ಎಡಿಪಿಸಿ) ಕಿರಣಕುಮಾರ ಎಸ್.ಎಚ್ ಹೇಳಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಕುರುಡಗಿ ಗ್ರಾಮದಲ್ಲಿ ನಡೆದ ಮಹಿಳಾ ಸ್ನೇಹಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. “ಮನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಖಾತರಿಯ ಕೂಲಿ ಉದ್ಯೋಗವನ್ನು ಒದಗಿಸಲಾಗುತ್ತಿದೆ. ಆ ಮೂಲಕ ಗ್ರಾಮೀಣ ಜನರ ಆರ್ಥಿಕ ಜೀವನಕ್ಕೆ ಭದ್ರತೆ ನೀಡುತ್ತದೆ. ಕೌಶಲ್ಯ ರಹಿತ ಕೆಲಸ ಮಾಡಲು ಮಹಿಳೆಯರು ಸ್ವಯಂ ಪ್ರೇರಣೆ ಯಿಂದ ಮುಂದೆ ಬರಬೇಕು. ಅಳತೆ ಪ್ರಕಾರ ಕೆಲಸ ಮಾಡಿದರೆ ಪ್ರತಿ ದಿನ 316 ರೂ. ಪಾವತಿಸಲಾಗುತ್ತದೆ” ಎಂದರು.
“ಮನರೇಗಾ ಯೋಜನೆಯು ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತರಲಾಗಿದೆ, ಇದರ ಲಾಭ ಪಡೆದು ಕೊಳ್ಳುವುದು ಪ್ರತಿಯೊಬ್ಬರ ಹಕ್ಕಾಗಿದೆ. ಮಹಿಳಾ ಕಾರ್ಮಿಕರ ಸಂಖ್ಯೆಯನ್ನು ವೃದ್ಧಿಸಿ, ಅವರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಮನರೇಗಾ ತಂಡದ ವತಿಯಿಂದ ವಿಶೇಷ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಮನರೇಗಾದಡಿ ಸಮಾನ ಕೂಲಿ ನಿಯಮವಿದೆ. ಹೀಗಿದ್ದರೂ ಮನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ಕಡಿಮೆ.ಮುಂಬರುವ ಎಲ್ಲ ಕಾಮಗಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ಜಾಗೃತಿ ಮೂಡಿಸುವುದು ಹಾಗೂ ಕಡ್ಡಾಯವಾಗಿ ಮಹಿಳೆಯರ ಹೆಸರಿನಲ್ಲಿ ಎನ್ಎಂಆರ್ ಸೃಜಿಸುವಂತೆ ಸಿಇಓ ಅವರು ಸೂಚಿಸಿದ್ದಾರೆ” ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಓ ಶಿಲ್ಪಾ ಕವಲೂರ, ಐಇಸಿ ಮಂಜುನಾಥ, ತಾಂತ್ರಿಕ ಸಹಾಯಕ ಅಜಯ ಅಬ್ಬಿಗೇರಿ, ಎನ್.ಆರ್.ಎಲ್.ಎಂ ತಾಲೂಕ ವ್ಯವಸ್ಥಾಪಕ ಗುರುಬಸಪ್ಪ ವೀರಾಪೂರ, ಜಿಕೆಎಂ ಯಶೋದಾ ಅಮರಗೋಳ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇದ್ದರು.