ಕರಾವಳಿಯಲ್ಲಿ ಮಿತಿಮೀರಿದ ಕೋಮುವಾದ; ದೇವರೂ, ಭೂತಗಳೂ ತುಳುನಾಡನ್ನು ತೊರೆದು ಕಡಲಿಗಿಳಿದು ಹೋಗಿವೆಯೇನೋ…

Date:

Advertisements

ಕಡಲನಾಡು ಮಂಗಳೂರಿನಲ್ಲಿ ಈ ಬಾರಿ ಅಕಾಲಿಕವಾಗಿ ವಾಡಿಕೆಗೂ ಮುನ್ನವೇ ಬಂದ ಮುಂಗಾರು ಮಳೆ, ರಕ್ತದ ಕೋಡಿಯ ಜೊತೆಗೆ ಹರಿದು ಕಡಲು ಸೇರಿದೆ. ಒಂದು ತಿಂಗಳೊಳಗೆ ಮೂವರು ಯುವಕರ ಪ್ರಾಣ ದ್ವೇಷ, ಪ್ರತೀಕಾರಕ್ಕೆ ಬಲಿಯಾಗಿದೆ. ರಾಜಕೀಯ ನಾಯಕರ ದ್ವೇಷ ಭಾಷಣಕ್ಕೆ ಮಾತ್ರ ತಡೆಯೇ ಇಲ್ಲ. ಹಾಗೆಯೇ ದ್ವೇಷದ ಹತ್ಯೆಗಳಿಗೂ ತಡೆ ಇಲ್ಲದಂತಾಗಿದೆ. ತಡೆ ಇರುವುದು ಕೋಮುವಾದಿಗಳ ಮೇಲಿನ ಪ್ರಕರಣಕ್ಕೆ ಮಾತ್ರ ! ಇದು ವಿಪರ್ಯಾಸ.

ಕಳೆದೊಂದು ದಶಕದಿಂದ ಕರಾವಳಿ, ಅದರಲ್ಲೂ ಮಂಗಳೂರು ಕೋಮು ಪ್ರಚೋದಕ ದ್ವೇಷಭಾಷಣ, ಕೋಮುಗಲಭೆ ಪ್ರತೀಕಾರದ ಹತ್ಯೆಗಳಿಗೆ ಕುಖ್ಯಾತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿವೆ. ಹತ್ತು ಖಾಸಗಿ ಮೆಡಿಕಲ್‌ ಕಾಲೇಜುಗಳಿವೆ. ಲೆಕ್ಕವಿಲ್ಲದಷ್ಟು ಎಂಜಿನಿಯರಿಂಗ್‌ ಕಾಲೇಜುಗಳಿವೆ. ಸುಶಿಕ್ಷಿತರ ಜಿಲ್ಲೆಯ ಜನ ಸುಂದರ ಬದುಕು ಕಟ್ಟಿಕೊಂಡು ನೆಮ್ಮದಿಯಾಗಿದ್ದಾರೆ. ಆದರೆ ಅದೇ ಜನರು ಜಿಲ್ಲೆಯ ಸಾಮಾಜಿಕ, ರಾಜಕೀಯ ಬೆಳವಣಿಗೆಗಳು, ಅದು ಜಿಲ್ಲೆಗೆ ತಂದೊಡ್ಡುತ್ತಿರುವ ಅಪಖ್ಯಾತಿಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬುದು ಅಷ್ಟೇ ಬೇಸರದ ಸಂಗತಿ. ಬಡ ವರ್ಗದ ಯುವಕರು ಹದಿಹರೆಯದಲ್ಲಿಯೇ ಕೋಮುವಾದದ ಬಲೆಗೆ ಬಿದ್ದು ಬದುಕು ನಾಶ ಮಾಡಿಕೊಳ್ಳುತ್ತಿದ್ದಾರೆ. ಶಿಕ್ಷಣ ಪಡೆದವರು ವಿದೇಶ, ಮಹಾನಗರಗಳಲ್ಲಿ ಕೈ ತುಂಬ ಸಂಬಳ ಬರುವ ಉದ್ಯೋಗ ಮಾಡುತ್ತ ನಿಶ್ಚಿಂತೆಯಿಂದಿದ್ದಾರೆ. ಆದರೆ, ಎಲ್ಲ ವಿಷಯದಲ್ಲೂ ಮುಂದುವರಿದ ಜಿಲ್ಲೆಯಾಗಿ ಹೀಗೆ ಕೋಮುದ್ವೇಷಕ್ಕೆ ಕುಖ್ಯಾತವಾಗುತ್ತಿರುವಾಗ ಸುಶಿಕ್ಷಿತ ವಲಯದ ಮೌನ ಅಪಾಯಕಾರಿ. ಜಿಲ್ಲೆಯ ಪ್ರಜ್ಞಾವಂತರು ಈಗಲಾದರೂ ಮಾತನಾಡಬೇಕು.

ಕರಾವಳಿಯನ್ನು ಕೋಮುವಾದದಿಂದ ಮುಕ್ತ ಮಾಡುವ ಅವಕಾಶವನ್ನು ಕಾಂಗ್ರೆಸ್‌ ಸರ್ಕಾರ ಕೈ ಚೆಲ್ಲಿದೆ ಎಂಬುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದತೆಯನ್ನು ಉಳಿಸುವ ಬಗ್ಗೆ ಕಾಳಜಿ ಇರುವ ಹಲವರು ಈ ದಿನದ ಜೊತೆಗೆ ತಮ್ಮ ನೋವು ಅಸಹಾಯಕತೆಯನ್ನು ಹಂಚಿಕೊಂಡಿದ್ದಾರೆ.

Advertisements

ಹಿಂದೂ ಮುಸ್ಲಿಂ ಸೌಹಾರ್ದತೆಗೆ ಬೆಂಕಿ ಇಟ್ಟವರು ರಾಜಕಾರಣಿಗಳು: ಡಾ ಇಂದಿರಾ ಹೆಗ್ಡೆ
 
ತುಳುನಾಡಿನಲ್ಲಿ ಹಿಂದು ಮುಸ್ಲಿಂ ರಾಜಕಾರಣ ಜ್ವಾಲಾಮುಖಿ ಆಗಿದೆ. ಇದ್ರಿಂದ ತುಳುನಾಡಿಗೆ, ತುಳುನಾಡಿನ ಜನರಿಗೆ ಭದ್ರತೆ  ಇಲ್ಲ ಎಂಬಂತೆ ಆಗಿದೆ. ಸರ್ಕಾರ ಅಸಹಾಯಕತೆಯಲ್ಲಿ ಇರುವಂತೆ ಭಾಸವಾಗುತ್ತಿದೆ. ಅಥವಾ ಆಳುವ ಸರ್ಕಾರಕ್ಕೆ ಇಚ್ಛಾಶಕ್ತಿಯೇ ಇಲ್ಲ ಎಂಬಂತಾಗಿದೆ. ಇಂದಿರಾಗಾಂಧಿಗೆ ಇದ್ದ ಗಂಡೆದೆ ಇಂದಿನ ಆಳುವ ಸರಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ.

ಆದರೆ ಒಳಗಡೆ ಜನಸಾಮಾನ್ಯರು ತಣ್ಣಗೆ ಇದ್ದಾರೆ. ಹಿಂದೂಗೆ ಮುಸ್ಲಿಮರು ಪರಸ್ಪರ ಸಹಕಾರ ನೀಡುತ್ತಿದ್ದಾರೆ. ಮುಸ್ಲಿಮರಿಗೆ ಹಿಂದೂಗಳು  ಸಹಕಾರ ನೀಡುತ್ತಿದ್ದಾರೆ. ಹಿಂದೂ ಮುಸ್ಲಿಂ ಸೌಹಾರ್ದತೆಗೆ ಬೆಂಕಿ ಹಚ್ಚುವುದು ಬೇರಾರೂ ಅಲ್ಲ, ನಮ್ಮ ರಾಜಕಾರಣಿಗಳೇ. ಕಟುಮಾತುಗಳಿಂದ ಮುಸ್ಲಿಂ ಸಮುದಾಯವನ್ನು ನಿಂದಿಸಿದರೆ ತಾವು ಲೀಡರಾಗಿ ಮೆರೆಯುವ ಕನಸು!

ಹೊರಗಡೆಯ ಜನರಿಗೆ ಕಾಣುವುದು ಹಿಂದು -ಮುಸ್ಲಿಮ್ ಯುವಕರ ಮೇಲೆ ದಾಳಿ ಆಗುವ ಕೆಟ್ಟ ಕರಾವಳಿ. ಆದರೆ ಒಳಹೊಕ್ಕು ನೋಡಿದರೆ ಹಿಂದು ಮುಸ್ಲಿಂ ಎಲ್ಲರೂ ಇಂದಿಗೂ ತುಳು ಅಪ್ಪೆಯ ಮಡಿಲ ಮಕ್ಕಳೇ. 

ಮುಸ್ಲಿಮರು ದೇವಸ್ಥಾನಗಳಿಗೂ ಹೋಗುತ್ತಾರೆ. ಅಲ್ಲಿಯ ಸಾರ್ವಜನಿಕ ಜಾತ್ರೆಯಲ್ಲಿ ಓಡಾಡುತ್ತಾರೆ. ದೇವಸ್ಥಾನದಲ್ಲಿ ಸಹಭೋಜನ ಮಾಡುತ್ತಾರೆ. ಶಾಸನದಲ್ಲಿ ಉಲ್ಲೇಖವಾಗಿರುವ ಹಂಜಮಾನದ ಕುಟುಂಬವೊಂದು ಬಾರ್ಕೂರು ಪಂಚಲಿಂಗೇಶ್ವರನ ಸನ್ನಿಧಾನದಲ್ಲಿ ಇಂದಿನವರೆಗೂ ದೇವಾಲಯದ ಸೇವೆಯನ್ನು ಮುಂದುವರಿಸುತ್ತಿದೆ. ರಂಗ ಪೂಜೆ ಮಾಡಿಸುತ್ತಿದೆ, ಎಲ್ಲ ತಿಂಗಳಲ್ಲಿ ರುದ್ರಾಭಿಷೇಕ ಮಾಡಿಸುತ್ತಿದೆ.

ಅಲಿ ಭೂತ
ಅಲಿಭೂತ

ಅನೇಕ ಕಡೆ ಭೂತಗಳು ಮಸೀದಿಗೆ ಭೇಟಿ ನೀಡಿ ಮಾಯದಲ್ಲಿ ಅಲ್ಲಾಹುನೊಂದಿಗೆ ಮಾತನಾಡುತ್ತವೆ. ಹಿಂದೂ ಹಬ್ಬಗಳಲ್ಲಿ ಮುಸ್ಲಿಂ ಜನ ಭಾಗವಹಿಸುತ್ತಾರೆ. ಕಂಬುಲ, ಜಾತ್ರೆ -ಹೀಗೆ ಎಲ್ಲದರಲ್ಲೂ ಮುಸ್ಲಿಮರು ಅವರ ಮನೆಯ ಹಬ್ಬದಂತೆ ಭಾಗವಹಿಸುತ್ತಾರೆ. ಭಗವದ್ಗೀತೆ ಶ್ಲೋಕ ಪಠಿಸುತ್ತಾರೆ. ತಾಳ ಮದ್ದಳೆಯಲ್ಲಿ ಕೃಷ್ಣರಾಗುತ್ತಾರೆ. ಹಿಂದೂಗಳು ಅಲಿಭೂತ,  ಬೊಬ್ಬರ್ಯ ಭೂತ, ಮುಂತಾದ ಮುಸ್ಲಿಂ ಭೂತಗಳನ್ನು ಆರಾಧಿಸುತ್ತಾರೆ. ದರ್ಗಾಕ್ಕೆ ಹರಕೆ ಹಾಕುತ್ತಾರೆ. 

ಅವೆಲ್ಲಕ್ಕಿಂತ ಮುಖ್ಯವಾಗಿ ಹಿಂದೂ ಆರ್ ಎಸ್ ಎಸ್‌ ಕಾರ್ಯಕರ್ತರ ಮನೆಗಳಲ್ಲಿ ಮುಸ್ಲಿಮರೇ ಕೆಲಸಕ್ಕಿದ್ದಾರೆ. ಹಿಂದೂ ಧರ್ಮವನ್ನು ಗುತ್ತಿಗೆ ಪಡೆದ ರಾಜಕಾರಣಿಗಳ ಚೇಲಾಗಳಿಂದ ದೇವರೂ ಭೂತಗಳು ತುಳುನಾಡನ್ನು ಕರಾವಳಿಯನ್ನು ತೊರೆದು ಕಡಲಿಗಿಳಿದು ಹೋಗಿದೆಯೋ ಎಂದು ಸಂದೇಹ ನನಗೆ! ಮಾವೋರಿಗಂಗೆಯಿಂದ ಕಡಲಿನ ಮೂಲಕ ಬಂದವುಗಳಲ್ಲವೇ ಭೂತಗಳು!

ಕೋಮುವಾದದ ಕ್ಯಾನ್ಸರ್ ಇಂದು ಕರಾವಳಿಯನ್ನು ತಿಂದುಹಾಕುತ್ತಿದೆ : ಯು ಟಿ ಫರ್ಝಾನಾ ಅಶ್ರಫ್

ಕರಾವಳಿಯಲ್ಲಿ ನಡೆಯುತ್ತಿರುವ ಈ ರಕ್ತರಾಜಕಾರಣ ಅತ್ಯಂತ ಹೇಯವಾದುದು. ಇದಕ್ಕೆ ಜೀವಕೊಟ್ಟು ಪೋಷಿಸಿ ಬೆಳೆಸಿದವರು ಬಿಜೆಪಿ ಬೆಂಬಲಿಗರು. ದ್ವೇಷಭಾಷಣಗಳನ್ನೇ ತಮ್ಮ‌ಬಂಡವಾಳ ಮಾಡಿಕೊಂಡ ಬಿಜೆಪಿ ನಾಯಕರು ಇದರ ಪ್ರಧಾನ ರೂವಾರಿಗಳು. ಅದರ ಬೆಳೆಯಾಗಿ ಕೋಮುವಾದದ ಕ್ಯಾನ್ಸರ್ ಇಂದು ಕರಾವಳಿಯನ್ನು ತಿಂದುಹಾಕುತ್ತಿದೆ. ಪ್ರತಿಯಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ. ಈ‌ ನಿಟ್ಟಿನಲ್ಲಿ ನಕ್ಸಲ್ ನಿಗ್ರಹ ದಳದ ಮಾದರಿಯಲ್ಲಿ, ಕರಾವಳಿಯಲ್ಲಿ ಆಂಟಿ ಕಮ್ಯೂನಲ್ ಫೋರ್ಸ್ ಅನ್ನು ಸ್ಥಾಪಿಸುವುದಾಗಿ ನಮ್ಮ ಗೃಹಮಂತ್ರಿಗಳು ಪ್ರಸ್ತಾಪಿಸಿದ್ದು ಸಾಧ್ಯವಾದಷ್ಟೂ ಬೇಗನೇ ಇದು ಕಾರ್ಯರೂಪಕ್ಕೆ ಬರಲಿ ಎಂದು ಕಾಯುತ್ತಿದ್ದೇವೆ. ದಂಡಂ ದಶಗುಣಂ ಎಂಬಂತೆ ಕೋಮುಕ್ರಿಮಿಗಳನ್ನು ಸದೆಬಡಿಯುವಂತಾಗಲಿ. ಈ ಸಾವು ಕರಾವಳಿಯಲ್ಲಿ ಕೊನೆಯ ಕೋಮುಕಲಹದ ಸಾಕ್ಷಿಯಾಗಲಿ ಎಂದು ಆಶಿಸುತ್ತೇವೆ.

ಸರಕಾರ ಅಪರಾಧ ನಡೆಯುವವರೆಗೆ ಕಾಯುವ ಅಗತ್ಯವಿದೆಯೇ?: ಡಾ ಉದಯ್‌ಕುಮಾರ್‌ ಇರ್ವತ್ತೂರು

ಕಾರಣ ಏನೇ ಇರಲಿ, ಯಾರದೇ, ಯಾವುದೇ ಕೊಲೆಯನ್ನ ಸಮರ್ಥಿಲಾಗದು. ಅದು ಖಂಡನೀಯ. ಮನುಷ್ಯರ ಅಮಾನುಷ ಕೊಲೆಯನ್ನೂ ಜಾತಿ ಲೆಕ್ಕಾಚಾರದಲ್ಲಿ ನೋಡುವ ಮನುಷ್ಯತ್ವವೇ ಇಲ್ಲದ ಜನಗಳ ಮಧ್ಯೆ ಬದುಕುವ ಸ್ಥಿತಿ ಸಮಾಜಕ್ಕೆ ಬಂದಿರುವುದು ನಮ್ಮ ದೌರ್ಭಾಗ್ಯ. ಕಾನೂನು ಪಾಲಕರ ಕೈಗಳನ್ನು ತಡೆಯುವ, ನ್ಯಾಯದ ತಕ್ಕಡಿಯನ್ನು ಪ್ರಭಾವಿಸುವ, ದ್ವೇಷ ಭಕ್ತರ ನಾಲಗೆಯನ್ನು ಬೇಕಾಬಿಟ್ಟಿ ಹರಿಯಬಿಡುತ್ತಿರುವ ಮನುಷ್ಯ ವಿರೋಧಿ ಶಕ್ತಿಗಳಿಂದ  ಇದೆಲ್ಲಾ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಸರಕಾರ ಅಪರಾಧ ನಡೆಯುವವರೆಗೆ ಕಾಯುವ ಅಗತ್ಯವಿದೆಯೇ?

ganesh

ಅಪರಾಧಿಗಳನ್ನು, ಪ್ರತ್ಯಕ್ಷವಾಗಿ ಅವರನ್ನು ಬೆಂಬಲಿಸುವವರನ್ನು ಮತ್ತು ದ್ವೇಷ ಭಾಷಣಕಾರರನ್ನು ಬಂಧಿಸಿ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಆಗುವಂತೆ ಮಾಡಬೇಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಮುದಾಯಗಳ ನಡುವೆ ದ್ವೇಷ, ವೈರತ್ವ ಹರಡುವವರ ವಿರುದ್ಧವೂ ಕಠಿಣ ಕ್ರಮಗಳಾಗಬೇಕಿದೆ. ದಕ್ಷಿಣ ಕನ್ನಡದ ಜಿಲ್ಲೆಯ ಬಗ್ಗೆ ಸರಕಾರಕ್ಕೆ ಕಾಳಜಿ ಇದ್ದರೆ ಆದಷ್ಟು ಶೀಘ್ರವಾಗಿ ಕರ್ನಾಟಕ ಸರಕಾರದ ಸಚಿವ ಸಂಪುಟ ಮಂಗಳೂರಲ್ಲಿ ಸೇರಿ, ಸಮಾಜದ ಗಣ್ಯರನ್ನೊಳಗೊಂಡ ಶಾಂತಿ ಸಭೆ ರಚಿಸಿ, ನಾಗರಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಅದರೊಟ್ಟಿಗೆ ಗೃಹಖಾತೆಗೊಬ್ಬ ದೃಢ ಮನಸ್ಸಿನಿಂದ ಕೆಲಸ ಮಾಡುವ ಸಚಿವರ ಅಗತ್ಯವಿದೆ ಎಂದು ಅನಿಸುತ್ತಿದೆ.

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ?: ಡಾ ಪುರುಷೋತ್ತಮ ಬಿಳಿಮಲೆ

ಕೋಮುವಾದಿಗಳನ್ನು ಮಟ್ಟ ಹಾಕಲು ಅಧಿಕಾರಿಗಳು, ಪೊಲೀಸ್ ಇಲಾಖೆ ಮತ್ತು ನಾಗರಿಕ ಸಮಾಜ ಒಂದಾಗಬೇಕು.‌ ಆದರೆ ಹಾಗೆ ಆಗುತ್ತಿಲ್ಲ, ಏಕೆಂದರೆ ಮಾಫಿಯಾ ದಂಧೆಯೊಂದಿಗೆ ಹಲವರು ಕೈಜೋಡಿಸಿರುವುದು.‌ ಎಲ್ಲರೂ ಮನಸು ಮಾಡಿದರೆ ಇದೇನು ಕಷ್ಟದ ಕೆಲಸ ಅಲ್ಲ.‌ ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಸಾಮರಸ್ಯ ಜಾಗೃತಿ ಕೆಲಸ ಸರ್ಕಾರದಿಂದ ಆಗಬೇಕು : ಎಂ ಜಿ ಹೆಗಡೆ

ಕರಾವಳಿ ಭಾಗದಲ್ಲಿನ ಕೋಮು ಗಲಭೆಯನ್ನು ನಿಯಂತ್ರಣ ಮಾಡಲು, ಒಂದು ಇಲ್ಲಿನ ದಶಕಗಳ ಕಾಲದ ಸಂಸ್ಕೃತಿ, ಬದುಕು, ನಂತರ ಬಂದ ಭೂಗತ ಜಗತ್ತು ಇತ್ಯಾದಿ ಅರ್ಥವಾಗಬೇಕು. ಪ್ರಸ್ತುತ ಕೋಮುವಾದ, ರಾಜಕೀಯ ಒಳ ಒಪ್ಪಂದ, ವ್ಯವಹಾರ ವಿಷಯಗಳು ತಿಳಿಯಬೇಕು. ಎರಡನೆಯದಾಗಿ, ಇದಕ್ಕೆ ಪರಿಹಾರ ಯೋಚಿಸುವ ವ್ಯಕ್ತಿ ಹಿಂದೂ ಮುಸ್ಲಿಂ ಕ್ರೈಸ್ತ ಜೈನ್ ಎಂಬ ಯಾವುದೇ ವ್ಯತ್ಯಾಸ ಇಲ್ಲದೇ, ನಿಷ್ಪಕ್ಷಪಾತವಾಗಿದ್ದುಕೊಂಡು ಕ್ರಮ ಕೈಗೊಳ್ಳಬೇಕು. ಮೂರನೆಯದಾಗಿ, ಪ್ರತೀ ಪ್ರಕರಣದ ಉದ್ದೇಶ ಮತೀಯವಾದ ಆಗಿರದೆ, ಅದು ಹೆಣ್ಣು ಹೊನ್ನು ಮಣ್ಣು ಮತ್ತು ರಾಜಕೀಯ ಹಾಗೂ ರೌಡಿಸಂ ಕಾರಣಗಳಿಗೂ ಆಗಿರುತ್ತದೆ. ಆದ್ದರಿಂದ ಎಲ್ಲಾ ಪ್ರಕರಣಗಳ ಉದ್ದೇಶವನ್ನು ಪೊಲೀಸ್ ಬಹಿರಂಗವಾಗಿ ಸ್ಪಷ್ಟವಾಗಿ ತಿಳಿಸಬೇಕು. ಈ ಪ್ರಕರಣ ಮುಗಿಯುವ ಬಗೆ ಯಾರಿಗೂ ಗೊತ್ತಿಲ್ಲ. ಅದು ಹೇಗೆ ಮುಗಿದಿದೆ ಎಂದೂ ಜನರಿಗೆ ಮಾಹಿತಿ ಸಿಗಬೇಕು. ಇದೆಲ್ಲದರ ಜೊತೆಗೆ ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಮರಸ್ಯ ಜಾಗೃತಿಗೆ ಸರ್ಕಾರ ಕೆಲಸ ಮಾಡಲೇಬೇಕು.

ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ : ಸಿಹಾನ

ಶಾಂತಿ, ಸೌಹಾರ್ದತೆಯ ನೆಲೆಬೀಡಾಗಿದ್ದ ಕರಾವಳಿ ಇಂದು ಕೋಮುದಳ್ಳುರಿಯಲ್ಲಿ ನಲುಗಿ ಗುಂಪು ನರಹತ್ಯೆಯಲ್ಲಿ ಮುಳುಗಿರುವುದು ಜನರಲ್ಲಿ ಆತಂಕವನ್ನು ಹೆಚ್ಚಾಗಿಸಿದೆ. ಬಹಿರಂಗವಾಗಿ ನಡೆಸುವ ಕೋಮುದ್ವೇಷದ ಭಾಷಣಗಳು, ಪ್ರಚೋದನಕಾರಿ ಹೇಳಿಕೆಗಳು ಇದಕ್ಕೆ ಕಾರಣ. ಜನರ ಮೇಲೆ ರಕ್ಷಣೆಗೆ ನಿಲ್ಲಬೇಕಾದವರು ಜನರ ನಂಬಿಕೆಯನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಕರಣ ದಾಖಲಾದರೂ ಕಠಿಣಕ್ರಮ ಕೈಗೊಳ್ಳುವಲ್ಲಿ ಸರಕಾರದ ವೈಫಲ್ಯತೆ ಎದ್ದು ಕಾಣುತ್ತಿದೆ. ಕರಾವಳಿಯಲ್ಲಿ ಇನ್ನೂ ಆ್ಯಂಟಿ ಕಮ್ಯುನಲ್ ಫೋರ್ಸ್ಗೆ ಸಣ್ಣ ಉಸಿರಾಟ ಬಾಕಿ ಉಳಿದಿದೆಯೇ? ಪರಿಸ್ಥಿತಿ ಗಂಭೀರತೆಗೆ ತಿರುಗುವ ಮೊದಲು, ಇನ್ನಷ್ಟು ಅಮಾಯಕರ ಜೀವ ಬಲಿಯಾಗುವ ಮೊದಲು ಸೂಕ್ತ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು.

ಇದು ಕೋಮುವಾದ ಅಲ್ಲ, ಆಂತರಿಕ ಭಯೋತ್ಪಾದನೆ : ಪ್ರೊ ಚಂದ್ರ ಪೂಜಾರಿ

ಪೊಲೀಸ್‌ ಮತ್ತು ಸರ್ಕಾರದ ಕ್ರಮಗಳು ಗಾಯದ ಮೇಲೆ ಹಚ್ಚುವ ಮುಲಾಮಿನಂತೆ. ಇದು ದೀರ್ಘಕಾಲೀನ ಪರಿಹಾರ ಅಲ್ಲ. ಸಮಾಜದಲ್ಲಿರುವ ಸುಶಿಕ್ಷಿತ ಜನ ಮಾತಾಡಬೇಕು. ಅವರ ಮೌನ ಅಪಾಯಕಾರಿ. ಮುಖ್ಯವಾಗಿ ಶಿಕ್ಷಕರು, ನ್ಯಾಯವಾದಿಗಳು, ವೈದ್ಯರು, ಉದ್ಯಮಿಗಳು, ದೇವಸ್ಥಾನಗಳ ಮುಖ್ಯಸ್ಥರು ಹಾಗೂ ಎಲೈಟ್‌ ಜನರು ಒಂದಾಗಿ ಧ್ವನಿ ಎತ್ತಬೇಕು. ನಾಗರಿಕ ಸಮಾಜವನ್ನು ಸಮರೋಪಾದಿಯಲ್ಲಿ ಒಗ್ಗೂಡಿಸುವುದೊಂದೇ ಇದಕ್ಕಿರುವ ಶಾಶ್ವತ ಪರಿಹಾರ. ಯಾಕೆಂದರೆ ಈ ಜನರು ಇದುವರೆಗೆ ಕೋಮುವಾದದ ವಿರುದ್ಧ ಧ್ವನಿ ಎತ್ತಿಲ್ಲ.

ಬಹುಸಂಖ್ಯಾತ ಸಮುದಾಯದ ಮತಗಳನ್ನು ಗಳಿಸುವ ಉದ್ದೇಶದಿಂದ ರಾಜಕೀಯ ಪಕ್ಷವೊಂದು ಸೃಷ್ಟಿಸಿರುವ ಪ್ರಸ್ತುತ ಅಶಾಂತಿಯ ಸಮಸ್ಯೆಯನ್ನು ದಯವಿಟ್ಟು ʼಕೋಮುವಾದʼ ಎಂದು ಕರೆಯಬೇಡಿ. ಈ ಸಮಸ್ಯೆಗೆ ಭಯೋತ್ಪಾದನೆಯ ಎಲ್ಲಾ ಲಕ್ಷಣಗಳಿವೆ. ಆದ್ದರಿಂದ ಇದನ್ನು ಆಂತರಿಕ ಭಯೋತ್ಪಾದನೆ ಎಂದು ಕರೆಯಬೇಕು.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

3 COMMENTS

  1. ಮತಾಂಧರು ಕೊಲೆಯನ್ನು ಹುಟ್ಟು ಹಾಕಿದಾಗ ನಿಮ್ಮ ಮಾಧ್ಯಮ ಮಲಗಿತ್ತೆ?

  2. This writer has gone mad. She’s criticising Hindus and BJP, she has no guts to take on PFI or sdpi. She’s dreaming of becoming a congress leader. Shame on such partial analysis.

  3. ಲೇಖಕರು ನೀಡಿದ ವಿಮರ್ಶೆ ನೂರಕ್ಕೆ ನೂರು ಸತ್ಯ. ನಮ್ಮ ಕರಾವಳಿಯ ಯುವಕರ ಮನಸಿನಲ್ಲಿ ಕೋಮು ವಿಷಬೀಜ ತುಂಬಿ ಛೂ ಬಿಡುವಂತ ಸನ್ನಿವೇಶ ನಿರ್ಮಾಣ ಆಗಿದೆ. ಹಿಂದೂ ಸಮಾಜವನ್ನು ತನ್ನ ಬಿಗಿ ಹಿಡಿತದಲ್ಲಿ ಇಟ್ಟುಕೊಂಡು ವೋಟ್ ರಾಜಕಾರಣ ಮಾಡುವುತ್ತಿರುವುದು ಕಂಡು ಬರುತ್ತೆ. ಈ ವಿಷ ವರ್ತೂಲದಲ್ಲಿ ರಾಜಕಾರಣಿಗಳ ಮಕ್ಕಳು ಇಲ್ಲ. ಇಲ್ಲಿ ನಡೆಯುತ್ತಿರುವ ಆಟ, ನಮ್ಮ ಹಿಂದೂ ಸಮಾಜದ ಹಿಂದುಳಿದ ವರ್ಗದ ಮಕ್ಕಳನ್ನು ( ಬಿಲ್ಲವ, ಬಂಟ್ಸ್, ಮೊಗವೀರ ಹಾಗೂ ಇನ್ನಿತರ ಹಿಂದುಳಿದ ಜಾತಿಗಳ ಮಕ್ಕಳನ್ನು, ಯುವಕರನ್ನು ಕೋಮುವಿನ ಮದ ಏರಿಸಿ ಇಂತಹ ಕೃತ್ಯ ಕ್ಕೆ ಬಳಸುತ್ತಾರೆ. ಇದು ನಮ್ಮಹಿಂದುಳಿದ ಸಮಾಜದ ಯುವಕರು ತಿಳಿಯುವವರೆಗೆ ಬಹಳ ಕಷ್ಟ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X