ಈರುಳ್ಳಿ ಶೆಡ್ ನಿರ್ಮಾಣದ ಸಬ್ಸಿಡಿ ಹಣದಲ್ಲಿ ರೈತನಿಂದ ಫೋನ್ ಪೇ ಮೂಲಕ ₹5 ಸಾವಿರ ಲಂಚ ಪಡೆದ ಯಾದಗಿರಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವದತ್ತ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬದ್ದೆಪಲ್ಲಿ ಗ್ರಾಮದ ರೈತ ಶಂಕರಪ್ಪ ಈರುಳ್ಳಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದರು. ಅವರಿಗೆ ಸರ್ಕಾರದಿಂದ ₹80 ಸಾವಿರ ಸಬ್ಸಿಡಿ ಹಣ ಮಂಜೂರಾಗಿತ್ತು. ಆ ಹಣ ಮಂಜೂರು ಮಾಡಲು ಸಬ್ಸಿಡಿ ಹಣದಲ್ಲಿ ಸುಮಾರು ₹20 ಸಾವಿರ ನೀಡುವಂತೆ ಶಿವದತ್ತ ಬೇಡಿಕೆ ಇಟ್ಟಿದ್ದರು. ಗುರುವಾರ ರೈತ ಶಂಕರಪ್ಪ ಅವರು ಲಂಚದ ಹಣ ಅಧಿಕಾರಿಗೆ ಫೋನ್ ಪೇ ಮೂಲಕ ಐದು ಸಾವಿರ ಜಮಾ ಮಾಡಿದ್ದಾರೆ.
ರೈತ ಶಂಕರಪ್ಪ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ, ಅಧಿಕಾರಿಗಳು ಯಾದಗಿರಿಯ ಅಂಬೇಡ್ಕರ್ ನಗರದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.
ಲೋಕಾಯುಕ್ತ ಎಸ್ಪಿ ಬಿ.ಕೆ.ಉಮೇಶ್, ಡಿವೈಎಸ್ಪಿ ಜೆ.ಎಚ್.ಇನಾಂದಾರ್ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಸಿದ್ದರಾಯ, ಸಂಗಮೇಶ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದರು.
ಅಧಿಕಾರಿ ಶಿವದತ್ತನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಸತೀಶ್, ಅಮರನಾಥ, ರಾಮುನಾಯಕ, ಮಲ್ಲಮ್ಮ, ನವೀನ್, ಗಂಗಾಧರ, ಸುಮತಿ , ಮಲ್ಲಪ್ಪ, ಖಾಸೀಂ, ಮಲ್ಲಿನಾಥ, ಮಲ್ಲಿಕಾರ್ಜುನ ಮಡಿವಾಳ ಇದ್ದರು.
ಇದನ್ನೂ ಓದಿ : ಕಲಬುರಗಿ ಡಿಸಿ ವಿರುದ್ಧ ಅವಹೇಳನಕಾರಿ ಹೇಳಿಕೆ : ಎನ್.ರವಿಕುಮಾರ್ ವಿರುದ್ಧ ಮಹಿಳಾ ಕಾಂಗ್ರೆಸ್ ಪ್ರತಿಭಟನೆ