ಹಿರಿಯ ಕವಿ ಎಚ್ ಎಸ್ ವೆಂಕಟೇಶಮೂರ್ತಿ(ಎಚ್‌ಎಸ್‌ವಿ) ಶುಕ್ರವಾರ ನಿಧನರಾಗಿದ್ದಾರೆ. 80 ವರ್ಷದ ಅವರು ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಮುಂಜಾನೆ 7 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.
1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನಿಸಿದ ಎಚ್‌ಎಸ್‌ವಿ ಅವರ ತಂದೆ ನಾರಾಯಣ ಭಟ್ಟರು ಮತ್ತು ತಾಯಿ ನಾಗರತ್ನಮ್ಮ. ಬಾಲ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಳೆದ ತಮ್ಮ ಅನುಭವವನ್ನು ಅವರ ಸಾಹಿತ್ಯದಲ್ಲಿ ಕಾಣಿಸಿದ್ದಾರೆ.
ಇದನ್ನು ಓದಿದ್ದೀರಾ? ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನ
ನಾಟಕ, ಕಾದಂಬರಿ, ಮಕ್ಕಳ ಸಾಹಿತ್ಯ, ವಿಮರ್ಶೆ, ಅನುವಾದ, ಕವಿತೆ – ಹೀಗೆ ಸಾಹಿತ್ಯ ಕ್ಷೇತ್ರಕ್ಕೆ ಎಚ್‌ಎಸ್‌ವಿ ಕೊಡುಗೆ ಅಗಾಧ. ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 1973ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಸುಮಾರು ಮೂರು ದಶಕಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ ಬಳಿಕ 2000ರಲ್ಲಿ ನಿವೃತ್ತಿ ಪಡೆದರು. ವಿವಿಧ ಪ್ರಶಸ್ತಿ ಪುರಸ್ಕೃತರಾದ ಅವರು, ಕಲಬುರಗಿಯಲ್ಲಿ ನಡೆದ 85ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಎಚ್‌ಎಸ್‌ವಿ ಅವರ “ಕನ್ನಡದಲ್ಲಿ ಕಥನ ಕವನಗಳು” ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಲಭಿಸಿದೆ. ಬಾಗಿಲು ಬಡಿವ ಜನಗಳು, ಪರಿವೃತ್ತ, ಮೂವತ್ತು ಮಳೆಗಾಲ, ಸೌಗಂಧಿಕ ಕವನ ಸಂಕಲನಗಳು, ಅಗ್ನಿವರ್ಣ, ಹೆಜ್ಜೆಗಳು, ಒಂದು ಸೈನಿಕ ವೃತ್ತಾಂತ ಎಂಬ ನಾಟಕಗಳು ಸೇರಿದಂತೆ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
