ಬಿಜೆಪಿ ಸಚಿವ ಸುಕಾಂತ ಮಜುಂದಾರ್ ‘ಆಪರೇಷನ್ ಪಶ್ಚಿಮ ಬಂಗಾಳ’ಕ್ಕೆ ಕರೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. “ಆಪರೇಷನ್ ಸಿಂಧೂರದಂತೆಯೇ, ನಾವು ಬಿಜೆಪಿ ಸೈನಿಕರು ಈಗ ಆಪರೇಷನ್ ಪಶ್ಚಿಮ ಬಂಗಾಳವನ್ನು ನಡೆಸಿ ಟಿಎಂಸಿಯನ್ನು ಹೊಡೆದುರುಳಿಸುತ್ತೇವೆ” ಎಂದು ಹೇಳಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಅಲಿಪುರ್ದೂರ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೂ ಮುನ್ನ ಸುಕಾಂತ ಮಜುಂದಾರ್ ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) ಅನ್ನು ಅಧಿಕಾರದಿಂದ ಕಿತ್ತೊಗೆಯುವ ಗುರಿಯನ್ನು ಹೊಂದಿರುವ ಆಪರೇಷನ್ ಪಶ್ಚಿಮ ಬಂಗಾಳಕ್ಕೆ ಕರೆ ನೀಡಿದ್ದಾರೆ. ಈ ಹೇಳಿಕೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಯಶಸ್ಸು ಭಾರತೀಯ ಸೈನ್ಯಕ್ಕೆ ಸಲ್ಲಬೇಕು: ಸಿಎಂ ಸಿದ್ದರಾಮಯ್ಯ
“ಪ್ರಧಾನಿ ಮೋದಿ ನಾಯಕತ್ವದಲ್ಲಿ ಬಿಜೆಪಿ ಕಾರ್ಯಕರ್ತರು ‘ಆಪರೇಷನ್ ಸಿಂಧೂರ’ದಂತೆಯೇ ‘ಆಪರೇಷನ್ ಪಶ್ಚಿಮ ಬಂಗಾಳ’ವನ್ನು ನಡೆಸುತ್ತಾರೆ” ಎಂದು ಹೇಳಿದ್ದಾರೆ. ಟಿಎಂಸಿ ಗೂಂಡಾಗಳ ಕೈಯಲ್ಲಿ ಹಲವು ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎನ್ನಲಾದ ಈ ಹಿಂದಿನ ಘಟನೆಗಳನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ.
“ಕಾಶ್ಮೀರದಲ್ಲಿ, ಪಾಕಿಸ್ತಾನವು ತಾಯಂದಿರು ಮತ್ತು ಸಹೋದರಿಯರ ಹಣೆಯ ಮೇಲಿನ ಸಿಂಧೂರವನ್ನು ಅಳಿಸಿಹಾಕಿತು. ನರೇಂದ್ರ ಮೋದಿ ಅದಕ್ಕೆ ಪ್ರತೀಕಾರ ತೀರಿಸಿಕೊಂಡರು. ಆಪರೇಷನ್ ಸಿಂಧೂರದಂತೆಯೇ, ನಾವು ಬಿಜೆಪಿ ಸೈನಿಕರು ಈಗ ಆಪರೇಷನ್ ಪಶ್ಚಿಮ ಬಂಗಾಳವನ್ನು ನಡೆಸಿ ಟಿಎಂಸಿಯನ್ನು ಉರುಳಿಸುತ್ತೇವೆ. ಟಿಎಂಸಿಯನ್ನು ಗುಡಿಸಿ ಬಂಗಾಳ ಕೊಲ್ಲಿಗೆ ಎಸೆಯಲು ಬಿಜೆಪಿ ಸಿದ್ದ” ಎಂದು ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಕಾಶ್ಮೀರ ಮತ್ತು ಮುರ್ಷಿದಾಬಾದ್ ಈಗ ಒಂದಾಗಿವೆ ಎಂಬ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾರೆ. “ನಾನು ಇತ್ತೀಚೆಗೆ ಮುರ್ಷಿದಾಬಾದ್‌ಗೆ ಭೇಟಿ ನೀಡಿದಾಗ ಮನೆಗಳು ಸುಟ್ಟುಹೋಗಿರುವುದನ್ನು ನೋಡಿದೆ. ಸಿಂಧೂರ ಮತ್ತು ತುಳಸಿ ಮಾಲೆ ಧರಿಸಿರುವುದು ಅವರ ತಪ್ಪಾಗಿದೆ. ಕಾಶ್ಮೀರ ಮತ್ತು ಮುರ್ಷಿದಾಬಾದ್ ಈಗ ಒಂದಾಗಿವೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಪಾಕಿಸ್ತಾನಿ ಸೇನೆಯ ಪ್ರಧಾನ ಕಚೇರಿವರೆಗೂ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮುಟ್ಟಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್
“2026ರಲ್ಲಿ ಮಮತಾ ಬ್ಯಾನರ್ಜಿ ಸರ್ಕಾರವನ್ನು ಬೇರುಸಹಿತ ಕಿತ್ತು ಬಂಗಾಳಕೊಲ್ಲಿಯಲ್ಲಿ ಎಸೆಯಲು ನಾವು ಸಿದ್ಧರಾಗಿರಬೇಕು. ಅಂತಿಮ ಯುದ್ಧಕ್ಕೆ ಸಜ್ಜಾಗಿ” ಎಂದು ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ಈ ಹೇಳಿಕೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ. “ಆಪರೇಷನ್ ಬಂಗಾಳದ ಬಗ್ಗೆ ಮಾತನಾಡುವುದಾದರೆ ನಾಳೆಯೇ ಚುನಾವಣೆ ನಡೆಸುವ ಸವಾಲು ನಾನು ಅವರಿಗೆ ಹಾಕುತ್ತೇನೆ. ಎಲ್ಲಾ ಕೇಂದ್ರ ಸಂಸ್ಥೆಗಳು ನಿಮ್ಮ ಕೈಯಲ್ಲೇ ಇದೆ. ನಾವು ಚುನಾವಣೆಗೆ ಸಿದ್ಧರಿದ್ದೇವೆ” ಎಂದು ಮಮತಾ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದರು.
ಮುರ್ಷಿದಾಬಾದ್‌ನಲ್ಲಿ ಇತ್ತೀಚೆಗೆ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧವಾಗಿ ನಡೆದ ಪ್ರತಿಭಟನೆ ವೇಳೆ ಕೋಮು ಗಲಭೆ ನಡೆದಿದೆ. ಈ ಹಿಂಸಾಚಾರದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 150ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.
