- ಎಸ್.ಎಂ ಕೃಷ್ಣ ಕಾಲದಲ್ಲಿ ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಪಹಣಿ ನೀಡುವ “ಭೂಮಿ” ವ್ಯವಸ್ಥೆ ಜಾರಿ
- ನಮ್ಮ ಸಂಪನ್ಮೂಲ ವೃದ್ಧಿಸಿಕೊಳ್ಳದಿದ್ದರೆ ಬೆಂಗಳೂರು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ: ಡಿಕೆಶಿ
“ಬೆಂಗಳೂರಿನ ನಾಗರಿಕರು ಇನ್ನು ಮುಂದೆ ತಮ್ಮ ಆಸ್ತಿ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳನ್ನು ಅಲೆಯುವ ಅಗತ್ಯ ಇರುವುದಿಲ್ಲ. ಸರ್ಕಾರವೇ ಅವರ ಮನೆ ಬಾಗಿಲಿಗೆ ಅವರ ಆಸ್ತಿ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಖಾತೆ ಎಂದು ಕರೆಯುವ ಬದಲು ಅದಕ್ಕೆ ಬೇರೆ ಹೆಸರು ಇಟ್ಟು, ಎಲ್ಲ ಆಸ್ತಿ ದಾಖಲೆಗಳನ್ನು ಒದಗಿಸಲಾಗುವುದು” ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದಲ್ಲಿ ಶನಿವಾರ ಬ್ರ್ಯಾಂಡ್ ಬೆಂಗಳೂರು ಕುರಿತು ನಡೆದ ಸಂವಾದ ಕಾರ್ಯಕ್ರಮದ ಮಾತನಾಡಿದ ಅವರು, “ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ಪಹಣಿಗಳನ್ನು ನೀಡುವ “ಭೂಮಿ” ವ್ಯವಸ್ಥೆ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ಮನೆ ಬಾಗಿಲಲ್ಲೇ ಆಸ್ತಿ ದಾಖಲೆಗಳನ್ನು ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು” ಎಂದರು.
“ಕಾನೂನು ರೀತಿಯಲ್ಲಿ ತೆರಿಗೆ ಕಟ್ಟುತ್ತಿರುವವರಿಗೆ ತೊಂದರೆಯಾಗುತ್ತಿದ್ದು, ತೆರಿಗೆ ಕಟ್ಟದವರಿಗೆ ರಕ್ಷಣೆ ಸಿಗುತ್ತಿದೆ. ಹಾಗಾಗಿ, ಮನೆ ಬಾಗಿಲಿಗೆ ಆಯಾ ಆಸ್ತಿ ದಾಖಲೆಗಳನ್ನು ತಲುಪಿಸಿದರೆ, ಯಾರ ಬಳಿ ಎಷ್ಟು ಆಸ್ತಿ ಇದೆ ಎಂಬ ಸ್ಪಷ್ಟ ಚಿತ್ರಣ ಸಿಗುತ್ತದೆ. ಆಗ ಯಾರೂ ಕೂಡ ಆಸ್ತಿ ತೆರಿಗೆ ಪಾವತಿಸದೇ ತಪ್ಪಿಸಿಕೊಳ್ಳಲು ಆಗುವುದಿಲ್ಲ” ಎಂದು ಹೇಳಿದರು.
“ಆಸ್ತಿ ತೆರಿಗೆ ವಿಚಾರದಲ್ಲಿ ದೊಡ್ಡವರು, ಸಣ್ಣವರು ಎಂಬ ಭೇದ ಮಾಡುವುದಿಲ್ಲ. ಈ ವಿಚಾರದಲ್ಲಿ ಯಾರು ತೆರಿಗೆ ಪಾವತಿಸಿಲ್ಲ ಎಂದು ಮ್ಯಾಪಿಂಗ್ ಮಾಡುತ್ತೇವೆ. ನಮ್ಮ ಸಂಪನ್ಮೂಲ ವೃದ್ಧಿಸಿಕೊಳ್ಳದಿದ್ದರೆ ಬೆಂಗಳೂರು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಾವು ಕೈಗೆತ್ತಿಕೊಳ್ಳಲು ಮುಂದಾಗಿರುವ ಬೃಹತ್ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣ ಮಾಡಿಕೊಳ್ಳಬೇಕು. ಹೀಗಾಗಿ, ಎಲ್ಲರೂ ತೆರಿಗೆ ಪಾವತಿಸುವಂತೆ ನೋಡಿಕೊಳ್ಳಬೇಕು” ಎಂದು ತಿಳಿಸಿದರು.
ಬೆಂಗಳೂರು ಅಭಿವೃದ್ಧಿಗೆ ಮಕ್ಕಳ ಸಲಹೆ
“ಇನ್ನು ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಮಕ್ಕಳ ಅಭಿಪ್ರಾಯವನ್ನು ಪಡೆಯಲು ಸಲಹೆ ಬಂದಿದ್ದು, ಮಕ್ಕಳ ಸಲಹೆಯನ್ನು ಸರ್ಕಾರ ಪರಿಗಣಿಸಲಿದೆ. ಈ ವಿಚಾರವಾಗಿ ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳ ಜೊತೆ ಸಭೆ ಆಯೋಜಿಸುವಂತೆ ಒಂದು ಸಂಸ್ಥೆಗೆ ಸೂಚನೆ ನೀಡಿದ್ದೇನೆ. ಎಲ್ಲರ ಅಭಿಪ್ರಾಯ ಪಡೆಯಲು ಸಾಧ್ಯವಾಗದೇ ಇರುವುದರಿಂದ ಡಿಬೇಟ್ ಕಾರ್ಯಕ್ರಮದ ಮೂಲಕ ಬೆಂಗಳೂರಿನ ವಿಚಾರವಾಗಿ ಮಕ್ಕಳು ಯಾವ ರೀತಿ ಕನಸು ಕಾಣುತ್ತಿದ್ದಾರೆ ಎಂದು ಅವರ ಅಭಿಪ್ರಾಯ ತಿಳಿಯಲಾಗುವುದು” ಎಂದು ಹೇಳಿದರು.
“ಬೀದಿ ಬದಿ ವ್ಯಾಪಾರಿಗಳಿಗೆ ಈಗಾಗಲೇ ಕಾನೂನು ಇದ್ದು, ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಪಾದಚಾರಿಗಳಿಗೂ ಅನುಕೂಲ ಆಗುವಂತೆ ನೀತಿ ರೂಪಿಸಲಾಗುವುದು” ಎಂದರು.
“ನಗರದಲ್ಲಿ ಎಲ್ಲೆಂದರಲ್ಲಿ ರಸ್ತೆಗಳ ಪಕ್ಕದಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ. ಈ ವಿಚಾರವಾಗಿ ಪಾಲಿಕೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದೇನೆ. ರಾಜ್ಯದಲ್ಲಿ ವಾಹನಗಳ ಮಾಲೀಕರ ಸಂಘದ ಜೊತೆ ಮಾತನಾಡಿದ್ದು, ಎಲ್ಲೆಂದರಲ್ಲಿ ಜನ ತ್ಯಾಜ್ಯ ವಿಲೇವಾರಿ ಮಾಡದಂತೆ ಸೂಚನೆ ನೀಡಿದ್ದೇನೆ. ಬೆಂಗಳೂರಿನ ಸ್ವಚ್ಛತೆ ಕಾಪಾಡುವ ವಿಚಾರವಾಗಿ ಈ ತಿಂಗಳಲ್ಲಿ ಮೂರು ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಪ್ರತಿಪಕ್ಷಗಳ ಸಭೆಗೆ ಹಾಜರಾಗಲಿರುವ ಮಮತಾ ಬ್ಯಾನರ್ಜಿ; ಔತಣಕೂಟಕ್ಕೆ ಗೈರು
“ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ಸುಮಾರು 6 ರಿಂದ 7 ವಿಭಾಗಗಳಲ್ಲಿ ಸಾರ್ವಜನಿಕರಿಂದ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಈ ಸಲಹೆಗಳ ಪರಿಶೀಲನೆ ಹಾಗೂ ವರ್ಗೀಕರಣಕ್ಕೆ ಕೆಲವು ಸಂಘ ಸಂಸ್ಥೆಗಳ ಜೊತೆ ಚರ್ಚೆ ಮಾಡಲಾಗಿದೆ. ಹಳ್ಳಿಗಳಲ್ಲಿ ಗ್ರಾಮ ಸಭೆಗಳ ಮಾದರಿಯಲ್ಲಿ ವಾರ್ಡ್ ಮಟ್ಟದಲ್ಲಿ ವಾರ್ಡ್ ಸಭೆಗಳನ್ನು ಮಾಡಬೇಕು. ಆ ಮೂಲಕ ಸ್ಥಳೀಯ ನಾಗರಿಕರ ಅಭಿಪ್ರಾಯ ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ. ರಸ್ತೆ ಗುಂಡಿ ವಿಚಾರವಾಗಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಪ್ರತ್ಯೇಕ ಸಭೆ ಮಾಡಲಾಗುವುದು” ಎಂದರು.