ದಾವಣಗೆರೆಯ ಉತ್ತರ ವಲಯದ ಸಿದ್ದನೂರು ಲಂಬಾಣಿಹಟ್ಟಿ ಗ್ರಾಮದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಅಭಿಯಾನದಡಿ ಗ್ರಾಮಸ್ಥರ ಸಭೆ ಆಯೋಜಿಸಲಾಗಿತ್ತು. ಬಹಳ ಶಿಥಿಲಗೊಂಡು ಬೀಳುವ ಹಾಗಿರುವ ಗ್ರಾಮದ ಸ.ಕಿ.ಪ್ರಾ.ಶಾಲೆಯ ಕಟ್ಟಡ ನಿರ್ಮಾಣ ಮಾಡಲು ಎಐಡಿಎಸ್‌ಓ (AIDSO) ವಿದ್ಯಾರ್ಥಿ ಸಂಘಟನೆಯಿಂದ ಅಧಿಕಾರಿಗಳು, ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು “ಗ್ರಾಮಸ್ಥರಿಗೆ ಈ ಕುಸಿಯುತ್ತಿರುವ ಕಟ್ಟಡಕ್ಕೆ ತಮ್ಮ ಮಕ್ಕಳನ್ನು ಸೇರಿಸಲು ಆತಂಕ ಹೆಚ್ಚಾಗಿದೆ. ಕಟ್ಟಡ ಕುಸಿತದಂತಹ ಅವಘಡ ಆದರೆ ಯಾರು ಹೊಣೆ, ಮೊದಲು ಗುಣಮಟ್ಟದ ಕಟ್ಟಡ ಕಟ್ಟಿಸಿ, ನಂತರ ನಾವು ಶಾಲೆಗೆ ಮಕ್ಕಳನ್ನು ಸೇರಿಸುತ್ತೇವೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಹಾಗಾಗಿ ಶಾಲೆಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.

“ಹಾಗೆಯೇ ಒಬ್ಬರೇ ಶಿಕ್ಷಕರಿದ್ದು ಹೆಚ್ಚುವರಿ ಶಿಕ್ಷಕರು ಬೇಕೆಂಬುದು ಗ್ರಾಮಸ್ಥರ ಆಗ್ರಹ, ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಬೇಕಾದ ಸರ್ಕಾರಿ ಶಾಲೆಯು ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಶಾಲೆಯ ಎದುರೇ ಕೆರೆಯಿದ್ದು ಸರಿಯಾದ ಕಾಂಪೌಂಡ್ ವ್ಯವಸ್ಥೆ ಸಹ ಇಲ್ಲ. ಇದು ಸಹ ಗ್ರಾಮಸ್ಥರ ಆತಂಕ, ಆಕ್ರೋಶಗೊಳ್ಳಲು ಕಾರಣ. ಶಾಲಾ ಕಟ್ಟಡವನ್ನು ತುರ್ತಾಗಿ ದುರಸ್ಥಿಗೊಳಿಸಬೇಕು ಮತ್ತು ಕೂಡಲೇ ಹೊಸ ಕಟ್ಟಡ ಮಂಜೂರು ಮಾಡಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ವಲಯ ಅಧಿಕಾರಿ ಜನಗಳ ಜೊತೆ ಚರ್ಚಿಸಿ “ಸರ್ಕಾರಿ ಕೆಲಸ ತಡವಾಗತ್ತೆ ಕನಿಷ್ಠ 6 ತಿಂಗಳಾದರೂ ಬೇಕು” ಎಂದಾಗ ಜನರು ಆಕ್ಷೇಪ ವ್ಯಕ್ತಪಡಿಸಿದಾಗ, ಸ್ಥಳದಲ್ಲಿಯೇ ಮೇಲಾಧಿಕಾರಿಗಳ ಹತ್ತಿರ ಫೋನ್ ನಲ್ಲಿ ಮಾತನಾಡಿ, ಹೊಸ ಕಟ್ಟಡಮಂಜೂರಾಗಿದೆ ಎಂದು ಎಂದು ಮಾಹಿತಿ ನೀಡಿದರು. ಭರವಸೆಯಂತೆ ಹೊಸ ಕಟ್ಟಡ ನಿರ್ಮಾಣವಾಗುವವರೆಗೂ ಹೋರಾಟ ನಡೆಸಲು ಸರ್ಕಾರಿ ಶಾಲೆ ಉಳಿಸಿ ಹೋರಾಟ ಸಮಿತಿ ರಚಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಆರ್‌ಟಿಇ ಪ್ರವೇಶಾತಿ ಪಟ್ಟಿ ಪ್ರಕಟಿಸದ ಶಿಕ್ಷಣ ಇಲಾಖೆ; ಚಾತಕ ಪಕ್ಷಿಯಂತೆ ಕಾಯುತ್ತಿರುವ ಪೋಷಕರ ಕಳವಳ
ಪೋಷಕರ ಬೇಡಿಕೆಗಳಾದ ಶಾಲೆಗೆ ಹೊಸ ಕಟ್ಟಡ, ಕಾಂಪೌಂಡ್ ದುರಸ್ತಿಗೊಳಿಸುವುದು, ಉತ್ತಮ ಶೌಚಾಲಯ, ಶುದ್ಧ ಕುಡಿಯುವ ನೀರು ಹಾಗೂ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಆಂಗ್ಲ ಮಾಧ್ಯಮವನ್ನು ಆರಂಭಿಸಬೇಕು ಎಂಬ ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.
ಈ ವೇಳೆ ಎಐಡಿಎಸ್‌ಓ ಸಂಘಟನೆಯ ಪೂಜಾ ನಂದಿಹಳ್ಳಿ, ಅಭಿಷೇಕ್, ಶ್ರೀನಿವಾಸ್, ಗಂಗಾಧರ್, ಸಂಗೀತ, ದಿವ್ಯಾ, ಭಾರತಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.