ತನ್ನ ಕೋಮು ದ್ವೇಷ, ವಿವಾದಾತ್ಮಕ, ಉತ್ತೇಜನಕಾರಿ ಭಾಷಣದ ಮೂಲಕವೇ ಹೆಚ್ಚಾಗಿ ಸುದ್ದಿಯಾಗಿರುವ ಬಿಜೆಪಿ ನಾಯಕಿ ಪ್ರಗ್ಯಾ ಠಾಕೂರ್ ಇದೀಗ ಮತ್ತೆ ಹಿಂದು-ಮುಸ್ಲಿಮರ ನಡುವೆ ದ್ವೇಷ ಬಿತ್ತುವ ಹೇಳಿಕೆಯನ್ನು ನೀಡಿದ್ದಾರೆ.
2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಗ್ಯಾ ಏಪ್ರಿಲ್ 22ರಂದು ನಡೆದ “ಪಹಲ್ಗಾಮ್ ದಾಳಿಯನ್ನು ‘ಹಿಂದೂಗಳ ಮೇಲೆ ಮುಸ್ಲಿಮರ ದಾಳಿ’ ಎಂದು ಕರೆಯಬೇಕು, ಜೊತೆಗೆ ಹಿಂದುಗಳೂ ಮುಸ್ಲಿಮರ ಮೇಲೆ ದಾಳಿ ನಡೆಸಬೇಕು” ಎಂಬ ಉದ್ರೇಕಕಾರಿ ಭಾಷಣವನ್ನು ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ; ದ್ವೇಷ ಭಾಷಣದಲ್ಲೇ ಫೇಮಸ್ ಆಗಿದ್ದವರು ಔಟ್!
ಇಂದೋರ್‌ನಲ್ಲಿ ಬಲಪಂಥೀಯ ಹಿಂದೂ ಸಂಘಟನೆ ಕರ್ಣಿ ಸೇನೆ ಮಹಾರಾಣಾ ಪ್ರತಾಪ ಜಯಂತಿಯ ಪ್ರಯುಕ್ತ ಆಯೋಜಿಸಿದ್ದ ‘ಪ್ರತಾಪ್ ಪರಾಕ್ರಮ ಯಾತ್ರೆ’ಯಲ್ಲಿ ಭಾಷಣ ಮಾಡಿದ ಪ್ರಗ್ಯಾ, ಕೋಮು ದ್ವೇಷ ಬಿತ್ತುವ ಕೆಟ್ಟ ಚಾಳಿಯನ್ನು ಮುಂದುವರೆಸಿದ್ದಾರೆ.
“ಧರ್ಮವನ್ನು ಗುರುತಿಸಿದ ಬಳಿಕ ಭಯೋತ್ಪಾದಕರು ಪುರುಷರನ್ನು ಕೊಂದು ನಮ್ಮ ಸಹೋದರಿಯರನ್ನು ವಿಧವೆಯರನ್ನಾಗಿಸಿದ್ದಾರೆ. ಆದ್ದರಿಂದ ಈ ದಾಳಿಯನ್ನು ನಾವು ಪಹಲ್ಗಾಮ್ ದಾಳಿಯೆಂದು ಕರೆಯಬಾರದು. ಹಿಂದೂಗಳ ಮೇಲೆ ಮುಸ್ಲಿಮರು ನಡೆಸಿದ ದಾಳಿ ಎನ್ನಬೇಕು. ಇಂತಹ ದಾಳಿ ನಡೆದಾಗ ಹಿಂದೂಗಳು ಕೂಡಾ ಮುಸ್ಲಿಮರ ಮೇಲೆ, ಮುಸ್ಲಿಮ್ ಭಯೋತ್ಪಾದಕರ ಮೇಲೆ ದಾಳಿ ನಡೆಸಬೇಕು” ಎಂದು ಪ್ರಗ್ಯಾ ಹೇಳಿದ್ದಾರೆ.
“ಇಂದಿನ ಸ್ಥಿತಿಯು ಮಹಾರಾಣಾ ಪ್ರತಾಪ್ ಮೊಘಲರ ವಿರುದ್ಧ ಧೈರ್ಯದಿಂದ ಹೋರಾಡಿದ ಸ್ಥಿತಿಗೆ ಹೋಲುತ್ತದೆ. ಮೊಘಲರು ಇಂದಿಗೂ ನಮ್ಮ ದೇಶದಲ್ಲಿ ದಾಳಿ ಮುಂದುವರೆಸಿದ್ದಾರೆ. ಇಂತಹ ಸ್ಥಿತಿಯಲ್ಲಿ ನಾವು ನಮಗಾಗಿ ನಿಲ್ಲಬೇಕು” ಎಂದರು.
“ಶತ್ರುಗಳನ್ನು ಎಂದಿಗೂ ಭಾಯಿ(ಸಹೋದರ) ಎಂದು ಸಂಬೋಧಿಸಬಾರದು ಎಂದು ಮಹಾರಾಣಾ ಪ್ರತಾಪ್, ಶಿವಾಜಿ ಮಹಾರಾಜ್ ಮತ್ತು ಪೃಥ್ವಿರಾಜ್ ಚೌಹಾಣ್ ಸೇರಿದಂತೆ ನಮ್ಮ ಎಲ್ಲಾ ಮಹಾನ್ ನಾಯಕರು ಹೇಳಿದ್ದಾರೆ. ಆದರೆ ನಾವೀಗ ಅನ್ಯ ಧರ್ಮಿಯರನ್ನು ಸಹೋದರ ಎಂದು ಸಂಬೋಧಿಸುತ್ತಿದ್ದೇವೆ. ಅವರನ್ನು ನೀವು ಸಹೋದರ ಎಂದು ಕರೆಯುವುದನ್ನು ನಿಲ್ಲಿಸಿದ ದಿನ ನೀವು ಸುರಕ್ಷಿತವಾಗಿರುತ್ತೀರಿ ಎಂಬುದನ್ನು ನೆನಪಿನಲ್ಲಿಡಿ” ಎಂದು ಠಾಕೂರ್ ಹೇಳಿದರು.
ಇದನ್ನು ಓದಿದ್ದೀರಾ? ಸಾವರ್ಕರ್ ʼಹಿಂದುತ್ವದ ಪಿತಾಮಹʼ ಎಂದು ಆರಾಧಿಸುವ ಗೋಡ್ಸೆ ಭಕ್ತರು ಗಾಂಧೀಜಿ ʼರಾಷ್ಟ್ರಪಿತʼ ಎಂದು ಯಾಕೆ ಒಪ್ಪಲ್ಲ ಗೊತ್ತೇ?
ಇನ್ನು ಕದನ ವಿರಾಮದ ಬಗ್ಗೆಯೂ ಮಾತನಾಡಿದ್ದಾರೆ. “ಯುದ್ಧವನ್ನು ಯಾಕೆ ನಿಲ್ಲಿಸಲಾಗಿದೆ ಎಂದು ಜನರು ಕೇಳುತ್ತಾರೆ. ಯುದ್ಧವು ಸಮಾನರ ನಡುವೆ ನಡೆಯುತ್ತದೆ, ಆನೆ ಎಂದಿಗೂ ನಾಯಿಯೊಂದಿಗೆ ಹೋರಾಡಲ್ಲ ಎಂಬುದು ನೆನಪಿರಲಿ” ಎಂದಿದ್ದಾರೆ.
ಬಿಜೆಪಿ ಮಾಜಿ ಸಂಸದೆ ಪ್ರಗ್ಯಾ ಠಾಕೂರ್ ಇದೇ ಮೊದಲು ದ್ವೇಷ ಭಾಷಣ ಮಾಡಿರುವುದಲ್ಲ. ಈ ಹಿಂದೆಯೂ ಹಲವು ಬಾರಿ ಎರಡು ಧರ್ಮಗಳನ್ನು ಎತ್ತಿಕಟ್ಟುವ ಹೇಳಿಕೆಗಳನ್ನು ನೀಡಿದ್ದಾರೆ. ಬಹುತೇಕ ಹೊಡಿ-ಬಡಿ-ಕೊಲ್ಲು ಎಂಬ ಹೇಳಿಕೆಗಳೇ ನೀಡಿದ್ದಾರೆ. ದೂರು ದಾಖಲಾಗಿದ್ದರೂ ಈವರೆಗೂ ಯಾವುದೇ ಪ್ರಕರಣದಲ್ಲಿ ಕಠಿಣ ಶಿಕ್ಷೆ ಘೋಷಣೆಯಾಗಿಲ್ಲ.
ಮಾಲೆಗಾಂವ್ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪ್ರಗ್ಯಾ ಸೇರಿದಂತೆ ಏಳು ಆರೋಪಿಗಳಿಗೆ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ(ಯುಎಪಿಎ) ಸೆಕ್ಷನ್ 16ರ ಅಡಿಯಲ್ಲಿ ಸೂಕ್ತ ಶಿಕ್ಷೆ ವಿಧಿಸುವಂತೆ ಇತ್ತೀಚೆಗೆ ಎನ್ಐಎ ಮುಂಬೈ ವಿಶೇಷ ನ್ಯಾಯಾಲಯವನ್ನು ಕೋರಿದೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿ 2008ರ ಸೆಪ್ಟೆಂಬರ್ 29ರಂದು ನಡೆದ ಸ್ಫೋಟ ಪ್ರಕರಣದಲ್ಲಿ ಆರು ಮಂದಿ ಮೃತಪಟ್ಟು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
