ಬಡ ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಿದ ಜನೌಷಧಿ ಕೇಂದ್ರವನ್ನು ರಾಜ್ಯ ಸರ್ಕಾರ ಮುಚ್ಚಿಸುವ ಕೆಲಸ ಮಾಡಿ ಬಡವರ ಔಷಧಿ ಕಸಿದಿದೆ. ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಜನವಿರೋಧಿ ಎಂದು ರುಜುವಾತು ಮಾಡಿದೆ ಎಂದು ಆರೋಪಿಸಿ ಗುಬ್ಬಿ ಬಿಜೆಪಿ ಘಟಕದ ಎಲ್ಲಾ ಮುಖಂಡರು ಕಪ್ಪು ಪಟ್ಟಿ ಧರಿಸಿ ಸರ್ಕಾರಿ ಆಸ್ಪತ್ರೆಯ ಮುಂಭಾಗ ಮೌನ ಪ್ರತಿಭಟನೆ ನಡೆಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ ಮಾತನಾಡಿ ಸಂಯುಕ್ತ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜೊತೆಗೂಡಿ ಕೆಲಸ ಮಾಡಿ ಜನಪರ ಯೋಜನೆ ಅನುಷ್ಠಾನ ಮಾಡಬೇಕಿದೆ. ಈ ಹಿಂದೆ ಮೋದಿ ಅವರ ಆಡಳಿತಾವಧಿಯಲ್ಲಿ ನಮ್ಮ ರಾಜ್ಯದ ಅನಂತಕುಮಾರ್ ಅವರ ಕೊಡುಗೆಯಾದ ಜನೌಷಧಿ ಕೇಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭವಾಯಿತು. ಬಡವರ ಪಾಲಿಗೆ ಜೀವಾಮೃತವಾದ ಈ ಕೇಂದ್ರವನ್ನು ಈಗ ಕಾಂಗ್ರೆಸ್ ಸರ್ಕಾರ ಮುಚ್ಚುವ ಕೆಲಸ ಮಾಡಿದೆ. ಹೀಗೆ ಕೇಂದ್ರದ ಬಿಜೆಪಿ ಸರ್ಕಾರ ಜಾರಿ ಮಾಡಿದ ಹೊಸ ಶಿಕ್ಷಣ ನೀತಿಯನ್ನು ಸಹ ರದ್ದು ಮಾಡಿದ್ದರು. ಒಟ್ಟಾರೆ ಜನಪರ ಕೆಲಸ ಮಾಡುವ ಕಾರ್ಯಕ್ರಮವನ್ನು ಜಾರಿ ಮಾಡದೆ ಕಾಂಗ್ರೆಸ್ ಸಲ್ಲದ ರಾಜಕಾರಣ ಮಾಡುತ್ತಿದೆ. ಮತ್ತೊಮ್ಮೆ ಜನವಿರೋಧಿ ಎಂಬುದು ಸಾಬೀತು ಮಾಡಿದೆ ಎಂದು ಗುಡುಗಿದ ಅವರು ಮೆಡಿಕಲ್ ಮಾಫಿಯಾ ಜೊತೆ ಕೈಜೋಡಿಸಿರುವ ಆರೋಗ್ಯ ಸಚಿವರು ಈ ಕೆಟ್ಟ ನಿರ್ಧಾರ ಕೈಗೊಂಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ ಕೇಂದ್ರದ ಮೋದಿ ಅವರ ನೇತೃತ್ವದ ಸರ್ಕಾರ ಜನಪರ ಯೋಜನೆಗಳನ್ನು ನಿರಂತರವಾಗಿ ಜಾರಿ ಮಾಡುತ್ತಿದೆ. ಇಂತಹ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಾದ ಕಾಂಗ್ರೆಸ್ ಕೆಟ್ಟ ರಾಜಕಾರಣ ಮಾಡುತ್ತಿದೆ. ಕ್ರೆಡಿಟ್ ಬಿಜೆಪಿಗೆ ಬರುತ್ತದೆ ಎಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರ ಮುಚ್ಚಿದ್ದು ಬೇಸರದ ಸಂಗತಿಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ರಾಜ್ಯ ಸರ್ಕಾರ ಕೊಡುವ ನಾಲ್ಕು ಮತ್ತೊಂದು ಔಷಧಿ ಮಾತ್ರ ಜನರನ್ನು ಕಾಪಾಡುವುದಿಲ್ಲ. ಕೇಂದ್ರ ಸರ್ಕಾರ ಹಲವು ಔಷಧಿ ಕಂಪೆನಿಯ ಜೊತೆ ಸಹಯೋಗ ಬೆಳೆಸಿ ಕಡಿಮೆ ಬೆಲೆಗೆ ಉತ್ತಮ ಔಷಧಿ ನೀಡುತ್ತಿದೆ. ಜನರ ಮನಸ್ಸು ಗೆದ್ದ ಈ ಕೇಂದ್ರ ಮುಚ್ಚುವ ಆಲೋಚನೆ ಮಾಡಿದ ರಾಜ್ಯ ಸರ್ಕಾರ ಕೆಟ್ಟ ರಾಜಕೀಯ ಮಾಡಿದೆ. ಇದು ಸರಿಯಲ್ಲ. ಕೂಡಲೇ ಔಷಧಿ ಕೇಂದ್ರ ಮೊದಲಿನಂತೆ ನಡೆಸಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್, ಬ್ಯಾಟರಂಗೇಗೌಡ, ಪಿ.ಬಿ.ಚಂದ್ರಶೇಖರ ಬಾಬು, ಯತೀಶ್, ಸಿದ್ದರಾಮಯ್ಯ, ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ, ಬಿ.ಎಸ್.ಪಂಚಾಕ್ಷರಿ, ಜಿ.ಆರ್.ಪ್ರಕಾಶ್, ಪ್ರಮೋದ್, ಬಸವರಾಜು, ಎಪಿಕೆ ರಾಜು, ಅನಿಲ್, ಸ್ವಾಮಿ ಇತರರು ಇದ್ದರು.