ಕನ್ನಡ ತಮಿಳಿನಿಂದ ಹುಟ್ಟಿದೆ ಎಂಬ ತನ್ನ ಹೇಳಿಕೆಗೆ ಕ್ಷಮೆಯಾಚಿಸಲು ತಮಿಳು ನಟ ಕಮಲ್ ಹಾಸನ್ ನಿರಾಕರಿಸಿದ್ದಾರೆ. “ನಾನು ನೀಡಿದ ಹೇಳಿಕೆ ತಪ್ಪಾಗಿದ್ದರೆ ಮಾತ್ರ ಕ್ಷಮೆ ಕೇಳುವೆ. ತಪ್ಪಲ್ಲದಿದ್ದರೆ, ತಪ್ಪೆನಿಸದಿದ್ದರೆ ನಾನು ಕ್ಷಮೆ ಕೇಳಲ್ಲ” ಎಂದು ಶುಕ್ರವಾರ ಕಮಲ್ ಹಾಸನ್ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದ ತಮ್ಮ ಮುಂಬರುವ ಚಿತ್ರ ಥಗ್ ಲೈಫ್‌ನ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ಕನ್ನಡದ ಹುಟ್ಟಿನ ಬಗ್ಗೆ ಕಮಲ್ ಹಾಸನ್ ನೀಡಿದ ಹೇಳಿಕೆಯು ಕರ್ನಾಟಕದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕ್ಷಮೆಯಾಚಿಸದಿದ್ದರೆ ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ಚಿತ್ರಗಳನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿವೆ.
ಇದನ್ನು ಓದಿದ್ದೀರಾ? ಕನ್ನಡ ತಮಿಳಿನಿಂದ ಹುಟ್ಟಿದೆ: ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್, “ಈ ಹಿಂದೆಯೂ ನಾನು ಇಂತಹ ಬೆದರಿಕೆಗಳನ್ನು ಕಂಡಿದ್ದೇನೆ. ಯಾವುದೇ ಮುಜುಗರಕ್ಕೆ ಒಳಗಾಗಿಲ್ಲ. ಪ್ರೀತಿ ಯಾವಾಗಲೂ ಗೆಲ್ಲುತ್ತದೆ. ಈ ವಿಚಾರದಲ್ಲಿ ಅಜೆಂಡಾ ಹೊಂದಿರುವವರು ಮಾತ್ರ ಅನುಮಾನ ಹೊಂದಿರುತ್ತಾರೆ” ಎಂದು ಹೇಳಿದ್ದಾರೆ.
ಮುಂದಿನ ತಿಂಗಳು ಆಡಳಿತಾರೂಢ ಡಿಎಂಕೆ ಬೆಂಬಲದೊಂದಿಗೆ ರಾಜ್ಯಸಭೆಗೆ ಪ್ರವೇಶಿಸುವ ನಿರೀಕ್ಷೆಯಿರುವ ಮಕ್ಕಳ್ ನೀಧಿ ಮೈಯಂ(ಎಂಎನ್‌ಎಂ) ಮುಖ್ಯಸ್ಥ, ನಟ ಈ ಮೂಲಕ ತನ್ನ ಹೇಳಿಕೆಯ ಸಮರ್ಥನೆಗೆ ಇಳಿದಿದ್ದಾರೆ.
“ದಕ್ಷಿಣದ ಎಲ್ಲಾ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಗೌರವಿಸುವ ನಾನು, ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ತಪ್ಪು ಮಾಡಿದ್ದೇನೆ ಎಂದು ಮನವರಿಕೆಯಾದರೆ ಮಾತ್ರ ಕ್ಷಮೆಯಾಚಿಸುತ್ತೇನೆ. ನನ್ನ ಹೇಳಿಕೆ ತಪ್ಪಾಗದಿದ್ದರೆ ನಾನು ಕ್ಷಮೆಯಾಚಿಸುವುದಿಲ್ಲ. ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ” ಎಂದು ಹೇಳಿದರು.
ಕಮಲ್ ಹಾಸನ್ ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಕಮಲ್ ಹಾಸನ್ ಸಿನಿಮಾಗಳನ್ನು ಬಹಿಷ್ಕರಿಸುವಂತೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದೆ.
