ಇಬ್ಬರು ಆರೋಪಿಗಳು ಒಂದೇ ಹೆಸರು ಹೊಂದಿದ್ದರಿಂದ ಹೆಸರಿನ ಗೊಂದಲದಲ್ಲಿ ಜಾಮೀನು ಸಕ್ಕಿ ವ್ಯಕ್ತಿಯ ಬದಲಿಗೆ ಪೋಕ್ಸೋ ಪ್ರಕರಣದ ಆರೋಪಿಯನ್ನು ಜೈಲಿನಿಂದ ಬಿಡುಗಡೆ ಮಾಡಿರುವ ಘಟನೆ ಫರೀದಾಬಾದ್ನಲ್ಲಿ ನಡೆದಿದೆ.
ಬೇರೆಯವರ ಮನೆಗೆ ಅತಿಕ್ರಮಣ ಮಾಡಿದ ಆರೋಪದ ಮೇಲೆ ನಿತೇಶ್ ಪಾಂಡೆ ಎಂಬಾತನನ್ನು ಬಂಧಿಸಿ ಹರಿಯಾಣದ ಫರೀದಾಬಾದ್ ಜಿಲ್ಲಾ ಕಾರಾಗೃಹದಲ್ಲಿದ್ದಇರಿಸಲಾಗಿತ್ತು. ಆತನಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಆದರೆ, ಆತನ ಬಲಿಗೆ ಅದೇ ಹೆಸರು ಹೊಂದಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಜೈಲು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಪೋಕ್ಸೋ ಪ್ರಕರಣದ ಆರೋಪಿ ನಿತೇಶ್ ಪಾಂಡೆಯನ್ನು ಬಾಲಕನೊಬ್ಬನಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 2021ರ ಅಕ್ಟೋಬರ್ನಲ್ಲಿ ಬಂಧಿಸಲಾಗಿತ್ತು. ಆತನ ವಿರುದ್ಧ ಫರೀದಾಬಾದ್ನ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತ ತನ್ನ ಗುರುತನ್ನು ಮರೆಮಾಚಿ ಅತಿಕ್ರಮಣ ಪ್ರವೇಶ ಆರೋಪ ಎದುರಿಸುತ್ತಿದ್ದ ನಿತೇಶ್ ಪಾಂಡೆ ಬದಲಿಗೆ ತಾನು ಬಿಡುಗಡೆಯಾಗಿದ್ದಾನೆ.
ಆರೋಪ ಮರೆಮಾಚಿ ಜೈಲಿನಿಂದ ಹೊರಬಂದಿರುವ ಪೋಕ್ಸೋ ಆರೋಪಿ ನಿತೇಶ್ ಪಾಂಡೆ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿರುವ ಪೊಲೀಸರು ಶೀಘ್ರವೇ ಆತನನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
“ಗುರುತನ್ನು ಮರೆಮಾಡಿ ಬಿಡುಗಡೆ ಪಡೆದಿದ್ದಕ್ಕಾಗಿ ನಿತೀಶ್ ಪಾಂಡೆ ವಿರುದ್ಧ ನಾವು ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ” ಎಂದು ಜೈಲು ಉಪ ಅಧೀಕ್ಷಕ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.