ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುರಿತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಕಾಂಗ್ರೆಸ್ ಹಿರಿಯ ಮುಖಂಡ ಅಬ್ದುಲ್ ಮನ್ನಾನ್ ಸೇಠ್ ತೀವ್ರವಾಗಿ ಖಂಡಿಸಿದ್ದಾರೆ.
ʼರಾಜ್ಯ ಹಾಗೂ ರಾಷ್ಟ್ರಕ್ಕೆ ಖರ್ಗೆ ಕುಟುಂಬದ ಕೊಡುಗೆ ಅಪಾರವಾಗಿದೆ. ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು ಎಂದು ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಸಿರುವುದು ಕೀಳುಮಟ್ಟದ ರಾಜಕೀಯ. ವಿಧಾನ
ಪರಿಷತ್ ಸದಸ್ಯ ಸ್ಥಾನದಲ್ಲಿರುವವರಿಗೆ ಇದು ಶೋಭೆ ತರುವಂತಹದ್ದಲ್ಲʼ ಎಂದು ತಿಳಿಸಿದ್ದಾರೆ.
ʼಖರ್ಗೆ ಕುಟುಂಬವನ್ನು ಟೀಕಿಸುವುದೇ ಛಲವಾದಿ ನಾರಾಯಣಸ್ವಾಮಿ ಅವರ ಕಾಯಕವಾಗಿದೆ. ಖರ್ಗೆ ಅವರು ಏನಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಪ್ರತಿಭಾವಂತ ನಾಯಕರಾಗಿದ್ದಾರೆ. ಅಭಿವೃದ್ಧಿ ಪರ ದೃಷ್ಟಿಕೋನ ಹೊಂದಿದ್ದಾರೆ. ಎಲ್ಲ ಸಮುದಾಯವನ್ನು ಒಟ್ಟಿಗೆ ಕರೆದೊಯ್ಯುವ ಗುಣ ಹೊಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಖರ್ಗೆ ಅವರ ಬೆಳವಣಿಗೆಯನ್ನು ಸಹಿಸದೆ, ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲು ನಾರಾಯಣಸ್ವಾಮಿ ತಲೆ ಬುಡವಿಲ್ಲದ ಹೇಳಿಕೆ ಕೊಡುತ್ತಿದ್ದಾರೆ. ಅವರಿಗೆ ಮಾತಿನ ಮೇಲೆ ಹಿಡಿತವಿಲ್ಲ. ಅವರ ಹೇಳಿಕೆಗೆ ಯಾರೂ ಕಿವಿಗೊಡಬಾರದುʼ ಎಂದು ಹೇಳಿದರು.
ಛಲವಾದಿ ನಾರಾಯಣಸ್ವಾಮಿ ಅವರು ಕೂಡಲೇ ಪ್ರಿಯಾಂಕ್ ಖರ್ಗೆ ಅವರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.