ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಅಬ್ದುಲ್ ರಹೀಂ ಅವರ ಕೊಳತ್ತಮಜಲು ಮನೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ರಹೀಂ ಅವರ ತಂದೆ ತಾಯಿಯನ್ನು ನೋಡಿ ಭಾವುಕರಾದ ಇನಾಯತ್ ಅಲಿ ಅವರು, “ನಿಮ್ಮ ಜೊತೆ ನಾನು ಇದ್ದೇನೆ. ನಾನು ಕೂಡ ನಿಮ್ಮ ಮಗ ಎಂದು ತಿಳಿದುಕೊಳ್ಳಿ. ನಿಮ್ಮ ಎಲ್ಲಾ ಕಷ್ಟದಲ್ಲಿ ನಾನು ಜೊತೆ ನಿಲ್ಲುತ್ತೇನೆ” ಎಂದು ಹೇಳಿದರು.
ಇನಾಯತ್ ಅಲಿ ಮೃತ ಕುಟುಂಬಕ್ಕೆ ತಮ್ಮ ವೈಯಕ್ತಿಕ ನೆಲೆಯಲ್ಲಿ 5 ಲಕ್ಷ ರೂ. ಪರಿಹಾರ ನೀಡಿದ್ದು, ಅಮಾಯಕ ಯುವಕ ರಹೀಂ ಮಕ್ಕಳ ಜೀವನ, ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳುವುದಾಗಿ ತಿಳಿಸಿದರು.
ಇದನ್ನು ಓದಿದ್ದೀರಾ? ಫಕೀರ್ ಮುಹಮ್ಮದ್ ಕಟ್ಪಾಡಿ ಕಂಡ ಕರಾವಳಿ ಬದುಕು: ಹೇಗಿತ್ತು, ಈಗ ಹೇಗಾಗಿದೆ?
ಇದೇ ವೇಳೆ ಮಾತನಾಡಿದ ಅವರು, “ಕೋಮು ಸಂಘರ್ಷ, ಪ್ರಚೋದನೆ ಮಟ್ಟಹಾಕಲು 250 ಮಂದಿಯ ವಿಶೇಷ ತಂಡ ರಚನೆ ಮಾಡಲಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ವಿಶೇಷ ಕಾರ್ಯಪಡೆ ಕಾರ್ಯಾಚರಿಸಲಿದೆ. ಮುಂದಿನ ದಿನಗಳಲ್ಲಿ ಕೋಮು ಗಲಾಟೆಗಳಿಗೆ ಕಡಿವಾಣ ಬೀಳುವ ಭರವಸೆ ಇದೆ” ಎಂದು ತಿಳಿಸಿದರು.