ಔರಾದ್ ತಾಲ್ಲೂಕಿನ ಚಿಂತಾಕಿ, ಸಂತಪೂರ ಹಾಗೂ ಔರಾದ(ಬಿ) ನಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಶುಕ್ರವಾರ ಶಾಸಕ ಪ್ರಭು ಚವ್ಹಾಣ ಅವರು ಚಾಲನೆ ನೀಡಿದರು.
ಬಳಿಕ ಶಾಸಕ ಪ್ರಭು ಚವ್ಹಾಣ ಅವರು ಮಾತನಾಡಿ, ʼನಾಡಿಗೆ ಅನ್ನ ನೀಡಿ ಪೋಷಿಸುವ ರೈತರ ಏಳಿಗೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಎಲ್ಲ ಯೋಜನೆಗಳ ಲಾಭ ಅರ್ಹ ರೈತರಿಗೆ ತಲುಪಿಸಬೇಕು. ರೈತರಿಗೆ ಅನ್ಯಾಯವಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲʼ ಎಂದರು.
ʼಮುಂಗಾರು ಹಂಗಾಮು ಆರಂಭವಾಗಲಿದ್ದು, ರೈತರು ಸಕಾಲಕ್ಕೆ ಬಿತ್ತನೆ ಮಾಡಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಮುಂಚಿತವಾಗಿಯೇ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಲಾಗಿದೆ. ಬಿತ್ತನೆ ವೇಳೆಗೆ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ತಲುಪಬೇಕು. ಈ ದಿಶೆಯಲ್ಲಿ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆಲಸ ಮಾಡಬೇಕುʼ ಎಂದು ಹೇಳಿದರು.
ʼನಮ್ಮ ಭಾಗದಲ್ಲಿ ಹೆಚ್ಚು ಮಳೆಯಾದರೂ, ಕಡಿಮೆ ಮಳೆಯಾದರೂ ಬೆಳೆ ನಷ್ಟವಾಗುತ್ತದೆ. ಇಳುವರಿ ಹೆಚ್ಚಾಗಬೇಕು ಮತ್ತು ನಷ್ಟ ಕಡಿಮೆಯಾಗುವ ರೀತಿಯಲ್ಲಿ ಇಲಾಖೆ ಅಧಿಕಾರಿಗಳು ರೈತರಿಗೆ ಕಾಲಕಾಲಕ್ಕೆ ಸೂಕ್ತ ಸಲಹೆಗಳನ್ನು ನೀಡಬೇಕು. ಕೃಷಿ ಸಿಂಚಾಯಿ, ಕಿಸಾನ್ ಸಮ್ಮಾನ್ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಮಣ್ಣಿನ ಪರೀಕ್ಷೆ, ಪಾರಂಪರಿಕ ಕೃಷಿ, ಕೃಷಿ ಭಾಗ್ಯದಂತಹ ಇಲಾಖೆಯ ಎಲ್ಲ ಯೋಜನೆಗಳ ಬಗ್ಗೆ ಹೆಚ್ಷಿನ ಪ್ರಚಾರ ನೀಡಬೇಕು. ನಿಜವಾದ ರೈತರಿಗೆ ಯೋಜನೆಗಳ ಲಾಭ ಸಿಗುವಂತೆ ಮಾಡಬೇಕುʼ ಎಂದರು.
ಬೆಳೆ ವಿಮೆ ಕಂಪನಿಗಳು ಕೆಲ ದಿನಗಳಿಂದ ರೈತರಿಗೆ ವಂಚಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ದಾಬಕಾ, ಸಂತಪೂರ ಹಾಗೂ ಮತ್ತಿತರೆ ಕಡೆಗಳಲ್ಲಿ ನಿಜವಾದ ರೈತರನ್ನು ಬಿಟ್ಟು ರೈತರಲ್ಲದವರಿಗೆ ಬೆಳೆ ವಿಮೆ ಸೌಲಭ್ಯ ಸಿಕ್ಕಿರುವ ಬಗ್ಗೆ ರೈತರು ತಿಳಿಸಿದ್ದಾರೆ. ಈ ಬಗ್ಗೆ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಮತ್ತು ಸಂಬಂಧಿಸಿದ ಸಚಿವರ ಗಮನಕ್ಕೂ ತಂದಿದ್ದೇನೆ. ಸಹಾಯಕ ನಿರ್ದೇಶಕರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಕ್ಷೇತ್ರದ ಯಾರೊಬ್ಬ ರೈತನಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕುʼ ಎಂದು ಅಧಿಕಾರಿಗಳಿಗೆ ತಿಳಿಸಿದರು.
ʼಸಣ್ಣ-ಪುಟ್ಟ ಗ್ರಾಮದವರಿಗೆ ಒಂದು ದಿನದಲ್ಲಿ ಬಿತ್ತನೆ ಬೀಜ ವಿತರಿಸಬಹುದು. ದೊಡ್ಡ ಗ್ರಾಮಗಳಿಗೆ ಕನಿಷ್ಠ ಎರಡು ದಿನಗಳ ಅವಕಾಶ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗಡಿ ಭಾಗದ ಕೆಲ ರೈತರು ಬಿತ್ತನೆಗಾಗಿ ಪಡೆದ ಬೀಜಗಳನ್ನು ಪಕ್ಕದ ಮಹಾರಾಷ್ಟç ಮತ್ತು ತೆಲಂಗಾಣದಲ್ಲಿರುವ ಸಂಬಂಧಿಕರು ಮತ್ತು ಪರಿಚಯಸ್ಥರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಸರ್ಕಾರವು ನಮ್ಮ ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ನೀಡುತ್ತಿದೆ. ಇದನ್ನು ಸ್ವಂತಕ್ಕಾಗಿ ಬಳಸಬೇಕೆ ವಿನಃ ಯಾವುದೇ ಕಾರಣಕ್ಕೂ ಅನ್ಯರಿಗೆ ಮಾರುವಂತಿಲ್ಲ. ಇಂಥವುಗಳಿಗೆ ರೈತರು ಅವಕಾಶ ಮಾಡಿಕೊಡಬಾರದುʼ ಎಂದರು.
ಸಹಾಯಕ ಕೃಷಿ ನಿರ್ದೇಶಕರಾದ ಧೂಳಪ್ಪ ಅವರು ಬಿತ್ತನೆ ಬೀಜಗಳ ದರ, ಸೋಯಾ ಅವರೆ, ಉದ್ದು, ಹೆಸರು ಬೆಳೆಗಳ ಬಿತ್ತನೆಯ ವೈಜ್ಞಾನಿಕ ವಿಧಾನಗಳು, ರಸಗೊಬ್ಬರ ಬಳಕೆ, ಬಿತ್ತನೆ ವೇಳೆ ರೈತರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಗ್ರಾಮ ಪಂಚಾಯಿತಿವಾರು ಬಿತ್ತನೆ ಬೀಜ ವಿತರಣೆ ದಿನಾಂಕಗಳನ್ನು ಲಾಟರಿ ಮೂಲಕ ನಿಗದಿಪಡಿಸಲಾಯಿತು.
ಇದನ್ನೂ ಓದಿ : 18 ಶಾಸಕರ ಅಮಾನತು ವಾಪಸು ಸಂಸದೀಯ ವಿರೋಧಿ ನಡೆಯೇ?
ಮುಖಂಡರಾದ ಮಾರುತಿ ಚವ್ಹಾಣ, ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ದಯಾನಂದ ಘೂಳೆ, ಧೂಳಪ್ಪ, ರವೀಂದ್ರ ರೆಡ್ಡಿ, ರಾಮ ರೆಡ್ಡಿ, ಗೋವಿಂದ ರೆಡ್ಡಿ, ವಿಠಲ ರೆಡ್ಡಿ, ರೈತ ಸಂಘದ ಶ್ರೀಮಂತ ಬಿರಾದಾರ, ಪ್ರಕಾಶ ಬಾವಗೆ, ವಿಶ್ವನಾಥ ಧರಣೆ ಸೇರಿದಂತೆ ರೈತ ಮುಖಂಡರು, ಕೃಷಿ ವಿಜ್ಞಾನಿಗಳು, ಇಲಾಖೆಯ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.