“ಡಾ ಬಿ .ಆರ್ ಅಂಬೇಡ್ಕರರು ವಿಜಯಪುರ ನಗರಕ್ಕೆ ಭೇಟಿ ನೀಡಿ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ. ಸಮಗ್ರ ಹರಿಜನರನ್ನು ಒಂದುಗೂಡಿಸಿ ವಿಜಯಪುರದ ರಾಣಿ ಬಗೀಚಿನಲ್ಲಿ ಹರಿಜನರ ಸಮ್ಮೇಳನವನ್ನು ಉದ್ದೇಶಿಸಿ ಈ ಹಿಂದೆ ಅಂಬೇಡ್ಕರ್ ಅವರು ಮಾತಾಡಿದ್ದರು. ಈ ಐತಿಹಾಸಿಕ ಹಾಗೂ ರೋಮಾಂಚನಕಾರಿ ಕ್ಷಣವಾಗಿದ್ದು, ವಿಜಯಪುರ ರೈಲ್ವೆ ನಿಲ್ದಾಣಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ನಾಮಕರಣ ಮಾಡಬೇಕು” ಎಂದು ಡಿ ಎಸ್ ಎಸ್ ಮುಖಂಡ ಚೆನ್ನು ಕಟ್ಟಿಮನಿ ಒತ್ತಾಯಿಸಿದರು.
ವಿಜಯಪುರ ಪಟ್ಟಣದ ದಲಿತ ಸಂಘರ್ಷ ಸಮಿತಿಯು ರೈಲ್ವೆ ನಿಲ್ದಾಣಕ್ಕೆ ಡಾ. ಬಿ. ಆರ್ ಅಂಬೇಡ್ಕರ್ ನಾಮಕರಣ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರ ಮೂಲಕ ಕೇಂದ್ರದ ರೈಲ್ವೆ ಸಚಿವರಿಗೆ ಮಾನವಿ ಸಲ್ಲಿಸಿ ಮಾತನಾಡಿದರು.
“ಬೀಳಗಿಯ ಸೋಮನಗೌಡ ಫಕೀರಗೌಡ ಪಾಟೀಲ್ ಇವರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ನ್ಯಾಯಾಲಯದಲ್ಲಿ ಅವರ ಪರವಾಗಿವಾದ ಮಾಡಿ ಅವರಿಗೆ ಆಗಬೇಕಾಗಿದ್ದ ಗಲ್ಲು ಶಿಕ್ಷೆಯನ್ನು ತಪ್ಪಿಸಿದ್ದು, ಅವರ ಕಾನೂನು ಪಾಂಡಿತ್ಯವನ್ನು ಪ್ರತಿಯೊಬ್ಬರು ಕೂಡ ಮೆಚ್ಚಲೇಬೇಕಾದ ವಿಷಯವಂತಹದ್ದು. ಇಂತಹ ಹತ್ತು ಹಲವಾರು ಐತಿಹಾಸಿಕ ಕ್ಷಣಗಳಿಗೆ ವಿಜಯಪುರ ನಗರ ಸಾಕ್ಷಿಯಾಗಿದೆ. ಇಂಥಹ ಐತಿಹಾಸಿಕ ಘಟನೆಗಳಿಂದ ತಳಸಮುದಾಯದ ಯುವಕರು ಪ್ರೇರೇಪಣೆಗೊಳ್ಳುವುದರಲ್ಲಿ ಸಂದೇಹವಿಲ್ಲ” ಎಂದರು.
“ಈ ಎಲ್ಲಾ ಕಾರಣಗಳಿಂದ, ಬಾಬಾ ಸಾಹೇಬರು ಬಂದು ಹೋದ ಹೆಜ್ಜೆಗಳ ನೆನಪಿಗೋಸ್ಕರ ವಿಜಯಪುರ ರೈಲ್ವೆ ನಿಲ್ದಾಣಕ್ಕೆ ಮಹಾಮಾನತಾವಾದಿ, ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಹೆಸರನ್ನು ನಾಮಕರಣ ಮಾಡಬೇಕು. ಇದು ವಿಜಯಪುರ ಜಿಲ್ಲೆಯ ದಲಿತ ಸಮುದಾಯದ ಅಭಿಪ್ರಾಯವಾಗಿದೆ” ಎಂದು ಹೇಳಿದರು.
ಮನವಿ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮಹಾ ಒಕ್ಕೂಟ ಸಂಸ್ಥಾಪಕ ಅಧ್ಯಕ್ಷ ಪರಶುರಾಮ್ ಲಂಬು, ಮಲ್ಲು ಜಲಗಾರ ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಮುಖಂಡರು ಉಪಸ್ಥಿತರಿದ್ದರು.
