"ಪರೀಕ್ಷಾ ವಿಭಾಗದ ಒಳಗೆ ಕಾಲೇಜಿನ ಸಂಬಂಧಿಸಿದರಿಗೆ ಮಾತ್ರ ಬಿಡಬೇಕು. ಅಂದರೆ ಗುರುತಿನ ಚೀಟಿ ಇದ್ದವರಿಗೆ ಮಾತ್ರ ಪ್ರವೇಶ ನೀಡಬೇಕು. ಬಿಎಡ್ ಪರೀಕ್ಷೆಯ ಮರು ಮೌಲ್ಯಮಾಪನ ಮಾಡಬೇಕು" ಎಂದು ತೀರ್ಮಾನಿಸಲಾಗಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ಪರೀಕ್ಷಾ ಅಕ್ರಮಗಳ ಸಂಬಂಧ ‘ಈದಿನ ಡಾಟ್ ಕಾಮ್’ ಸರಣಿ ವರದಿಗಳನ್ನು ಪ್ರಕಟಿಸಿದ ಬೆನ್ನಲ್ಲೇ ವಿವಿಯ ಸಿಂಡಿಕೇಟ್ ಸೂಕ್ತ ಕ್ರಮಕ್ಕೆ ನಿರ್ಣಯಗಳನ್ನು ಕೈಗೊಂಡಿದೆ.
ಗುಲಬರ್ಗಾ ವಿವಿ ಕರ್ಮಕಾಂಡ ವಿಶೇಷ ಸರಣಿಯನ್ನು ಕೈಗೆತ್ತಿಕೊಂಡಿದ್ದ ‘ಈ ದಿನ ಡಾಟ್ ಕಾಮ್’, ನಾಲ್ಕು ವರದಿಗಳನ್ನು ಪ್ರಕಟಿಸಿತ್ತು. ವಿಶ್ವವಿದ್ಯಾಲಯದ ನಿರ್ಲಕ್ಷ್ಯಗಳಿಗೆ ಕನ್ನಡಿ ಹಿಡಿದ ಬಳಿಕ, ವಿಶೇಷ ಸಿಂಡಿಕೇಟ್ ಸಭೆಯನ್ನು ನಡೆಸಿ, ಮಹತ್ವದ ನಿರ್ಧಾರಗಳನ್ನು ಕಠಿಣ ಕ್ರಮಗಳಿಗೆ ಸಿಂಡಿಕೇಟ್ ನಿರ್ಣಯಿಸಿದೆ.
2023-24ನೇ ಸಾಲಿನ ಬಿ.ಎಡ್ ಪರೀಕ್ಷಾರ್ಥಿಗಳ ಅಂಕಗಳನ್ನೇ ತಿದ್ದುಪಡಿ ಮಾಡಿರುವ ಸಂಬಂಧ ಮೊದಲ ವರದಿಯಲ್ಲಿ ಬೆಳಕು ಚೆಲ್ಲಲಾಗಿತ್ತು. “ಉತ್ತರ ಪತ್ರಿಕೆಯ ಮೌಲ್ಯಮಾಪನದ ಬಳಿಕ, ಮಾರ್ಕ್ಸ್ ಲಿಸ್ಟ್ ಮಾಡುವಲ್ಲಿ ಅಕ್ರಮ ನಡೆದಿರುವುದು ಕಂಡು ಬಂದಿದೆ. ಮಾರ್ಕ್ಸ್ ಲಿಸ್ಟ್ ಆಧಾರದಲ್ಲಿ ಗಣಕೀಕರಣ ಮಾಡಲಾಗುತ್ತದೆ. ಆದರೆ ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪಕರು ಕೊಟ್ಟಿರುವ ಅಂಕಕ್ಕೂ ಮಾರ್ಕ್ಸ್ ಲಿಸ್ಟ್ನಲ್ಲಿ ತೋರಿಸಿರುವ ಅಂಕಕ್ಕೂ ವ್ಯತ್ಯಾಸಗಳಿರುವುದನ್ನು ಗುಲಬರ್ಗಾ ವಿವಿ ಪರೀಕ್ಷಾ ಸುಧಾರಣಾ ಸಮಿತಿ ಗುರುತಿಸಿದೆ. 3,000 ಬಿ.ಎಡ್ ಪರೀಕ್ಷಾರ್ಥಿಗಳ ಪೈಕಿ ಅನೇಕರ ಅಂಕಗಳನ್ನು ತಿದ್ದಿರುವ ಆರೋಪ ಬಂದಿದೆ” ಎಂದು ವರದಿ ಉಲ್ಲೇಖಿಸಿತ್ತು.
ಇದನ್ನೂ ಓದಿರಿ: ಗುಲಬರ್ಗಾ ವಿವಿ ಕರ್ಮಕಾಂಡ-1: ಅಂಕಗಳನ್ನೇ ತಿದ್ದಿದ ಭೂಪರು; ಭಾರೀ ಅಕ್ರಮ ಬಯಲು
ಬಿಎಡ್ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತಿರುಚಿರುವ ಸಂಬಂಧ ನಾಲ್ಕನೇ ವರದಿಯಲ್ಲಿ ಬಯಲಿಗೆಳೆಯಲಾಗಿತ್ತು. “2024ರ ಡಿಸೆಂಬರ್ ತಿಂಗಳಲ್ಲಿ ವಿವಿ ನಡೆಸಿರುವ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ಬಿ.ಎಡ್ ಪರೀಕ್ಷೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ. ಈ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೆಲವು ಕಾಲೇಜುಗಳಿಂದ ಹಣವನ್ನು ಪಡೆದು ಹಲವು ಉತ್ತರ ಪತ್ರಿಕೆಗಳನ್ನು ತಿರುಚಿರುವ ಆರೋಪ ಕೇಳಿಬಂದ ಬಳಿಕ, ಗುಲಬರ್ಗಾ ವಿವಿ ಶಿಕ್ಷಣ ನಿಕಾಯದ ಡೀನ್ ಪ್ರೊ.ಬಾಬಣ್ಣ ಹೂವಿನಬಾವಿ ಮತ್ತು ಗಣಿತ ವಿಭಾಗದ ಎನ್.ಬಿ.ನಡುವಿನಮನಿ ನೇತೃತ್ವದಲ್ಲಿ ರೀಕೋಡಿಂಗ್ ಮಾಡಲು ಆದೇಶಿಸಲಾಗಿ, ಸತ್ಯ ಬಯಲಾಗಿದೆ. ಸುಮಾರು 300 ಉತ್ತರ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಅಕ್ರಮಗಳು ನಡೆದಿರುವುದು ಗೊತ್ತಾಗಿದೆ” ಎಂಬ ಸಂಗತಿಯನ್ನು ‘ಈ ದಿನ’ ವರದಿ ಉಲ್ಲೇಖಿಸಿತ್ತು. ಯಾವ ಉತ್ತರ ಪತ್ರಿಕೆಯನ್ನು ತಿರುಚಬೇಕೋ ಆ ಪತ್ರಿಕೆಗಳ ಕೊನೆಯಲ್ಲಿ ಬಣ್ಣಬಣ್ಣದ ಶಾಯಿಯ ಮೂಲಕ ಗುರುತು ಹಾಕಿರುವುದನ್ನು ಮತ್ತು ಸ್ಟಾರ್ ಚಿಹ್ನೆಗಳನ್ನು ಬರೆದಿರುವುದನ್ನು ರೀಕೋಡಿಂಗ್ ವರದಿಯಲ್ಲಿ ದಾಖಲಿಸಿರುವುದಾಗಿ ತಿಳಿಸಲಾಗಿತ್ತು.
ಇದನ್ನೂ ಓದಿರಿ: ಗುಲಬರ್ಗಾ ವಿವಿ ಕರ್ಮಕಾಂಡ-4: ಬಿ.ಎಡ್ ಪರೀಕ್ಷೆಯಲ್ಲಿ ಭಾರೀ ಅಕ್ರಮ; ಉತ್ತರ ಪತ್ರಿಕೆಗಳೇ ಮಾಯ!
ಬಿಎಡ್ ಪರೀಕ್ಷೆಯಲ್ಲಿ ನಡೆದಿರುವ ಭಾರೀ ಅಕ್ರಮಗಳ ಸಂಬಂಧ ಎಚ್ಚೆತ್ತುಕೊಂಡಿರುವ ಸಿಂಡಿಕೇಟ್ ವಿಶೇಷ ಸಭೆಗಳನ್ನು ನಡೆಸಿ, “ಈ ಹಗರಣ ಸಂಬಂಧ ಸಿಒಡಿ ತನಿಖೆ ನಡೆಸಬೇಕು” ಎಂದು ನಿರ್ಧರಿಸಿದೆ. ಜೊತೆಗೆ “ಬಿಎಡ್ ಸಿಬ್ಬಂದಿಗಳನ್ನು ಒಂದು ವಾರದಲ್ಲಿ ಕೆಲಸದ ಮರು ಹಂಚಿಕೆ ಮಾಡಬೇಕು. ಉಳಿದ ಪರೀಕ್ಷಾ ವಿಭಾಗದ ಕೀ ಪಾಯಿಂಟ್ನಲ್ಲಿರುವ ಸಿಬ್ಬಂದಿಗಳನ್ನು ಹತ್ತು ದಿನದಲ್ಲಿ ಕೆಲಸದ ಮರು ಹಂಚಿಕೆ ಮಾಡಬೇಕು. ಪರೀಕ್ಷಾ ವಿಭಾಗದ ಒಳಗೆ ಕಾಲೇಜಿನ ಸಂಬಂಧಿಸಿದರಿಗೆ ಮಾತ್ರ ಬಿಡಬೇಕು. ಅಂದರೆ ಗುರುತಿನ ಚೀಟಿ ಇದ್ದವರಿಗೆ ಮಾತ್ರ ಪ್ರವೇಶ ನೀಡಬೇಕು. ಬಿಎಡ್ ಪರೀಕ್ಷೆಯ ಮರು ಮೌಲ್ಯಮಾಪನ ಮಾಡಬೇಕು” ಎಂದು ಸಿಂಡಿಕೇಟ್ ಸರ್ವಾನುಮತದಿಂದ ನಿರ್ಧರಿಸಿದೆ.
‘ಈದಿನ’ಕ್ಕೆ ಪ್ರತಿಕ್ರಿಯಿಸಿರುವ ಪ್ರಭಾರ ಕುಲಪತಿ ಗೂರು ಶ್ರೀರಾಮುಲು, “ಪರೀಕ್ಷಾ ಅಕ್ರಮಗಳ ಸಂಬಂಧ ಕ್ರಮ ಜರುಗಿಸಲು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದೇನೆ” ಎಂದು ತಿಳಿಸಿದರು. (ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.)
ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ ಅವರು ಪ್ರತಿಕ್ರಿಯಿಸಿ, “ಹಗರಣಗಳು ಬಯಲಾದ ಬಳಿಕ ಪರೀಕ್ಷಾಂಗ ವಿಭಾಗ ಮತ್ತು ಕುಲಪತಿಯವರು ಎಚ್ಚೆತ್ತುಕೊಂಡಿದ್ದಾರೆ. ಅಂತರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಂದ ಮರುಮೌಲ್ಯಮಾಪನ ಮಾಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಮುಂದೆ ಇಂತಹ ಎಡವಟ್ಟುಗಳಾಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದ್ದಾರೆ” ಎಂದರು.

“ಖಾಸಗಿ ಕಾಲೇಜು ಸಿಬ್ಬಂದಿ ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿ ಸೇರಿಯೇ ಈ ಹಗರಣಗಳನ್ನು ನಡೆಸಿದ್ದಾರೆ. ಇಂಥವರನ್ನು ಪರೀಕ್ಷಾ ಕಾರ್ಯಗಳಿಂದ ಮೂರು ವರ್ಷ ಹೊರಗಿಡಬೇಕು ಎಂಬ ವಿಚಾರವೂ ಚರ್ಚೆಯಾಗಿದೆ” ಎಂದು ತಿಳಿಸಿದರು.
