ಭಾರತ, ಪಾಕಿಸ್ತಾನದ ಕದನ ವಿರಾಮದ ಶ್ರೇಯಸ್ಸನ್ನು ತಾನಾಗಿಯೇ ಹೊತ್ತುಕೊಂಡು ಆಗಾಗ ಪ್ರಸ್ತಾಪ ಮಾಡುತ್ತಿರುವ ಡೊನಾಲ್ಡ್ ಟ್ರಂಪ್ ಇದೀಗ, “ಭಾರತ ಮತ್ತು ಪಾಕಿಸ್ತಾನ ನಡುವಿನ ‘ಸಂಭಾವ್ಯ ಪರಮಾಣು ಯುದ್ಧ’ವನ್ನು ನಿಲ್ಲಿಸಿದ್ದಕ್ಕೆ ಅತ್ಯಂತ ಹೆಮ್ಮೆಪಡುತ್ತೇನೆ” ಎಂದಿದ್ದಾರೆ. ವ್ಯಾಪಾರ ವಿಚಾರವನ್ನು ಪ್ರಸ್ತಾಪಿಸಿ ಯುದ್ಧ ನಿಲ್ಲಿಸಲು ಸಾಧ್ಯವಾಯಿತು ಎಂಬುದೇ ತಮಗೆ ಅತ್ಯಂತ ಹೆಮ್ಮೆಯ ವಿಚಾರ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಸಂಘರ್ಷವನ್ನು ನಿಲ್ಲಿಸದಿದ್ದರೆ ಅಮೆರಿಕವು ಎರಡು ದೇಶಗಳೊಂದಿಗಿನ ವ್ಯಾಪಾರವನ್ನು ನಿಲ್ಲಿಸುತ್ತದೆ ಎಂದು ಭಾರತ ಮತ್ತು ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದ ಬಳಿಕ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಟ್ರಂಪ್ ಪದೇ ಪದೇ ಹೇಳಿಕೊಳ್ಳುತ್ತಿದ್ದಾರೆ. ಆದರೆ ಈಗಾಗಲೇ ಭಾರತ ಮತ್ತು ಅಮೆರಿಕ ನಾಯಕರ ನಡುವಿನ ಮಾತುಕತೆಗಳಲ್ಲಿ ವ್ಯಾಪಾರದ ವಿಷಯವು ಪ್ರಸ್ತಾಪವಾಗಿಲ್ಲ ಎಂದು ಭಾರತವೂ ಸ್ಪಷ್ಟಪಡಿಸಿದೆ. ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದೆ. ಆದರೆ ಟ್ರಂಪ್ ಮಾತ್ರ ತನ್ನ ‘ವ್ಯಾಪಾರ ಅಸ್ತ್ರ’ ಎಂಬ ಹೇಳಿಕೆಯನ್ನು ಮುಂದುವರೆಸಿದ್ದಾರೆ.
ಇದನ್ನು ಓದಿದ್ದೀರಾ? ಭಾರತ-ಪಾಕ್ ಸಂಘರ್ಷ | ನೀವು ನಿಲ್ಲಿಸದಿದ್ದರೆ ಯಾವುದೇ ವ್ಯಾಪಾರ ಮಾಡಲ್ಲ ಎಂದಿದ್ದೆವು: ಡೊನಾಲ್ಡ್ ಟ್ರಂಪ್
“ನಾವು ಭಾರತದೊಂದಿಗೆ, ಪಾಕಿಸ್ತಾನದೊಂದಿಗೆ ವ್ಯವಹಾರ ಹೊಂದಿದ್ದೇವೆ. ವ್ಯಾಪಾರವನ್ನು ಬುಲೆಟ್‌ನಂತೆ ಬಳಸಿ ಸಂಭಾವ್ಯ ಪರಮಾಣು ಯುದ್ಧವನ್ನು ನಿಲ್ಲಿಸಲು ನಮಗೆ ಸಾಧ್ಯವಾಯಿತು ಎಂಬುದೇ ನಾನು ಹೆಚ್ಚು ಹೆಮ್ಮೆಪಡುವ ಒಪ್ಪಂದ” ಎಂದು ಶುಕ್ರವಾರ ಟ್ರಂಪ್ ಹೇಳಿಕೊಂಡಿದ್ದಾರೆ.
“ಸಾಮಾನ್ಯವಾಗಿ ಗುಂಡುಗಳ(ಬುಲೆಟ್) ಮೂಲಕ ಇಂತಹ ಕಾರ್ಯ ಮಾಡಲಾಗುತ್ತದೆ. ಆದರೆ ನಾವು ವ್ಯಾಪಾರದ ಮೂಲಕ ಮಾಡುತ್ತೇವೆ. ಅದರ ಬಗ್ಗೆ ತುಂಬಾ ಹೆಮ್ಮೆ ಇದೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಬಹಳ ಕೆಟ್ಟದಾದ ಯುದ್ಧ ನಡೆಯುವ ಸಾಧ್ಯತೆಯಿತ್ತು. ಆದ ಬಗ್ಗೆ ಯಾರೂ ಮಾತನಾಡಲ್ಲ. ಈಗ ನೋಡಿ, ಅವರು ಚೆನ್ನಾಗಿಯೇ ಇದ್ದಾರೆ” ಎಂದು ಅಮೆರಿಕ ಅಧ್ಯಕ್ಷ ವರದಿಗಾರರಿಗೆ ತಿಳಿಸಿದ್ದಾರೆ.
“ಭಾರತದೊಂದಿಗೆ ನಾವು ಒಪ್ಪಂದ ಮಾಡಿಕೊಳ್ಳುವ ಅಂತಿಮ ಹಂತದಲ್ಲಿದ್ದೇವೆ. ಪಾಕ್, ಭಾರತ ಪರಸ್ಪರ ಯುದ್ಧ ಮಾಡುವುದಾದರೆ ನನಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವ ಆಸಕ್ತಿ ಇರಲ್ಲ. ನಾನು ಒಪ್ಪಂದ ಮಾಡುವುದಿಲ್ಲವೆಂದು ಆಗಲೇ ತಿಳಿಸಿಬಿಡುತ್ತೇನೆ” ಎಂದರು. ಇದೇ ಭಾರತ ಮತ್ತು ಪಾಕಿಸ್ತಾನದ ಯುದ್ಧವನ್ನು ನಿಲ್ಲಿಸಿದ್ದೇ ಅಮೆರಿಕ ಎಂಬ ಹೇಳಿಕೆಯನ್ನು ಒಂದೇ ದಿನದಲ್ಲಿ ಎರಡು ಕಡೆಗಳಲ್ಲಿ ಟ್ರಂಪ್ ನೀಡಿದ್ದಾರೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕಾ ದಾಳಿ ನಡೆಸಿ 26 ಮಂದಿಯನ್ನು ಕೊಂದಿದೆ. ಇದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕಾ ನೆಲೆಗಳ ಮೇಲೆ ದಾಳಿ ನಡೆಸಿ 100ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಿದೆ.
